ವಿಷಯಕ್ಕೆ ಹೋಗು

ಹಳ್ಳಿಯ ಚಿತ್ರಗಳು/ಅಂದು, ಇಂದು

ವಿಕಿಸೋರ್ಸ್ದಿಂದ
93940ಹಳ್ಳಿಯ ಚಿತ್ರಗಳು
— ಅಂದು, ಇಂದು
ಗೊರೂರು ರಾಮಸ್ವಾಮಿ ಐಯಂಗಾರ್

ಅಂದು, ಇಂದು


ನಾನು ಕಮಲೆ ಇಬ್ಬರೂ ಬಾಲ್ಯವನ್ನು ಒಟ್ಟಿಗೆ ಕಳೆದೆವು. ನಾವಿಬೃರೂ ಹೋಗುತ್ತಿದ್ದುದು ಒಂದೇ ಶಾಲೆಗೆ. ನಮ್ಮ ಹಳ್ಳಿಯಲ್ಲಿ ಆಗ ಈಗಿನ ಹಾಗೆ ಹೆಣ್ಣುಹುಡುಗಿಯರಿಗೆ ಪ್ರತ್ಯೇಕವಾದ ಶಾಲೆ ಇರಲಿಲ್ಲ. ನಾನು ನಿತ್ಯ ಹೋಗುವಾಗ ಕಮಲೆಯನ್ನು ಜತೆಯಲ್ಲಿ ಕರೆದುಕೊಂಡೇ ಹೋಗುತ್ತಲಿದ್ದೆ. ಶಾಲೆಗೆ ಹೊತ್ತುಮೀರಿ ಹೋದ ದಿವಸ ತಪ್ಪನ್ನು ಕಮಲೆಯ ಮೇಲೆ ಹಾಕಿಬಿಡುತ್ತಿದ್ದೆ. ಉಪಾಧ್ಯಾಯರು ಕೋಪದಿಂದ ನನ್ನನ್ನು ಹೊಡೆಯಲು ಎತ್ತಿದ್ದ ದೊಣ್ಣೆಯು, ಕಮಲೆಯಮೇಲೆ ತಪ್ಪನ್ನು ಹಾಕಿಬಿಟ್ಟ ಕೂಡಲೆ ಕೆಳಕ್ಕೆ ಬಿದ್ದು ಹೋಗುತ್ತಲಿದ್ದಿತು. ಶಾಲೆಯಲ್ಲಿ ಕಮಲೆಯೇ ರಾಣಿಯೆಂದು ನಿರ್ವಿವಾದವಾಗಿ ತೀರ್ಮಾನವಾಗಿಬಿಟ್ಟಿದ್ದಿತು. ಅವಳ ಮಾತನ್ನು ಹುಡುಗರಾಗಲಿ ಹುಡುಗಿಯರಾಗಲಿ ಮೀರುತ್ತಿರಲಿಲ್ಲ.

ಶಾಲೆಯ ಮುಂದುಗಡೆಯೇ ಕಾಲುವೆ ಹರಿಯುತ್ತಿದೆ. ಕಾಲುವೆ ಏರಿಯ ಕೆಳಗೆ ವಿಶಾಲವಾದ ಭತ್ತದ ಬಯಲು. ಕಾಲುವೆಯ ಮೆಟ್ಟಿಲುಗಳ ಮೇಲೆ ಕಾಲುಗಳನ್ನು ನೀರಿನಲ್ಲಿ ಇಳಿಯಬಿಟ್ಟುಕೊಂಡು ನಾನೂ ಕಮಲೆಯೂ ಮುಳುಗುವ ಸೂರ್ಯನ ಕಿರಣಗಳಿಂದ ಹೊನ್ನಾದ ಪೈರಿನ ಬಯಲನ್ನು ನೋಡುತ್ತಿದ್ದೆವು. ಕಮಲೆಯು ಕೈಯಲ್ಲಿ ನೀರನ್ನು ಎತ್ತಿ ಮೇಲಕ್ಕೆ ಎಸೆದು ಅದು ಮುತ್ತಾಗುವುದನ್ನು ಕಂಡು “ನೋಡು, ನೋಡು, ಅದ. ನಿನಗೆ” ಎನ್ನುತ್ತಿದ್ದಳು. ಚೀರು ಕೊಳವೆಯಲ್ಲಿ ನೀರನ್ನು ತುಂಬಿ ನನ್ನ ಮೇಲೆ ಚಿಮ್ಮುತ್ತಿದ್ದಳು.

ನಮ್ಮ ತಂದೆಯವರಿಗೆ ಒಂದು ತೋಟವಿದೆ. ಶಾಲೆ ಮುಗಿದನಂತರ ನಾವು ತೋಟಕ್ಕೆ ಹೋಗುತ್ತಿದ್ದೆವು. ಅಲ್ಲಿ ಕಮಲೆಯ ಎದುರಿಗೆ ನಾನೆ ಧೀರ: ಸೀಬೆಮರ, ಚಕ್ಕೋತದ ಮರ, ಕಿತ್ತಲೆ ಮರ ಮೊದಲಾದುವುಗಳನ್ನೆಲ್ಲಾ ಹತ್ತಿ ಹಣ್ಣುಗಳನ್ನು ಕೊಯ್ಯುತ್ತಿದ್ದೆ. ಕಮಲೆಯು ಅವುಗಳನ್ನೆಲ್ಲಾ ಸುಲಿಯುತ್ತಿದ್ದಳು. ಇಬ್ಬರೂ ತಿನ್ನುತ್ತಿದ್ದೆವು. ಒಂದು ದಿವಸ ನಾನು ತೋಟದಲ್ಲಿ ಅನೇಕ ಹೂವುಗಳನ್ನು ಕೊಯ್ದು ತಂದು ಕಮಲೆಗೆ ಕೊಟ್ಟೆ. ಅವಳು ಮಧ್ಯೆ ಮಧ್ಯೆ ಮರುಗವನ್ನೂ ಗುಲಾಬಿಯ ಎಸಳನ್ನೂ ಸಂಪಿಗೆಯ ದಳವನ್ನೂ ಸೇರಿಸಿ ಅತ್ಯಂತ ಅಲಂಕಾರವಾದ ಹಾರವನ್ನು ಕಟ್ಟಿದಳು. ಅವಳ ಕೈ ಚುರುಕನ್ನು ನೋಡಿ ನಾನು ಬೆರಗಾದೆ. ಹೆಂಗಸರಿಗೆ ಕಲೆಯು ಕಲಿಸದೆ ಬರುವುದೇನೋ ಎಂದುಕೊಂಡೆ. ಕಮಲೆಯು ಸುಂದರವಾದ ಆ ಮಾಲೆಯನ್ನು ನನ್ನ ಮೇಲೆ ಎಸೆದಳು. ಆ ಬಾಲ್ಯದಲ್ಲಿಯೂ ನನಗೆ ಅದರಿಂದ ಬಹಳ ಆನಂದವಾಯಿತು. ನಾನು “ಕಮಲೆ ನೀನೆ ಲಕ್ಷ್ಮಿ; ನಾನು ನಿನ್ನ ಭಕ್ತನೆಂದು ಈ ಮಾಲೆಯನ್ನು ನನಗೆ ಕೊಟ್ಟೆಯಾ” ಎಂದೆ. ಕಮಲೆಯು “ಲಕ್ಷ್ಮಿ ಯಾರು? ಭಕ್ತನಾರು? ಏನೋ ಎಸೆದೆ” ಎಂದಳು.

ಆ ಬಾಲ್ಯದಲ್ಲಿ ನಾವು ಆಡಿದ ಆಟಗಳಿಗೆ ಮೇರೆಯುಂಟೆ? ಅವಳು ಹುಡುಗಿ, ನಾನು ಹುಡುಗ, “ನೀನು ದಮಯಂತಿ ನಾನು ನಳ” ಎಂದೆ. ಕಮಲೆಯು “ಅಲ್ಲ ನಾನು ಭಾಮೆ, ನೀನು ಕೃಷ್ಣ” ಎಂದಳು. ಹೀಗೆಲ್ಲಾ ಆಟವಾಡುತ್ತಾ ಮನೆಗೆ ಬಂದಮೇಲೆ ಸ್ವಲ್ಪ ಬೈಗಳವಾಗುತ್ತಿತ್ತು,

ಇದು ಅಂದಿನ ವಿಷಯವಾಯಿತು. ಈಚೆಗೆ ನಾನು ವಿದ್ಯಾರ್ಜನೆಗಾಗಿ ನಮ್ಮ ಹಳ್ಳಿಯನ್ನು ಬಿಟ್ಟು, ಮೈಸೂರು, ಬೊಂಬಾಯಿ ಕಡೆಗೆ ಹೋದೆ. ಕಮಲೆಗೂ ಆಗಲೇ ಮದುವೆಯಾಗಿ ಅವಳೂ ಗಂಡನ ಮನೆಗೆ ಹೊರಟುಹೋದಳು.

ವಿದ್ಯಾಭ್ಯಾಸವು ಮುಗಿದ ನಂತರ ನಮ್ಮ ಹಳ್ಳಿಗೆ ಹೋದೆ. ಕರ್ಣಕಠೋರವಾದ ನುಡಿಯನ್ನು ಕೇಳಿದೆ. ಕಮಲೆ ವಿಧವೆ ಎಂದು ತಿಳಿಯಿತು. ದುಃಖದಿಂದ ಹೃದಯವು ವಿದೀರ್ಣವಾಯಿತು. ನಾನು ಹುಚ್ಚನಂತೆ ಧೂಳಿನಲ್ಲಿ ಬಿದ್ದು ಹೊರಳಿ ಅತ್ತೆ, ಶಾಲೆಯ ಆಟಗಳೆಲ್ಲಾ ನೆನ್ನೆಯವೋ ಎಂಬಂತೆ ತೋರಿತು. ವಿಧಿಯು ಶುದ್ದ ಕುರುಡ, ರಸಿಕನಲ್ಲ; ಕಲೆಯ ತಿರುಳನ್ನು ತಿಳಿಯನು; ಸೌಂದರ್ಯದ ಆಕರವನ್ನೇ ಹಾಳುಮಾಡಿದ; ಬೆಳೆಯುವ ಮುನ್ನ ಗಿಡವನ್ನು ಕುಯಿದ; ಹೂತು ಕಾತು ಫಲ ಬಿಡುವ ಮುನ್ನ ಲತೆಯನ್ನು ಒಣಗಿಸಿದ. ಅಯ್ಯೋ ಕಮಲೆಯಂತಹ ಹುಡುಗಿಗೆ ಇಂತಹ ಗತಿಯೇ ಎಂದುಕೊಂಡೆ.