ಹಿಂದಳದನೊಂದು ಮಾಡಿ ಸಂದು ಸಂಶಯವಿಲ್ಲದೆ ನಿಂದ ನೆಲವ ತೋರುವ ಬಸವಣ್ಣನ ಪರಿಯ ನೋಡಾ ಮುಂದಿರ್ದ ಕೂಸಿನ ಸಂದ ಸರ ಒಂದಾಗಿ ಎರಡೊಂದಾದ ಘನಮಹಿಮ ಬಸವಣ್ಣನನೇನೆನ್ನಲಿ ? ಮೂರು ಮೂರನೆ ಮಾಡಿ
ಆರು ಆರನೆ ತಂದು
ಬೇರೆ ಮತ್ತಿಲ್ಲದ ಬಸವಣ್ಣನ ಪರಿಯ ನೋಡಾ! ಹತ್ತು ಹತ್ತನೆ ಕೂಡಿ ಧಾತು ಧಾತುವ ಬೆರೆಸಿ ಕಳೆಕಳೆಗಳೊಂದಾದ ಬಸವಣ್ಣನ ಪರಿಯ ನೋಡಾ! ಕೃತಯುಗ ತ್ರೇತಾಯುಗ ದ್ವಾಪರಯುಗವಿಲ್ಲದಂದು ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಧಲವಿಲ್ಲದಂದು; ಇಂತೀ ತ್ರಿವಿಧವು ಬಸವಣ್ಣನ ಕೈಯಲ್ಲಿ ನಿಕ್ಷೇಪವಯ್ಯಾ! ಅಂದು ಲಿಂಗದಲಿ ಅನಿಮಿಷ
ಇಂದು ಜಂಗಮದಲಿ ಅನಿಮಿಷ ಬಸವಣ್ಣ ಅಂದಾದ ಗುರುವೆಂದರಿದೆನಾಗಿ ಗುಹೇಶ್ವರಾ ಅಮಳೋಕ್ಯ ಸಂಗನಬಸವಿದೇವನ ಶ್ರೀಪಾದಕ್ಕೆ ಶರಣು ಶರಣು.