ವಿಷಯಕ್ಕೆ ಹೋಗು

ಹಳ್ಳಿಯ ಚಿತ್ರಗಳು/ನಮ್ಮ ಜೋಡಿದಾರರ ಕೆಲವು ಚಿತ್ರಗಳು

ವಿಕಿಸೋರ್ಸ್ದಿಂದ
93933ಹಳ್ಳಿಯ ಚಿತ್ರಗಳು
— ನಮ್ಮ ಜೋಡಿದಾರರ ಕೆಲವು ಚಿತ್ರಗಳು
ಗೊರೂರು ರಾಮಸ್ವಾಮಿ ಐಯಂಗಾರ್

ನಮ್ಮ ಜೋಡಿದಾರರ ಕೆಲವು ಚಿತ್ರಗಳು


೧. ಈಜು ಕಲಿತ ಇತಿಹಾಸ

ಆಗ ಅವರಿಗೆ ವಯಸ್ಸು ೧೫ ಇದ್ದಿರಬಹುದು. ಹೊಟ್ಟೆಯು ಈಗಿನಂತೆ ಮಿತಿಮೀರಿ ಬೆಳೆದಿರಲಿಲ್ಲ. ಹುಡುಗರಾಗಿ ಎಲ್ಲರಂತೆ ಚಟುವಟಿಕೆಯುಳ್ಳವರಾಗಿದ್ದರು. ತೆಂಗಿನ ಮರಗಳನ್ನೂ, ಅಡಕೆಯ ಮರಗಳನ್ನೂ ಲೀಲಾಜಾಲವಾಗಿ ಹತ್ತಿಬಿಡುತ್ತಿದ್ದರು. ಈಜುವುದರಲ್ಲಿಯ ನಿಸ್ಸಿಮರಾಗಿದ್ದರು. ಅವರು ಈಜು ಕಲಿತದ್ದೇ ಒಂದು ಇತಿಹಾಸ. ಆದರೆ ಅದನ್ನು ನಾಲ್ಕು ಪದಗಳಲ್ಲಿ ಹೇಳಿ ಮುಗಿಸಿಬಿಡುತ್ತೇನೆ. ಅವರ ತಂದೆಯವರು ಅವರು ನದಿಯಲ್ಲಿ ಹೋಗಿ ಈಜಲು ಅವಕಾಶವನ್ನು ಕೊಡುತ್ತಿರಲಿಲ್ಲ. ಏಕೆಂದರೆ ಈಜು ಬಂದವರೇ ನೀರಿನಲ್ಲಿ ಬೇಗ ಸಾಯುತ್ತಾರೆಂದು ಅವರು ತೀರ್ಮಾನಿಸಿದ್ದರು. ಅವರ ಸ್ನೇಹಿತನೊಬ್ಬನಿಗೆ ಚೆನ್ನಾಗಿ ಈಜು ಬರುತ್ತಿತ್ತಂತೆ. ನದಿಯಲ್ಲಿ ಒಂದು ಬಂಡೆಯ ಮೇಲೆ ನಿಂತುಕೊಂಡು ನೀರಿನೊಳಕ್ಕೆ ಲಾಗಾ ಹಾಕಿದನಂತೆ. ತಲೆಯು ಕಲ್ಲಿಗೆ ಬಡಿದು ರಕ್ತಪ್ರವಾಹವು ಹೊರಟು ನದಿಯ ನೀರೆಲ್ಲಾ ಕೆಂಪಾಗಿಬಿಟ್ಟಿತಂತೆ. ಮತ್ತೊಬ್ಬ ಸ್ನೇಹಿತನು ತುಂಬು ಹೊಳೆಯಲ್ಲಿ ನದಿಯನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ಈಜುವುದಕ್ಕೆ ಹೋಗಿ ತೇಲಿಯೇ ಹೋದನಂತೆ. ಆದುದರಿಂದ ಅವರು, ಮಗನು ನದಿಗೆ ಸ್ನಾನಕ್ಕೆ ಹೋದರೆ ನಿರ್ದಾಕ್ಷಿಣ್ಯವಾಗಿ ಕೈಕಾಲುಗಳನ್ನು ತುಂಡುಹಾಕಿಬಿಡುತ್ತೇನೆಂದು ಘರ್ಜಿಸುತ್ತಿದ್ದರು. ಆದರೆ ಅವರ ಮಗನಿಗೆ ಗೊತ್ತು, ತನ್ನ ಕೈಕಾಲು ತುಂಡುಬೀಳುವುದಿಲ್ಲವೆಂದು. ಆದರೆ ಬೆತ್ತದಿಂದ ನಿರ್ದಯವಾಗಿ ಏಟುಗಳು ಬೀಳುತ್ತವೆಂಬುದೂ ಅವನಿಗೆ ಗೊತ್ತು. ಆ ಏಟುಗಳನ್ನು ತಿಂದು ಅವನ ಮೈ ಜಡ್ಡುಗಟ್ಟಿ ಹೋಗಿತ್ತು. ಏನಾದರೂ ಆಗಲಿ ಈಜು ಕಲಿತೇಬಿಡುತ್ತೇನೆಂದು ಅವನು ನಿಶ್ಚಯಿಸಿದನು. ಇದಕ್ಕಾಗಿ ಸ್ಕೂಲು ಬಿಟ್ಟನಂತರ ಪ್ರತಿದಿನವೂ ಗುಟ್ಟಾಗಿ ಹೊಳೆಗೆ ಹೋಗುತ್ತಿದ್ದನು. ಅವರ ಮನೆಯಲ್ಲಿ ಅವರ ಭಾವನ ದೂರದ ಸಂಬಂಧದ ಯಾರೋ ಒಬ್ಬ ಮುದುಕಿಯಿದ್ದಳು. ಅವಳಿಗೆ ವಯಸ್ಸು ಸುಮಾರು ೬೦ ಇದ್ದಿರಬಹುದು. ಆದರೆ ಆಗಲೂ ಅರೋಗ ದೃಢಕಾಯಳಾಗಿದ್ದಳು. ಪ್ರತಿದಿನವೂ ನದಿಗೆ ಹೋಗಿ ಸ್ನಾನಮಾಡಿಕೊಂಡು ಬರುತ್ತಿದ್ದಳು. ಅವಳನ್ನು ಕಂಡರೆ ಜೋಡಿದಾರನಿಗೆ ಮೈಯೆಲ್ಲಾ ಉರಿಯುತ್ತಿದ್ದಿತು. ಇವನು ನದಿಗೆ ಹೋದ ದಿವಸಗಳಲ್ಲೆಲ್ಲಾ, ಅವಳ ಕಣ್ಣಿಗೆ ಇವನು ಬೀಳುತ್ತಲೇ ಇದ್ದನು. ಇವನನ್ನು ಕಂಡಕೂಡಲೆ ಅವಳು ಮನೆಗೆ ಬಂದು "ನಿಮ್ಮ ಹುಡುಗ ಹೊಳೆಗೆ ಹೋಗಿದ್ದಾನೆ. ಇನ್ನು ಮಧ್ಯಾಹ್ನದವರೆಗೆ ಈಜುತ್ತಾನೆ. ಅದಕ್ಕೆ ಅಷ್ಟು ಚಳಿ” ಎಂದುಬಿಡುತ್ತಿದ್ದಳು. ಸರಿ ದೊಡ್ಡ ಜೋಡಿದಾರರು ಬೆತ್ತವನ್ನು ಸಿದ್ಧಮಾಡಿಕೊಂಡು ಇವನು ಬರುವುದನ್ನೇ ಕಾಯುತ್ತಾ ಕುಳಿತಿರುತ್ತಿದ್ದರು. ಅಪರಾಧಿಯಾದ ಹುಡುಗನಿಗೆ ಅವರು ಬಾಗಲಿನಲ್ಲಿ ಕುಳಿತಿದ್ದರೆ ಒಳಕ್ಕೆ ಬರಲು ಧೈರ್‍ಯವುಂಟಾಗುತ್ತಿರಲಿಲ್ಲ. ಹಿತ್ತಲಿನ ಕಡೆ ಒಂದು ಬಾಗಲಿದೆ. ಆ ಬಾಗಲಿಗೆ ಬರಬೇಕಾದರೆ ಊರ ಸುತ್ತ ಮತ್ತೆ ಸುತ್ತಿಕೊಂಡು ಬರಬೇಕು. ಆದರೂ ನಮ್ಮ ಹುಡುಗ ಊರು ಸುತ್ತಿಕೊಂಡೇ ಹಿತ್ತಲಿನ ಬಾಗಲಿಗೆ ಬರುತ್ತಲಿದ್ದ. ಬಾಗಿಲು ಹಾಳಾದ್ದು ಎಷ್ಟು ಮೆಲ್ಲಗೆ ತೆರೆದರೂ ಗೊರ್ ಅಂತ ಶಬ್ದಮಾಡಿಯೇ ಬಿಡುತ್ತಿದ್ದಿತು. ಸರಿ ಜೋಡಿದಾರರು ಒಳಕ್ಕೆ ಬರುತ್ತಿದ್ದರು. ಛಡಿ ಏಟು. ಮುದುಕಿಯ ಕಣ್ಣಿನಿಂದಲಂತೂ ಅವನಿಗೆ ತಪ್ಪಿಸಿಕೊಳ್ಳುವುದಕ್ಕೆ ಆಗಲಿಲ್ಲ. ಅವಳು ಇವನ ಚಿತ್ರಗುಪ್ತನಾಗಿಬಿಟ್ಟಳು. ಅವಳಿಗೆ ಕಾಣದಂತೆ ಇವನು ಪೇಟೆಯಲ್ಲಿ ಹೋದರೆ, ಆ ದಿವಸ ಕೋಟೆಯಲ್ಲಿ ಆದಿಕರ್ನಾಟಕರ ಗಲಾಟೆಯೆಂದು ಅವಳೂ ಪೇಟೆಯಲ್ಲಿಯೇ ಬಂದುಬಿಡುತ್ತಿದ್ದಳು. ನದಿಯ ತೀರದಲ್ಲಿ ಒಂದು ದೇವಾಲಯವಿದೆ. ಆ ದೇವಾಲಯದಲ್ಲಿ ಅಡಗಿಕೊಂಡಿದ್ದು, ಮುದುಕಿಯು ಮನೆಗೆ ಹೊರಟು ಹೋದ ಮೇಲೆ ತಾನು ನದಿಗೆ ಹೋಗೋಣ, ಇವಳ ಕಾಟ ತಪ್ಪುತ್ತೆ ಎಂದು ದೇವಾಲಯಕ್ಕೆ ಹೋದರೆ ರಾಮೇಶ್ವರಕ್ಕೆ ಹೋದರೂ ಶನೀಶ್ವರನ ಕಾಟ ತಪ್ಪಲಿಲ್ಲವೆಂಬಂತೆ ದೇವಸ್ಥಾನದ ಬಾಗಲಿನಲ್ಲಿ ಅವಳೂ ಕಂಡುಬಿಡುತಿದ್ದಳು. ಈ ಮುದಿಗೂಬೆಯು ನನಗೆ ಗುಪ್ತ ಪೋಲಿಸ್ ಆಗಿಬಿಟ್ಟಳಲ್ಲಾ, ಎಂದು ಇವನಿಗೆ ಕೋಪ. ಆದರೆ ವಿಧಿಯಿಲ್ಲ. ಏಟು ತಿಂದು ಮೈ ಜಡ್ಡುಗಟ್ಟಿಹೋಯಿತು. ಒಂದು ದಿವಸ ಭಾಷ್ಯಕಾರ ತಿರುನಕ್ಷತ್ರ. ನಾಮದ ಅಯ್ಯಂಗಾರಿಗಳಿಗೆ ಭಾಷ್ಯಕಾರರ ತಿರುನಕ್ಷತ್ರವೆಂದರೆ ೧೦ ಉಂಡೆ ನಾಮ, ಒಂದು ಸೇರು ಕುಂಕುಮ ವೆಚ್ಚ, ಇದು ಅಯ್ಯಂಗಾರಿಗಳಿಗೆ ಒಂದು ವಿಧವಾದ ಮೊಹರಂ. ಮೈಗೆ ಕೆಂಪು ಬಿಳುಪು ನಾಮ ಬಳಿದಿದ್ದೂ ಬಳಿದಿದ್ದೆ. ನೋಡಿದವರಿಗಂತೂ ಗಾಬರಿಯಾಗಿಬಿಡುತ್ತೆ. ಹೀಗೆ ನಾಮ ಹಾಕಿದ ಅಣ್ಣ ತಮ್ಮಂದಿರನ್ನು ಕಂಡು ಎಷ್ಟೋ ಮಕ್ಕಳು ಚಿಟ್ಟನೆ ಚೀರಿದುದುಂಟು. ಆದರೆ ನಮಗೆಲ್ಲಾ ಆ ದಿವಸ ಆನಂದ. ಆ ದಿವಸದ ಈ ಬಣ್ಣ ಬಳಿದುಕೊಳ್ಳುವುದಕ್ಕೆ ಎರಡು ಮೂರು ಮನೆಗಳು ಗೊತ್ತು. ಆ ಮನೆಯವರೇ ಆ ದಿವಸ ನಾಮ ಒದಗಿಸಿಕೊಡುತ್ತಾರೆ. ಇದು ಬಹಳ ಪುಣ್ಯ ಕೆಲಸವೆಂದು ಪರಿಗಣಿಸಲ್ಪಟ್ಟಿದೆ. ನಾಮವಿಡುವುದರಲ್ಲಿ ಪ್ರಸಿದ್ಧರಾದ ೨-೩ ಕಲಾವಿದರು ಈ ಕೆಲಸವನ್ನು ಪ್ರಾರಂಭಿಸಿ ಬಂದವರಿಗೆಲ್ಲಾ ನಾವು ಹಾಕಲು ಮೊದಲುಮಾಡುತ್ತಾರೆ. ಇದರಲ್ಲಿ ಬಗೆ ಬಗೆಯ ಕ್ರಮಗಳುಂಟು. ನಾಮವನ್ನು ಒಂದು ಕ್ರಮದಲ್ಲಿಯೇ ಹಾಕಬೇಕೆಂದು ನಮ್ಮ ಶಾಸ್ತ್ರದಲ್ಲಿ ಹೇಳಿದೆ. ಆದರೆ ಈ ಹಬ್ಬದ ದಿವಸ ಅದನ್ನು ಅನುಸರಿಸಬೇಕಾದುದಿಲ್ಲ. ಅದು ಕೇವಲ ವ್ರತಾದಿಗಳಿಗೆ ಮಾತ್ರ ಅನ್ವಯಿಸತಕ್ಕದ್ದು. ಈ ದಿವಸ ಯಾವ ಕ್ರಮದಲ್ಲಿ ಬೇಗ ನಾಮಗಳನ್ನು ಹಾಕಬಹುದೋ ಆ ಕ್ರಮವನ್ನು ಅನುಸರಿಸುತ್ತಿದ್ದರು. ಒಬ್ಬನು ದೇಹದ ಒಂದೊಂದು ಅವಯವಕ್ಕೂ ನಾಮ, ಶ್ರೀಚೂರ್ಣಗಳನ್ನು ಬೇಗ ಬೇಗ ಬಳಿಯುತ್ತಿದ್ದನು. ಮತ್ತೊಬ್ಬನು ಎಲ್ಲರ ತೋಳಿಗೂ ಒಂದು ಕಡೆಯಿಂದ ಬಿಳೇ ನಾಮವನ್ನು ಹಾಕುತಿದ್ದನು. ಅನಂತರ ಬೆನ್ನು ಹೊಟ್ಟೆ ಕತ್ತು ಈ ಕ್ರಮದಲ್ಲಿ ಸಾಗುತ್ತಿದ್ದಿತು. ಕೆಲವರಿಗಂತೂ ಹಣೆಯು ಇನ್ನೂ ಅಗಲವಾಗಿಲ್ಲವಲ್ಲಾ ಎಂದು ದುಃಖವುಂಟಾಗಿದ್ದಿತು. ಹಣೆಯ ಎರಡು ಕಡೆಯೂ ಅದು ಇರುವಷ್ಟು ಅಗಲವೂ ಬಿಳೆಯ ನಾಮ, ಮಧ್ಯೆ ಒಂದು ಅಂಗುಲ ಅಗಲ ಕೆಂಪು ನಾಮ, ಊರಿನ ಎಲ್ಲಾ ಹುಡುಗರಿಗೂ ಆ ದಿವಸ ಹನ್ನೆರಡು, ಹದಿನಾಲ್ಕು, ಹದಿನೆಂಟು ನಾಮ. ಅನಂತರ ಹುಡುಗರು ಊರಿನ ಸುತ್ತ ಅವ್ಯವಸ್ಥೆಯಿಂದ ರಾಮಾನುಜ ಎಂದು ಕಿರಚುತ್ತಿದ್ದರು. ಈಚೆಗೆ ನಮ್ಮ ಮಣೆಗಾರರು ಆ ಅವ್ಯವಸ್ಥೆಗೆ ಒಂದು ವ್ಯವಸ್ಥೆಯನ್ನು ಕೊಟ್ಟರು. ಈ ರೀತಿಯಾಗಿ ನಾಮಧಾರಿ ಗಳಾದ ಈ ಪಟಾಲಂ ಪೈಕಿ ಒಬ್ಬರಿಗೆ ಭಾಷ್ಯಕಾರರೆಂದು ಹೆಸರಿಟ್ಟು, ಅವರಿಗೆ ಜಡೆ ಹೆಣೆದು, ಕೈನಲ್ಲಿ ಮಣಿಯ ಸರವೊಂದನ್ನು ಕೊಟ್ಟರು. ಮತ್ತೊಬ್ಬನು ಅವರ ಶಿಷ್ಯ. ಅವನ ಕೈನಲ್ಲಿ ಒಂದು ಕೃಷ್ಣಾಜಿನವನ್ನು ಕೊಟ್ಟರು. ಅವರ ಪರಿವಾರಕ್ಕೆ ಸೇರಿದ ಮತ್ತೊಬ್ಬನ ಕೈನಲ್ಲಿ ಒಂದು ತಿರುಪ ಕೂಡೆ; ಅದರೊಳಗೆ ನಾಮ ಮುಂತಾದ ಅಯ್ಯಂಗಾರರ ಆವಶ್ಯಕ ವಸ್ತುಗಳು. ಒಂದು ರಾಮಾನುಜಾಚಾರ್‍ಯರ ಚಿತ್ರಪಟ. ಇಷ್ಟನ್ನೂ ತೆಗೆದುಕೊಂಡು ಈ ಅವ್ಯವಸ್ಥಿತವಾಗಿ ಕೆಲವು ವೇಳೆ ಭಯಂಕರವಾಗಿ ಕೂಗುತ್ತಿದ್ದ ಬಾಲಕರ ತಂಡವು ಪ್ರತಿ ಮನೆಗೂ ಹೋಗುತ್ತಿದ್ದಿತು. ಮೊದಲು ಹೋಗಬೇಕಾದವನು ಕೃಷ್ಣಾಜಿನದ ಶಿಷ್ಯ. ಅವನು ಹೋಗಿ ಮನೆಯಲ್ಲಿ ಪ್ರಶಸ್ತವಾದ ಸ್ಥಳದಲ್ಲಿ ಕೃಷ್ಣಾಜಿನವನ್ನು ಹಾಸುವುದು. ಆಮೇಲೆ ಪಟದ ಶಿಷ್ಯನು ಪಟವನ್ನು ಅದರ ಒಂದು ತುದಿಯಲ್ಲಿ ಗೋಡೆಗೆ ಒರಗಿಸಿಡುವುದು. ಭಾಷ್ಯಕಾರರು ಕೈಯಲ್ಲಿ ಮಣಿಯ ಸರವನ್ನು ಹಿಡಿದುಕೊಂಡು ಗಂಭೀರ ಭಾವದಿಂದ ಪಟದ ಮುಂದೆ ಕೃಷ್ಣಾಜಿನದ ಮೇಲೆ ಕುಳಿತು, ಕೈಯನ್ನು ಮುಗಿದುಕೊಂಡು ಕಣ್ಣು ಮುಚ್ಚಿ ಮಣಿಯನ್ನು ಒಂದೊಂದಾಗಿ ಎಣಿಸುತ್ತಾ ಪಿಟಿಪಿಟಿಗುಟ್ಟುವುದು, ಶಿಷ್ಯರೆಲ್ಲಾ ರಾಮಾನುಜ ಎಂದು ಕೂಗಿ ನಮಸ್ಕಾರ ಮಾಡುವುದು; ಪಾಪ ಈ ಭಾಷ್ಯಕಾರನಿಗೆ ಒಂದೊಂದು ವೇಳೆ ತಡೆಯಲಾರದ ನಗುವು ಬಂದುಬಿಡುತ್ತದೆ. ನಗುವುದಕ್ಕೆ ಅವಕಾಶವಿಲ್ಲ. ಸಂನ್ಯಾಸಿಯ ಯೋಗ್ಯತೆಯನ್ನೂ ಗಾಂಭೀರ್ಯವನ್ನೂ ಉಳಿಸಿಕೊಳ್ಳಬೇಕು. ಏನುಮಾಡುವುದು? ಒಂದೊಂದುಸಲ ಆ ನಗುವು ದಾರಿತಪ್ಪಿ ಹೋಗಿ ದೊಡ್ಡ ಕೆಮ್ಮಲಾಗಿಬಿಡುತ್ತಿದ್ದಿತು. ಭಾಷ್ಯಕಾರರಾಗುವುದು ದೊಡ್ಡ ಗೌರವ. ನನಗೂ ಒಂದುಸಲ ಆ ವೇಷ ಹಾಕಿಬಿಟ್ಟಿದ್ದರು. ನನ್ನ ಅವಸ್ಥೆ ಕೇಳಬೇಡಿ. ನಾನು ಗಂಭೀರವಾಗಿರಬೇಕೆಂದು ಮಾಡಿದ ಪ್ರಯತ್ನವೆಲ್ಲಾ ವ್ಯರ್ಥವಾಯಿತು. ಪ್ರತಿಯೊಂದು ಮನೆಯಲ್ಲಿಯ ಭಾಷ್ಯಕಾರರಿಗೆ ಒಂದು ಸೇರು ಅಕ್ಕಿ, ಒಂದಾಣೆ ಕಾಣಿಕೆ; ಕಾಣಿಕೆಯಲ್ಲ ವಸೂಲಿ. ಏಕೆಂದರೆ ಕೊಡದೆ ಇದ್ದರೆ ಹುಡುಗರು ಬಿಡಬೇಕಲ್ಲ; ರಾಮಾನುಜ ಎಂದು ಮನೆಯ ಹೆಂಚು ಹಾರಿಹೋಗುವಂತೆ ಕೂಗಿ ಕಿವಿಗೆ ಚಿಟರು ಹತ್ತಿಸಿಬಿಡುತ್ತಾರೆ. ಆ ಆಣೆ ಮತ್ತು ಅಕ್ಕಿಯನ್ನು ಉಪಯೋಗಿಸಿ ಈ ಭಾಷ್ಯಕಾರರ ಶಿಷ್ಯರು ಮಾರನೆ ದಿವಸ ಹುಳಿಯನ್ನ ಮಾಡಿಸಿ ಹೊಡೆದು ಬಿಡುತ್ತಾರೆ. ಅಥವ ಬಡಬಗ್ಗರಿಗೆ ಕೊಡುವುದೂ ಉಂಟು.

ಇಂತಹ ಒಂದು ತಿರುನಕ್ಷತ್ರದ ದಿವಸ ಜೋಡಿದಾರರು (ಅಂದರೆ ಚಿಕ್ಕ ೧೫ ವರುಷದ ಈ ಹುಡುಗ. ಈಗಿನ ಜೋಡಿದಾರ) ಎಲ್ಲರಂತೆ ನಾಮದ ಬಣ್ಣ ಹಾಕಿಕೊಂಡಮೇಲೆ, ಆ ದಿವಸ ಅವನನ್ನೇ ಭಾಷ್ಯಕಾರನನ್ನಾಗಿ ಆರಿಸಿಬಿಟ್ಟರು. ಅವನು ಗಂಭೀರನಾಗಿಯೇ ಇದ್ದ. ಕೆಲವು ಮನೆಗಳಲ್ಲಿ ಸ್ತ್ರೀಯರೂ ಸಹ ಇವನಿಗೆ ಅಡ್ಡಬಿದ್ದರು. ಉಳಿದ ಕೆಲವರು ಇವನು ರಾಮಾನುಜಾಚಾರ್ಯರಂತೆಯೇ ಕಾಣುತ್ತಾನೆ ಎಂದರು. ಅವರ ತಂದೆಯವರಿಗೂ ಕೂಡ ಇವನ ವೇಷವನ್ನೂ ಗಾಂಭೀರವನ್ನೂ ನೋಡಿ ಆನಂದವಾಯಿತು. ಊರು ಒಂದು ಸುತ್ತು ಬರುವ ವೇಳೆಗೆ ೫ ಗಂಟೆಯಾಯಿತು. ದೇವರ ಉತ್ಸವವು ರಾತ್ರಿ ೮ ಗಂಟೆಗೆ ಮುಂಚೆ ಹೊರಡುವುದಾಗಿರಲಿಲ್ಲ. ೮ ಗಂಟೆಯವರೆಗೆ ಮಾಡುವುದೇನೆಂದು ಈ ಅಭಿನವ ಭಾಷ್ಯಕಾರನು ತನ್ನ ೩ ಜನ ಸ್ನೇಹಿತರೊಂದಿಗೆ ಆಲೋಚಿಸಿದನು. ಅಷ್ಟು ಹೊತ್ತಿಗೆ ನಾಮದಿಂದ ಮೈ ಬಿಗಿಯಹತ್ತಿತು. ಗಟ್ಟಿಯಾಗಿ ಕೂಗುತ್ತ ಊರೆಲ್ಲಾ ಅಲೆದುದರಿಂದ ಶಖೆಯಾಗಿ ಮೈ ಬೆವತಿತು. ಸ್ನೇಹಿತನೊಬ್ಬನು “ಬನ್ನಿ ನದಿಗೆ ಹೋಗಿ ಈಜೋಣ" ಎಂದನು. ಆ ಸೂಚನೆಯನ್ನು ಎಲ್ಲರೂ ಒಪ್ಪಿದರು. ಜೋಡಿದಾರನೊಂದಿಗೆ ಅವನ ೩ ಜನ ಸ್ನೇಹಿತರೂ ನದಿಯ ಬಳಿಗೆ ಹೋದರು. ಅಲ್ಲಿ ಸಂಧ್ಯಾವಂದನೆಗೆಂದು ಹೋಗಿದ್ದ ಊರಿನವರನೇಕರು ನಶ್ಯವನ್ನು ತೀಡುತ್ತಾ ಕುಳಿತಿದ್ದರು. “ಇದು ಪ್ರಯೋಜನವಿಲ್ಲ. ಪೂರ್ವದಿಕ್ಕಿನ ಕಾಲುವೆಗೆ ಹೋಗಿಬಿಡೋಣ. ಅರಸನ ಅಂಕೆ ಇಲ್ಲ. ದೆವ್ವದ ಕಾಟವಿಲ್ಲ. ಹೇಳೋರಿಲ್ಲ ಕೇಳೋರ್‍ಮೊದಲೇ ಇಲ್ಲ. ಅಲ್ಲದೆ ಕಾಲುವೆಯ ಸೇತುವೆಯ ಕೆಳಗೆ ಈಜಲು ಬಹಳ ಆನಂದ. ಸೇತುವೆಗೆ ನೀರು ತಗಲಿ ಡಬ ಡಬ ಎಂದು ಸದ್ದಾಗುವುದು. ರಾತ್ರಿ ಉತ್ಸವದ ಓಲಗ ಕೇಳಿಸುವವರೆಗೆ ಈಚಾಡೋಣ ಬನ್ನಿ” ಎಂದು ಎಲ್ಲರೂ ಹೊರಟುಹೋದರು.

ಸೂರ್‍ಯನು ಮುಳುಗುವುದರಲ್ಲಿದ್ದನು. ಅವನ ಹೊನ್ನಿನ ಕಿರಣವು ಬೆಟ್ಟದ ತುದಿಯಲ್ಲಿಯೂ, ಮರಗಳ ಎಲೆಗಳ ಅಂಚಿನಲ್ಲಿಯೂ, ಹೋಗಲೋ ಬೇಡವೋ ಎಂದು ಯೋಚಿಸುತ್ತಾ ನಿಂತಿದ್ದಿತು. ಸಂಧ್ಯಾಕಾಲಕ್ಕೆ ಸ್ವಭಾವವಾದ ಒಂದು ವಿಧವಾದ ಮೌನವೂ ಶಾಂತತೆಯ ಪ್ರಪಂಚವನ್ನೆಲ್ಲಾ ಆವರಿಸಿದ್ದಿತು. ಆ ಸಂಧ್ಯೆಯ ಗಾಂಭೀರ್‍ಯವನ್ನು ಭೇದಿಸಬಾರದೆಂದು, ಇರುಳು ಹೆಣ್ಣು ಮೆಲ್ಲಗೆ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತಾ ಬರುತ್ತಿರುವುದು ಕೇಳಿಸುವಂತಿದ್ದಿತು. ಬೆಳ್ಳಹಕ್ಕಿಗಳ ಸಾಲೊಂದು ಸಿಪಾಯಿಗಳೋಪಾದಿಯಲ್ಲಿ ನೇರವಾಗಿ ಪಶ್ಚಿಮದ ಕಡೆಗೆ ಹಾರುತ್ತಿದ್ದಿತು. ಕಾಳಿನಿಂದ ಬಗ್ಗಿದ ಪೈರಿನ ಮೇಲೆ ತಂಗಾಳಿಯು ಬೀಸಿದ ಕೂಡಲೆ, ಅದು ಆಚೆ ಈಚೆ ಬಗ್ಗಿ, ಮಧ್ಯದಲ್ಲೊಂದು ದಾರಿಯನ್ನು ಬಿಟ್ಟು, ಹೆದರಿ ಹೆದರಿ ಹೆಜ್ಜೆಯಿಕ್ಕುತ್ತಿರುವ ಇರುಳಿಗೆ, ಸುಸ್ವಾಗತವನ್ನು ಮಾಡುವಂತೆ ತಲೆಯಲ್ಲಾಡಿಸುತ್ತಿದ್ದಿತು. ಪ್ರಕೃತಿಯ ಈ ಬೆಡಗಿನ ಕಡೆಗೆ ಹುಡುಗರ ಲಕ್ಷ್ಯವಿರಲಿಲ್ಲ. ಅವರೆಲ್ಲರೂ ಒಂದು ಮರದ ಕೆಳಗೆ ಸ್ವಲ್ಪ ದೂರದಲ್ಲಿ ಬಟ್ಟೆಗಳನ್ನು ತೆಗೆದಿಟ್ಟು ಈಜುವುದಕ್ಕೆ ಪ್ರಾರಂಭಿಸಿದ್ದರು. ಒಬ್ಬರೊಂದಿಗೊಬ್ಬರು ಯಾರು ಹೆಚ್ಚು ಹೊತ್ತು ಮುಳುಗುತ್ತಾರೆಂದು ಹುರುಡು ಕಟ್ಟಿಕೊಂಡು ಈಜುತ್ತಿದ್ದರು. ಆದರೆ ಆ ಅಭಿನವ ಭಾಷ್ಯಕಾರನಿಗೆ ಆ ದಿವಸವೂ ಗ್ರಹಚಾರ ತಪ್ಪಿದುದಾಗಿರಲಿಲ್ಲ. ನಮ್ಮೂರ ಶಾನುಭೋಗ ರಾಮೋಹಳ್ಳಿಗೆ ಹೋಗಿದ್ದವನು ಆ ದಾರಿಯಲ್ಲಿ ಊರ ಕಡೆಗೆ ಬರುತ್ತಿದ್ದ. ಪುಣ್ಯಾತ್ಮ ತನ್ನ ದಾರಿ ತಾನು ಹಿಡಿದುಕೊಂಡು ಹೋಗಬಹುದಾಗಿತ್ತು. ಹಾಗೆ ಮಾಡಲಿಲ್ಲ. ಸುತ್ತಲೂ ನೋಡಿದ, ಹುಡುಗರು ಈಜುತ್ತಿರುವದು ಕಣ್ಣಿಗೆ ಬಿತ್ತು. ಮನಸ್ಸಿನಲ್ಲಿಯೇ ನಗುತ್ತಾ ಮರದ ಕೆಳಗಡೆ ಇಟ್ಟಿದ್ದ ಬಟ್ಟೆಯ ಗಂಟನ್ನು ಕಂಕುಳಲ್ಲಿ ಇರಿಕಿಕೊಂಡು ಊರ ಕಡೆಗೆ ಹೊರಟುಹೋದ. ಹುಡುಗರು ಮನದಣಿಯ ಈಜಾಡಿ ಮೈಕೈ ನೋವೆಲ್ಲಾ ಹೋಗಿಸಿಕೊಂಡು, ಮೇಲಕ್ಕೆ ಬಂದು ನೋಡುತಾರೆ! ಬಟ್ಟೆಗಳೊಂದೂ ಇಲ್ಲ. ಈ ಗೋಪಿಯರನ್ನು ಮೋಹಿಸಿದ ಕೃಷ್ಣನಾರೊ? ಎಂಬ ಸಂಶಯವುಂಟಾಯಿತವರಿಗೆ. ಸುತ್ತ ಎಲ್ಲಾದರೂ ಮರದ ಮೇಲಾದರೂ ಕೃಷ್ಣ ಕುಳಿತಿದ್ದಿದ್ದರೆ, ಹೋಗಿ ಅವನ ಕಾಲು ಹಿಡಿದು ಕೊಂಡು ಬೇಡಿ ಕಾಡಿ ದಮ್ಮಯ್ಯ ಗುಡ್ಡೆಹಾಕಿ ಬಟ್ಟೆಗಳನ್ನು ಹಿಂದಕ್ಕೆ ಪಡೆಯಬಹುದಾಗಿದ್ದಿತು. ಆದರೆ ಈಗ ಆ ಕೃಷ್ಣನ ಹೆಸರೂ ಇಲ್ಲ. ಉಸಿರೂ ಇಲ್ಲ. ಪಾಪ! ಲಂಗೋಟಿಯ ಹೊರತು ಅವರ ಮೈಮೇಲೆ ಮತ್ತಾವುದೂ ಬಟ್ಟೆಗಳಿರಲಿಲ್ಲ. ಅವರಿಗೆ ಚಳಿಯ ಭಯ ಅಷ್ಟೇನೂ ಇರಲಿಲ್ಲ. ಆದರೆ ಒಂದು ಮೈಲು ನಡೆದುಕೊಂಡು ಊರಿಗೆ ಹೋಗಬೇಕಲ್ಲ? ಈ ನಿರ್ವಾಣದಲ್ಲಿ ಹೋಗುವುದೆಂತು? ಎಂಬುದೇ ದೊಡ್ಡ ಪ್ರಶ್ನೆ ಯಾಯಿತು. ಜೋಡಿದಾರನಿಗಂತೂ ಇಲ್ಲಿಗೂ ನಮ್ಮ ಮನೆ ಮುದುಕಿಯು ಬಂದಿದ್ದಳೇನೋ ಎಂಬ ಸಂದೇಹವುಂಟಾಯಿತು. ಊರೊಳಕ್ಕೆ ಒಬ್ಬನು ಹೋಗಿ ಎಲ್ಲರ ಬಟ್ಟೆಗಳನ್ನೂ ತರಬೇಕೆಂದು ಜೋಡಿದಾರನು ಸೂಚಿಸಿದನು. ಆದರೆ ಹೋಗುವುದಕ್ಕೆ ಯಾರೂ ಒಪ್ಪಲಿಲ್ಲ. ಅಲ್ಲದೆ ತರುವುದಕ್ಕೆ ಬಟ್ಟೆ ಎಲ್ಲಿದೆ? ಈ ವಿಚಾರ ದೊಡ್ಡವರಿಗೆ ತಿಳಿದರೆ ರಾದ್ಧಾಂತವಾಗುವುದು. ದೊಡ್ಡವರಿಗೆ ತಿಳಿಯದಂತೆ ಊರನ್ನು ಸೇರಬೇಕೆಂಬುದೇ ಎಲ್ಲರ ಅಭಿಪ್ರಾಯವೂ ಆಶಯ ಆಗಿದ್ದಿತು. ಅವರವರು ತಮತಮಗೆ ತೋರಿದಂತೆ ತಮ್ಮ ಮನೆಗಳಿಗೆ ಹೋಗಿ ಸೇರಿಕೊಳ್ಳಬಹುದೆಂದು ತೀರ್ಮಾನವಾಯಿತು.

ನಮ್ಮ ಜೋಡಿದಾರ, ನಿರ್ಜನವಾದ ಕೋಟೆಯನ್ನು ಬಳಸಿಕೊಂಡು ಮರದ ನೆರಳಿನ ಆಶ್ರಯದಲ್ಲಿ ಅವಿತುಕೊಳ್ಳುತ್ತಾ ಗುಳ್ಳೆಯ ನರಿಯಂತೆ ತಮ್ಮ ಮನೆಯ ಹಿಂದಕ್ಕೆ ಬಂದನು. ಆ ವೇಳೆಗೆ ರಾತ್ರಿ ೭-೩೦-೮ ಗಂಟೆಗಳ ಸಮಯ. ಹಿತ್ತಲ ಬಾಗಲನ್ನು ಒಳಗಡೆಯಿಂದ ಅಗಣಿ ಹಾಕಿಬಿಟ್ಟಿರುವರೆಂದು ಇವನಿಗೆ ಗೊತ್ತಿದ್ದಿತು. ಬೀದಿಯ ಬಾಗಲಿನಿಂದ ಹೋಗೋಣವೆಂದರೆ, ಉತ್ಸವವನ್ನು ನೋಡುವುದಕ್ಕಾಗಿ ಆ ದಿವಸ ಜೋಡಿದಾರರೊಂದಿಗೆ ಮಾತನಾಡುತ್ತಾ ಊರಿನ ಅರ್ಧ ಜನರೆಲ್ಲರೂ ಜಗಲಿಯ ಮೇಲೆ ಕುಳಿತುಬಿಟ್ಟಿದ್ದರು. ನಮ್ಮ ನಿರ್ವಾಣ ಬ್ರಾಹ್ಮಣನಿಗೆ ಅವರನ್ನೆಲ್ಲಾ ತಿನ್ನುವಷ್ಟು ಸಿಟ್ಟು ಬಂದಿತು. ಅವರಾರೂ ಇಲ್ಲದಿದ್ದರೆ, ಜೋಡಿದಾರರು ಸಂಧ್ಯಾವಂದನೆಯಾದನಂತರ ಕೋಣೆಗೆ ಹೋಗಿ ದೇವರ ಪೂಜೆಮಾಡುತ್ತಾ ಸ್ತೋತ್ರಗಳನ್ನು ಹೇಳುತ್ತಿರುವಾಗ, ಉಪಾಯವಾಗಿ ಬಾಗಲನ್ನು ತೆಗೆಸಿ ಒಳಗೆ ಸೇರಿಬಿಡಬಹುದಾಗಿದ್ದಿತು. ಈಗ ಅದು ಸಾಧ್ಯವಿಲ್ಲದುದರಿಂದ ಅವನು ಹಿತ್ತಲ ಗೋಡೆಯನ್ನು ಹತ್ತಿ ಒಳಗಡೆಗೆ ಹಾರಿದನು. ಪಾಪ ಬೇಟೆಗಾರರಿಂದ ಅಟ್ಟಲ್ಪಟ್ಟ ಜಿಂಕೆಯಂತೆ ಅವನ ಮೈಯೆಲ್ಲವೂ ತರದು ಹೋಯಿತು. ಹಿತ್ತಲ ಬಾಗಲಿಗೆ ಬಂದನು. ಅದರ ಆಚೆಗೆ ತೊಟ್ಟಿಯ ಬಾಗಲು. ತೊಟ್ಟಿಯಲ್ಲಿ ನಮ್ಮ ನಾಯಕನ ತಂಗಿ ತಾಯಿಯೊಂದಿಗೆ ಮಾತನಾಡುತ್ತಿದ್ದಳು. ಎರಡು ಬಾಗಲುಗಳ ಮೂಲಕ ತನ್ನ ಧ್ವನಿಯ ಅವರಿಗೆ ಕೇಳುವಂತೆ ಜೋಡಿದಾರನು ಕೂಗಬೇಕಾಗಿತ್ತು. ಅದಕ್ಕಾಗಿ ಅವನೊಂದು ಉಪಾಯವನ್ನು ಮಾಡಿದನು. ಅವನ ತರ್ಕವು ಈ ರೀತಿ ನಡೆಯಿತು: "ನಾನು ಗಟ್ಟಿಯಾಗಿ ಕೂಗಿಬಿಟ್ಟರೆ ಬಾಗಲಿನಲ್ಲಿ ಕುಳಿತಿರುವ ನಮ್ಮ ತಂದೆಗೆ ಕೇಳಿಬಿಡುತ್ತೆ. ಸ್ವಲ್ಪ ಮೆಲ್ಲಗೆ ಕೂಗಿದರೆ, ಯಾರಿಗೂ ಕೇಳೋದಿಲ್ಲ, ಏನೂ ಪ್ರಯೋಜನವಾಗುವುದಿಲ್ಲ. ಅದಕ್ಕಾಗಿ ಈ ಉಪಾಯವನ್ನು ಮಾಡುತ್ತೇನೆ. ಕೊಟ್ಟಿಗೆಯ ಬಾಗಲನ್ನು ಸ್ವಲ್ಪ ಸದ್ದು ಮಾಡಿದರೆ ದನಗಳು ಕಿತ್ತುಕೊಂಡಿವೆಯೆಂದು ನೋಡಲು ನಮ್ಮ ತಾಯಿಯೋ ತಂಗಿಯೋ ಬರುತ್ತಾಳೆ. ಅನಂತರ ಮುಂದೆ ಎಲ್ಲಾ ಸುಲಭ."

ಈ ತರ್ಕ ವಾಚಸ್ಪತಿಯು ೮-೧೦ ಸಲ ಹಿತ್ತಲ ಬಾಗಲನ್ನು ಕುಟ್ಟಿದನು. ತೊಟ್ಟಿಯಲ್ಲಿ ಅವನ ತಾಯಿಯ ತಂಗಿಯ ಪಂಜಿನ ಕಳ್ಳರ ವಿಷಯವನ್ನು ಕುರಿತು ಮಾತನಾಡುತ್ತ ಕುಳಿತಿದ್ದರು. ಹಿಂದೆ ಅವರ ಮನೆಗೆ ೨-೩ ಸಾರಿ ಕಳ್ಳರು ನುಗ್ಗಿದ್ದರಂತೆ. ಆ ವಿಚಾರವನ್ನೆಲ್ಲಾ ಅವರು ಮಾತನಾಡುತ್ತಿದ್ದರು. ಅವರ ವಾತಾವರಣವೆಲ್ಲಾ ಕಳ್ಳರಿಂದಲೂ ಭಯದಿಂದಲೂ ತುಂಬಿಹೋಗಿತ್ತು. ಈ ಹಿತ್ತಲ ಬಾಗಲ ಸದ್ದನ್ನು ಅವೇಳೆಯಲ್ಲಿ ಕೇಳಿದ ಕೂಡಲೆ ಅವರು ಬೆಚ್ಚಿಬಿದ್ದರು. ತಮ್ಮ ಕಥೆಯಿಂದ ಕಳ್ಳರ ಪ್ರಪಂಚವನ್ನು ಸೃಷ್ಟಿ ಮಾಡಿದ್ದ ಅವರಿಗೆ ಕಳ್ಳರು ಎದುರಿಗೇ ಬಂದಂತೆ ತೋರಿತು. ತಾಯಿ ಮಗಳಿಬ್ಬರೂ ಬೀದಿಯ ಬಾಗಲಿಗೆ ಹೋದರು. ಮಗಳು ತಂದೆಯೊಂದಿಗೆ "ಯಾರೋ ಹಿತ್ತಲ ಬಾಗಲನ್ನು ಇಡಿಯುತ್ತಿದ್ದಾರೆ. ಈಗ ಒಂದೇ ಸಮನೆ ೧೦-೨೦ ಸಲ ಇಡಿದರು" ಎಂಬುದಾಗಿ ಹೇಳಿದಳು. ಬಾಗಲಿನಲ್ಲಿದ್ದವರೆಲ್ಲಾ ಕೌತುಕದಿಂದ ಒಳಗೆ ಬಂದರು. ಪಾಪ! ನಮ್ಮ ನಾಯಕನು ತಂಗಿಯು ದೀಪವನ್ನು ತರುವುದಕ್ಕೆ ಒಳಕ್ಕೆ ಹೋಗಿದ್ದಾಳೆ. ಅದಕ್ಕೆ ಇಷ್ಟು ತಡವಾಯಿತು ಎಂದು ಸಮಾಧಾನಪಟ್ಟು ಕೊಂಡಿದ್ದನು. ತನ್ನನ್ನು ನೋಡಲು ಇವರೆಲ್ಲಾ ಬರುತ್ತಿರುವುದು ಅವನಿಗೆ ತಿಳಿದಿದ್ದರೆ, ಅವನು ಮತ್ತೆ ಕಪಿಯಂತೆ ಗೋಡೆಯನ್ನು ಹಾರಿ ಓಡಿಬಿಡುತ್ತಿದ್ದನು. ಆದರೆ ವಿಧಿಯು ಅವನಿಗೆ ಇಲ್ಲಿಯೂ ಮೋಸಮಾಡಿತು. ಮೆಲ್ಲನೆ ತೊಟ್ಟಿಯ ಬಾಗಲು ತೆರೆಯಿತು. ದೀಪದ ಬೆಳಕು ಬಾಗಲಿನ ಕಂಡಿಯ ಮೂಲಕ ಹೊರಕ್ಕೆ ತೋರುತ್ತಿದ್ದಿತು. ಹಿತ್ತಲು ಬಾಗಲೂ ತೆರೆಯಿತು. ಎಲ್ಲರಿಗಿಂತಲೂ ಮುಂಚೆ ಅವನ ಕಣ್ಣಿಗೆ ಬಿದ್ದವರು ಅವನ ತಂದೆ.

ಇವನನ್ನು ಈ ಅವಸ್ಥೆಯಲ್ಲಿ ಕಂಡು ಅವರ ತಂದೆಗೆ ಬಹಳ ನಗು ಬಂದಿತು. ಉಳಿದವರೆಲ್ಲಾ ಘೊಳ್ಳೆಂದು ನಕ್ಕುಬಿಟ್ಟರು. ಜೋಡಿದಾರನಿಗೆ ಮಾತ್ರ ಪ್ರಾಣವೇ ಹೋದಂತಾಯಿತು. ತನ್ನ ಅವಸ್ಥೆಯನ್ನು ನೋಡಿ ಅವರು ನಕ್ಕುದು ಇವನಿಗೆ ಸಹಿಸಲಿಲ್ಲ. ಮನಸ್ಸಿನಲ್ಲಿ “ಪಾಪಿಗಳಿರಾ ನಿಮ್ಮನ್ನು ಶಿಕ್ಷಿಸುವ ದೇವರೇ ಇಲ್ಲವೆ?" ಎಂದುಕೊಂಡನು.

ಬೇರೆ ಬಟ್ಟೆಯನ್ನು ಹಾಕಿಕೊಂಡುದಾಯಿತು. ಸರಿ ವಿಚಾರಣೆ. ತಮ್ಮ ತಂದೆಯವರೊಬ್ಬರೇ ವಿಚಾರಣೆ ಮಾಡಿದ್ದರೆ ನಮ್ಮ ನಾಯಕನಿಗೆ ದುಃಖ ವಿರುತ್ತಿರಲಿಲ್ಲ; ಆದರೆ ಊರಿಗೆ ಊರೇ ಸೇರಿಬಿಟ್ಟಿತ್ತು. ಭಾಷ್ಯಕಾರರೆಂದು ತನ್ನನ್ನು ಮಧ್ಯಾಹ್ನ ಗೌರವಿಸಿದವರೆಲ್ಲಾ ಈಗಿನ ತನ್ನ ಈ ಅವಸ್ಥೆಯನ್ನು ನೋಡುವರಲ್ಲಾ? ಎಂದು ಅವನಿಗೆ ದುಃಖವುಂಟಾಯಿತು. ಆದರೆ ವಿಧಿಯಿರಲಿಲ್ಲ. ಬಂದದ್ದನ್ನು ಅನುಭವಿಸಲೇಬೇಕಾಗಿತ್ತು. ತನಗೆ ಅವಮಾನ ಮಾಡಲು ಪ್ರಪಂಚವೆಲ್ಲಾ ಒಂದಾಗಿರುವುದೆಂದು ಅವನು ಭಾವಿಸಿದನು.

ಅವರ ತಂದೆಯವರು ನಿನಗೆ ನೀರಿನ ಬರ ಹಿಡಿದಿದೆ. ನಿನ್ನ ಜುಟ್ಟನ್ನು ಹಿಡಿದುಕೊಂಡು ನೀರಿನೊಳಗೆ ಉಸಿರು ಕಟ್ಟುವವರೆಗೆ ಮುಳುಗಿಸಿಬಿಡುತ್ತೇನೆ" ಎಂದರು. ನಮ್ಮ ನಾಯಕನಿಗೆ ನೀರು ಎಂದ ಕೂಡಲೇ ಬಾಯಲ್ಲಿ ನೀರೊಡೆಯಿತು. ಅವನು ಧೈರದಿಂದ “ಅಷ್ಟು ಮಾಡಿದರೆ ಸಾಕು. ನಾನು ಕದ್ದು ಈಜೋದೆ ತಪ್ಪುತ್ತೆ. ಬೇಕಾದಷ್ಟು ಹೊತ್ತು ನೀರಿನಲ್ಲಿ ಮುಳುಗಿಸಿ. ಅನಂತರ ಮೇಲಕ್ಕೆ ಬರುತ್ತೇನೆ” ಎಂದನು.

ಜೋಡಿದಾರರು ಹೊಡೆಯಬೇಕೆಂದು ಎತ್ತಿದ್ದ ಕೈಯಿನ ಬೆತ್ತವನ್ನು ಕೆಳಕ್ಕೆ ಹಾಕಿಬಿಟ್ಟರು. ಪೋಪ್ ಎಂಬ ಪಾಶ್ಚಾತ್ಯ ಕವಿಯು ಕವಿತೆಗಳನ್ನು ಮಾಡಿ ಮಾಡಿ ತನ್ನ ಬಾಲ್ಯದಲ್ಲಿಯೇ ಅವನ ತಂದೆಗೆ ಬೇಸರಿಕೆಯನ್ನು ಹತ್ತಿಸಿಬಿಟ್ಟನಂತೆ. ಅವನ ತಂದೆಯು ಒಂದು ದಿವಸ ಕೋಪದಿಂದ, ಬೆತ್ತವನ್ನು ಹಿಡಿದುಕೊಂಡು ನಿನ್ನ ಕವಿತೆಗಳಿಗೆ ಇದೇ ಬಹುಮಾನ ಎಂದು ಹೊಡೆಯುವುದಕ್ಕೆ ಹೋದರಂತೆ. ಪೋಪನು ದೈನ್ಯದಿಂದ,

Father, father, mercy take
I shall Verses never make.
ತಂದೆಯೆ ತಂದೆಯೆ ತೋರಿಸು ಕರುಣೆಯ
ಮುಂದಕೆ ಎಂದಿಗು ಮಾಡೆನು ಕವಿತೆಯ.

ಎಂದು ಕವಿತೆಯಲ್ಲಿಯೇ ಗಾಬರಿಯಿಂದ ಪ್ರಾರ್ಥಿಸಿದನಂತೆ. ಅವರ ತಂದೆಯು ಇವನನ್ನು ಇನ್ನು ಸರಿಮಾಡುವುದಕ್ಕಾಗುವುದಿಲ್ಲ ಎಂಬುದಾಗಿ ಬಿಟ್ಟು ಬಿಟ್ಟರಂತೆ. ಹಾಗೆಯೇ ಜೋಡಿದಾರರೂ ಮಗನನ್ನು ಹೊಡೆಯದೆ ನೀನು ಯಾವತ್ತಾದರೂ ನೀರಿನಲ್ಲಿಯೇ ಸಾಯುತ್ತೀಯೆ ಖಂಡಿತ, ಎಂದು ಹೇಳಿ ಸುಮ್ಮನಾದರು.

೨. ಕಾಮನ ಹಬ್ಬದ ವಿನೋದ

ಕಾಮನ ಹಬ್ಬದ ದಿವಸ ಬಂದಿತು. ಊರ ಹೊರಗಿನ ಬೈಲಿನಲ್ಲಿ ತೋಟಗಳಿಂದ ಬೇಕಾದಂತೆ ಒಣಗಿದ್ದ ಗರಿಗಳನ್ನು ಆರಿಸಿ ತಂದು ಶೇಖರಿಸಿದ್ದರು. ರಾತ್ರಿ ಹತ್ತು ಗಂಟೆಗೆ ಆ ದೊಡ್ಡ ರಾಶಿಗೆ ಬೆಂಕಿಯನ್ನು ಹತ್ತಿಸಿ ವಿನೋದವನ್ನು ನೋಡಬೇಕೆಂದು ಹುಡುಗರೆಲ್ಲರೂ ಯೋಚಿಸಿದ್ದರು. ಸಂಧ್ಯಾಕಾಲ ಸುಮಾರು ೭ ಗಂಟೆ ಇದ್ದಿರಬಹುದು. ಜಗತ್ತಿನ ಮೇಲೆ ಕತ್ತಲೆಯ ಛಾಯೆಯು ಆಗತಾನೆ ಬೀಳುತ್ತಿದ್ದಿತು. ಕಷ್ಟಪಟ್ಟು ಗರಿಗಳನ್ನು ಶೇಖರಿಸಿದ್ದವರೆಲ್ಲಾ ಈ ನೋಟವನ್ನು ವಿರಾಮವಾಗಿ ಬಂದು ನೋಡುವುದಕ್ಕೋಸ್ಕರ, ತಮ್ಮ ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಬರಲು ಮನೆಗಳಿಗೆ ಹೋಗಿದ್ದರು. ಜೋಡಿದಾರನು ಗರಿಗಳ ರಾಶಿ ಎಷ್ಟಾಗಿದೆಯೋ ನೋಡಿಕೊಂಡು ಬರೋಣವೆಂದು ಅವುಗಳನ್ನು ಶೇಖರಿಸಿದ್ದ ಬೈಲಿಗೆ ಹೋದನು. ಹೋಗುವಾಗ ರಾತ್ರಿ ೧೦ ಗಂಟೆಗೆ ಬೇಕಾಗಬಹುದೆಂದು ಯೋಚಿಸಿ, ಜೇಬಿನಲ್ಲಿ ಒಂದು ಬೆಂಕಿಯ ಪೊಟ್ಣವನ್ನು ಹಾಕಿಕೊಂಡು ಹೋದನು. ಬೆಟ್ಟದಂತೆ ರಾಶಿಯಾಗಿ ಬಿದ್ದಿದ್ದ ಒಣಗಿದ್ದ ತರಗನ್ನು ನೋಡಿ ಜೋಡಿದಾರನಿಗೆ ಅದನ್ನು ಹತ್ತಿಸಿಬಿಡಬೇಕೆಂದು ಆಸೆಯಾಯಿತು. ಜೇಬಿನೊಳಕ್ಕೆ ಕೈ ಹೋಯಿತು; ಬೆಂಕಿಯ ಪೊಟ್ಣ ಹೊರಕ್ಕೆ ಬಂತು. ಒಂದು ನಿಮಿಷದೊಳಗೆ ಉರಿಯು ಸಹಸ್ರಾರು ನಾಲಗೆಯಿಂದ ಮೇಲಕ್ಕೆದ್ದಿತು. ಅರ್ಧ ಗಂಟೆ ಮುಗಿಯುವುದರೊಳಗಾಗಿ ತರಗಿನ ರಾಸಿಯಿದ್ದ ಸ್ಥಳದಲ್ಲಿ ಒಂದು ಅಡಿ ಬೂದಿ ಮಾತ್ರ ಉಳಿಯಿತು. ಆ ಉರಿಯ ಆನಂದದಲ್ಲಿ ಇದುವರೆಗೆ ಪ್ರಪಂಚವನ್ನೇ ಮರೆತಿದ್ದ ಜೋಡಿದಾರನಿಗೆ ಉರಿಯು ಆರಿದಮೇಲೆ ಜ್ಞಾನೋದಯವಾಯಿತು. ತನ್ನ ಸ್ನೇಹಿತರು ತನ್ನನ್ನು ಸುಮ್ಮನೆ ಬಿಡುವುದಿಲ್ಲವೆಂದು ಅವನು ಚೆನ್ನಾಗಿ ತಿಳಿದಿದ್ದನು. ಅವರೆಲ್ಲರ ಕಷ್ಟದ ಫಲವನ್ನೂ ತಾನೊಬ್ಬನೇ ಅನುಭವಿಸಿದುದಕ್ಕಾಗಿ ತನಗುಂಟಾಗಬಹುದಾದ ಫಲವು ಅವನಿಗೆ ಗೊತ್ತಿದ್ದಿತು. ಅವರ ಕೈಗೆ ತಾನು ಸಿಕ್ಕಿದರೆ ಮೈಮೂಳೆ ಮುರಿಯುವವರೆಗೆ ಏಟು ಬೀಳುವುದೆ೦ದೂ, ಕೋಪದ ಮೊದಲಿನ ಆವೇಶದಲ್ಲಿ ಪ್ರಾಣಾಪಾಯವೇ ಉಂಟಾದರೂ ಉಂಟಾಗಬಹುದೆಂದೂ ಅವನು ಹೆದರಿದನು. “ಇದಕ್ಕೆ ಮುಖ್ಯ ಉಪಾಯವೆಂದರೆ, ಈ ದಿವಸವೆಲ್ಲಾ ಶತ್ರುಗಳ ಕೈಗೆ ಸಿಕ್ಕದೆ ತಪ್ಪಿಸಿಕೊಳ್ಳುವುದು. ಕೋಪವು ಶಮನವಾದ ಮೇಲೆ ಏನೂ ಆಗುವುದಿಲ್ಲ. ನೋಡಿಕೊಳ್ಳೋಣ. ಸದ್ಯಕ್ಕೆ ಬೀಸುವ ದೊಣ್ಣೆ ತಪ್ಪಿದರೆ ಸಾವಿರ ವರುಷ ಆಯುಸ್ಸು" ಎಂದು ಯೋಚಿಸಿದನು. ಆದರೆ ಹೋಗುವುದೆಲ್ಲಿಗೆ? ಎಂಬುದು ತೋರಲಿಲ್ಲ. ಯಾರ ಮನೆಯಲ್ಲಿ ಅವಿತುಕೊಂಡರೂ ವಿಷಯವು ಹೊರಕ್ಕೆ ಬಿದ್ದ ಮೇಲೆ ತನ್ನನ್ನು ಅವರು ಮುಚ್ಚಿಡುವರೆಂಬ ನಂಬಿಕೆ ಇವನಿಗೆ ಇರಲಿಲ್ಲ. ತಮ್ಮ ಮನೆಗೆ ಹೋಗಲು ತಂದೆಯವರ ಭಯ. ಈ ಯೋಚನೆಯಲ್ಲಿಯೆ ರಾತ್ರಿ ೮ ಗಂಟೆಯಾಗಿ ಹೋಯಿತು. ಜೋಡಿದಾರನು ಏನು ಮಾಡೋಣವೆಂದು ಯೋಚಿಸುತ್ತಾ ನದಿಯ ದಡಕ್ಕೆ ಬಂದನು. ತೀರದ ದೇವಸ್ಥಾನವು ನಿಶ್ಯಬ್ದವಾಗಿತ್ತು. ಇರುಳ ಹೆಣ್ಣು ಕರಿಯ ತೊಡವೆಯನ್ನು ತೊಟ್ಟು ಸಿಂಗಾರವಾಗಿದ್ದಳು. ಅವಳ ಕಪ್ಪಾದ ಅರಮನೆಯಲ್ಲಿ ಎಷ್ಟು ಜನ ದಾರಿತಪ್ಪಿರುವರೋ ಎಂದು ಅವನು ಯೋಚಿಸಿದನು. ಹೊಳೆಯ ಮಧ್ಯದಲ್ಲಿ ಮಚ್ಚೆಯ ಕಲ್ಲು ಎಂಬುದಾಗಿ ಒಂದು ಬಂಡೆಯಿದೆ. ಅದರ ಸುತ್ತಲೂ ಒಂದು ಮಡುವಿದೆ. ಅಲ್ಲಿ ನೀರು ಬಹಳ ಆಳ. ನೀರಿನೊಳಗೆ ಚಿನ್ನದ ರಥವು ಮುಳುಗಿದೆ ಎಂದು ಹೇಳುತ್ತಾರೆ. ಇಲ್ಲಿ ನಮ್ಮೂರ ರಥೋತ್ಸವದ ಕಾಲದಲ್ಲಿ ತೆಪ್ಪೋತ್ಸವ ನಡೆಯುತ್ತದೆ. ಈ ಬಂಡೆಗೆ ಈಜಿಬಿಟ್ಟರೆ ಸದ್ಯಕ್ಕೆ ಈ ರಾತ್ರಿ ನನಗೆ ಭಯವಿಲ್ಲವೆಂದುಕೊಂಡು ನಮ್ಮ ಜೋಡಿದಾರನು ಬಟ್ಟೆಗಳನ್ನೆಲ್ಲಾ ತಲೆಗೆ ರುಮಾಲಿನಂತೆ ಸುತ್ತಿ, ಆ ಮಡುವಿನ ಬಂಡೆಗೆ ಈಜಿಬಿಟ್ಟ. ಆ ಮಡುವಿನಲ್ಲಿ ಮೊಸಳೆಯಿದೆ ಎಂಬ ಸುದ್ದಿಯಿದೆ. ಆದರೆ ಆಗಿನ ಗಾಬರಿಯಲ್ಲಿ ಅವನಿಗೆ ಯಾವುದೂ ಜ್ಞಾಪಕ ಬರಲಿಲ್ಲ. ಬಂಡೆಯು ವಿಶಾಲವಾಗಿ ದೊಡ್ಡದಾಗಿದೆ. ಜೋಡಿದಾರನು ಅದರಮೇಲೆ ಕುಳಿತುಕೊಂಡ. ಆಕಾಶವು ಸಾವಿರಾರು ನಕ್ಷತ್ರಗಳಿಂದ ಕೂಡಿ ಚಿತ್ರಿತವಾದ ಬಟ್ಟೆಯಂತೆ ಕಾಣುತ್ತಿದ್ದಿತು. ನದಿಯ ನೀರು ಒಂದು ವಿಧವಾದ ಗಾನದಿಂದ ಮುಂದಕ್ಕೆ ಹರಿಯುತ್ತಾ ಸಣ್ಣ ಸಣ್ಣ ಅಲೆಗಳೊಂದಿಗೆ ಆಟವಾಡುತ್ತಿದ್ದಿತು. ತೀರದಲ್ಲಿ ಮರಗಳಿಂದ ತುಂಬಿದ ತೋಪು, ಕರಿಯ ರಾಕ್ಷಸನ ಮೈಯಂತೆ ಕಾಣುತ್ತಿದ್ದಿತು. ಮಧ್ಯೆ ಮಧ್ಯೆ ಮಿಂಚಿನ ಹುಳುಗಳು ಮಿನುಗುತ್ತಿದ್ದುವು. ದೂರದ ಹಳ್ಳಿಯ ನಾಯಿಗಳ ಕೂಗು ಇರುಳ ಶಾಂತಿಗೆ ಮಿಂಚನ್ನೆಸೆಯುತ್ತಿದ್ದಿತು. ಜೋಡಿದಾರನು ಕುಳಿತಿದ್ದಂತೆಯೇ ಕಣ್ಣುಮುಚ್ಚಿ ತೂಕಡಿಸಲಾರಂಭಿಸಿದನು.

ತಾನು ಎಷ್ಟು ಹೊತ್ತು ತೂಕಡಿಸುತ್ತಿದ್ದನೋ ಅದು ಅವನಿಗೆ ಚೆನ್ನಾಗಿ ತಿಳಿಯದು. ಆದರೆ ಒಮ್ಮಿಂದೊಮ್ಮೆ ನದಿಯ ತೀರದಲ್ಲಿ ೨-೩ ಲಾಂದ್ರಗಳು ಇವನ ಕಣ್ಣಿಗೆ ಬಿದ್ದುವು. ಜೋಡಿದಾರನಿಗೆ ಕೂಡಲೇ ತಾನೆಲ್ಲಿರುವೆನೆಂಬುದರ ಅರಿವುಂಟಾಯಿತು. ದಡದಲ್ಲಿ ೧೫-೨೦ ಜನ ಹುಡುಗರು ಗಟ್ಟಿಯಾಗಿ ಮಾತನಾಡುತ್ತಿದ್ದರು. ಒಬ್ಬನು “ಇದು ಅವನ ಕೆಲಸವೇ” ಎಂದನು. ಮತ್ತೊಬ್ಬನು “ಕೈಗೆ ಸಿಕ್ಕಲಿ ಈಗ್ಯಾಕೆ ಮಾತು?” ಎಂದನು. ಮೂರನೆಯವನು “ತೋಟದಿಂದ ಗರಿಯನ್ನು ಹೊತ್ತು ಬೆನ್ನು ಮೂಳೆಯೆಲ್ಲಾ ಇನ್ನೂ ನೋಯುತ್ತಾ ಇದೆ” ಎಂದನು. ನಾಲ್ಕನೆಯವನು "ಇಷ್ಟು ಜನರ ಕೈಗೆ ಅವನು ಸಿಕ್ಕಿಬಿಟ್ಟರೆ ಆಳಿಗೆ ಒಂದು ಗುದ್ದು ಎಂದರೂ ಅವನ ಮೈ ಮಳೆಯೆಲ್ಲಾ ಪುಡಿಯಾಗಿ ಹೋಗುತ್ತೆ" ಎಂದನು. ಜೋಡಿದಾರನಿಗೆ ಅವರ ಮಾತುಗಳನ್ನು ಕೇಳಿ ಮೈಯಲ್ಲಿ ನಡುಕವುಂಟಾಯಿತು. ಅವರೆಲ್ಲರೂ ಜವಾಬ್ದಾರಿಯಿಲ್ಲದ ಇವನ ವಯಸ್ಸಿನ ಹುಡುಗರೇ ಆಗಿದ್ದರು. ಆ ದಿವಸ ತನಗೆ ಚೆನ್ನಾಗಿ ಏಟು ಬೀಳುವುದರಲ್ಲಿ ಅನುಮಾನವಿರಲಿಲ್ಲ. ಆದರೆ ನದಿಯ ಮಧ್ಯದಲ್ಲಿದ್ದೇನಲ್ಲಾ ಭಯವಿಲ್ಲ ಎಂದುಕೊಂಡನು. ಅಷ್ಟು ಹೊತ್ತಿಗೆ ನದಿಯ ತೀರಕ್ಕೆ ಇನ್ನೂ ೧೦-೧೫ ಮಂದಿ ಬಾಲಕರು ಬಂದರು. ಅವರೆಲ್ಲ “ಅವನು ಊರಲ್ಲಿ ಯಾರ ಮನೆಯಲ್ಲಿಯೂ ಇಲ್ಲ. ಪೇಟೆ ಕೋಟೆ ಎಲ್ಲಾ ಹುಡುಕಿದ್ದಾಯಿತು. ಛತ್ರದ ಮಾಳಿಗೆಯ ಮೇಲೂ ಇಲ್ಲ. ಊರೊಳಗಿನ ಹಳೆಯ ದೇವಸ್ಥಾನದಲ್ಲಿಯೂ ಇಲ್ಲ. “ಶೃಂಗಾರ ತೋಟ"ದಲ್ಲಿಯೂ ಇಲ್ಲ. ಸುರಗಿಯ ಮರದಮೇಲೂ ಇಲ್ಲ. ಈ ರಾತ್ರಿಯಲ್ಲಿ ಅವನು ಎಲ್ಲಿಗೆ ಹೋದ ಅನ್ನೋದೆ ಅನುಮಾನ" ಎಂದರು. ಅವರಲ್ಲಿ ಒಬ್ಬನು “ಹಾಗಾದರೇನು ಭೂಮಿಯೊಳಕ್ಕೆ ಹೊರಟುಹೋದನೋ?" ಎಂದನು. ಮತ್ತೊಬ್ಬನು “ನೀರಿನೊಳಗೆ ಮುಳುಗಿದ್ದಾನೋ ಏನೊ" ಎಂದನು. ಇನ್ನೊಬ್ಬನು “ಆ ಮಟ್ಟಿ ಕಲ್ಲಿನ ಮೇಲಕ್ಕೆ ಈಜಿ ಹೋಗಿದ್ದಾನೇನೊ” ಎಂದನು. ಆ ಮಾತನ್ನು ಕೇಳಿ ಜೋಡಿದಾರನಿಗೆ ಹೃದಯವು ಬಾಯಿಗೆ ಬಂದಿತು. ಅವರಲ್ಲಿ ೧೦ ಹುಡುಗರು ಈಜಿ ನೋಡೋಣ ಎಂಬುದಾಗಿ ಬಂಡೆಗೆ ಬಂದು ಬಿಟ್ಟರೆ, ಇವನ ಗತಿ ದೇವರೇ ಗತಿ. ಆದರೆ ಅವರಾರೂ ಈಜಲಿಲ್ಲ. ಒಬ್ಬನು “ಈ ಮಡುವಿನಲ್ಲಿ ಮೊಸಳೆ ಇದೆ. ಅವನು ಇಲ್ಲಿಗೆ ಹೋಗಿಲ್ಲ" ಎಂದನು. ಇನ್ನೊಬ್ಬನು "ಎಲ್ಲಿ ಹೋಗ್ತಾನೆ ಸಾಯ್ತಾನ್ಯೆ? ನಾಳೆ ಸಿಕ್ಕಿಯೇ ಸಿಕ್ಕುತ್ತಾನೆ ಬನ್ನಿ” ಎಂದನು. ಮತ್ತೊಬ್ಬ ಹುಡುಗನು ಗಟ್ಟಿಯಾಗಿ ಕತ್ತಲೆಯನ್ನುದ್ದೇಶಿಸಿ "ಎಲೋ ರಾಮು ಈವತ್ತಿಗೆ ಬದುಕಿಕೊಂಡೆ ಹೋಗು, ನಾಳೆ ಇದೆ ನಿನಗೆ ಹಬ್ಬ” ಎಂದು ಕೂಗಿ ಹೇಳಿದನು. ನದಿಯ ತೀರದಲ್ಲಿ ಕಂಡ ಲಾಂದ್ರಗಳೆಲ್ಲಾ ಊರಕಡೆ ಹೊರಟುಹೋದುವು. ಹೋಗ ಹೋಗುತ್ತಾ ಸ್ನೇಹಿತರ ಧ್ವನಿಯು ದೂರದಲ್ಲಿ ನಿಶ್ಯಬ್ದತೆಯಲ್ಲಿ ಲೀನವಾಯಿತು.

ಜೋಡಿದಾರನು ಯೋಚಿಸಿದ್ದಂತೆಯೇ "ಬೀಸುವ ದೊಣ್ಣೆ ತಪ್ಪಿದರೆ-" ಎಂಬಂತೆ ಆಯಿತು. ಮೊಸಳೆ ಮಡುವಿಗೆ ಇವನು ಈಜಿಕೊಂಡು ಹೋದುದನ್ನು ಕೇಳಿ ಹುಡುಗರು ಭಲಾಭಲಾ ಎಂದರು. ಅದುವರೆಗೆ ಯಾರೂ ಈ ಸಾಹಸವನ್ನು ಮಾಡಿರಲಿಲ್ಲ. ಅವರ ತಂದೆಯು ಮಾತ್ರ "ಮೊಸಳೆಯು ಅವನನ್ನು ನುಂಗದುದೇ ಆಶ್ಚರ್‍ಯ" ಎಂದರು.

೩. ವಿದ್ಯೆಯನ್ನು ಕಲಿತ ಅನುಭವ

ನಮ್ಮ ಜೋಡಿದಾರನ ವಿದ್ಯಾರ್ಜನೆಯ ಒಂದೇ ಒಂದು ಅನುಭವವನ್ನು ಹೇಳುತ್ತೇನೆ. ಮಗನೇನೋ ದಿಗ್ಧಂತಿಯಾಗಿಬಿಡುತ್ತಾನೆ ಎಂದು ಅವರ ತಂದೆಯವರು ಕನ್ನಡ ಲೋವರ್ ಸೆಕಂಡರೀ ಪರೀಕ್ಷೆಗೆ ಅವನಿಗೆ “ಪ್ರೈವೇಟ್ ಟ್ಯೂಷನ್" ಹೇಳಿಸಿದರು. ಪರೀಕ್ಷೆಗೆ ಹೋಗುವ ಕಾಲ ಬಂದಿತು. ಆಗ ನಮ್ಮೂರಿಗೆ ಪರೀಕ್ಷೆಯ ಕೇಂದ್ರವು ನರಸೀಪುರವಾಗಿತ್ತು. ಪರೀಕ್ಷೆಗೆ ಹೊರಡುವುದಕ್ಕೆ ೪-೫ ದಿವಸ ಮೊದಲಿನಿಂದಲೇ ದೊಡ್ಡ ಜೋಡಿದಾರರು ಮಗನಿಗೆ "ಪರೀಕ್ಷೆಯಲ್ಲಿ ಸಮಾಧಾನದಿಂದಿರು. ನಿನಗೆ ಯಾವಾಗಲೂ ಗಾಬರಿ ಹೆಚ್ಚು” ಎಂಬುದಾಗಿ ಒತ್ತಿ ಒತ್ತಿ ಮನಸ್ಸಿಗೆ ಹಿಡಿಯುವಂತೆ ಉಪನ್ಯಾಸ ಮಾಡಿದ್ದರು. ವಿದ್ಯಾರ್ಥಿಗಳೆಲ್ಲರೂ ಮುಂಜಾನೆ ನರಸೀಪುರಕ್ಕೆ ಹೊರಡಬೇಕೆಂದು ನಿಶ್ಚಿತವಾಯಿತು. ಹೊರಡುವ ಮೊದಲ ರಾತ್ರಿ ಜೋಡಿದಾರನ ತಾಯಿಯವರು ಮಗನೇನೋ ವಿದ್ವತ್ ಪರೀಕ್ಷೆ ಮಾಡಿಬಿಡುತ್ತಾನೆ ಎಂಬುದಾಗಿ ಸಂತೋಷಪಟ್ಟು, ಇವನಿಗೆ ಎರಡು ರಸಬಾಳೆಯ ಹಣ್ಣನ್ನೂ ಒಂದು ಚೂರು ಕೊಬ್ಬರಿಯನ್ನೂ ಕೊಟ್ಟು “ದಾರಿಯಲ್ಲಿ ಹಸಿವಾದರೆ ಇದನ್ನೂ ತಿನ್ನು” ಎಂದು ಹೇಳಿದರು. ಜೋಡಿದಾರನು ಅದನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಬೆಳಗಿನ ಜಾವ ಹೊರಡುವಾಗ ತೆಗೆದುಕೊಳ್ಳೋಣ ಎಂದು ತನ್ನ ಪೆಟ್ಟಿಗೆಯಲ್ಲಿ ಹಾಕಿಬಿಟ್ಟನು. ಮುಂಜಾನೆ ಉಳಿದ ವಿದ್ಯಾರ್ಥಿಗಳೆಲ್ಲರೂ ಗಾಡಿಯನ್ನೇರಿ ಇವನ ಮನೆಯ ಬಾಗಲಿಗೆ ಬಂದರು. ಇವನೂ ತಾಯಿತಂದೆಗಳಿಗೆ ನಮಸ್ಕಾರ ಮಾಡಿ ಗಾಡಿಯಲ್ಲಿ ಕುಳಿತುಕೊಂಡು ಹೊರಟನು.

ನದಿಯ ತೀರಕ್ಕೆ ಹೋದ ಕೂಡಲೆ ಇವನಿಗೆ ಬಾಳೆಯಹಣ್ಣು ಕೊಬ್ಬರಿಯ ಜ್ಞಾಪಕ ಬಂದಿತು. ತಾಯಿಯವರು ಹೊರಡುವಾಗ ಕೊಟ್ಟ ವಸ್ತುವೆಂಬ ಅಭಿಮಾನವೋ, ಅಥವಾ ಹಸಿವಾದರೆ ತಿನ್ನಬೇಕೆಂಬ ಚಪಲವೋ, ಅಂತೂ ಬಾಳೆಯಹಣ್ಣು ಕೊಬ್ಬರಿಯನ್ನು ತರಲೇಬೇಕೆಂದು ನಿಶ್ಚಯಿಸಿದನು. ಗಾಡಿಯು ಹೊಳೆಯ ಮರಳಿನಲ್ಲಿಯೂ ನೀರಿನಲ್ಲಿಯೂ ನಿಧಾನವಾಗಿ ಹೋಗುತ್ತಿದ್ದಿತು. ಅದು ಹೊಳೆ ದಾಟುವ ವೇಳೆಗೆ ಹಿಂದಿರುಗಬಹುದೆಂದು ಜೋಡಿದಾರನು ಒಂದೇ ಉಸಿರಿನಲ್ಲಿ ಮನೆಗೆ ಓಡಿದನು. ಅವನ ತಂದೆ ತಾಯಿಗಳು ಮತ್ತೆ ಮಲಗಿರಲಿಲ್ಲ. ಯಾವುದೋ ಮಾತನಾಡುತ್ತಾ ಕುಳಿತಿದ್ದರು. ಮಗನು ಹಿಂದಿರುಗಿದುದನ್ನು ನೋಡಿ ಅವನ ತಂದೆಯವರಿಗೆ ಒಹಳ ಕೋಪವುಂಟಾಯಿತು. ಪರೀಕ್ಷೆಗೆ ಹೊರಟವನು ಹೊರಟ ಕೂಡಲೆ ಹಿಂದಿರುಗುವುದು ಅಪಶಕುನವೆಂದು ಅವರು ಯೋಚಿಸಿದರು. ಕೋಪದಿಂದ “ಯಾಕೆ ಬಂದೆ" ಎಂದು ಘರ್ಜಿಸಿದರು. ಜೋಡಿದಾರನು "ಒಂದು ಸಾಮಾನನ್ನು ಮರೆತುಬಿಟ್ಟೆ” ಎಂದನು. ಅವರ ತಂದೆಯವರು ಕೋಪದಿಂದ “ನಿನಗೆ ಪರೀಕ್ಷೆ ಪ್ಯಾಸ್ ಆದರೆ ನಾನು ಮೂಗು ಕುಯ್ಯಿಸಿಕೊಳ್ಳುತ್ತೇನೆ” ಎಂದರು. ನಮ್ಮ ನಾಯಕನು ಪಾಪ ಆವರೆಗೆ ದುಃಖವನ್ನು ಕಂಡಿರಲಿಲ್ಲ. ಪರೀಕ್ಷೆಗೆ ಹೊರಟಾಗ ತಂದೆಯವರು ಮಾಡಿದ ಈ ಆಶೀರ್ವಾದದಿಂದ ಅವನ ಹೃದಯವು ದುಃಖದಿಂದ ವಿದೀರ್ಣವಾಯಿತು. ಅವನು ಕಣ್ಣೀರು ಸುರಿಸುತ್ತಾ ಹೊರಟುಹೋದನು. ಯಾವ ಕೊಬ್ಬರಿ ಬಾಳೆಯ ಹಣ್ಣಿಗಾಗಿ ಇಷ್ಟು ಮಾತನ್ನು ಕೇಳಿದ್ದನೋ, ಅದನ್ನು ದಾರಿಯಲ್ಲಿ ನದಿಯೊಳಕ್ಕೆ ಎಸೆದುಬಿಟ್ಟನು. ತಾನು ಬುದ್ದಿವಂತನಲ್ಲವೆಂಬುದೂ, ಪಾಠವನ್ನು ಒಂದು ದಿವಸವೂ ಓದಲಿಲ್ಲವೆಂಬುದೂ, ದಡ್ಡರಿಗಿಂತ ದಡ್ಡನೆಂಬುದೂ ಅವನಿಗೆ ತಿಳಿದಿದ್ದಿತು. ಪರೀಕ್ಷೆಯಲ್ಲಿ ತನಗೆ ಪ್ಯಾಸ್ ಆಗುವುದಿಲ್ಲವೆಂದು ಎಲ್ಲರಿಗಿಂತ ಮುಂಚೆಯೇ ಅವನು ತಿಳಿದಿದ್ದನು. ಆದರೆ ತನ್ನ ತಂದೆಯವರು ಹೇಳಿದ್ದ ಮಾತನ್ನು ನೆನೆದುಕೊಂಡಾಗಲೆಲ್ಲಾ ಅವನಿಗೆ ದುಃಖವುಂಟಾಗಿ ಎಳೆಯ ಮಕ್ಕಳಂತೆ ಅಳುತ್ತಿದ್ದನು. ಅವನು ಆ ದಿವಸ ಅತ್ತಂತೆ ತನ್ನ ಜೀವಮಾನದಲ್ಲಿ ಮತ್ತಾವಾಗಲೂ ಅತ್ತುದಿಲ್ಲವಂತೆ.

ಪರೀಕ್ಷೆಯಲ್ಲಿ ಜೋಡಿದಾರನಿಗೆ ಉತ್ಸಾಹವಿರಲಿಲ್ಲ. ಪ್ರಶ್ನೆ ಪತ್ರಿಕೆಯನ್ನು ಕೈಗೆ ತೆಗೆದುಕೊಂಡ ಕೂಡಲೆ ತಂದೆಯ ಮಾತುಗಳು ಜ್ಞಾಪಕ ಬರುತ್ತಿದ್ದುವು.

ಅಂತೂ ಆ ವರುಷವೇ ಅವನು ಪರೀಕ್ಷೆಯಲ್ಲಿ ತೇರ್ಗಡೆಯಾಗಿಬಿಟ್ಟನು.

೪. ಕುದುರೆ ಸವಾರಿ ಕಲಿತುದು

ಈ ಮಧ್ಯೆ ಜೋಡಿದಾರನು ಮತ್ತೊಂದು ಸಾಧನೆಯನ್ನು ಪ್ರಾರಂಭಿಸಿಬಿಟ್ಟನು. ಈಜುವುದು, ಮರಹತ್ತುವುದರ ಜೊತೆಗೆ ಕುದುರೆ ಸವಾರಿ ಬೇರೆ ಪ್ರಾರಂಭವಾಯಿತು. ಬೀದಿಯಲ್ಲಿ ಮೇಯುತ್ತಿದ್ದ ಯಾವ ಬಡಕಲ ಕುದುರೆಯನ್ನೂ ಇವನು ಬಿಡುತ್ತಿರಲಿಲ್ಲ. ಸ್ವಲ್ಪ ಬಲವಾದ ಕತ್ತೆ ಸಿಕ್ಕಿದ್ದರೆ ಅದರಮೇಲೂ ಸವಾರಿಮಾಡುತ್ತಿದ್ದನೇನೊ? ಅವನ ಮನೆಯ ಮಗ್ಗುಲಲ್ಲಿ ಒಂದು ದೇವಸ್ಥಾನವಿದೆ. ಅದರ ಸುತ್ತಲೂ ಗೋಡೆ. ಜೋಡಿದಾರನು ಬೀದಿಯಲ್ಲಿ ಕಾಣುತ್ತಿದ್ದ ಕುದುರೆಗಳನ್ನೆಲ್ಲಾ ಆ ಗುಡಿಯೊಳಕ್ಕೆ ಓಡಿಸಿಕೊಂಡುಹೋಗಿ ಗುಡಿಯ ಸುತ್ತ ಸವಾರಿ ಮಾಡುತ್ತಿದ್ದನು. ಒಂದು ದಿವಸ ಬೆಳಿಗ್ಗೆ ನಮ್ಮೂರ ಶಾನುಭೋಗರ ದೊಡ್ಡ ಕುದುರೆಯು ಅವರೆ ಮನೆಯ ಬಾಗಲಿನಲ್ಲಿ ಮೇಯುತ್ತಿದ್ದಿತು. ಅದರ ಮುಂದು ಎರಡು ಕಾಲುಗಳನ್ನೂ ಕಟ್ಟಿದ್ದರು. ಜೋಡಿದಾರನು ಅದನ್ನು ದೇವಸ್ಥಾನದೊಳಕ್ಕೆಳೆದು ಕೊಂಡು ಹೋದನು.

ಮೊದಲು ಕುದುರೆಯ ಕಾಲಿನ ಹಗ್ಗವನ್ನು ಬಿಚ್ಚಿ ಆಮೇಲೆ ಅದರ ಬೆನ್ನಿನಮೇಲೆ ಹತ್ತಬೇಕಾಗಿದ್ದಿತು. ಆದರೆ ಜೋಡಿದಾರನಿಗೆ ಅಷ್ಟೊಂದು ಸಾವಧಾನವಿರಲಿಲ್ಲ. ಅವನು ಮೊದಲು ಕುದುರೆಯ ಮೇಲೆ ಹತ್ತಿ ಕುಳಿತು ಬಳಿಯಲ್ಲಿದ್ದ ಜೊತೆಗಾರನನ್ನು ಕುರಿತು 'ಕಾಲಿನ ಕಟ್ಟನ್ನು ಬಿಚ್ಚು' ಎಂದನು. ಕುದುರೆಗೆ ತಡಿಯಿಲ್ಲ ಲಗಾಮಿಲ್ಲ. ಅವನ ಸ್ನೇಹಿತನು ಕಾಲಿನ ಕಟ್ಟನ್ನು ಬಿಚ್ಚಲು ಬಗ್ಗಿದನು. ಆ ವೇಳೆಗೆ ದೇವಸ್ಥಾನದ ಹೊರಗೆ ಮತ್ತೊಂದು ಕುದುರೆ ಕೆನೆಯಿತು. ಕೂಡಲೇ ಜೋಡಿದಾರನು ಕುಳಿತಿದ್ದ ಕುದುರೆಯು ಮುಂದಲ ಎರಡು ಕಾಲುಗಳನ್ನೂ ಮೇಲಕ್ಕೆತ್ತಿ ನೆಗೆಯಿತು. ಕಾಲಿನ ಕಟ್ಟನ್ನು ಬಿಚ್ಚಲು ಬಗ್ಗಿದ್ದ ಸ್ನೇಹಿತರು ಹೆದರಿ ಹಿಂದಕ್ಕೆ ಬಿದ್ದುಬಿಟ್ಟನು. ಜೋಡಿದಾರನು ಕೆಳಕ್ಕೆ ಇಳಿಯಬೇಕೆಂದು ಪ್ರಯತ್ನಿಸಿದನು. ಕುದುರೆಯು ಇಳಿಯಲು ಅವಕಾಶಕೊಡದೆ ನೆಗೆಯುತ್ತಾ ದೇವಸ್ಥಾನದ ಹೊರಗೆ ಬಂದು, ಜೋಡಿದಾರರ ಮನೆಯ ಬಾಗಲಿನಲ್ಲಿ ಎರಡು ಕಾಲುಗಳನ್ನೂ ಮೇಲಕ್ಕೆತ್ತಿ ಗಟ್ಟಿಯಾಗಿ ಮತ್ತೊಂದು ಸಲ ನೆಗೆದುಬಿಟ್ಟಿತು. ದೊಡ್ಡ ಜೋಡಿದಾರರು ಮನೆಯ ಜಗಲಿಯ ಮೇಲೆ ಸಂಧ್ಯಾವಂದನೆ ಮಾಡುತ್ತಾ ಕುಳಿತಿದ್ದವರು. ಮಗನ ಈ ಕಲ್ಕ್ಯಾವತಾರದ ವೈಭವವನ್ನು ನೋಡಿದರು. ನಮ್ಮ ನಾಯಕನು ನೆಲದ ಮೇಲೆ ಬಿದ್ದ ಕ್ಷಣವೇ ರಬ್ಬರ್ ಚೆಂಡಿನಂತೆ ಎದ್ದು ನಿಂತುಬಿಟ್ಟನು. ಅವರ ತಂದೆಯವರು ಅವನನ್ನು ನೋಡಿ “ನೀನು ಯಾವತ್ತಿದ್ದರೂ ಕುದುರೆಯಿಂದಲೇ ಬಿದ್ದು ಸಾಯುತ್ತೀಯೆ. ನಾನು ಹೇಳಿದ ಯಾವ ಮಾತೂ ಸುಳ್ಳಾಗಿಲ್ಲ" ಎಂದರು.

೫. ಕೆರೆಯನ್ನು ದಾಟುವಾಗ

ಜೋಡಿದಾರರಿಗೆ ೨೦ ವರುಷಗಳಾಗಿದ್ದಿರಬಹುದು. ಒಂದು ದಿವಸ ಅವರು ನರಸೀಪುರಕ್ಕೆ ಹೋಗಬೇಕಾಯಿತು. ಆಗ ಈಗಿನಂತೆ ಎಲ್ಲೆಲ್ಲೂ ಬಸ್ ಇರಲಿಲ್ಲ. ಒಂದು ಗಾಡಿ ಬೇಕಾದರೆ ಬಾಡಿಗೆ ಹತ್ತು ರೂಪಾಯಿ ಕೊಡಬೇಕಾಗಿದ್ದಿತು. ಜೋಡಿದಾರರಿಗೆ ಯೌವನವು ಉಕ್ಕಿ ಬರುತ್ತಿದ್ದಿತು. ಅವರು ಕಡಿದರೆ ನಾಲ್ಕಾಳು ಆಗುವಂತೆ ಇದ್ದರು, "೧೪ ಮೆಲಿ ನಡೆದೇ ಬಿಡುತ್ತೇನೆ" ಎಂದು ಅವರು ನಡೆದುಕೊಂಡೇ ಹೊರಟರು. ಇವರು ಹೊರಡುವ ವೇಳೆಗೆ ಸರಿಯಾಗಿ ಸೂರ್ಯನು ಉದಯಿಸಿ ಬರುತ್ತಿದ್ದನು. ಬೆಳಗಿನ ದೇವಿಯು ತಳಿರಿನ ಕೈಯಲ್ಲಿ ಚಿನ್ನದ ಕುಕ್ಕೆಯನ್ನು ಹಿಡಿದುಕೊಂಡು ಅದರೊಳಗೆ ಪೂಜಾದ್ರವ್ಯವನ್ನು ತೆಗೆದುಕೊಂಡು ಪೂರ್ವ ದಿಕ್ಕಿನಿಂದ ಭೂಮಿಗೆ ಬರುತ್ತಿದ್ದಳು. ಇಬ್ಬನಿಯ ಹನಿಯು ಮುತ್ತಿಟ್ಟ ಮೊಗ್ಗುಗಳೆಲ್ಲಾ, ಆಗತಾನೆ ಅರಳುತ್ತಿದ್ದುವು. ವಾಯುವು ಅವುಗಳ ಸುವಾಸನೆಯನ್ನು ಹೊತ್ತುಕೊಂಡು ಸಂಚಾರಕ್ಕೆ ಪ್ರಾರಂಭಿಸಿತ್ತು. ಹಕ್ಕಿಗಳು ಇಂಪಾದ ಗಾನದಲ್ಲಿ ಹಾಡುತ್ತಿದ್ದುವು. ಪ್ರಾತಃಕಾಲವು ಮನಸ್ಸಿಗೆ ಉಲ್ಲಾಸವನ್ನೂ ಉತ್ಸಾಹವನ್ನೂ ಉಂಟುಮಾಡುವುದಾಗಿದ್ದಿತು. ಜೋಡಿದಾರರು ಪ್ರಕೃತಿಯ ಅಂದಿನ ಅಂದವನ್ನು ನೋಡುತ್ತಾ ಸುಮಾರು ಎರಡು ಗಂಟೆ ನಡೆದರು. ಆ ವೇಳೆಗೆ ಬಿಸಿಲು ಸ್ವಲ್ಪ ತೀಕ್ಷ್ಣವಾಯಿತು. ಎಲ್ಲಾದರೂ ಒಂದು ಘಳಿಗೆ ಕುಳಿತುಕೊಂಡು ಸುಧಾರಿಸಿ ಕೊಂಡು, ಅನಂತರ ಮುಂದಕ್ಕೆ ಹೋಗೋಣವೆಂದು ಅವರು ಯೋಚಿಸುತ್ತಾ ನಿಧಾನವಾಗಿ ನಡೆಯುತ್ತಿದ್ದರು.

ಜೋಡಿದಾರರು ಮಧ್ಯೆ ಮಧ್ಯೆ ರಸ್ತೆಯನ್ನು ಬಿಟ್ಟು ಕಾಲುದಾರಿಯಲ್ಲಿ ಹೋಗುತ್ತಿದ್ದರು. ಹೀಗೆ ಮಾಡುತ್ತಿದ್ದುದರಿಂದ ದೂರವು ಸ್ವಲ್ಪ ಕಡಿಮೆಯಾಗುತ್ತಿದ್ದಿತಲ್ಲದೆ ಬೇಸರಿಕೆಯ ತಪ್ಪುತ್ತಿದ್ದಿತು. ಕಾಲುದಾರಿಯಲ್ಲಿ ನಡೆಯುತ್ತಿರುವಾಗ ಮಧ್ಯೆ ಒಂದು ಕೆರೆ ಸಿಕ್ಕಿತು. ಆ ಕೆರೆಯ ಕೋಡಿಯ ನೀರು ಕಾಲುವೆಯಂತೆ ೩ ಫರ್ಲಾಂಗ್ ದೂರ ಹರಿದು ಹೋಗಿದ್ದಿತು. ಆ ಮೂರು ಫರ್ಲಾಂಗನ್ನು ಸುತ್ತಿಕೊಂಡು ಸರಿಯಾದ ದಾರಿಗೆ ಹೋಗಬೇಕಾಗಿದ್ದಿತು. ಬೇಸಗೆಯ ಕಾಲದಲ್ಲಿ ಕೋಡಿಯಲ್ಲಿ ನೀರು ಇರುತ್ತಿರಲಿಲ್ಲವಾದುದರಿಂದ, ಸುತ್ತಬೇಕಾದ ಆವಶ್ಯಕವಿರಲಿಲ್ಲ. ಆಗ ೩ ಫರ್ಲಾಂಗ್ ದೂರ ಉಳಿತಾಯವಾಗುತ್ತಿತ್ತು. ಜೋಡಿದಾರರಿಗೆ ನೀರನ್ನು ಕಂಡ ಒಡನೆಯೆ ಆನಂದವಾಯಿತು. ಈ ೩ ಫರ್ಲಾಂಗ್ ದೂರವನ್ನು ಉಳಿಸಿಬಿಡುತ್ತೇನೆ ಎಂಬುದಾಗಿ ಮನಸ್ಸಿನಲ್ಲಿ ಯೋಚಿಸಿಕೊಂಡರು. ಕೋಡಿಯು ಸುಮಾರು ೨೦ ಅಡಿ ಮಾತ್ರ ಅಗಲವಾಗಿದ್ದಿತು. ಅದನ್ನು ಹಾಯ್ದುಕೊಂಡು ಆಚೆಕಡೆಗೆ ಹೋಗಬೇಕೆಂದು ಯೋಚಿಸಿ, ಜೋಡಿದಾರರು ಉಟ್ಟ ಪಂಚೆಯನ್ನೂ ಅಂಗಿಯನ್ನೂ ಬಿಚ್ಚಿ ತಲೆಗೆ ಕಟ್ಟಿ, ಒಂದು ಚೌಕವನ್ನು ಸೊಂಟಕ್ಕೆ ಸುತ್ತಿಕೊಂಡು ಹೊರಟರು. ಜೋಡಿದಾರರ ಗ್ರಹಚಾರ, ಆ ಕಾಡಿನಲ್ಲಿಯೂ ಕೂಡ ಅದೃಷ್ಟವು ಅವರಿಗೆ ಎದುರಾಗಿದ್ದಿತು.

ಇವರು ಯಾವ ನೇರದಲ್ಲಿ ಹಾಯುವದಕ್ಕಾಗಿ ಕೋಡಿಗೆ ಇಳಿದರೋ, ಅದೇ ನೇರದಲ್ಲಿ ಎದುರು ದಡದಲ್ಲಿ ಗಂಗಡಿಕಾರರ ಹುಡುಗಿಯೊಬ್ಬಳು ಶಾಲೆ ಸೆಣೆ ಸೀರೆ ಒಗೆಯುತ್ತಿದ್ದಳು. ಈ ಧಾಂಡಿಗನನ್ನು ನೋಡಿ ಅವಳಿಗೆ ಭಯವೂ ಆಶ್ಚರವೂ ಉಂಟಾದುವು. "ದಾರಿ ೩ ಫರ್ಲಾಂಗ್ ಆಚೆ ಇದೆ. ಇಲ್ಲಿಯೋ ನೀರು ಕತ್ತುದ್ದ ಇದೆ. ಇವನನ್ನು ನೋಡಿದರೆ ಯಮನಂತೆ ಕಾಣುತ್ತಾನೆ. ದಾರಿಯನ್ನು ಬಿಟ್ಟು, ಈ ಆಳುದ್ದ ನೀರನ್ನು ಇವನು ಹಾಯುವದಕ್ಕೇನು ಕಾರಣ” ಎಂದು ಅವಳು ಯೋಚಿಸತೊಡಗಿದಳು. ಅವಳಿಗೆ ವಯಸ್ಸು ೧೮ ಇದ್ದಿರಬಹುದು. ಸಾಮಾನ್ಯವಾಗಿ ರೂಪವತಿ ಯಾಗಿದ್ದಳು. ಆದರೆ ತಾನು ಬಹಳ ರೂಪವತಿಯೆಂದು ಅವಳಿಗೆ ನಂಬಿಕೆಯಾಗಿಬಿಟ್ಟಿದ್ದಿತು. ಜೋಡಿದಾರರ ಗ್ರಹಚಾರಕ್ಕೆ ಅವಳು “ಈ ಹಾರುವ ನನ್ನನ್ನ ಹಿಡೊಕೋಳೋಕ್ಬರ್‍ತಾನೆ" ಎಂಬುದಾಗಿ ಗಟ್ಟಿಯಾಗಿ ಕೂಗಿ ಕೊಂಡಳು. ಅವಳ ಕೂಗನ್ನು ಕೇಳಿ ಜೋಡಿದಾರರಿಗೆ ಆಶ್ಚರವಾಯಿತು. ಅವರು ನಗುತ್ತಾ ಮನಸ್ಸಿನಲ್ಲಿ "ಈ ಹೆಣ್ಣಿನ ಹೆಮ್ಮೆ ಹೇಳೋಕಿಲ್ಲ. ಸ್ವಲ್ಪ ಕೆಂಪು ತುಟಿ ಹೊಳೆಯುವ ಕಣ್ಣು ಇದ್ದ ಮಾತ್ರಕ್ಕೆ ತಾನೇ ರತಿ, ಲೋಕವೆಲ್ಲಾ ತನ್ನನ್ನೆ ಹಿಡಿದುಕೊಳ್ಳುವುದಕ್ಕೆ ಬರುತ್ತೆ ಅಂತ ತಿಳಿದಿದ್ದಾಳೆ" ಎಂದುಕೊಂಡು ಸುಮ್ಮನಾದರು. ಕೋಡಿಯನ್ನು ದಾಟಿ ಮೇಲಕ್ಕೆ ಹತ್ತಿದ ಕೂಡಲೇ, ತಾವು ಕಟ್ಟಿಕೊಂಡಿದ್ದ ಔದಾಸೀನ್ಯದ ಗಾಳಿಯ ಗೋಪುರವು ಪುಡಿ ಪುಡಿಯಾಯಿತೆಂಬುದು ಅವರಿಗೆ ಗೊತ್ತಾಯಿತು. ಅಂದು ಅವರು ಅನುಭವಿಸಿದುದನ್ನು ಮತ್ತೆ ಮರೆಯುವಂತೆ ಇಲ್ಲ. ನೆನಸಿಕೊಂಡರೆ ಈಗಲೂ ಮೈನಡುಕ ಬರುತ್ತೆ ಎಂಬುದಾಗಿ ಹೇಳುತ್ತಾರೆ. ಹುಡುಗಿಯ ಕೂಗನ್ನು ಕೇಳಿ ಸುತ್ತಮುತ್ತ ಕೆಲಸ ಮಾಡುತ್ತಿದ್ದವರೆಲ್ಲಾ ಕೈಯಲ್ಲಿ ಒಂದೊಂದು ದೊಣ್ಣೆಯನ್ನು ಹಿಡಿದುಕೊಂಡು ಇವರ ಕಡೆಗೆ ಬರುತ್ತಿದ್ದರು. ಹೊಲಗಳಲ್ಲಿಯೂ ಗದ್ದೆಗಳಲ್ಲಿಯೂ ಉಳುತ್ತಿದ್ದವರೆಲ್ಲಾ ಆರುಗಳನ್ನು ಅಲ್ಲಿಯೇ ಬಿಟ್ಟು ಕೈಯಲ್ಲಿ ಉಳುವ ಕೋಲನ್ನು ಹಿಡಿದುಕೊಂಡು ಓಡಿಬರುತ್ತಿದ್ದರು. ತೋಟಗಳಲ್ಲಿ ಕೆಲಸ ಮಾಡುತ್ತಿದ್ದವರು ಗುದ್ದಲಿ ಕುಡುಗೋಲುಗಳನ್ನು ಹಿಡಿದುಕೊಂಡೇ ಇವರ ಕಡೆಗೆ ಧಾವಿಸಿ ಬರುತ್ತಿದ್ದರು. ದನ ಕಾಯುವ ಹುಡುಗರು ದನಗಳನ್ನು ಅಲ್ಲಿಯೇ ಬಿಟ್ಟು ಓಡಿಬರುತ್ತಿದ್ದರು. ಕೆಲವರು ಹೆಂಗಸರೂ ಕೂಡ ಕೈಗಳಲ್ಲಿ ದೊಣ್ಣೆಗಳನ್ನೂ ಸಮ್ಮಾರ್ಜನಿಗಳನ್ನೂ ಹಿಡಿದುಕೊಂಡು ಬರುತ್ತಿದ್ದರು. ಇದನ್ನು ನೋಡಿ ಜೋಡಿದಾರರ ಎದೆ ಒಡೆದುಹೋಯಿತು. ಓಡಿಬರುತ್ತಿದ್ದವರೆಲ್ಲರೂ ಯಮದೂತರಂತೆ ಕಂಡರು. ಮೃತ್ಯುವು ಅವರ ಎದುರಿಗೆ ವಾಯುವೇಗದಲ್ಲಿ ಬರುತ್ತಿದ್ದಿತು. ಅವರು ಯಾವ ಕಡೆ ನೋಡಿದರೂ ೧೦ ಜನರು ಇವರ ಕಡೆಗೆ ಬರುತ್ತಿದ್ದರು. ಕೆಲಸ ಕೆಟ್ಟಿತೆಂದು ಜೋಡಿದಾರರು ವಿನಯದಿಂದ "ತಾಯಿ" ಎಂದರು. ಆ ಹುಡುಗಿಯು ತಾಯಿಯೂ ಅಲ್ಲ ಮಗನೂ ಅಲ್ಲ, ಅಲ್ಲಿ ನೋಡು ನಿನಗೆ ಹುಟ್ಟಿದ ದಿವಸ ಕಾಣುತ್ತೆ" ಎಂದಳು. ಜೋಡಿದಾರರಿಗೆ ಮತ್ತೇನೂ ತೋಚಲಿಲ್ಲ. ಹೊಡೆದಾಡುವುದಕ್ಕೆ ಮೊದಲೇ ಪುಳಿಚಾರು. ಅಲ್ಲದೆ ನೂರಾರು ಜನರ ಎದುರಾಗಿ ಒಬ್ಬ ಕಾದಾಡುವುದೆಂದರೆ ಸಾಮಾನ್ಯವೆ? ಅವರೆಲ್ಲಾ ಬಂದ ಮೇಲೆ ಎಲ್ಲರಿಗೂ ಸಮಾಧಾನವನ್ನು ಹೇಳಿ ತನ್ನ ನಿರಪರಾಧಿತ್ವವನ್ನು ತೋರಿಸಿಕೊಳ್ಳಬಹುದಾಗಿದ್ದಿತು. ಆದರೆ ಅಲ್ಲಿ ಬರುತ್ತಿರುವವರು ಸಮಾಧಾನವನ್ನು ಕೇಳಲು ಬರುವವರಾಗಿರಲಿಲ್ಲ. ಮಾತು ಕಥೆ ಯಾವುದೂ ನಡೆಯುವುದಕ್ಕೆ ಮುಂಚೆ ಪ್ರತಿಯೊಬ್ಬನೂ ಒಂದೊಂದು ಬೈಗಳದೊಂದಿಗೆ ಇವರಿಗೆ ಒಂದೊಂದು ಏಟನ್ನು ಹಾಕಿಬಿಡುತ್ತಿದ್ದನು. ಮಾತು ಕಥೆ ಸಮಾಧಾನ ಇದೆಲ್ಲಾ ಆಮೇಲೆ. ಆದುದರಿಂದ ಜೋಡಿದಾರರು ಅಲ್ಲಿ ಹೆಚ್ಚು ಹೊತ್ತು ನಿಂತರೆ ಪ್ರಯೋಜನವಿಲ್ಲವೆಂದುಕೊಂಡು “ಕಾಲಾಯ ತಸ್ಯೆ ನಮಃ” ಕಾಲಿಗೆ ಬುದ್ದಿ ಹೇಳಿ ಓಡುವುದಕ್ಕೆ ಪ್ರಾರಂಭಿಸಿದರು. ಈಗ ಅವರ ಜೀವನ ಮರಣಗಳು ಅವರ ಕಾಲಿನ ಮೇಲೆ ಅವಲಂಬಿಸಿದ್ದುವು. “ತಲೆ ಹೋಗುವುದಕ್ಕೆ ಕಾಲು ಹೊಣೆ?" ಎಂಬ ನುಡಿಯು ನಿಶ್ಚಯವಾಗಿಯೂ ಅವರಿಗೆ ಅನ್ವಯಿಸುವಂತಾಯಿತು. ಪಾಪ ಅವರಿಗೆ ಬೆಳಗಿನಿಂದ ಆಯಾಸವಾಗಿ ಸುದಾರಿಸಿಕೊಳ್ಳಬೇಕು ಎನ್ನುವ ಹೊತ್ತಿಗೆ ಇದೊಂದು ಗ್ರಹಚಾರ ಬಂದಿತು. ಆದರೇನು? ಹಳ್ಳಿಯವರು ಇವರನ್ನು ಬಿಡಲಿಲ್ಲ. ಜೋಡಿದಾರರು ಮುಂದೆ ಅವರು ಹಿಂದೆ; ಹುಚ್ಚು ನಾಯಿಯನ್ನು ಓಡಿಸಿಕೊಂಡು ಹೋದಂತೆ ಇವರನ್ನು ಓಡಿಸಿಕೊಂಡು ಹೋದರು. ಜೋಡಿದಾರರು ಪಂಚೆಯನ್ನುಟ್ಟಿರಲಿಲ್ಲ. ಅದು ಇನ್ನೂ ಅವರ ತಲೆಯ ಮೇಲೆಯೇ ಇದ್ದಿತು. ಕೋಡಿಯನ್ನು ದಾಟುವುದಕ್ಕಾಗಿ ಸೊಂಟಕ್ಕೆ ಸುತ್ತಿದ್ದ ಒಂದು ಚೌಕದ ಹೊರತು ಮತ್ತಾವ ಬಟ್ಟೆಯನ್ನೂ ಇವರು ತೊಟ್ಟಿರಲಿಲ್ಲ. ಬೆಳಗಿನಿಂದಲೂ ನಡೆದು ಆಯಾಸಗೊಂಡಿದ್ದುದರಿಂದ ಇವರ ವೇಗವು ನಿಧಾನವಾಗಿ ಕಡಮೆಯಾಗುತ್ತಾ ಬಂದಿತು. ಇವರಿಗೂ ಇವರ ಬೇಟೆಗಾರರಿಗೂ ನಡುವೆ ಇದ್ದ ದೂರವ ಕಡಮೆಯಾಯಿತು. ತಮಗೆ ನೂರು ವರುಷ ಅಂದಿಗೆ ತುಂಬಿತೆಂದು ಅವರು ತಿಳಿದರು. ಆದದಾಗಲಿ ಇನ್ನು ಓಡುವುದಕ್ಕೆ ಆಗುವುದಿಲ್ಲ ಕುಳಿತುಬಿಡುತ್ತೇನೆ ಎಂದು ಅವರು ಯೋಚಿಸು ತಿದ್ದರು. ಎದುರಿಗೆ ಮತ್ತೊಂದು ಹಳ್ಳಿಯು ಕಣ್ಣಿಗೆ ಬಿದ್ದಿತು. "ಆ ಹಳ್ಳಿಗೆ ಹೋಗಿಬಿಡುತ್ತೇನೆ. ಅವರೂ ಇವರಂತೆ ರಾಕ್ಷಸರಾಗಿರಲಾರರು" ಎಂದುಕೊಂಡು ಆ ಹಳ್ಳಿಯವರೆಗೆ ಓಡಿದರು.

ಆ ಹಳ್ಳಿಯ ಊರುಬಾಗಲಿನ ಅರಳೀಕಟ್ಟೆಯ ಮೇಲೆ, ಆ ಗ್ರಾಮದ ಪಟೇಲನು ಕುಳಿತಿದ್ದನು. ಬೆತ್ತಲೆ ಓಡಿಬಂದ ಈ ಬಡ ಬ್ರಾಹ್ಮಣನ ಅವಸ್ಥೆಯನ್ನು ಏನೆಂದು ವಿಚಾರಿಸಿದನು. ಜೋಡಿದಾರರಿಗೆ ಪಾಪ ಮಾತನಾಡು ವುದಕ್ಕೆ ಸಹ ಉಸಿರಿರಲಿಲ್ಲ. ಬಾಯೆಲ್ಲಾ ಒಣಗಿಹೋಗಿದ್ದಿತು. ಅವರು ತಮ್ಮ ಬೇಟೆಗಾರರ ಕಡೆಗೆ ಕೈ ತೋರಿಸಿ ನಡೆದ ವಿಷಯವನ್ನು ಎರಡು ಮಾತಿನಲ್ಲಿ ಹೇಳಿದರು. ಪಟೇಲನು 'ಸುದಾರಿಸಿಕೊಳ್ಳಿ, ನಿರಪರಾಧಿಗಳಿಗೆ ಭಯವಿಲ್ಲ' ಎಂದನು.

ವಿಚಾರಣೆಯಾಯಿತು. ಜೋಡಿದಾರರದು ತಪ್ಪಿಲ್ಲವೆಂದು ತೀರ್ಮಾನವಾಯಿತು. ಆದರೂ ಹಳ್ಳಿಯವರು ಇವರ ಕಡೆಗೆ ಕಣ್ಣನ್ನು ಕೆರಳಿಸಿ "ಲೋ ಹಾರುವಾ ಈವತ್ತು ತಪ್ಪಿಸಿಕೊಂಡೆ ಹೋಗು. ಇನ್ನೊಂದು ದಿವಸ ನಮಗೆ ಸಿಕ್ಕಿದರೆ ನಿನ್ನ ಚರ್ಮವನ್ನು ಸುಲಿದುಬಿಡುತ್ತೇವೆ" ಎಂದರು. ಜೋಡಿದಾರರು ಅಂದಿನಿಂದ ಈಚೆಗೆ ಆ ದಾರಿಯಲ್ಲಿ ನರಸೀಪುರಕ್ಕೆ ಹೋಗಲಿಲ್ಲ. ಈಗವರು ಹೋಗಬೇಕಾದರೂ ೪೦ ಮೈಲು ದೂರವಿರುವ ಮತ್ತೊಂದು ದಾರಿಯಲ್ಲಿ ಬಳಸಿಕೊಂಡು ಹೋಗುತ್ತಾರೆಯೇ ಹೊರತು, ೧೪ ಮೈಲು ಇರುವ ಈ ದಾರಿಯಲ್ಲಿ ಹೋಗುವುದಿಲ್ಲ.

೬. ಜೋಡಿದಾರರ ಬ್ರಹ್ಮಾಸ್ತ್ರ

ಈಗ ನಮ್ಮ ಜೋಡಿದಾರರಿಗೆ ವಯಸ್ಸು ೬೦ ಆಗಿಹೋಗಿದೆ. ಆದರೂ ದೃಢಕಾಯರಾಗಿದ್ದಾರೆ. ಹಿಂದೆ ಕಲಿತ ಇಂಗ್ಲಿಷೆಲ್ಲಾ ಮರೆತುಹೋಗಿದೆ. ೪-೬ ಸಂಸ್ಕೃತ ಶ್ಲೋಕಗಳನ್ನು ಉರುಹಾಕಿ ಅವಿದ್ಯಾವಂತರ ಎದುರಿನಲ್ಲಿ ತಾವೇ ಸಂಸ್ಕೃತ ವಿದ್ವಾಂಸರೆಂದು ನಟಿಸುತ್ತಾರೆ. ಎಲ್ಲೋ ಒಂದೊಂದು ಇಂಗ್ಲಿಷ್ ಪದವನ್ನು ಮಧ್ಯೆ ಮಧ್ಯೆ ಸೇರಿಸುತ್ತಾರೆ. ಹೊಟ್ಟೆ ಮಿತಿಮೀರಿ ಬೆಳೆದಿದೆ. ಸಿಟ್ಟೂ ಹೆಚ್ಚಾಗಿದೆ. ಆದರೆ ಆ ಸಿಟ್ಟಿನಿಂದ ಇತರರಿಗೆ ಏನೂ ತೊಂದರೆಯಿಲ್ಲ. ತೊಂದರೆಯೆಲ್ಲಾ ಅವರಿಗೆಯೆ. ಮಹಾತ್ಮಾ ಗಾಂಧಿಯವರೋ ಯಾರೋ ಸತ್ಯಾಗ್ರಹವೆಂಬ ಒಂದು ಅಸ್ತ್ರವನ್ನು ಎಲ್ಲಾದಕ್ಕೂ ಎದುರಾಗಿ ಹಿಡಿದಿದ್ದಾರಂತೆ. ಹಾಗೆಯೇ ನಮ್ಮ ಜೋಡಿದಾರರು ಎಲ್ಲಾದಕ್ಕೂ ಎದುರಾಗಿ, ವಿಕಾರವಾಗಿ ಕೂಗಿ ಬಾಯ ಬಡದುಕೊಳ್ಳುವ ಒಂದು ಅಸ್ತ್ರವನ್ನು ಹಿಡಿದಿದ್ದಾರೆ. ಈ ಅಸ್ತ್ರವು ಮಾಡುವಂತಹ ಕೆಲಸವನ್ನೂ, ಸಾಧನೆಯನ್ನೂ, ಮತ್ತಾವ ಅಸ್ತ್ರವೂ ಮಾಡುವುದಿಲ್ಲವೆಂದು ಅವರ ದೃಢವಾದ ನಂಬುಗೆ.

ಒಂದು ದಿವಸ ಇವರ ಹೆಸರ ಗದ್ದೆಗೆ ಪೇಟೆಯಲ್ಲಿ ಯಾರೋ ಒಬ್ಬನ ಎಮ್ಮೆ ನುಗ್ಗಿತು. ಎಮ್ಮೆಯು, ಒಂದು ಕಡೆಯಿಂದ ಹೂವು ಕಾಯಿಗಳಿಂದ ತುಂಬಿದ ಪೈರನ್ನೆಲ್ಲಾ ಮೇಯುತ್ತಾ ಬಂದಿತು. ಪಾಪ ಕಷ್ಟಪಟ್ಟು ತಾವು ಬೆಳೆಸಿದ್ದ ಪೈರು ಹಾಳಾದುದನ್ನು ಕಂಡು ಜೋಡಿದಾರರಿಗೆ ಬಹಳ ದುಃಖವುಂಟಾಯಿತು. ಆ ಪುಣ್ಯಾತ್ಮ ಆ ಎಮ್ಮೆಯನ್ನು ಗದ್ದೆಯಿಂದ ಹೊರಕ್ಕೆ ಅಟ್ಟಲೇ ಇಲ್ಲ. ಅದು ಯಾರದೆಂದು ತಿಳಿದುಕೊಂಡು, ಅದನ್ನು ಅಲ್ಲೇ ಮೇಯುವುದಕ್ಕೆ ಬಿಟ್ಟು, ನೇರವಾಗಿ ಪೇಟೆಗೆ ಎಮ್ಮೆಯ ಒಡೆಯನ ಬಾಗಲಿಗೆ ಬಂದು, ಒಂದು ಸಲ ಬಾಯಿ ಬಡದುಕೊಂಡ. ಯಾರನ್ನೂ ಹೊಡೆಯಲಿಲ್ಲ ಬಯಲಿಲ್ಲ. ಉಳಿದವರಂತೆ ಎಮ್ಮೆಯ ಕಾಲು ಮುರಿಯಲಿಲ್ಲ. ಎಮ್ಮೆಯ ಯಜಮಾನನಿಗೆ ಅದಕ್ಕಿಂತ ಹೆಚ್ಚು ಶಿಕ್ಷೆಯು ಬೇಕಾಗಲಿಲ್ಲ. ಅಲ್ಲಿಂದ ಈಚೆಗೆ ಅವನು ಎಮ್ಮೆಯನ್ನು ಜೋಡಿದಾರರ ಗದ್ದೆ ಇರುವ ದಿಕ್ಕಿಗೇ ಬಿಡುತ್ತಿಲ್ಲ.

ಒಂದುಸಲ ಜೋಡಿದಾರರು -ನಕ್ಕೆ ಹೋಗಬೇಕಾಯಿತು. ಒಂದು ಗಾಡಿಯನ್ನು ಬಾಡಿಗೆಗೆ ಗೊತ್ತುಮಾಡಿದರು. ಆಗ ಮಳೆಗಾಲ. ಬಾಕಿ ಕಾಲಗಳಲ್ಲಿ ಒಂದು ಗಾಡಿ ೨ ರೂಪಾಯಿಗೆ ದೊರೆಯುತ್ತಿದ್ದಿತು. ಆದರೆ ಆ ದಿವಸ ಗಾಡಿಯವನು ಜೋಡಿದಾರರ ಅವಸರವನ್ನು ನೋಡಿ ಎದ್ದು ಹೋಗುವ ಮಾತು ಬಿದ್ದು ಹೋಗಲಿ ಅಂತ ಒಂದು ಗಾಡಿಗೆ ೧೦ ರೂಪಾಯಿ ಹೇಳಿಬಿಟ್ಟ. ೧೪ ಮೈಲಿಗೆ ೧೦ ರೂಪಾಯಿ. ೧೦ ರೂಪಾಯಿಗಳಿಗೆ ನಾಲ್ಕು ಗಾಡಿಗಳು ಬರುತ್ತಿದ್ದುವು. ಆದರೆ ಜೋಡಿದಾರರಿಗೆ ಹೆಚ್ಚಾಗಿ ಚೌಕಶಿ ಮಾಡಲು ಇಷ್ಟವಿರಲಿಲ್ಲ. ಅವರು “೯ ರೂಪಾಯಿಗೆ ಬರುತ್ತೀಯಾ?” ಎಂದರು. ಗಾಡಿಯವನು “ಆಗೋಕಿಲ್ಲ ಸ್ವಾಮಿ, ಮಳ್ಗಾಲ. ಹತ್ತು ರೂಪಾಯಿ ಕೊಟ್ಭಿಡಿ” ಅಂದ. ಜೋಡಿದಾರರು ಆವಶ್ಯಕವಾಗಿ-ಗೆ ಆ ದಿವಸ ಹೋಗಬೇಕಾಗಿದ್ದುದರಿಂದ ೧೦ ರೂಪಾಯಿಗಳನ್ನೇ ಕೊಡಲು ಒಪ್ಪಿದರು.

ಬೆಳಗಿನ ಜಾವ. ಮಳೆಯು ಬಹಳ ಜೋರಾಗಿ ಬರುತ್ತಿದ್ದಿತು. ಮಳೆಯ ಹನಿಯ ಬಾಣದ ಹೊಡೆತಗಳನ್ನು ತಾಳಲಾರದೆ ಎತ್ತುಗಳು ಸೋತು ಮೆಲ್ಲನೆ ಮುಂದಕ್ಕೆ ನಡೆಯುತ್ತಿದ್ದುವು. ಕಪ್ಪೆಗಳೆಲ್ಲಾ ಬೇಕಾದಂತೆ ಒಟಗುಟ್ಟುತ್ತಿದ್ದುವು. ಮಳೆಯ ನೀರು ರಸ್ತೆಯ ಉದ್ದಕ್ಕೂ ದಡಬಡನೆ ಹರಿಯುತ್ತಿದ್ದಿತು. ಜೋಡಿದಾರರು ಗಾಡಿಯೊಳಗೆ ಮಲಗಿಕೊಂಡಿದ್ದರು. ಅವರಿಗೆ ನಿದ್ರೆ ಬಂದಿದ್ದಿತು. ಗಾಡಿಯವನು ಮಳೆಯು ನಿಂತಮೇಲೆ ಹೊರಡೋಣವೆಂದು, ರಸ್ತೆಯ ಮಗ್ಗುಲಲ್ಲಿದ್ದ ಒಂದು ಹಳ್ಳಿಯ ಊರ ಮುಂದಲ ಮರದ ಕೆಳಗೆ ಗಾಡಿಯನ್ನು ಬಿಟ್ಟನು. ಮಳೆಯು ಸಹಿಸಲಸಾಧ್ಯವಾಗಿ ಬೀಳುತ್ತಿದ್ದಿತು. ಗಾಡಿಯವನ ಮೈ ನಡುಗುತಿದ್ದಿತು. ಬಟ್ಟೆಗಳೆಲ್ಲಾ ನೆನೆದುಹೋಗಿದ್ದುವು. ಗಾಡಿಯಲ್ಲಿ ಬೇಕಾದಷ್ಟು ಸ್ಥಳವಿದ್ದಿತು. ಜೋಡಿದಾರರು ಮಲಗಿ ಗೊರಕೆ ಹೊಡೆಯುತ್ತಿದ್ದರು. ಮನುಷ್ಯ ಪ್ರಾಣಿಯಲ್ಲವೆ? ಪಾಪ ಅವನೂ ಗಾಡಿಯೊಳಗೆ ಒಂದು ಮಗ್ಗುಲಿಗೆ ಕುಳಿತುಕೊಂಡನು. ರಾತ್ರಿಯೆಲ್ಲಾ ನಿದ್ರೆಯಿಲ್ಲದುದರಿಂದ ಮಳೆಯಿಂದ ಆಶ್ರಯವು ಸಿಕ್ಕಿದಕೂಡಲೆ ನಿದ್ರೆ ಬಂದುಬಿಟ್ಟಿತು.

ಬೆಳಗಾಯಿತು. ಮಳೆಯು ನಿಂತುಹೋಗಿದ್ದಿತು. ಜೋಡಿದಾರರಿಗೆ ಮೊದಲು ಎಚ್ಚರವಾಯಿತು. ಗಾಡಿಯವನು ಇನ್ನೂ ಗೊರಕೆ ಹೊಡೆಯುತ್ತಲೇ ಇದ್ದನು. ನೋಡಿದಕೂಡಲೆ ಅವರಿಗೆ ಬಹಳ ಕೋಪಬಂದಿತು. ಗಾಡಿಯವನು ೧೦ ರೂಪಾಯಿ ತೆಗೆದುಕೊಂಡುದಲ್ಲದೆ ಗಾಡಿಯೊಳಗೆ ಕುಳಿತುದನ್ನೂ ಕಂಡು ಆ ಚಳಿಯಲ್ಲಿಯೂ ಅವರ ಮೈ ಬೆವರಿತು. ಮತ್ತಾರಾದರೂ ಆಗಿದ್ದರೆ ಗಾಡಿಯವನನ್ನು ಒದ್ದು ಎಬ್ಬಿಸುತ್ತಿದ್ದರು. ಜೋಡಿ ದಾರರು ಅವನಿಗೆ ಹಾಗೆ ತೊಂದರೆಯನ್ನು ಕೊಟ್ಟು ಅವನ ನಿದ್ರೆಯನ್ನು ಹಾಳುಮಾಡಲಿಲ್ಲ. ಅವರ ಬ್ರಹ್ಮಾಸ್ತ್ರವಿದೆಯಲ್ಲ; ಗಾಡಿಯಿಂದ ಕೆಳಕ್ಕಿಳಿದು ಒಂದುಸಲ ಬಾಯಿ ಬಡಿದುಕೊಂಡರು. ನೀವು ಈಗ ಏನು ಹೇಳುತ್ತೀರಿ. “ಆಭಾಸ, ಅಪಾಯಕರ, ಶುದ್ದ ಕಾಡುಮನುಷ್ಯ” ಎಂದು. ಆಭಾಸವೋ ಅಪಾಯಕರವೋ ಅವರು ಮಾಡಿದಷ್ಟು. ಗಾಡಿಯವನಿಗೆ ಎಚ್ಚರವಾಯಿತು. ಅವನು ಕೆಳಕ್ಕೆ ಇಳಿದು ಗಾಬರಿಯಿಂದ "ಏನು ಸ್ವಾಮಿ ಯಾತಕ್ಕೆ" ಎಂದನು. ಜೋಡಿದಾರರು ಮಾತನಾಡಲಿಲ್ಲ. ಹಳ್ಳಿಯವರೆಲ್ಲಾ ಪ್ರಭಾತದಲ್ಲಿ ಉಂಟಾದ ಈ ಮಂಗಳ ಧ್ವನಿಯನ್ನು ಕೇಳಿ, ಹೊರಕ್ಕೆ ಬಂದರು. ಮಹೋದರರಾಗಿ ಕಣ್ಣಿನಲ್ಲಿ ಕೆಂಡವನ್ನುಗುಳುತ್ತಿರುವ ಜೋಡಿದಾರರು, ಅವರ ಎದುರಿಗೆ ಮಿಟಮಿಟನೆ ಕಣ್ಣನ್ನು ಬಿಡುತ್ತಿದ್ದ ಗಾಡಿಯ ಆಳು. ಊರಿನ ಪಟೇಲನು ಬಂದು ಜೋಡಿದಾರರನ್ನು ಕುರಿತು 'ವಿಚಾರವೇನು ಬುದ್ದಿ' ಎಂದನು. ಜೋಡಿದಾರರ “ವಿಚಾರವೇನಯ್ಯ, ನಾನು ಹತ್ತು ರೂಪಾಯಿ ಕೊಟ್ಟು ಗಾಡಿಯನ್ನು ಬಾಡಿಗೆಗೆ ತೆಗೆದುಕೊಂಡುದು ಇವನು ಮಲಗುವುದಕ್ಕಾಗಿಯೇ” ಎಂದರು. ೧೪ ಮೈಲಿಗೆ ಹತ್ತು ರೂಪಾಯಿಗಳನ್ನು ಕೊಟ್ಟುದನ್ನು ಕೇಳಿ ಹಳ್ಳಿಯವರ ಸಹಾನುಭೂತಿಯೆಲ್ಲವೂ ಜೋಡಿದಾರರ ಕಡೆಗೆ ತಿರುಗಿತು. ಗಾಡಿಯವನದೇ ತಪ್ಪೆಂದು ಅವರೆಲ್ಲರೂ ಏಕವಾಕ್ಯದಿಂದ ಹೇಳಿಬಿಟ್ಟರು. ಆದರೆ ಜೋಡಿದಾರರು ಬಾಯಿ ಬಡದುಕೊಂಡುದರ ಅರ್ಥವು ಯಾರಿಗೂ ತಿಳಿಯಲಿಲ್ಲ. ನನಗೂ ತಿಳಿಯಲಿಲ್ಲ.

ಗಾಡಿಯವನಿಗೆ ಆದ ಈ ಅಪಮಾನವನ್ನು ಕಂಡು ಜೋಡಿದಾರರಿಗೆ ಅವನಲ್ಲಿ ಬಹಳ ಕರುಣೆಯುಂಟಾಯಿತು. ಅವನಿಗೆ ಅವಮಾನ ಮಾಡಬೇಕೆಂದು ಅವರಿಗೆ ಮನಸ್ಸಿರಲಿಲ್ಲ. ಆದರೆ ೯ ರೂಪಾಯಿ ಕೊಡುತ್ತೇನೆಂದು ಹೇಳಿದ ತನ್ನ ಮಾತನ್ನು ತೆಗೆದುಹಾಕಿಬಿಟ್ಟನಲ್ಲಾ ಎಂಬ ಕೋಪ. ಒಂದು ರೂಪಾಯಿಗಾಗಿ ಅವರು ಹಿಂದೆಮುಂದೆ ನೋಡುವವರಾಗಿರಲಿಲ್ಲ. ಆದರೆ ಗಾಡಿಯವನು ತಮ್ಮ ಮಾತನ್ನು ತೆಗೆದುಹಾಕದೆ ಪ್ರಯಾಣ ಮುಗಿಸಿ ಹಿಂದಿರುಗಿದನಂತರ “ಸ್ವಾಮಿ ಏನಾದರೂ ಇನಾಂ ನಿಮ್ಮ ಹೆಸರಾಗಿ ಕೊಡಿ” ಎಂದು ಕೇಳಿದ್ದರೆ ಅವರು ಒಂದಲ್ಲ ಎರಡು ರೂಪಾಯಿಗಳನ್ನು ಕೊಟ್ಟುಬಿಡುತ್ತಿದ್ದರು. ತಾನು ಹೇಳಿದ ಮಾತನ್ನು ತೆಗೆದುಹಾಕಿಬಿಟ್ಟನಲ್ಲಾ ಎಂದು ಅವರ ಮನಸ್ಸಿನಲ್ಲಿ ಅವಮಾನವು ಕುದಿಯುತ್ತಿದ್ದಿತು. ಸ್ವಭಾವದಿಂದ ಕೋಮಲರಾದ ಅವರಿಗೆ, ಗಾಡಿಯವನಿಗಾದ ಈ ಅವಮಾನವನ್ನು ಸಹಿಸುವುದು ಆಗಲಿಲ್ಲ. ಪಾಪ ಏನೋ ಪ್ರಾಣಿ ಒಳಗೆ ಕುಳಿತರೆ ನಾನ್ಯಾಕೆ ಹುಚ್ಚನಂತೆ ಹಾರಿಬಿದ್ದೆ? ನನ್ನ ವಿವೇಕವೆಲ್ಲ ಎಲ್ಲಿಹೋಯಿತು? ನನಗೆ ವಯಸ್ಸಾದು ನಾಯಿಗೆ ಆದಂತೆ, ಎಂದು ಅವರು ಪಶ್ಚಾತ್ತಾಪಪಟ್ಟರು. ಹೊರಗಡೆಯ ತೋರಿಕೆಗೆ ಅವರೇ ಜಯಶಾಲಿಗಳಾಗಿದ್ದರೂ, ದುಃಖದಿಂದ ಅವರ ಹೃದಯವು ವಿದೀರ್ಣವಾಗಿತ್ತು. ಸಾವಿರಾರು ಜನರು ತಮ್ಮಿಂದ ಸಹಾಯವನ್ನು ಹೊಂದಿ, ನಿತ್ಯವೂ ತಮ್ಮನ್ನು ದಾತಾರರೆಂದು ಹೊಗಳುತ್ತಿರುವಾಗ, ಸ್ವಾಭಿಮಾನವೆಂಬ ಒಣ ಹೆಮ್ಮೆಗೆ ತುತ್ತಾಗಿ, ಆ ಒಬ್ಬ ಬಡ ಪ್ರಾಣಿಯನ್ನು ಒಂದು ರೂಪಾಯಿನ ನೆಪದಿಂದ ನೋಯಿಸಿದುದಕ್ಕಾಗಿ, ಅವರಿಗೆ ಬಹಳ ಸಂಕಟವಾಗಿ ತಮ್ಮನ್ನು ತಾವೇ ಹಳಿದುಕೊಂಡರು. ಗಾಡಿಯವನಂತೂ, ಪಾಪ, ಗಟ್ಟಿಯಾಗಿ ಉಸಿರು ಕೂಡ ಬಿಡದೆ, ಗಾಡಿಯನ್ನು ಹೊಡೆದುಕೊಂಡು ಹೋಗುತ್ತಿದ್ದನು. ಜೋಡಿದಾರರೊಂದಿಗೆ ತಾನು ಒಂದು ರೂಪಾಯಿಗೆ ಮಾಡಿದ ಚೌಕಶಿಯಿಂದ ಅವನಿಗೂ ಪಶ್ಚಾತ್ತಾಪವಾಗಿತ್ತು. ಜೋಡಿದಾರರನ್ನು ತಿರುಗಿ ನೋಡುವುದಕ್ಕೆ ಕೂಡ ಅವನಿಗೆ ಧೈರ್‍ಯವಿರಲಿಲ್ಲ. ಒಮ್ಮಿಂದೊಮ್ಮೆ ಮಳೆಯು ಮತ್ತೆ ಜೋರಾಗಿ ಬರಲು ಪ್ರಾರಂಭವಾಯಿತು. ಗಾಡಿಯವನ ಕಂಬಳಿ, ದಟ್ಟಿ ಎಲ್ಲಾ ತೊಯ್ದು ಹೋಗಿ ಅವನ ಮೈಯಿಂದ ನೀರು ಕೆಳಕ್ಕೆ ಸುರಿಯುತ್ತಿದ್ದಿತು. ಅವನು ಚಳಿಯಿಂದ ಗಡಗಡ ನಡುಗುತ್ತಿದ್ದನು. ಅವನನ್ನು ಕಂಡು ಜೋಡಿದಾರರಿಗೆ ಬಹಳ ಕನಿಕರವುಂಟಾಯಿತು. ಅವರು ಮೃದುವಾದ ಧ್ವನಿಯಿಂದ “ಚೆನ್ನ ಗಾಡಿಯಲ್ಲಿ ಕುಳಿತುಕೊ, ಇದುವರೆಗೆ ನೆನೆದುದೇ ಸಾಕು” ಎಂದರು. ಚೆನ್ನನು ತನ್ನ ಕಿವಿಯನ್ನೇ ತಾನು ನಂಬಲಿಲ್ಲ. ತಾನು ಹಿಂದೆ ಮಾಡಿದ ತಪ್ಪಿಗಾಗಿ ಜೋಡಿದಾರರು ತನ್ನನ್ನು ಹಾಸ್ಯ ಮಾಡುತ್ತಿರುವರೆಂದು ಅವನು ತಿಳಿದನು. ಅವನು ದೈನ್ಯದಿಂದ “ಬುದ್ದಿ, ಏನೋ ತಿಳೀಲಿಲ್ಲ. ನನ್ನ ಹಾಸ್ಯ ಮಾಡ್ಬೇಡಿ, ನಾವು ಬಡವು, ನೀವು ಕಾಪಾಡ್ದ್ರೆ ಉಂಟು. ಇಲ್ದಿದ್ರೆ ಸಾಯ್ತೇವೆ. ನನ್ನ ತಪ್ಪ ಮಾಫ್ ಮಾಡ್ಬಿಡಿ. ಮುಂದೆ ಹಾಂಗೆಂದ್ರೂ ಮಾಡೋದಿಲ್ಲ" ಎಂದನು. ಜೋಡಿದಾರರು ವಿಶ್ವಾಸದಿಂದ “ಚೆನ್ನ ಹೀಗೆಲ್ಲಾ ಮಾತ್ನಾಡ್ಬೇಡ. ಭಗವಂತನ್ಮುಂದೆ ನಾವೆಷ್ಟರವರು. ನಾನು ನಿನ್ನನ್ನು ಸಂರಕ್ಷಿಸೋಕೆ ನನಗಿರೋ ಅಂಥಾ ಅಧಿಕಾರವೇನು? ಏನೋ ನನ್ಗೂ ಸಿಟ್ಬಂತು; ನಿನ್ಗೂ ಸಿಟ್ಬಂತು. ಕಳೆದುಹೋದದ್ದನ್ನ ಚಿಂತಿಸಿ ಫಲವಿಲ್ಲ. ಒಳಗಡೆ ಕೂತುಕೊ" ಎಂದರು. ಆದರೂ ಚೆನ್ನನಿಗೆ ನಂಬಿಕೆಯಾಗಲಿಲ್ಲ. ಆ ಬಾಯಿ ಬಡಕೊಂಡ ಜೋಡಿದಾರರೆಲ್ಲಿ? ತಂದೆಯಂತೆ ಪ್ರೇಮದಿಂದ ಮಾತನಾಡುವ ಇವರೆಲ್ಲಿ? ಇದೇನು ಈ ಒಗಟೆ, ಎಂದು ಅವನು ಭ್ರಾಂತನಂತೆ ಕಣ್ಣು ಮಿಟಕಿಸಿದನು. ಜೋಡಿದಾರರು ಚೆನ್ನನನ್ನು ಎಳೆದು ಒಳಕ್ಕೆ ಕೂರಿಸಿಕೊಂಡರು. ಚೆನ್ನನು ಹುಚ್ಚನಂತೆ ಸುಮ್ಮನೆ ಕುಳಿತುಬಿಟ್ಟನು. ಎತ್ತುಗಳು ನಿಧಾನವಾಗಿ ಗಾಡಿಯನ್ನು ಎಳೆದುಕೊಂಡು ಹೋಗುತ್ತಿದ್ದುವು. ಅಂತೂ ಹಾಸನಕ್ಕೆ ಸಕಾಲದಲ್ಲಿ ತಲಪಿ, ಜೋಡಿದಾರರು ತಮ್ಮ ಕೆಲಸಗಳನ್ನೆಲ್ಲಾ ಮಾಡಿಕೊಂಡರು.

ಒಂದು ಸಲ ಬೈಗಳವನ್ನು ತಿಂದುದರಿಂದಲೇ ಚೆನ್ನನು ಈಗ ಜೋಡಿದಾರರ ಪ್ರಿಯ ಶಿಷ್ಯನಾಗಿಬಿಟ್ಟಿದ್ದನು. ಅವರು ಅವನಿಗೆ ಹಾಸನದಲ್ಲಿ ಒಂದು ರೂಪಾಯಿಯನ್ನು ಕೊಟ್ಟು “ಹೋಗು, ಮಳೆಯಿಂದ ನೆನೆದು ನಿನ್ದೇಹವೆಲ್ಲಾ ಮಂಜಿನ ಗಡ್ಡೆಯಾಗಿದೆ. ಹೋಟ್ಲಿಗೆ ಹೋಗಿ ಚೆನ್ನಾಗಿ ಬಿಸಿನೀರಿನಲ್ಲಿ ಸ್ನಾನ ಮಾಡಿ ಬಿಸಿಬಿಸಿಯಾಗಿ ಒಳ್ಳೆ ಊಟವನ್ನು ಉಂಡು ಸ್ವಲ್ಪ ಕಾಫಿಯನ್ನೂ ಕುಡಿದು ಬಾ, ನಮ್ಮ ಕಾಫಿ; ನಿಮ್ಮ ಕಾಫಿಯಲ್ಲ" ಎಂದು ಹೇಳಿ ಕಳುಹಿಸಿದರು.

ಚೆನ್ನನು ಜೋಡಿದಾರರ ಮಾತನ್ನು ಮೀರಲಿಲ್ಲ. ಚೆನ್ನಾದ ಊಟವನ್ನೇ ಮಾಡಿದನು. ಆದರೆ ಕಾಫಿಯ ವಿಷಯದಲ್ಲಿ ಮಾತ್ರ ಅವರ ಮಾತನ್ನು ಮೀರಿದನು; ತನ್ನ ಕಾಫಿಯನ್ನೇ ಕುಡಿದನು. ೨-೩ ಸೇರು ಹೆಂಡವನ್ನು ಕುಡಿದು ಪ್ರಪಂಚವನ್ನೇ ಮರೆತು ಗಾಡಿಯ ಕೆಳಗೆ ಬಂದು ಮಲಗಿಬಿಟ್ಟನು. ಜೋಡಿದಾರರು ಕೆಲಸವನ್ನೆಲ್ಲಾ ಮುಗಿಸಿಕೊಂಡು ರಾತ್ರಿ ೮ ಗಂಟೆಯ ವೇಳೆಗೆ ಗಾಡಿಯ ಬಳಿಗೆ ಬಂದರು. ಚೆನ್ನನು ಹೆಂಡದ ಮತ್ತಿನಿಂದ ಗೊರಕೆ ಹೊಡೆಯುತ್ತಿದ್ದನು. ಜೋಡಿದಾರರು ಚೆನ್ನನನ್ನು ಬಲಾತ್ಕಾರವಾಗಿ ಎಬ್ಬಿಸಿದರು. ಅವನೂ ಹೇಗೋ ಗಾಡಿಯನ್ನು ಹೂಡಿದನು. ಎತ್ತು ನಿಧಾನವಾಗಿ ಹೊರಟಿತು. ಚೆನ್ನನಿಗೆ ಮತ್ತೆ ನಿದ್ರೆ ಬಂದುಬಿಟ್ಟಿತು. ಜೋಡಿದಾರರು “ಪಾಪ, ನೆನ್ನೆ ದಿವಸವೆಲ್ಲಾ ನಿದ್ರೆಯಿಲ್ಲ. ಆದ್ದರಿಂದ ಗೊರಕೆ ಹೊಡೆಯುತ್ತಾನೆ" ಎಂದುಕೊಂಡರು. ಹೊರಟ ಸ್ವಲ್ಪ ಹೊತ್ತಿಗೆ ಅವರಿಗೂ ನಿದ್ರೆ ಬಂದುಬಿಟ್ಟಿತು.

ಅವರಿಗೆ ಎಷ್ಟು ಹೊತ್ತು ನಿದ್ರೆ ಬಂದಿತೋ ತಿಳಿಯದು. ಆದರೆ ಇದ್ದಕ್ಕಿದ್ದಂತೆ, ಒಮ್ಮಿಂದೊಮ್ಮೆ, ಗಾಡಿಯು ನಿಂತುಬಿಟ್ಟಿತು. ಅದು ನಿಂತ ಕೂಡಲೇ ಜೋಡಿದಾರರಿಗೆ ಎಚ್ಚರವಾಯಿತು. ೨-೩ ಸಲ ಚೆನ್ನನನ್ನು ಕೂಗಿದರು. ಚೆನ್ನನು ಮಾತನಾಡಲಿಲ್ಲ. ಜೋಡಿದಾರರ ಗ್ರಹಚಾರ. ಅವರು ಮಾಡಿದ್ದ ಸಹಾಯವು ಅವರ ಮೇಲೆಯೇ ತಿರುಗಿಕೊಂಡಿತು. ಜೋಡಿದಾರರು ಗಾಡಿಯಿಂದ ಕೆಳಕ್ಕೆ ಇಳಿದರು. ಆಕಾಶದಲ್ಲಿ ಚಂದ್ರನು ಕಾಣುತ್ತಿರಲಿಲ್ಲ. ಕೆಲವು ನಕ್ಷತ್ರಗಳು ಮಾತ್ರ ಥಳಥಳಿಸುತ್ತಿದ್ದುವು. ಗಾಳಿಯು ತಣ್ಣಗೆ ಬೀಸುತ್ತಿದ್ದಿತು. ಗಾಡಿಯ ಎದುರಿಗೆ ಆಳವಾದ ಒಂದು ಕಾಲುವೆ. ಅದರಲ್ಲಿ ನೀರಿರಲಿಲ್ಲ. ಎತ್ತುಗಳು ಇನ್ನು ನಾಲ್ಕು ಹೆಜ್ಜೆ ಮುಂದಕ್ಕೆ ಹೋಗಿದ್ದರೆ, ಅಥವ ಗಾಡಿಯ ಚಕ್ರವು ಇನ್ನು ಒಂದು ಉರುಳು ಮುಂದಕ್ಕೆ ನುಗ್ಗಿದ್ದರೆ, ದೇವರೇ ಗತಿ. ಜೋಡಿದಾರರು, ಎತ್ತು, ಗಾಡಿ, ಆಳು, ಎಲ್ಲಾ ೫೦-೬೦ ಅಡಿ ಆಳವಾದ ಹಳ್ಳದೊಳಗೆ ಬಿದ್ದುಹೋಗುತ್ತಿದ್ದರು. ರಸ್ತೆಯಲ್ಲಿ ಒಂದು ಕಾಲುದಾರಿಯು ಬಂದ ಕೂಡಲೇ ಎತ್ತುಗಳು ಆ ಕಡೆಗೆ ಹೊರಟುಬಿಟ್ಟಿದ್ದವು. ಆ ಕಾಲು ದಾರಿಯು ಎಲ್ಲಿಯವರಿಗೆ ಕಾಣುತ್ತಿದ್ದಿತೋ ಅಲ್ಲಿಯವರೆಗೆ ಎತ್ತುಗಳು ಬಂದು, ಕಾಲು ದಾರಿಯು ಅಳಿಸಿಹೋಗಿದ್ದ ಈ ಆಳವಾದ ಹಳ್ಳದ ಮುಂದೆ ನಿಂತುಬಿಟ್ಟಿದ್ದುವು. ಹಳ್ಳವನ್ನು ನೋಡಿ ಜೋಡಿದಾರರು ನಡುಗಿದರು. ಈ ದಿವಸ ತಾನು ಸಾಯದೆ ಉಳಿದದ್ದು ದೇವರ ಕೃಪೆ ಎಂದುಕೊಂಡರು. ತಮ್ಮ ಪ್ರಾಣವನ್ನುಳಿಸಿದ ಎತ್ತುಗಳನ್ನು ಬಹಳ ಶ್ಲಾಘಿಸಿದರು. ಅನಂತರ ಬಲಾತ್ಕಾರವಾಗಿ ಚೆನ್ನನನ್ನು ಎಬ್ಬಿಸಿದುದಾಯಿತು. ಆದರೆ ಆ ಕಾರಇರುಳಿನಲ್ಲಿ ಇವರಿಬ್ಬರಿಗೂ ದಾರಿಯು ತಿಳಿಯಲಿಲ್ಲ. ಆದುದರಿಂದ ಉಪಾಯ ಕಾಣದೆ, ಗಾಡಿಯನ್ನು ಮತ್ತೆ ಎತ್ತುಗಳು ಎಳೆದುಕೊಂಡು ಬಂದಿದ್ದ ಕಾಲು ದಾರಿಗೇ ತಿರುಗಿಸಿದರು. ಅಂತೂ ಇಂತೂ ರಸ್ತೆಗೆ ಬಂದುದಾಯಿತು. ಆದರೆ ರಸ್ತೆಯಲ್ಲಿಯೂ ಕೂಡ ನಮ್ಮ ಊರಿನ ಕಡೆಗೆ ಹೋಗುತ್ತಿದ್ದ ರಸ್ತೆ ಯಾವುದು ಎಂಬುದಾಗಿ ತಿಳಿಯದೆ, ಬಂದ ದಾರಿಯಲ್ಲಿ ಗಾಡಿಯನ್ನು ಹಿಂದಕ್ಕೆ ಹೊಡೆಸಿದರು. ಅಲ್ಲಿ ಒಂದು ಗುರುತು ಸಿಕ್ಕಿದ ನಂತರ ಮತ್ತೆ ಹಿಂದಿರುಗಿಸಿ ಊರನ್ನು ಮುಟ್ಟಿದರು. ಎತ್ತಿನ ಬುದ್ದಿವಂತಿಕೆಗೆ ಮೆಚ್ಚಿ ಜೋಡಿದಾರರೇ ಆ ಎತ್ತುಗಳನ್ನು ಕೊಂಡುಕೊಂಡರು.

ನಾನು ಮೊದಲೇ ಹೇಳಿದಂತೆ ಜೋಡಿದಾರರಿಗೆ ಸಿಟ್ಟು ಬಂದರೆ ತಮ್ಮನ್ನು ತಾವು ಶಿಕ್ಷಿಸಿಕೊಳ್ಳುತ್ತಿದ್ದರೇ ಹೊರತು ಇತರರನ್ನು ಶಿಕ್ಷಿಸುತ್ತಿರಲಿಲ್ಲ. ನಮ್ಮ ಸ್ಕೂಲಿನಲ್ಲಿ ಈಗ ಕೆಲವು ವರ್ಷಗಳ ಹಿಂದೆ ಒಬ್ಬ ಮುಖ್ಯೋಪಾಧ್ಯಾಯರಿದ್ದರು. ಅವರು ಹುಡುಗರನ್ನು ಬಹಳವಾಗಿ ಹೊಡೆಯುತ್ತಿದ್ದರು. ಅವರು ಹುಡುಗರಾಗಿದ್ದಾಗ ಅವರಿಗೆ ಛಡಿ ಏಟು, ಕೋದಂಡ, ಕುರ್ಚಿ ಕೂರುವುದು, ಮುಂತಾದ ಶಿಕ್ಷೆಗಳೆಲ್ಲಾ ಆಗಿದ್ದುವಂತೆ. ಅದರಿಂದಲೇಯಂತೆ ಅವರು ವಿದ್ಯೆಯನ್ನು ಕಲಿತುದು. ಈ ಅಭಿಪ್ರಾಯದಿಂದಲೇ ಅವರು ಛಡಿ ಏಟಿಲ್ಲದೆ ವಿದ್ಯೆ ಬರುವುದಿಲ್ಲವೆಂದು ಹೇಳುತ್ತಾ, ಹುಡುಗರಿಗೆಲ್ಲಾ ಚೆನ್ನಾಗಿ ಏಟುಗಳನ್ನು ಕೊಡುತ್ತಿದ್ದರು. ಒಂದು ದಿವಸ ಜೋಡಿದಾರರ ಮಗನಿಗೆ, ಪಾಠ ಒಪ್ಪಿಸಲಿಲ್ಲವೆಂದು ಚೆನ್ನಾಗಿ ಏಟು ಬಿತ್ತು. ಅವನು ಅಳುತ್ತಾ ಮನೆಗೆ ಹೋಗಿ ತಂದೆಯೊಂದಿಗೆ ಹೇಳಿದನು. ಜೋಡಿದಾರರು ಕೈಯಲ್ಲಿ ಒಂದು ಬೆತ್ತವನ್ನು ಹಿಡಿದುಕೊಂಡು ಮಗನನ್ನೂ ಕರೆದುಕೊಂಡು, ಸ್ಕೂಲಿಗೆ ಬಂದರು. ಅವರನ್ನು ಕಂಡು ಮುಖ್ಯೋಪಾಧ್ಯಾಯರು “ಇವರು ನನ್ನನ್ನು ಏನು ಮಾಡುತ್ತಾರೋ" ಎಂದು ಬೆದರಿದರು. ಜೋಡಿದಾರರು ಬಂದು 'ಹೆಡ್ ಮಾಸ್ಟರನ್ನು' ಬಯ್ಯಲಿಲ್ಲ. ಸ್ಕೂಲಿನಲ್ಲಿ ಗಟ್ಟಿಯಾಗಿ ಮಾತನಾಡಲಿಲ್ಲ. ಮೊದಲೇ ಏಟು ತಿಂದು ಅಳುತ್ತಿದ್ದ ಮಗನನ್ನು ಕಂಬದ ಹತ್ತಿರ ನಿಲ್ಲಿಸಿ ಬಲವಾಗಿ ಹೊಡೆದರು. ಅನಂತರ ಮುಖ್ಯೋಪಾಧ್ಯಾಯರನ್ನು ಕುರಿತು "ಸ್ವಾಮಿ ತೃಪ್ತಿಯಾಯಿತೆ? ನಿಮ್ಮ ಕೆಲಸವನ್ನು ನಾನೇ ಮಾಡಿದ್ದೇನೆ” ಎಂದು ಹೇಳಿ ಮನೆಗೆ ಹೊರಟುಹೋದರು. ಮುಖ್ಯೋಪಾಧ್ಯಾಯರ ಮುಖವು ನಾಚಿಕೆಯಿಂದ ಪೆಚ್ಚಾಯಿತು. ಅಲ್ಲಿಂದ ಮುಂದೆ ಅವರು ಒಬ್ಬ ಹುಡುಗನನ್ನೂ ಹೊಡೆಯುವ ತಂಟೆಗೆ ಹೋಗಲಿಲ್ಲ.

೮. ಜೋಡಿದಾರರ ಹೊಟ್ಟೆಯ ಪ್ರಮಾಣವು

ಜೋಡಿದಾರರಿಗೆ ಹೊಟ್ಟೆ ಮಿತಿಮೀರಿ ಬೆಳೆದಿದ್ದಿತೆಂದು ಮೊದಲೇ ಹೇಳಿದ್ದೇನೆ. ಆದರೆ ಅವರಿಗೇನೋ ಅದು ನಂಬಿಕೆ ಇರಲಿಲ್ಲ. "ಯಾರಿಗೂ ಇಲ್ಲದ ಹೊಟ್ಟೆ ನನಗೇನು ಬಂದಿರೋದು” ಎಂದು ಅವರು ಕೇಳುತ್ತಿದ್ದರು. ಇದು ಒಂದುಸಲ ಅವರ ನಿದರ್ಶನಕ್ಕೆ ಬಂದುಬಿಟ್ಟಿತು. ಯಾರೋ ಒಬ್ಬ ಹುಡುಗನು ಅವರನ್ನು 'ಹೊಟ್ಟೆ ಜೋಡಿದಾರರು' ಎಂದುಬಿಟ್ಟನು. ಜೋಡಿದಾರರಿಗೆ ಬಹಳ ಸಿಟ್ಟು ಬಂದಿತು. ಅವನನ್ನು ಹೊಡೆಯಬೇಕೆಂದು ಓಡಿಸಿಕೊಂಡು ಹೊರಟರು. ಹುಡುಗ ಊರನ್ನು ಒಂದು ಸುತ್ತು ಸುತ್ತಿದ. ಮುಂದೆ ಓಡಲಾರದೆ ಸೋತು ಬಿದ್ದ. ಹಿಂದೆ ಶತ್ರುವು ಕಣ್ಣನ್ನು ಕೆಂಪಗೆ ಮಾಡಿಕೊಂಡು ಓಡಿಸಿಕೊಂಡು ಬರುತ್ತಿದ್ದಾನೆ, ಏನುಮಾಡುವುದು? ಊರ ಮುಂದೆ ಒಂದು ಆಂಜನೇಯನ ದೇವಸ್ಥಾನವಿದೆ. ಒಳಕ್ಕೆ ದನಕರುಗಳು ನುಗ್ಗದಂತೆ ಪ್ರಾಕಾರದ ಗೋಡೆಹಾಕಿದ್ದಾರೆ. ಬಾಗಿಲಿನ ಬದಲು ಒಂದು ಚಿಕ್ಕ ಕವಡಿಯಿದೆ. 'ಆವಶ್ಯಕತೆಯು ಮುಖ್ಯ ಉಪಾಧ್ಯಾಯ'ನೆಂಬ ಗಾದೆಯುಂಟಷ್ಟೆ. ಹುಡುಗನಿಗೆ ಕೂಡಲೆ ಹೊಳೆಯಿತು. ಅವನು ಕವಡಿಯನ್ನು ದಾಟಿ ಗುಡಿಯನ್ನು ಸೇರಿಬಿಟ್ಟನು. ಜೋಡಿದಾರರು ದಾಟುವುದಕ್ಕೆ ಹೋಗುತ್ತಾರೆ. ಹೊಟ್ಟೆಯೇ ಹಿಡಿಯಲಿಲ್ಲ. ಹುಡುಗ ಒಳಗಡೆ ಕೈಯಿಂದ ಚೇಷ್ಟೆ ಮಾಡುತ್ತಾ ಇವರನ್ನು ಹಾಸ್ಯಮಾಡಿ ನಗುತ್ತಲಿದ್ದ. ಆಗ ಜೋಡಿದಾರರಿಗೆ ಜನರು ತಮ್ಮನ್ನು ಹೊಟ್ಟೆಯ ಜೋಡಿದಾರನೆನ್ನುವುದರ ಅರ್ಥವು ಸ್ಪಷ್ಟವಾಯಿತು.

ಸುಪ್ರಸಿದ್ದ ಆಂಗ್ಲೇಯ ಪ್ರಬಂಧಕಾರನಾದ 'ಅಡಿಸನ್' ಎಂಬುವನು ತನ್ನ 'ಸ್ಪೆಕ್ಟೇಟರ್' ಪತ್ರಗಳೊಂದರಲ್ಲಿ ಒಂದು ಬೊಜ್ಜು ಬೆಳೆದವರ ಸಂಘದ ವಿಷಯವನ್ನು ಹೇಳುತ್ತಾನೆ. ಆ ಸಂಘಕ್ಕೆ ಸದಸ್ಯರಾಗಲು ಕೆಲವು ನಿಯಮಗಳಿದ್ದುವಂತೆ. ಅವುಗಳಲ್ಲಿ ಅತ್ಯಂತ ಪ್ರಾಮುಖ್ಯವಾದುದು ಈ ಮುಂದೆ ಹೇಳುವುದು. ಸಂಘದ ಕಛೇರಿಯಲ್ಲಿ ಎರಡು ಕವಡಿಗಳಿದ್ದುವಂತೆ. ಒಂದು ಕವಡಿಯು ಬಹಳ ದೊಡ್ಡದಾಗಿ ಅದರ ಮೂಲಕ ಯಾರು ಬೇಕಾದರೂ ನುಸಿಯಬಹುದಾಗಿದ್ದಿತಂತೆ. ಮತ್ತೊಂದು ಸ್ವಲ್ಪ ಚಿಕ್ಕದು. ಚಿಕ್ಕದು ಎಂದರೆ ನಿಮ್ಮ ಕೈಯಲ್ಲಿ ಒಂದು ಮಾರು. ಸದಸ್ಯರಾಗಲಪೇಕ್ಷಿಸುವವರು ಈ ಎರಡನೆಯ ಕವಡಿಯಲ್ಲಿ ನುಸಿಯಬೇಕಾಗಿದ್ದಿತು. ಯಾರು ಸಲೀಸಾಗಿ ನುಸಿದುಕೊಂಡು ಹೋಗಿಬಿಡುತ್ತಿದ್ದರೋ ಅವರು ಸದಸ್ಯರಾಗಲು ಅರ್ಹರಾಗುತ್ತಿರಲಿಲ್ಲ. ಯಾರ ಹೊಟ್ಟೆಯು ನುಸಿಯುವಾಗ ಆ ಕವಡಿಯಲ್ಲಿ ಸಿಕ್ಕಿಕೊಳ್ಳುತ್ತಿದ್ದಿತೋ ಅವರು ಮಾತ್ರ ಸದಸ್ಯರಾಗಲು ಯೋಗ್ಯರಾಗುತ್ತಿದ್ದರು. ಇದೇ ಆ ಬೊಜ್ಜು ಬೆಳೆದವರ ಸಂಘದ ನಿಯಮವಾಗಿದ್ದಿತಂತೆ. ಅಲ್ಲಿಯ ಮೂರು ಸದಸ್ಯರನ್ನು ಸೇರಿಸಿ ತೂಕಮಾಡಿದರೆ ಅವರ ಭಾರವು ೧,೨೦೦ ಪೌಂಡು ಇರುತ್ತಿದ್ದಿತಂತೆ. ಇಂತಹ ಸಂಘಕ್ಕೆ ಸದಸ್ಯರಾಗಲು ನಮ್ಮ ಜೋಡಿದಾರರೂ ಅರ್ಹರಾಗಿದ್ದರು.

೯. ಜೋಡಿದಾರರ ಚಟುವಟಿಕೆ

ಜೋಡಿದಾರರು ಸ್ವಲ್ಪ ದಪ್ಪವಾದ ಮಾತ್ರಕ್ಕೆ ಅವರಿಗೆ ಚಟುವಟಿಕೆ ಕಡಮೆ ಎಂದು ಊಹಿಸಬೇಡಿ. ಈವತ್ತೂ ಅವರಷ್ಟು ಕೆಲಸಮಾಡಲು ಹುಡುಗರೆನ್ನಿಸಿಕೊಳ್ಳುವ ನಮಗೇ ಆಗುವುದಿಲ್ಲ. ಈಗ ೫ ವರ್ಷಗಳ ಕೆಳಗೆ ನಡೆದ ಸಂಗತಿಯೊಂದನ್ನು ಕೇಳಿ. ಜೋಡಿದಾರರು ನಮ್ಮೂರ ನದಿಗೆ ಸ್ನಾನಕ್ಕೆ ಹೋಗಿದ್ದರು. ಸ್ನಾನವಾದಸಂತರ ಪರಿಷ್ಕಾರವಾಗಿ ಪಂಚೆಕಚ್ಚೆ ಪಂಚೆಯನ್ನುಟ್ಟು, ಹನ್ನೆರಡು ನಾಮ ಧರಿಸಿಕೊಂಡು, ಪೂರ್ವ ದಿಕ್ಕಿಗೆ ಎದುರಾಗಿ ಕುಳಿತುಕೊಂಡು, ಜಪವನ್ನು ಮಾಡುತ್ತಿದ್ದರು. ನದಿಯಲ್ಲಿ ೪-೫ ಜನ ಗಂಡಸರು ಸ್ನಾನಮಾಡುತ್ತಿದ್ದರು. ಹೆಂಗಸರನೇಕರು ಪಾತ್ರೆಗಳನ್ನು ಬೆಳಗುತ್ತಿದ್ದರು. ಇದ್ದಕ್ಕಿದ್ದಂತೆ ವಿಧವೆಯೊಬ್ಬಳು "ಅಯ್ಯೋ ನನ್ನ ತಟ್ಟಿ ಹೋಯಿತಲ್ಲ. ಮನೆಗೆ ಹೋದರೆ ತಲೆಗೆ ಬೂದಿ ಹುಯ್ತಾರೆ. ಅದನ್ನ ತಂದ್ಯೋಡೋರು ಯಾರೂ ಇಲ್ವೆ?” ಎಂದು ಕೂಗಿ ಅತ್ತಳು. ತಟ್ಟೆ ಯಾವಾಗಲೋ ನೀರಿನಲ್ಲಿ ತೇಲಿಹೋದುದನ್ನು ವಿಧವೆಯು ಈಗತಾನೆ ಹೋಯಿತೆಂದುಕೊಂಡಳು. ನದಿಯ ಕಡೆಗೆ ನೋಡುವುದರಲ್ಲಿ ತಟ್ಟೆಯು ಮೊದಲೇ ಹೇಳಿದ ಮಟ್ಟೆಕಲ್ಲು ಮಡುವಿನ ಬಳಿ ತೇಲಿ ಹೋಗುತ್ತಿತ್ತು. ವಿಧವೆಯು “ಪುಣ್ಯಾತ್ಮರು ಯಾರಾದರೂ ಈಜಿ ಹೋಗಿ ಅದನ್ನು ತಂದುಕೊಡಿರಪ್ಪ”, ಎಂದು ಕೇಳಿಕೊಂಡಳು. ಈಜು ಬರುತ್ತಿದ್ದ ೪-೫ ಜನ ಯುವಕ ಧಾಂಡಿಗರು "ಆಗುವುದಿಲ್ಲ, ಅಲ್ಲಿ ಮೊಸಳೆ ಇದೆ. ಎಂಟಾಣೆಯ ತಟ್ಟೆಗಾಗಿ ನಮ್ಮ ಪ್ರಾಣವನ್ನು ಬಿಡುವುದಕ್ಕೆ ಆಗುವುದಿಲ್ಲ. ಹೋದರೆ ಹೋಯಿತು" ಎಂದುಬಿಟ್ಟರು. ವಿಧವೆಯು "ನಿಮಗೆ ಹೇಗೊತ್ತಾಗುತ್ತಪ್ಪ, ಗಂಡ ಸತ್ತ ಮುಂಡೆಯ ಕಷ್ಟ. ಇದು ಹೋದರೆ ಮನೆಯಲ್ಲಿ ಅತ್ತಿಗೆ ಪರಕೆ ಸೇವೆ ಮಾಡ್ತಾಳೆ. ನಿಮ್ಮ ಕಾಲಿಗೆ ಬೀಳ್ತೇನೆ. ನಿಮ್ಮ ಮಕ್ಕಳ ಪುಣ್ಯ; ಯಾರಾದರೂ ಈಜಿ ಹೋಗಿ ತಂದುಕೊಡಿ" ಎಂದು ಹಲ್ಲುಗಿರಿದು ಬೇಡಿದಳು. ಆ ಧಾಂಡಿಗರಾರೂ ಅವಳ ಬೇಡಿಕೆಯನ್ನು ಸಲಿಸಲಿಲ್ಲ. ನೀರಿನಿಂದ ಮೇಲಕ್ಕೆ ಬಂದು "ಗೋವಿಂದೇತಿ ಸದಾ ಧ್ಯಾನಂ ಗೋವಿಂದೇತಿ ಸದಾ ಜಪಂ” ಎಂದು ಗಟ್ಟಿಯಾಗಿ ಹೇಳುತ್ತಾ ಮೈಗೆ ನಾಮವನ್ನು ಬಳಿಯಲು ಪ್ರಾರಂಭಿಸಿದರು. ವಿಧವೆಯು ಒಂದೇ ಸಮನಾಗಿ “ಅಯ್ಯೋ ಏನು ಮಾಡಲಿ. ಮನೆಗೆ ಹೋದರೆ ಅತ್ತಿಗೆಯು ತಲೆ ಒಡೆಯುತ್ತಾಳಲ್ಲಾ” ಎಂದು ಅಳುತ್ತಿದ್ದಳು. ಅವಳ ರೋದನವನ್ನು ನೋಡಿ ಜೋಡಿದಾರರ ಮನಸ್ಸು ಕರಗಿಹೋಯಿತು. ಅವರಿಗೆ ವಯಸ್ಸು ೬೦. ದೇಹ ಆನೆಯ ದೇಹದಂತಿದೆ. ಎಲ್ಲಾ ನಿಶ್ಚಯ. ಆದರೆ ಮನಸ್ಸಿಗೆ ದೊಡ್ಡದು ಯಾವುದಿದೆ. ಅವರು ಪಂಚೆಯನ್ನು ಬಿಚ್ಚಿ, ಸೊಂಟಕ್ಕೆ ಒಂದು ಚೌಕವನ್ನು ಕಟ್ಟಿಕೊಂಡು, ತಾವು ಬಾಲ್ಯದಲ್ಲಿ ಈಜಿದ ಮಟ್ಟಿ ಕಲ್ಲು ಮಡುವಿಗೆ ಈಜಿ ಹೋಗಿ, ಆ ಪಾತ್ರೆಯನ್ನು ತಂದು ಹೆಂಗಸಿಗೆ ಕೊಟ್ಟರು.

ನಾಮವನ್ನು ಬಳಿದುಕೊಂಡು “ಗೋವಿಂದೇತಿ ಸದಾ ಸ್ನಾನ”ವನ್ನು ಜಪಿಸುತ್ತಿದ್ದ ಧಾಂಡಿಗರು ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳಿಟ್ಟರು.

೧೦. ಜೋಡಿದಾರರು ಕುದುರೆಯಿಂದ ಬಿದ್ದುದು

ಯಾವುದಾದರೂ ವಿನೋದವು ನಡೆದರೆ ನಗುವುದನ್ನು ನಾನು ನೋಡಿದ್ದೇನೆ. ಆದರೆ ಇತರರಿಗೆ ಕಷ್ಟ ಬಂದಾಗ ಕೂಡ ಒಂದೊಂದು ಸಲ ನಗು ಬಂದುಬಿಡುತ್ತೆ. ಹಾಗೆಂದ ಮಾತ್ರಕ್ಕೆ ಅವರ ಕಷ್ಟಗಳನ್ನು ಕಂಡು ನಾವು ಸಂತೋಷಪಡುವೆವೆಂದಲ್ಲ; ಆದರೆ ನಮಗೆ ನಗುವನ್ನು ತಡೆಯುವುದಕ್ಕೆ ಆಗುವುದಿಲ್ಲವೆಂದು ಮಾತ್ರ ಅರ್ಥ.

ನಮ್ಮ ಜೋಡಿದಾರರು ಮಿತಿಮೀರಿ ಹೊಟ್ಟೆ ಬೆಳೆಸಿದ್ದಾರೆಂದು ಹೇಳಿದೆ ನಷ್ಟೆ. ಅವರು ಒಂದು ಕುದುರೆಯನ್ನು ಕೊಂಡುಕೊಂಡರು. ಎತ್ತರವಾದ ಕುದುರೆಯನ್ನು ಕೊಂಡರೆ ಅದರ ಮೇಲೆ ನೆಗೆದು ಹತ್ತಲು ತಮಗೆ ಸಾಧ್ಯವಿಲ್ಲದುದರಿಂದ, ತಮಗೆ ಸುಲಭವಾಗಿ ಹತ್ತಲು ಅನುಕೂಲವಾಗುವಂತೆ ಕುಳ್ಳಾದ ಕುದುರೆಯನ್ನೇ-ಕೊಂಡರು. ಆ ಕುದುರೆ ತಂದಾಗಲೇ ನಾವೆಲ್ಲಾ "ಜೋಡಿದಾರರ ಸವಾರಿಗೆ ಈ ಕುದುರೆಯೆ? ಇದರ ಮೇಲೆ ಅವರು ಕುಳಿತುಬಿಟ್ಟರೆ, ಸರ್ಕಸ್ಸಿನಲ್ಲಿ ಆನೆ ಬೈಸಿಕಲ್ ಸವಾರಿ ಮಾಡಿದಂತಾಗುತ್ತದೆ" ಎಂದುಕೊಂಡೆವು. ನಮ್ಮ ಊಹೆಯೂ ತಪ್ಪಾಗಲಿಲ್ಲ. ಪಾಪ, ಆ ಕುದುರೆಯ ಬೆನ್ನು, ಜೋಡಿದಾರರು ಅದರ ಮೇಲೆ ಕುಳಿತ ಕೂಡಲೇ ನೆಲಕ್ಕೆ ಬಗ್ಗಿ ಹೋಗುತ್ತಿದ್ದಿತು. ಹೊಟ್ಟೆಯು ನೆಲದ ಮೇಲೆ ಎಳೆಯುತ್ತಿದೆಯೋ ಎನ್ನುವಂತೆ ತೋರುತ್ತಿದ್ದಿತು. ಅವರದನ್ನು ಹತ್ತುವುದು ಭಗೀರಥ ಪ್ರಯತ್ನ. ಕುದುರೆಯ ಜೀನು ಮತ್ತು 'ರಿಕಾಪ'ನ್ನು ಒಂದು ಕಡೆ ಎರಡು ಆಳುಗಳು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಮತ್ತೊಂದು ಕಡೆ ಇಬ್ಬರು ಬಲವನ್ನೆಲ್ಲಾ ಬಿಟ್ಟು, ಅವರ ಹೊಟ್ಟೆಯನ್ನು ಹಿಡಿದು, ಎತ್ತಿ, ಕುದುರೆಯ ಮೇಲೆ ಹತ್ತಿಸಬೇಕು. ಪ್ರತಿ ಸಲ ಕುದುರೆ ಏರುವಾಗಲೂ ಜೋಡಿದಾರರು ೩-೪ ಪ್ರಯತ್ನಗಳಿಲ್ಲದೆ ಜಯಶಾಲಿಗಳಾದುದೇ ಇಲ್ಲ.

ಒಂದು ದಿವಸ ಅವರು ಹೀಗೆ ಕಷ್ಟ ಪಟ್ಟು ಕುದುರೆಯ ಮೇಲೇರಿ ಕುಳಿತು ಏದುತ್ತಾ, ತಮ್ಮ ಗದ್ದೆಗಳನ್ನು ನೋಡಿಕೊಂಡು ಬರಲು ಹೊರಟರು. ದಾರಿಯಲ್ಲಿ ಒಂದು ಕಡೆ ಒಂದು ಸಲ ಕೆಳಕ್ಕೆ ಇಳಿಯಬೇಕಾಯಿತು. ಅವರು ಕೆಳಕ್ಕೆ ಇಳಿಯುವದೆಂದರೆ ಸಾಮಾನ್ಯವೇ? ಅದಕ್ಕೆ ಮತ್ತೆ ನಾಲ್ಕು ಜನ ಬೇಕು. ನಾನೊಂದು ಸಲ ಬೈಸಿಕಲ್ಲು ಸವಾರಿ ಕಲಿತೆ. ಕುಳಿತುಕೊಂಡು ಸವಾರಿಮಾಡಲು ಬರುತ್ತಿದ್ದಿತು. ಕೆಳಕ್ಕೆ ಇಳಿಯಲು ಬರುತ್ತಿರಲಿಲ್ಲ. ಚಕ್ರವ್ಯೂಹವನ್ನು ಭೇದಿಸುವುದಕ್ಕೆ ಅಭಿಮನ್ಯುವಿಗೆ ತಿಳಿದಿದ್ದರೂ, ಅದರಿಂದ ತಪ್ಪಿಸಿಕೊಂಡು ಹೊರಕ್ಕೆ ಬರಲು ಅವನಿಗೆ ತಿಳಿಯಲಿಲ್ಲವಲ್ಲಾ, ಹಾಗೆ. ನಮ್ಮ ಚಿಕ್ಕಮ್ಮನ ಮಗುವನ್ನು ಒಂದು ದಿವಸ ನನ್ನ ಬೈಸಿಕಲ್ ಮೇಲೆ ಕುಳ್ಳಿರಿಸಿಕೊಂಡು ಹೆಮ್ಮೆ ತೋರಿಸುತ್ತಾ ಸವಾರಿ ಮಾಡಲು ಪ್ರಾರಂಭಿಸಿದೆ. ಆದರೆ ಇಳಿಯುವುದಕ್ಕೆ ಯಾರಾದರೂ ಹತ್ತಿರ ಇರಬೇಕು. ಅವರ ಬಳಿಗೆ ಬೈಸಿಕಲ್ಲು ಹೋದಾಗ ಮೆಲ್ಲನೆ ಬಿಡಬೇಕು. ಅವರನ್ನು ಹಿಡಿದುಕೊಂಡು ಬೈಸಿಕಲ್ ನಿಲ್ಲಿಸಬೇಕು. ಆಗ ಕೆಳಕ್ಕೆ ನಾನು ಇಳಿಯಬೇಕು. ಇಷ್ಟೆಲ್ಲಾ ಆಗಮಗಳು ನಡೆಯಬೇಕಾಗಿದ್ದಿತು. ಆದರೆ ಆದಿನ ಒಬ್ಬನೂ ನನ್ನ ಕಣ್ಣಿಗೆ ಬೀಳಲಿಲ್ಲ. ನಾನು ಬೈಸಿಕಲ್ಲು ತಿರುಗಿಸಿದ್ದೂ ತಿರುಗಿಸಿದ್ದೇ. ಊರನ್ನು ೮-೧೦ ಸುತ್ತು ತಿರುಗಿಬಿಟ್ಟೆ. ಮಗುವು "ಸಾಕು, ಇಳಿದುಬಿಡುತ್ತೇನೆ" ಎಂದಿತು. ಮಗುವಿನ ತಾಯಿಯು “ಸಾಕು, ಇಳಿಸಿಬಿಡಪ್ಪ, ಎಷ್ಟು ತಿರುಗಿಸಿದರೂ ಮಕ್ಕಳಿಗೆ ಆಸೆ ಇದ್ದೇ ಇರುತ್ತದೆ" ಎಂದರು. ಆದರೆ ಇಳಿಸುವುದು ಅಂದರೆ ಸಾಮಾನ್ಯವೆ? ಊರ ಹೊರಕ್ಕೆ ಹೋಗಿ, ಬೈಸಿಕಲ್ಲನ್ನು ಒಂದು ಮರದ ಮಗ್ಗುಲಿಗೆ ಬಿಟ್ಟು, ಆ ಮರವನ್ನು ಹಿಡಿದುಕೊಂಡು ಇಳಿಯುವ ಸಂಭ್ರಮದಲ್ಲಿ, ನನಗೂ ಮಗುವಿಗೂ ಸ್ವಲ್ಪ ಪೆಟ್ಟಾಯಿತು. ಅವನಿಗೆ 'ಪೆಪ್ಪರ್‌ಮೆಂಟ್' ಕೊಟ್ಟು ಯಾರಿಗೂ ಹೇಳಬೇಡ ಎಂದು ಸಮಾಧಾನಪಡಿಸಿದೆ. ನಮ್ಮ ಜೋಡಿದಾರರ ಸಮಾಚಾರ ಹಾಗಾಯಿತು. ಕುದುರೆಯಿಂದ ಇಳಿಯಬೇಕು. ಆದರೆ ಮಗ್ಗುಲಲ್ಲಿ ಯಾರೂ ಇಲ್ಲ. ಆದದ್ದಾಗಲಿ ಎಂದು 'ರಿಕಾಪಿ'ನ ಮೇಲೆ ತಮ್ಮ ಭಾರವನ್ನೆಲ್ಲಾ ಬಿಟ್ಟು, ಇಳಿಯುವುದಕ್ಕೆ ಸವರಿಸಿದ ಕೂಡಲೆ ಒಂದೇ ಕಡೆಗೆ ಬಂದ ಇವರ ಮಿತಿಮೀರಿದ ಭಾರದಿಂದ 'ರಿಕಾಪು' ಕಿತ್ತುಹೋಯಿತು. ಇವರ ಒಂದು ಕಾಲು 'ರಿಕಾಪಿ'ನಲ್ಲಿ ಸಿಕ್ಕಿಕೊಂಡಿತು. ದೇಹವೆಲ್ಲಾ ನೆಲದ ಮೇಲೆ ಬಿದ್ದುಹೋಯಿತು. ಕುದುರೆಯು ಎಳೆಯುತ್ತಾ ೪ ಹೆಜ್ಜೆ ಮುಂದಿಟ್ಟಿತು. ಆದರೆ ಬಡ ಕುದುರೆ, ಈ ರೋಣಗಲ್ಲನ್ನು ಎಳೆಯಲಾರದೆ ಏದುತ್ತ ಅಲ್ಲಿಯೇ ನಿಂತುಬಿಟ್ಟಿತು. ಪಾಪ, ಜೋಡಿದಾರರಿಗೆ ಸ್ವಲ್ಪ ಏಟು ತಗಲಿತು. ಮಂಡಿಯು ಸುಲಿದು ಹೋಗಿ ರಕ್ತವು ಸೋರುತ್ತಿದ್ದಿತು. ಹೆರಳೆಕಾಯಿ ಗಾತ್ರದ ಅವರ ಮೂಗು, ತೆಂಗಿನಕಾಯಿಯಂತೆ ಬುರು ಬುರು ಊದಿಬಿಟ್ಟಿತು. ಆ ಊದುವಿಕೆಯಿಂದ ಮುಖದಲ್ಲಿ ಕಣ್ಣು ತುಟಿ ಮೂಗು ಬಾಯಿ ಯಾವುದೂ ಗೊತ್ತಾಗದೆ, ಎಲ್ಲಾ ಒಂದೇ ಸಮನಾಗಿದ್ದುವು. ಮಗ್ಗಲು ಗದ್ದೆಯಲ್ಲಿ ನಮ್ಮ ಇಬ್ಬರು ಸ್ನೇಹಿತರು, ಆಳುಗಳ ಕೈಲಿ ಕೆಲಸವನ್ನು ಮಾಡಿಸುತ್ತಿದ್ದವರು, ಜೋಡಿದಾರರು ನೆಲಕ್ಕೆ ಉರುಳಿದುದನ್ನು ಕಂಡು ಓಡಿಬಂದು ಅವರನ್ನು ಎತ್ತಿಕೊಂಡು ಗಾಯವನ್ನು ತೊಳೆದು ಉಪಚಾರಮಾಡಲು ನದಿಯ ತೀರಕ್ಕೆ ಹೊರಟರು. ಆದರೆ ಆ ಪುಣ್ಯಾತ್ಮನನ್ನು ಎರಡು ಜನ ಸುಲಭವಾಗಿ ಎತ್ತುವುದಕ್ಕಾಗುತ್ತದೆಯೆ? ಎಷ್ಟು ತಡೆದರೂ ಸಾಧ್ಯವಾಗದೆ ಇಬ್ಬರಿಗೂ ನಗು ಬಂದುಬಿಟ್ಟಿತು.

ಹೊಳೆಯ ತೀರಕ್ಕೆ ಕರೆದುಕೊಂಡು ಹೋಗಿ ಮಂಡಿಯ ಗಾಯವನ್ನು ತೊಳೆಯುವಾಗಲೂ ಇವರಿಗೆ ಅಸಾಧ್ಯವಾದ ನಗು; ಜೋಡಿದಾರರು ಊದಿದ ಮೊಖದೊಳಗಿಂದ ಎಲ್ಲೊ ಗವಿಯೊಳಗೆ ಮಾತನಾಡಿದಂತೆ ಮಾತನಾಡುವಾಗ ಇವರಿಗೆ ತಡೆಯಲಾರದ ನಗು ಬಂದುಬಿಟ್ಟಿತು. ನಗೆಯ ಕಾರಣಕ್ಕಾಗಿ ಜೋಡಿದಾರರಿಗೆ ಏನೋ ಒಂದು ಸಬೂಬು ಹೇಳಿ, ಮನೆಗೆ ಅವರನ್ನು ಕರೆದುಕೊಂಡು ಬಂದರು.

ಜೋಡಿದಾರರು ಕುದುರೆಯಿಂದ ಬಿದ್ದ ಸಮಾಚಾರವನ್ನು ಕೇಳಿ ನನಗೆ ಆಶ್ಚರವಾಯಿತು. ಬಾಲ್ಯದಲ್ಲಿ ಅವರು ಲಗಾಮು ಕೂಡ ಇಲ್ಲದೆ ಎಂತಹ ದೊಡ್ಡ ಕುದುರೆಯನ್ನಾದರೂ ಸವಾರಿಮಾಡುತ್ತಿದ್ದುದು ನನಗೆ ಗೊತ್ತಿದ್ದಿತು. ನೋಡೋಣವೆಂದು ಅವರ ಮನೆಗೆ ಹೋದೆ. ಆಗಲೂ ಈ ನಗುವಿನ ಅವಾಂತರ. ಅವರ ಮುಖವು ಗಾಳಿ ತುಂಬಿದ 'ಪುಟ್‍ಬಾಲ್ ಬ್ಲಾಡರಿ'ನಂತೆ ಇದ್ದಿತು. ಆ 'ಬ್ಲಾಡರಿನ' ಯಾವುದೋ ಕಡೆಯಿಂದ ಚಿಕ್ಕ ತೂತಿನಿಂದ ಗಾಳಿ ಹೊರಡುವಂತೆ, ಒಂದು ಧ್ವನಿಯು ಹೊರಡುತ್ತಲಿದ್ದಿತು. ಆ ಮುಖವನ್ನು ನೋಡಿ ನನಗೆ ನಗು ಬಂದುಬಿಟ್ಟಿತು. ನಗುವನ್ನು ತಡೆಯಲಾರದೆ ಹೊರಕ್ಕೆ ಬಂದುಬಿಟ್ಟೆ.