ವಿಷಯಕ್ಕೆ ಹೋಗು

ಹರಿಕಥಾಮೃತಸಾರ/ಸಕಲ ದುರಿತ ನಿವಾರಣ ಸಂಧಿ (ಭಕ್ತಾಪರಾಧ ಸಹಿಷ್ಣು)

ವಿಕಿಸೋರ್ಸ್ದಿಂದ

ಶ್ರೀ ಲಕುಮಿವಲ್ಲಭಗೆ ಸಮ ಕರುಣಾಳುಗಳ ನಾಕಾಣೆನೆಲ್ಲಿ

ಕುಚೇಲನ ಅವಲಿಗೆ ಮೆಚ್ಚಿ ಕೊಟ್ಟನು ಸಕಲ ಸಂಪದವ

ಕೇಳಿದಾಕ್ಷಣ ವಸ್ತ್ರಗಳ ಪಾಂಚಾಲಿಗಿತ್ತನು

ದೈತ್ಯನುದರವ ಸೀಳಿ ಸಂತೈಸಿದನು ಪ್ರಹ್ಲಾದನ ಕೃಪಾಸಾಂದ್ರ//1//


ದೇವಶರ್ಮಾಹ್ವಾಯ ಕುಟುಂಬಕೆ ಜೀವನೋಪಾಯವನು ಕಾಣದೆ

ದೇವ ದೇವ ಶರಣ್ಯ ರಕ್ಷಿಸು ರಕ್ಷಿಸೆನೆ ಕೇಳಿ ತಾ ಒಲಿದು ಪಾಲಿಸಿದ ಸೌಖ್ಯ

ಕೃಪಾವಲೋಕನದಿಂದ ಈತನ ಸೇವಿಸದೆ

ಸೌಖ್ಯಗಳ ಬಯಸುವರು ಅಲ್ಪ ಮಾನವರು//2//


ಶ್ರೀನಿವಾಸನ ಪೋಲ್ವ ಕರುಣಿಗಳು ಈ ನಳಿನಜಾಂಡದೊಳು ಕಾಣೆ

ಪ್ರವೀಣರಾದವರು ಅರಸಿ ನೋಳ್ಪುದು ಶೃತಿಪುರಾಣದೊಳು

ದ್ರೋಣ ಭೀಷ್ಮ ಕೃಪಾದಿಗಳು ಕುರು ಸೇನೆಯೊಳಗಿರೆ

ಅವರ ಅವಗುಣಗಳು ಏನು ನೋಡದೆ ಪಾಲಿಸಿದ ಪರಮಾತ್ಮ ಪರಗತಿಯ//3//


ಚಂಡ ವಿಕ್ರಮ ಚಕ್ರ ಶಂಖವ ತೋಂಡಮಾನ ನೃಪಾಲಗಿತ್ತನು

ಭಾಂಡಕಾರಕ ಭೀಮನ ಮೃದ ಆಭರಣಗಳಿಗೊಲಿದ

ಮಂಡೆ ಒಡೆದ ಆಕಾಶರಾಯನ ಹೆಂಡತಿಯ ನುಡಿ ಕೇಳಿ ಮಗಳಿಗೆ ಗಂಡನೆನಿಸಿದ

ಗಹನ ಮಹಿಮ ಗದಾಬ್ಜಧರಪಾಣಿ//4//


ಗೌತಮನ ನಿಜಪತ್ನಿಯನು ಪುರುಹೂತನು ಐದಿರೆ ಕಾಯ್ದ

ವೃತ್ರನ ಘಾತಿಸಿದ ಪಾಪವನು ನಾಲ್ಕು ವಿಭಾಗ ಮಾಡಿದನು

ಶಾತಕುಂಭಾತ್ಮಕ ಕಿರೀಟವ ಕೈತವದಿ ಕದ್ದೊಯ್ದ ಇಂದ್ರಾರಾತಿ ಬಾಗಿಲ ಕಾಯ್ದ

ಭಕ್ತತ್ವೇನ ಸ್ವೀಕರಿಸಿ//5//


ನಾರನಂದ ವ್ರಜದ ಸ್ತ್ರೀಯರ ಜಾರಕರ್ಮಕೊಲಿದ

ಅಜ ಸುಕುಮಾರನು ಎನಿಸಿದ ನಂದಗೋಪಗೆ ನಳಿನಭವ ಜನಕ

ವೈರವರ್ಜಿತ ದೈತ್ಯರನ ಸಂಹಾರ ಮಾಡಿದ

ವಿಪಗಮನ ಪೆಗಲೇರಿದನು ಗೋಪಾಲಕರ ವೃಂದಾವನದೊಳಂದು//6//


ಶ್ರೀಕರಾರ್ಚಿತ ಪಾದಪಲ್ಲವ ಗೋಕುಲದ ಗೊಲ್ಲತಿಯರ ಒಲಿಸಿದ

ಪಾಕಶಾಸನ ಪೂಜ್ಯ ಗೋ ಗೋವತ್ಸಗಳ ಕಾಯ್ದ

ನೀಕರಿಸಿ ಕುರುಪತಿಯ ಭೋಜನ ಸ್ವೀಕರಿಸಿದನು ವಿದುರನೌತನ

ಬಾಕುಲಿಕನಂದದಲಿ ತೋರಿದ ಭಕ್ತವತ್ಸಲನು//7//


ಪುತ್ರನೆನಿಸಿದ ಗೋಪಿದೇವಿಗೆ ಭರ್ತೃವೆನಿಸಿದ ವೃಜದನಾರಿಯರ ಉತ್ರಲಾಲಿಸಿ

ಪರ್ವತವ ನೆಗದಿಹ ಕೃಪಾಸಾಂದ್ರ

ಶತ್ರುತಾಪನ ಯಜ್ಞ ಪುರುಷನ ಪುತ್ರಿಯರ ತಂದಾಳ್ದ

ತ್ರಿಜಗತ್ಧಾತ್ರ ಮಂಗಳಗಾತ್ರ ಪರಮ ಪವಿತ್ರ ಸುರಮಿತ್ರ//8//


ರುಪನಾಮ ವಿಹೀನ ಗರ್ಗಾರೋಪಿತ ಸುನಾಮದಲಿ ಕರೆಸಿದ

ವ್ಯಾಪಕ ಪರಿಚ್ಚಿನ್ನ ರೂಪದಿ ತೋರ್ದ ಲೋಗರಿಗೆ

ದ್ವಾಪರಾಂತ್ಯದಿ ದೈತ್ಯರನು ಸಂತಾಪಗೊಳಿಸುವೆನೆಂದು

ಶ್ವೇತದ್ವೀಪ ಮಂದಿರನು ಅವತರಿಸಿ ಸಲಹಿದನು ತನ್ನವರ//9//


ಶ್ರೀ ವಿರಿಂಚಾದಿ ಅಮರನುತ ನಾನಾವತಾರವ ಮಾಡಿ ಸಲಹಿದ

ದೇವತೆಗಳನು ಋಷಿಗಳನು ಕ್ಷಿತಿಪರನು

ಮಾನವರ ಸೇವೆಗಳ ಕೈಕೊಂಡು ಫಲಗಳನೀವ

ನಿತ್ಯಾನಂದಮಯ ಸುಗ್ರೀವ ಧ್ರುವ ಮೊದಲಾದ ಭಕ್ತರಿಗಿತ್ತ ಪುರುಷಾರ್ಥ//10//


ದುಷ್ಟ ದಾನವಹರಣ ಸರ್ವೋತ್ಕೃಷ್ಟ ಸದ್ಗುಣ ಭರಿತ ಭಕ್ತ ಅಭೀಷ್ಟದಾಯಕ

ಭಯವಿನಾಶನ ವಿಗತ ಭಯಶೋಕ

ನಷ್ಟ ತುಷ್ಟಿಗಳಿಲ್ಲ ಸೃಷ್ಟಿ ಆದಿ ಅಷ್ಟ ಕರ್ತನಿಗೆ ಆವ ಕಾಲದಿ

ಹೃಷ್ಟನಾಗುವ ಸ್ಮರಣೆ ಮಾತ್ರದಿ ಹೃದ್ಗುಹ ನಿವಾಸಿ//11//


ಹಿಂದೆ ಪ್ರಳಯ ಉದಕದಿ ತಾವರೆ ಕಂದ ನಂಜಿಸಿ ಕಾಯ್ದ

ತಲೆಯಲಿ ಬಾಂದೊರೆಯ ಪೊತ್ತವಗೆ ಒಲಿದು ಪರ್ಯಂಕ ಪದವಿತ್ತ

ವಂದಿಸಿದ ವೃಂದಾರಕರ ಸತ್ವೃಂದಕೆ ಉಣಿಸಿದ ಸುಧೆಯ

ಕರುಣಾ ಸಿಂಧು ಕಮಲಾಕಾಂತ ಬಹು ನಿಶ್ಚಿಂತ ಜಯವಂತ//12//


ಸತ್ಯಸಂಕಲ್ಪ ಅನುಸಾರ ಪ್ರವರ್ತಿಸುವ ಪ್ರಭು ತನಗೆ ತಾನೆ ಭೃತ್ಯನೆನಿಸುವ

ಭೋಕ್ತ್ರು ಭೋಗ್ಯ ಪದಾರ್ಥದೊಳಗಿದ್ದು ತತ್ತದಾಹ್ವಯನಾಗಿ ತರ್ಪಕ

ತೃಪ್ತಿ ಪಡಿಸುವ ತತ್ವ ಪತಿಗಳ

ಮತ್ತರಾದ ಅಸುರರ್ಗೆ ಅಸಮೀಚೀನ ಫಲವೀವ//13//


ಬಿಟ್ಟಿಗಳ ನೆವದಿಂದಡಾಗಲಿ ಪೊಟ್ಟೆಗೋಸುಗವಾದಡಾಗಲಿ

ಕೆಟ್ಟರೋಗ ಪ್ರಯುಕ್ತವಾಗಲಿ ಅಣಕದಿಂದೊಮ್ಮೆ ನಿಟ್ಟುಸಿರಿನಿಂ ಬಾಯ್ದೆರೆದು

ಹರಿ ವಿಠಲಾ ಸಲಹೆಂದೆನಲು ಕೈಗೊಟ್ಟು ಕಾವ

ಕೃಪಾಳು ಸಂತತ ತನ್ನ ಭಕುತರನು//14//


ಈ ವಸುಂಧರೆಯೊಳಗೆ ಶ್ರೀ ಭೂದೇವಿಯ ಅರಸನ ಸುಗುಣ ಕರ್ಮಗಳ

ಆವ ಬಗೆಯಿಂದ ಆದಡಾಗಲಿ ಕೀರ್ತಿಸಿದ ನರರ

ಕಾವ ಕಮಲದಳಾಯತಾಕ್ಷ ಕೃಪಾವ ಲೋಕನದಿಂದ

ಕಪಿ ಸುಗ್ರೀವಗೆ ಒಲಿದಂದದಲಿ ಒಲಿದಭಿಲಾಷೆ ಪೂರೈಪ//15//


ಚೇತನಂತರ್ಯಾಮಿ ಲಕ್ಷ್ಮೀನಾಥ ಕರ್ಮಗಳ ಅನುಸರಿಸಿ

ಜನಿತೋಥ ವಿಷ್ಣೋಯೆಂಬ ಶ್ರುತಿ ಪ್ರತಿಪಾದ್ಯ ಯೆಮ್ಮೊಡನೆ ಜಾತನಾಗುವ ಜನ್ಮರಹಿತ

ಆಕೂತಿನಂದನ ಭಕ್ತರಿಂದ ಆಹೂತನಾಗಿ

ಮನೋರಥವ ಬೇಡಿಸಿಕೊಳದೀವ//16//


ನ್ರುಷತುಯೆನಿಸುವ ಮನುಜರೊಳು ಸುರ ಋಷಭ ಇಂದ್ರಿಯಗಳೊಳು

ತತ್ತತ್ವಿಷಯಗಳ ಭುಂಜಿಸುವ ಹೋತಾಹ್ವಯನು ತಾನಾಗಿ

ಮೃಷರಹಿತ ವೇದದೊಳು ಋತಸತು ಪೆಸರಿನಿಂದಲಿ ಕರೆಸುವ

ಜಗತ್ಪ್ರಸವಿತ ನಿರಂತರದಿ ಸಂತೈಸುವನು ಭಕುತರನು//17//


ಅಬ್ಜ ಭವ ಪಿತ ಜಲಧರಾದ್ರಿಯೊಳು ಅಬ್ಜ ಗೋಜಾದ್ರಿಜನೆನಿಸಿ

ಜಲದುಬ್ಬಳೀ ಪೀಯೂಷ ದಾವರೆ ಶ್ರೀಶಶಾಂಕದೊಳು

ಕಬ್ಬು ಕದಳಿ ಲತಾ ತೃಣ ದ್ರುಮ ಹೆಬ್ಬುಗೆಯ ಮಾಡುತಿಹ ಗೋಜನು

ಇಬ್ಬಗೆ ಪ್ರತೀಕ ಮಣಿಮೃಗ ಸೃಜಿಪ ಅದ್ರಿಜನು//18//


ಶ್ರುತಿವಿನುತ ಸರ್ವತ್ರದಲಿ ಭಾರತಿ ರಮಣನೊಳಗಿದ್ದು

ತಾ ಶುಚಿಷತುಯೆನಿಸಿ ಜಡ ಚೇತನರನ ಪವಿತ್ರ ಮಾಡುತಿಹ

ಅತುಳ ಮಹಿಮ ಅನಂತ ರೂಪ ಅಚ್ಯುತನೆನಿಸಿ ಚಿತ್ದೇಹದೊಳು

ಪ್ರಾಕೃತ ಪುರುಷನಂದದಲಿ ನಾನಾ ಚೇಷ್ಟೆಗಳ ಮಾಳ್ಪ//19//


ಅತಿಥಿಯೆನಿಸುವ ಅನ್ನಮಯ ಬಾರತಿ ರಮಣನೊಳು

ಪ್ರಾಣಮಯ ಪ್ರಾಕೃತ ವಿಷಯ ಚಿಂತನೆಯ ಮಾಡಿಸುವನು

ಮನೋಮಯನುಯತನ ವಿಜ್ಞಾನಮಯ ಬರಲದ ಜತನ ಮಾಡಿಸಿ

ಆತ್ಮ ಜಾಯಾ ಸುತರ ಸಂಗದಿ ಸುಖವನೀವ ಆನಂದಮಯನೆನಿಸಿ//20//


ಇನಿತು ರೂಪಾತ್ಮನಿಗೆ ದೋಷಗಳೆನಿತು ಬಪ್ಪವು ಪೇಳಿರೈ

ಬ್ರಾಹ್ಮಣ ಕುಲೋತ್ತಮರು ಆದವರು ನಿಷ್ಕಪಟ ಬುದ್ಧಿಯಲಿ

ಗುಣನಿಯಾಮಕ ತತ್ತದಾಹ್ವಯನೆನಿಸಿ ಕಾರ್ಯವ ಮಾಳ್ಪದೇವನ

ನೆನೆದ ಮಾತ್ರದಿ ದೋಷರಾಶಿಗಳು ಎಲ್ಲ ಕೆಡುತಿಹವು//21//


ಕುಸ್ಥನೆನಿಸುವ ಭೂಮಿಯೊಳು ಆಶಸ್ಥನೆನಿಸುವ ದಿಗ್ವಲಯದೊಳು

ಖಸ್ಥನೆನಿಪ ಆಕಾಶದೊಳು ಒಬ್ಬೊಬ್ಬರೊಳಗೆ ಇದ್ದು ವ್ಯಸ್ತನೆನಿಸುವ

ಸರ್ವರೊಳಗೆ ಸಮಸ್ತನೆನಿಸುವ ಬಳಿಯಲಿದ್ದು ಉಪಸ್ಥನೆನಿಪ

ವಿಶೋಧನ ವಿಶುದ್ಧಾತ್ಮ ಲೋಕದೊಳು//22//


ಜ್ಞಾನದನುಯೆಂದೆನಿಪ ಶಾಸ್ತ್ರದಿ ಮಾನದನುಯೆಂದೆನಿಪ ವಸನದಿ

ದಾನಶೀಲ ಸುಬುದ್ಧಿಯೊಳಗೆ ಅವದಾನ್ಯನೆನಿಸುವನು

ವೈನತೇಯ ಅವರೂಥ ತತ್ತತ್ಸ್ಥಾನದಲಿ ತತ್ತತ್ ಸ್ವಭಾವಗಳ ಅನುಸಾರ

ಚರಿತ್ರೆ ಮಾಡುತ ನಿತ್ಯನೆಲೆಸಿಪ್ಪ//23//


ಗ್ರಾಮಪನೊಳು ಅಗ್ರಣಿಯೆನಿಸುವನು ಗ್ರಾಮಿಣೀಯೆನಿಸುವರು ಜನರೊಳು

ಗ್ರಾಮ ಉಪಗ್ರಾಮಗಳೊಳಗೆ ಶ್ರೀಮಾನ್ಯನೆನಿಸುತಿಪ್ಪ

ಶ್ರೀ ಮನೋರಮ ತಾನೇ ಯೋಗಕ್ಷೇಮ ನಾಮಕನಾಗಿ ಸಲಹುವ

ಈ ಮಹಿಮೆ ಮಿಕ್ಕಾದ ದೇವರಿಗುಂಟೆ ಲೋಕದೊಳು//24//


ವಿಜಯಸಾರಥಿಯೆಂದು ಗರುಡಧ್ವಜನ ಮೂರ್ತಿಯ ಭಕ್ತಿಪೂರ್ವಕ ಭಜಿಸುತಿಪ್ಪ ಮಹಾತ್ಮರಿಗೆ

ಸರ್ವತ್ರದಲಿ ಒಲಿದು

ವಿಜಯದನು ತಾನಾಗಿ ಸಲಹುವ ಭುಜಗ ಭೂಷಣ ಪೂಜ್ಯ ಚರಣಾಂಬುಜ

ವಿಭೂತಿದ ಭುವನ ಮೋಹನರೂಪ ನಿರ್ಲೇಪ//25//


ಅನಭಿಮತ ಕರ್ಮಪ್ರವಹದೊಳಗೆ ಅನಿಮಿಷಾದಿ ಸಮಸ್ತ ಚೇತನ ಗಣವಿಹುದು

ತತ್ಫಲಗಳ ಉಣ್ಣದೆ ಸೃಷ್ಟಿಸಿದ ಮುನ್ನ

ವನಿತೆಯಿಂದ ಒಡಗೂಡಿ ಕರುಣಾವನಧಿ ನಿರ್ಮಿಸೆ

ತಮ್ಮತಮ್ಮಯ ಅನುಚಿತೋಚಿತ ಕರ್ಮಫಲಗಳ ಉಣುತ ಚರಿಸುವರು//26//


ಝಲ್ಲಡಿಯ ನೆಳಲಂತೆ ತೋರ್ಪುದು ಎಲ್ಲ ಕಾಲದಿ ಭವದ ಸೌಖ್ಯವು

ಎಲ್ಲಿ ಪೊಕ್ಕರು ಬಿಡದು ಬೆಂಬತ್ತಿಹುದು ಜೀವರಿಗೆ

ಒಲ್ಲೆನೆಂದರೆ ಬಿಡದು ಹರಿ ನಿರ್ಮಾಲ್ಯ ನೈವೇದ್ಯವನು ಭುಂಜಿಸಿ

ಬಲ್ಲವರ ಕೂಡಾಡು ಭವ ದುಃಖಗಳ ನೀಡಾಡು//27//


ಕುಟ್ಟಿ ಕೊಯ್ದಿದನು ಅಟ್ಟು ಇಟ್ಟು ಅದಸುಟ್ಟು ಕೊಟ್ಟದ ಮುಟ್ಟಲು

ಅಘ ಹಿಟ್ಟಿಟ್ಟು ಮಾಳ್ಪದು ವಿಠಲುಂಡುಚ್ಚಿಷ್ಟ

ಸಜ್ಜನರ ಬಿಟ್ಟು ತನ್ನಯ ಹೊಟ್ಟೆಗೋಸುಗ ಥಟ್ಟನೆ ಉಣುತಿಹ ಕೆಟ್ಟ ಮನುಜರ

ಕಟ್ಟಿವೈದು ಯಮಪಟ್ಟಣದೊಳು ಒತ್ತಟ್ಟಲೆ ಇಡುತಿಹನು//28//


ಜಾಗುಮಾಡದೆ ಭೋಗದಾಸೆಯ ನೀಗಿ ಪರಮಾನುರಾಗದಿಂದಲಿ

ಭೋಗೀಶಯನನ ಆಗರದ ಹೆಬ್ಬಾಗಿಲಲಿ ನಿಂದು

ಕೂಗುತಲಿ ಶಿರಬಾಗಿ ಕರುಣಾ ಸಾಗರನೆ ಭವರೋಗ ಭೇಷಜ ಕೈಗೊಡು ಎಂದನೆ

ಬೇಗನೆ ಒದಗುವ ಭಾಗವತರಸ//29//


ಏನು ಕರುಣವೋ ತನ್ನವರಲಿ ದಯಾನಿಧಿಗೆ

ಸದ್ಭಕ್ತ ಜನರು ಅತಿ ಹೀನ ಕರ್ಮವ ಮಾಡಿದರು ಸರಿ ಸ್ವೀಕರಿಸಿ ಪೊರೆವ

ಪ್ರಾಣಹಿಂಸ ಲುಬ್ದಕಗೆ ಸುಜ್ಞಾನ ಭಕ್ತಿಗಳಿತ್ತು

ದಶರಥ ಸೂನು ವಾಲ್ಮೀಕಿ ಋಷಿಯ ಮಾಡಿದ ಪರಮ ಕರುಣಾಳು//30//


ಮೂಢ ಮಾನವ ಎಲ್ಲಕಾಲದಿ ಬೇಡಿಕೊಂಬ ಇನಿತೆಂದು ದೈನ್ಯದಿ

ಬೇಡದಂದದಿ ಮಾಡು ಪುರುಷಾರ್ಥಗಳ ಸ್ವಪ್ನದಲಿ

ನೀಡುವರೆ ನಿನ್ನ ಅಮಲಗುಣ ಕೊಂಡಾಡಿ ಹಿಗ್ಗುವ ಭಾಗವತರ ಒಡನೆ

ಆಡಿಸೆನ್ನನು ಜನ್ಮಜನ್ಮಗಳಲಿ ದಯದಿಂದ//31//


ಚತುರವಿಧ ಪುರುಷಾರ್ಥ ರೂಪನು ಚತುರ ಮೂರ್ತಿ ಆತ್ಮಕನಿರಲು

ಮತ್ತೆ ಇತರ ಪುರುಷಾರ್ಥಗಳ ಬಯಸುವರೆನು ಬಲ್ಲವರು

ಮತಿ ವಿಹೀನರು ಅಲ್ಪ ಸುಖ ಶಾಶ್ವತವೆಂದರಿದು ಅನುದಿನದಿ

ಗಣಪತಿಯೇ ಮೊದಲಾದ ಅನ್ಯ ದೇವತೆಗಳನೆ ಭಜಿಸುವರು//32//


ಒಮ್ಮಿಗಾದರು ಜೀವರೊಳು ವೈಷಮ್ಯ ದ್ವೇಷ ಅಸೂಯವಿಲ್ಲ

ಸುಧರ್ಮ ನಾಮಕ ಸಂತೈಸುವನು ಸರ್ವರನು ನಿತ್ಯ

ಬ್ರಹ್ಮ ಕಲ್ಪಾಂತದಲಿ ವೇದಾಗಮ್ಯ ಶ್ರೀ ಜಗನ್ನಾಥ ವಿಠಲ

ಸುಮ್ಮನೀವನು ತ್ರಿವಿಧರಿಗೆ ಅವರವರ ನಿಜಗತಿಯ//33//