ಹೊಸ ಬೆಳಕು ಮತ್ತು ಇತರ ಕಥೆಗಳು/ಮತಾಂತರ

ವಿಕಿಸೋರ್ಸ್ದಿಂದ

ಹೊಸ ಬೆಳಕು ಮತ್ತು ಇತರ ಕಥೆಗಳು  (೧೯೫೨)  by ಶ್ರೀ ವೆ. ಮುಂ. ಜೋಶಿ
ಮತಾಂತರ

ಮತಾಂತರ.

ನಾನು ವಕೀಲಿ ವೃತ್ತಿಯನ್ನು ಪ್ರಾರಂಭಿಸಿದ ದಿನದಿಂದ ಇಂದಿನವರೆಗೆ ಸೋಲಿನ ಅನುಭವವೇ ಬಂದಿರಲಿಲ್ಲ. ಆದರೆ ಇಂದು ಮಾತ್ರ ಸೋಲು ಬರಬಹುದೆಂಬ ಚಿನ್ಹ ಕಾಣತೊಡಗಿತ್ತು. ಕೊನೆಯವರೆಗೆ ಅಜಿಂಕ್ಯನೆನಿಸಿಕೊಳ್ಳುವದು ಕಷ್ಟ ಸಾಧ್ಯವಾದ ಮಾತೇ ಸರಿ.

ಅಂದು ಕೋರ್ಟಿನಲ್ಲಿ ಹೆಚ್ಚು ಕಾಲ ನಿಲ್ಲುವದಕ್ಕೆ ಮನಸ್ಸೇ ಆಗಲಿಲ್ಲ. ಬಾರ್ ರೂಮ್, ಬ್ರಿಜ್ ಮುಂತಾದವುಗಳ ಗೊಂದಲಕ್ಕೆ ಬೀಳದೇ ನೇರವಾಗಿ ಮನೆಯ ಹಾದಿಯನ್ನು ಹಿಡಿದೆ. ಮನೆಗೆ ಬಂದಾಕ್ಷಣವೇ, ನನ್ನವಳು ಸಿಡಿಮಿಡಿಗೊಂಡದ್ದನ್ನು ಗಮನಿಸಿದೆ. ಮೊದಲೇ ನನ್ನ ಮನಸ್ಸು ಅಸ್ಯವ್ಯಸ್ತವಾಗಿತ್ತು. ಅದರ ಕಾರಣದಿಂದಲೋ ಏನೋ? ಹೆಂಡತಿಯ ಕೋಪಮುದ್ರೆಯತ್ತ ಸ್ವಲ್ಪ ಉದಾಸೀನತೆಯನ್ನು ತೋರಿಸುತ್ತಲೇ ಆರಾಮ ಖುರ್ಚಿಯಲ್ಲಿ ಒರಗಿದೆ. ಬದಿಯ ಕೋಣೆಯಲ್ಲಿಯೇ ನನ್ನ ಭಾವ ಅಭ್ಯಾಸ ನಡೆಸಿದ್ದ. ಅವನು ಓದುತ್ತಿದ್ದ ಪದ್ಯದ ಕೆಲ ಸಾಲುಗಳು ನನಗೆ ಕೇಳಿಸತೊಡಗಿದವು.

"ಗುಣವಂತರ್ ಪಾಲುಂಡು ಮೇಲು೦ಬರೇ?
ರಂಭಾ ನೃತ್ಯದಿ ಡೊಂಬರೇ..."

ಪರೀಕ್ಷೆಯಲ್ಲಿ ನಾಪಾಸಾದ ವಿದ್ಯಾರ್ಥಿಗೆ ಮತ್ತೆ ಮತ್ತೆ ಅವನನ್ನು ಅದಕ್ಕಾಗಿ ಹೀಯಾಳಿಸಿದರೆ, ಅವನು ತಾನು ಅನುತ್ತೀರ್ಣನಾದ ದುಃಖವನ್ನು ಮರೆತು, ತನ್ನನ್ನು ಹೀಯಾಳಿಸುವವರ ಮೇಲೆ ಹರಿಹಾಯುತ್ತಾನೆ. ಹಾಗೇ, ನನ್ನ ಭಾವನ ಬಾಯಿಂದ ಬಂದ ಸೋಮೇಶ್ವರ ಶತಕದ ವೇದ ವಾಕ್ಯಗಳು ನನ್ನ ಉದ್ವಿಗ್ನ ಮನಸ್ಸನ್ನು ಕೆರಳಿಸಿತು. ಒಂದು ಗುಡುಗನ್ನು ಹಾಕಿ ಅವನನ್ನು ಬೇರೆ ರೂಮಿಗೆ ಅಟ್ಟಿದೆ. ಸಧ್ಯ ಅವನನ್ನು ಹೊರದೂಡಿದರೂ ಅವೇ ಶಬ್ದಗಳು ನನ್ನ ಕಿವಿಯಲ್ಲಿ ಪ್ರತಿಧ್ವನಿಯಾಗತೊಡಗಿದವು. ಘ೦ಟಿ ಹೊಡೆದ ಮೇಲೂ ಎಷ್ಟೋ ವೇಳೆಯವರೆಗೆ ಅದರ ಝಂಕಾರ ಕೇಳಬರುತ್ತದೆ. ಹಾಗೇ ಅದೇ ವಾಕ್ಯದ ಝಂಕಾರ ಪುನಃ ಪುನಃ ಕೇಳತೊಡಗಿತು.

"ಗುಣಯುತರ್ ಪಾಲುಂಡು ಮೇಲು೦ಬರೇ ?
ರಂಭಾ ನೃತ್ಯದಿ ಡೊಂಬರೇ?"

ನಾನು ನನ್ನಷ್ಟಕ್ಕೆ ನಾನೇ ನಕ್ಕೆ. ಹಳೆಯ ನಾಣ್ಣುಡಿಗಳು ಜನತೆಯ ಸಿಹಿ ಕಹಿ ಅನುಭವದ ಸಾರವಾಗಿದ್ದರೂ, ಅವುಗಳ ಅರ್ಥ ನಿತ್ಯನೂತನವೆಂದು ಈಗ ಒಪ್ಪಲು ಹಿಂಜರಿಯತೊಡಗಿತು. ಉದಾಹರಣಕ್ಕೆ ದೂರ ಹೋಗಲೇಬೇಕಿಲ್ಲ. ಕೋರ್ಟಿನಲ್ಲಿ ಇನ್ನು ಬರಬಹುದಾದ ಕೇಸು--

––ದೇಶಪಾಂಡೆ ನನ್ನ ಬಾಲಮಿತ್ರ. ತನ್ನ ಸುರೂಪ ಸುಂದರಿಯಾದ ಹೆಂಡತಿಯನ್ನು ಬಿಟ್ಟು, ಆ ಬೇರೆ ಹುಡುಗಿಯ ಜತೆಯಲ್ಲಿ ಪ್ರಣಯ ಬೆಳಿಸಬೇಕೇ? ಆ ಬೇರೆ ಹುಡಿಗೆ ಮತ್ತು ಅವನ ಹೆಂಡತಿ ಇಬ್ಬರನ್ನೂ ಸೌಂದರ್ಯ ಸ್ಪರ್ಧೆಗಾಗಿ ನಿಲ್ಲಿಸಿದರೆ--ರಂಭೆ ಡೊಂಬರು ಹೆಣ್ಣುಗಳನ್ನು ಸ್ಪರ್ಧೆಗೆ ನಿಲ್ಲಿಸಿದಷ್ಟು ಹಾಸ್ಯಾಸ್ಪದ.

ಹೀಗಿದ್ದೂ ಸೋಮೇಶ್ವರ "ಗುಣಯುತರ್ ಪಾಲುಂಡು ಮೇಲುಂಬರೆ ರಂಭಾ ನೃತ್ಯದಿ ಡೊಂಬರೇ...” ಎಂದು ಹೇಳುತ್ತಾನೆ.

ನನ್ನ ವಿಚಾರಸರಣಿ ಇನ್ನೂ ನಡೆಯುತ್ತಿರುವಾಗಲೇ, ಸೂರ್ಯ ಮುಳುಗಿ ಸಂಧಿ ಪ್ರಕಾಶವೂ ಮರೆಯಾಗತೊಡಗಿತ್ತು. ಮನೆಯ ಆಳು ಬಂದು ನಾನು ಕತ್ತಲಲ್ಲಿಯೇ ಕೂತದ್ದನ್ನು ಗಮನಿಸಿ ವಿದ್ಯುತ್ ದೀಪದ ಬಿರಡೆಯನ್ನು ಅದುಮಿದ. ನನ್ನ ಎದುರಿನಲ್ಲಿ ಇಳಿಬಿದ್ದ ದೀಪ ಪ್ರಕಾಶಮಾನವಾಯಿತು.

ದೀಪ ಹತ್ತಿದಾಕ್ಷಣ ಕೋಣೆಯ ಕತ್ತಲೆ ಮಾಯವಾಯಿತು. ನನ್ನ ವಿಚಾರಗಳ ತಾಕಲಾಟಗಳಿಗೂ ಹೊಸ ಬೆಳಕು ದೊರೆಯಿತು. ಆ ದೀಪ ಜೋತಾಡುತ್ತಿತ್ತು. ಆ ದೀಪದ ಕೆಳಗೆ..."

"...ಕೆಳಗೆ ಕತ್ತಲು" ಎಂದು ಸಂಪ್ರದಾಯ ಶರಣರ ತುಟಿ ಉತ್ತರ ಹೇಳಬಹುದಿತ್ತು.

ಆದರೆ ದೀಪದ ಕೆಳಗೆ ಕತ್ತಲವಿರಲಿಲ್ಲ. ತುಂಬ ಬೆಳಕು ಬಿದ್ದಿತ್ತು.

"ದೀಪದ ಕೆಳಗೆ ಕತ್ತಲು" ಈ ಹಳೆಯ ನಾಣ್ಣುಡಿ ವಿಜ್ಞಾನ ಯುಗದಲ್ಲಿ ಹಳೆದಾಗಿ ಹೋಯಿತು. ಅದರ ನಿತ್ಯನೂತನತೆ ಧ್ವಂಸವಾಯಿತು.

ಹಾಗಾದರೆ ದೇಶಪಾಂಡೆಯ ಅಪರಾಧ ……? ಆ ಅಪರಾಧವೂ ಈ ದ್ವಿಭಾರ್ಯಾ ಪ್ರತಿಬಂಧಕ ಕಾಯಿದೆಯಲ್ಲಿ ಕ್ಷಮ್ಯವಾಗಬಲ್ಲದು ಆದರೆ...?

ನನ್ನ “ಆದರೆ” ಶಬ್ದ ಮುಗಿಯುವ ಮೊದಲೇ ನನ್ನ ಹೆಂಡತಿ ನನ್ನ ಎದುರು ಬಂದು ನಿಂತಳು. ಅವಳು ಬಂದು ನಿಂತ ರೀತಿಯನ್ನು ನೋಡಿದರೆ "ಹೆಂಡತಿ ! ಹೆಂಡತಿ ” ಎಂದು ಹಂಬಲಿಸುವ ಬ್ರಹ್ಮಚಾರಿಗಳ ಬಳಗಕ್ಕೆ ನಾನೂ ಒಬ್ಬನು ಸೇರಿದ್ದರೆ ಒಳಿತಿತ್ತು ಎಂದೆನಿಸಿತು.

"Victories Garland is better than victory" ಎಂಬ ಆಂಗ್ಲನುಡಿ ನೆನಪಿಗೆ ಬಂತು. "ಆದರೆ" ಶಬ್ದ ಮತ್ತೆ ಮುಂದೆ ನಿಂತಿತು. "ಖುರ್ಚಿಯ ಮೇಲೆ ಕೂಡು" ಎಂದು ಹೇಳಿದೆ. ಅವಳು ಕೂತಳೇನೋ ನಿಜ. ಕೂಡ್ರುವಾಗ ಶಾಂತಳಾಗಿಯೇ ಇದ್ದಳು. ಆದರೆ ಆ ಶಾಂತಿ ಶಾಶ್ವತ ಶಾಂತಿಯ ಸಂಜ್ಞೆಯಾಗಿರಲಿಲ್ಲ. ಬಿರುಗಾಳಿಯ ಪೂರ್ವದ ಭಯಾನಕ ಶಾಂತಿ……!

....ಒಮ್ಮೆಲೆ ಜ್ವಾಲಾಮುಖಿಯ ಸ್ಫೋಟವಾದಂತಾಯಿತು. ಗಂಡುಸರ ಜಾತಿನ ಇಷ್ಟು ಹರಾಮಖೋರ. ನಾಯಿಗಳನ್ನು ಎಷ್ಟು ಕಟ್ಟಿಹಾಕಿದರೇನು, ಮತ್ತೆ ಹೊರಗೆ ಅಡ್ಡಾಡೋದು. ನನ್ನ ಹೆಂಡತಿ ಒಂದುಸಲ ಇಡೀ ಪುರುಷ ಜಾತಿಯ ಉದ್ಧಾರ ಮಾಡಿದಳು. ನನಗೆ ತುಂಬಾ ಸಿಟ್ಟು ಬಂದಿತು. ಆದರೆ ಕೋರ್ಟಿನಲ್ಲಿ ಗಳಿಸಿದ ಕಹಿ ಅನುಭವ ನನ್ನನ್ನು ನಿಶ್ಯಕ್ತನನ್ನಾಗಿ ಮಾಡಿಬಿಟ್ಟಿತ್ತು. ಬರೀ ಸಿಟ್ಟಿನಿಂದೇನಾಗಬೇಕು. ಆದರೆ ಕೋರ್ಟಿನಲ್ಲಿಯ ತೀರ್ಮಾನಕ್ಕೆ ಕಾರ್ಯಕಾರಿ ಮಂಡಳದ ಸಂಬಂಧ ತಪ್ಪಿದರೆ ಆ ತೀರ್ಮಾನ ಕೃತಿಯಲ್ಲಿಳಿಯದು.

ನನ್ನ ಶಕ್ತಿ ಇಲ್ಲದ ಸಿಟ್ಟು.... ಬಿಳಿ ಪತಾಕೆಯನ್ನೇರಿಸಿದ ಪಡೆಯ ಸೇನಾಧಿಪತಿಯಂತೆ ಸೌಮ್ಯದಿಂದಲೇ ಕೇಳಿದೆ. "ಈ ಗಂಡಸರು ಯಾವ ಸ್ತ್ರೀ ರಾಜ್ಯದ ಮೇಲೆ ದಾಳಿ ಇಕ್ಕಿದ್ದಾರೆ?”

"ಇಲ್ಲಿ ನೋಡಿ" ಎಂದು ಸಿಟ್ಟಿನಿಂದಲೇ ಒಂದು ಫೋಸ್ಟಪಾಕೀಟನ್ನು ನನ್ನ ಮೈ ಮೇಲೆ ಎಸೆದಳು. ನನ್ನ ಹೆಂಡತಿಯ ಸಿಟ್ಟಿನ ಮುಖ್ಯ ಕಾರಣ ಈ ಕಾಗದವೇ ಎಂದು ನನಗೆ ತುಂಬಾ ಆನಂದವಾಯಿತು. ಜಾನಪದ ಕತೆಯಲ್ಲಿ ನಾಯಕನಿಗೆ ರಾಕ್ಷಸನ ಪ್ರಾಣ ಎಲ್ಲಿದೆಯೆಂಬುದು ಅವನಿಗೆ ತಿಳಿದಾಗ....

ಅಂತೂ ಪಾಕೀಟಿನೊಳಗಿಂದ ಕಾಗದವನ್ನು ಹೊರತೆಗೆದು ಓದತೊಡಗಿದೆ. ಪತ್ರದ ಮೊದಲು ಮೂರು ಸಾಲುಗಳನ್ನೋದಿದಾಕ್ಷಣವೇ ಆಶ್ಚರ್ಯದ ಬುಗ್ಗೆಯೊಡೆಯಿತು. ವಿಚಾರಸಾಮ್ಯಗಳು ಮನುಷ್ಯನಿಗೆ ವಿಲಕ್ಷಣ ಆಶ್ಚರ್ಯ, ಆನಂದ ತಂದೊಡ್ಡುತ್ತವೆ.

ಹೆಂಡತಿ ಸಿಟ್ಟಾದುದು ಅದಕ್ಕಾಗಿಯೇ? ಎಂದೆ. ಪತ್ರ ದೇಶಪಾಂಡೆಯವರ ಪತ್ನಿ ನನ್ನವಳಿಗೆ ಬರೆದಿದ್ದಳು. ಅದು ಒಂದು ಪತ್ರವನ್ನೋದುವದಕ್ಕಿಂತಲೂ ಜ್ವಾಲಾಮುಖಿಯ ಸ್ಫೋಟ ಎನ್ನಬಹುದಿತ್ತು. ಗತಿಗಾಣದವನಾಗಿ ಓದತೊಡಗಿದೆ.

"ನನ್ನ ಪ್ರಾಣದ ಗೆಳತಿ, ಕಮಲಾಗೆ--

ವಂದನೆಗಳು, ನನ್ನ ಇವರು, ತಮ್ಮ ಆಫೀಸಿನಲ್ಲಿಯ ಹುಡುಗಿಯ ಜತೆಯಲ್ಲಿ ಲಗ್ನವಾಗುವ ಸುದ್ದಿಯನ್ನು ನೀನು ಈಗಾಗಲೇ ವೃತ್ತಪತ್ರಿಕೆಯಲ್ಲಿ ಓದಿರಬಹುದು.

ನನ್ನ ಜೀವನದಲ್ಲಿಯ ಆನಂದ ಇಂದಿಗೆ, ಇಲ್ಲಿಗೇ ಮುಗಿದ೦ತಾಯ್ತು. ನಾನು ಮಾಡಿದ ಪಾಪವೇನೆಂಬುದೇ ನನಗೆ ತಿಳಿಯದು.

ಇವರಿಂದ ನನಗೆ ದುಡ್ಡು ಬೇಕಾಗಿರಲಿಲ್ಲ. ಯಾವದಕ್ಕೂ ನಾನು ತೊಂದರೆ ಕೊಡಲಿಲ್ಲ. 'ಬೇಕು' ಎಂದಾಗ ಬೇಕಾದಷ್ಟನ್ನು ಕೊಡಲು, ನನ್ನ ತಂದೆ ಸಮರ್ಥರಿದ್ದರು, ಇದ್ದಾರೆ. ಇವರ ದುಡ್ಡಿನ ಆಸೆ ನನಗಿರಲಿಲ್ಲ.

ಬೇರೆಯವಳನ್ನು ಮದುವೆಯಾಗಿ ನನ್ನನ್ನು ಹಿಂಸಿಸಬೇಕೆಂಮ ಅವರು ಲೆಕ್ಕ ಹಾಕಿರಬಹುದು. ಆದರೆ?

ಆದರೆ ನಾನು ಮಲತಾಯಿಯ ಹಾಲನ್ನು ಕುಡಿದು ಬೆಳೆದಿಲ್ಲ. ಇನ್ನು ಸ್ತ್ರೀಯರು ಬಂಡು ಹೂಡಲೇ ಬೇಕು. ಪುಂಡರಂತೆ ಆಳುವ ಇಂಥ ಗಂಡಂದಿರನ್ನು ದಾರಿಗೆ ತರುವದಕ್ಕೆ––

ಇರಲಿ, ವಿಶೇಷ ಎಂದರೆ ನನ್ನ ತಂದೆ ಅವರ ಮೇಲೆ ಕೇಸನ್ನು ಹಾಕಿದ್ದಾರೆ. ದ್ವಿಭಾರ್ಯಾ ಪ್ರತಿಬಂಧಕ ಕಾಯ್ದೆಯ ಕೆಳಗೆ ಅವರು ಆರೋಪಿಗಳು. ನನ್ನ ತಂದೆಯವರು ಆ ಕೇಸನ್ನು ನಿನ್ನ ಯಜಮಾನರಿಗೆ ಒಪ್ಪಿಸಿ ದ್ದಾರಂತೆ. ನಿನ್ನ ಯಜಮಾನರು ಧಾರವಾಡದಲ್ಲಿ ಗಣ್ಯ ವಕೀಲರೆಂದು ಹೆಸರಾಗಿದ್ದಾರೆ. ಅವರಿಗೆ ಈ ಕೇಸಿನಲ್ಲಿ ಹೆಚ್ಚು ಜಾಗರೂಕತೆಯನ್ನು ವಹಿಸಲಿಕ್ಕೆ ಹೇಳು. ಇದು ನನ್ನೊಬ್ಬಳದೇ ಪ್ರಶ್ನೆ ಅಲ್ಲ. ಸ್ತ್ರೀ ಜಾತಿಯ ಮಾನದ ಪ್ರಶ್ನೆಯಾಗಿದೆ.

ನಾರಿಯನ್ನು ಬರೀ ಭೋಗದ ವಸ್ತುವೆಂದು ತಿಳಿದ ಈ ನೀಚ ಗಂಡಂದಿರಿಗೆ ನಾವು ಕೇವಲ ಭೋಗದ ವಸ್ತುವಲ್ಲ. ಕೆಣಕಿದಾಗ ವಿಷಕಾರುವ ಘಟಸರ್ಪವೆಂಬುದನ್ನು ತೋರಿಸಬೇಕಾಗಿದೆ.

ಈ ಕೋರ್ಟಿನಲ್ಲಿ ಅವರಿಗೆ ಜೈಲಾದರೆ ನನ್ನ ತಳಮಳಿಸುವ ಜೀವಕ್ಕೆ ಅತ್ಯಾನಂದವಾಗುತ್ತದೆ. ಆಗಲೇ ನನಗೆ ಶಾಂತಿ–ಶಾಂತಿ–ಶಾಂತಿ. ಆಗಲೇ ನನಗೆ ಸಮಾಧಾನ, ಸಮಾಧಾನ.

ನಿನ್ನ
ನಲಿನಿ ದೇಶಪಾಂಡೆ.


ಪತ್ರವನ್ನು ಓದಿ ಮುಗಿಸಿದಾಗ ನನ್ನ ಮೈಯೆಲ್ಲಾ ಬೆವೆತಿತು. ಪತ್ರದಲ್ಲಿಯ ಸೇಡಿನ ಕಾಡ್ಗಿಚ್ಚಿಗಾಗಿ, ನಾನು ಆಗ ಕೋರ್ಟಿನಲ್ಲಿ ಹಿಡಿದ ಕೇಸು ನಲಿನಿಯ ತಂದೆಯವರದೇ ಆಗಿತ್ತು. ಅವಳ ತಂದೆಯೂ ಸಾಮಾನ್ಯ ಮನೆತನಕ್ಕೆ ಸೇರಿದವರಲ್ಲ, ತುಂಬಾ ಸಿರಿವಂತರು. ಮೇಲಾಗಿ ಒಂದು ತಾಲ್ಲೂಕಿನ ಮಾಮಲೇದಾರರು. ಅದಕ್ಕೆಯೇ ನಾನು ಅವರ ಖಟ್ಟೆಯನ್ನು ಹಿಡಿಯುವದಕ್ಕೆ ಮನಸ್ಸು ಮಾಡಿದ್ದೆ. ಹಿಡಿದೂ ಬಿಟ್ಟಿದ್ದೆ. ಕೊರತೆಯ ದಿನಗಳಲ್ಲಿ ನನಗೆ ಈ ಕೇಸು ಒರತೆಯಾಗಿಯೇ ಕಂಡಿತ್ತು. ನನಗೆ ಆ ಬಡಪಾಯಿಯ ಗೋಳು ಅಷ್ಟಕ್ಕಷ್ಟೇ ಆಗಿತ್ತು.

––ಡಾಕ್ಟರರು ತಮ್ಮ ಕರ್ತವ್ಯ ನೆರವೇರಿಸುತ್ತಾರೆ. ರೋಗಿ ಸತ್ತರೆ, ಅವರ ಕಣ್ಣಲ್ಲಿ ನೀರು ಬರಬಹುದೇ?

ಆದರೆ ಈ ಪತ್ರ ಓದಿದ ನಂತರ ನನ್ನ ಭಾವವೇ ಬದಲಾಯಿತು. ಯಾವದೋ ಒಳಗುದಿ ನನ್ನ ಎದೆಯನ್ನು ಕೊರೆಯತೊಡಗಿತ್ತು. ನಾನಾರಿಗೂ ಅಂಜದಿದ್ದರೂ ಹೆಣ್ಣನ್ನು ನೋಯಿಸುವ ಗೋಜಿಗೆ ನಾನು ಹೋಗುತ್ತಿರಲಿಲ್ಲ. ಆದರೆ ಈ ಹೆಣ್ಣು ಬರೆದ ಪತ್ರ ನನ್ನ ಹೃದಯಚದ ಕಳವಳಗಳ ಮಿಶ್ರಣದ ಹುಡಿಯನ್ನೆಬ್ಬಿಸಿತು.

––ಖಟ್ಟೆ ಯನ್ನೇನೋ ನಾನು ಹುಮ್ಮಸದಿಂದ ಹಿಡಿದಿದ್ದೆ. ಆದರೆ,–– ಅವರು ತಂದ ಸುದ್ದಿಯಿಂದ ನನಗೆ ಸೋಲಿನ ಭಯ ಪ್ರಾರಂಭವಾಯಿತು. ನಿನ್ನಿನ ಪತ್ರಿಕೆಯಲ್ಲಿ ಆ ಸುದ್ದಿಯೂ ಪ್ರಕಟವಾಗಿತ್ತು,

"ಮಾಧ್ವರು ಮಹಮ್ಮದೀಯರಾದರು" ದಪ್ಪಕ್ಷರದ ಆ ಸುದ್ದಿಯಿಂದ ನನಗೆ ಗೆಲುವಿನ ಆಶೆ ಕಡಿಮೆಯಾಗತೊಡಗಿತು. ದೇಶಪಾಂಡೆ ಸರ್ವಸಾಧಾರಣವಾಗಿ 'ದ್ವಿಭಾರ್ಯಾ ಪ್ರತಿಬಂಧಕ' ಕಾಯ್ದೆಯ ಕಟಾಕ್ಷದೊಳಗಿಂದ ಪಾರಾಗಲು........?

ಈ ನನ್ನ ತಲೆ ತುರಿಸಿಕೊಳ್ಳುವ ಆಟ ನನ್ನ ಹೆಂಡತಿಗೆ ಸಹನವಾಗಲಿಲ್ಲವೇನೋ? ಒಮ್ಮೆಲೇ ಕೇಳಿದಳು.

"ನಲಿನಿ ಬರೆದಂತೆ ಜಹಗೀರದಾರರು ಈ ಕೇಸನ್ನು ನಿಮಗೆ ಒಪ್ಪಿಸಿದ್ದಾರೆಯೇ ?
"ಹೌದು."
"ಈಗ ಕೋರ್ಟಿನಲ್ಲಿ ಕೇಸು ನಡೆದಿದೆಯೇ?"
"ಇಲ್ಲ-ನಾಳಿನಿಂದ ಪ್ರಾರಂಭ."
"ನೀವು ಮಾತಿನಲ್ಲಿ ಉದಾಸೀನತೆ ತೋರಿಸ್ತಾ ಇದೀರಿ."
"ಈವರೆಗೆ ನನಗೆ ಸೋಲೆಂಬುದೇ ಗೊತ್ತಾಗಿರಲಿಲ್ಲ. ಆದರೆ ಇದರಲ್ಲಿ?"
"ಸಾಕು, ನೀವೆಲ್ಲಾ ಗಂಡುಸರು ಹೀಗೆನೆ.... ಅವನು ನಿಮ್ಮ ಬಾಲಮಿತ್ರ ಅದಕ್ಕೆ....?"

"ಅವನು ನನ್ನ ಮಿತ್ರ ನಿಜ, ಅವನ ಹೆಂಡತಿ ನಿನ್ನ ಗೆಳತಿ. ಆದರೆ ಕೋರ್ಟಿನಲ್ಲಿ ನಾನು ವಕೀಲ. ಕರ್ತವ್ಯಶೀಲ ಡಾಕ್ಟರ, ಶತ್ರುವಿಗೆ ಜ್ವರ ಬಂದಾಗ ಔಷಧದಲ್ಲಿ ವಿಷ ಬೆರಿಸಿ ಕೊಲ್ಲಬಹುದೇ?"

"ನನಗೆ ನಿಮ್ಮ ವಕೀಲಿ ಮಾತು ಒಂದೂ ಗೊತ್ತಾಗೋದಿಲ್ಲಾ. ಏನೇ ಆಗಲಿ. ಆ ನೀಚನಿಗೆ ಒಂದು ವರ್ಷಾದರೂ ಜೈಲಿಗೆ ಕಳಿಸಿ."

ಅನವಶ್ಯಕ ಮಾತುಗಳನ್ನು ಬೆಳಿಸುವದಕ್ಕಿಂತಲೂ ಪೂರ್ಣವಿರಾವನ್ನಿಡುವುದೇ ಲೇಸೆಂದು "ಹೂಂ” ಎಂದು ಹೇಳಿ ಎದ್ದುಬಿಟ್ಟೆ.

ಮರುದಿನ ಕೋರ್ಟಿಗೆ ಹೊರಡುವವನಿದ್ದೆ. ಊಟ ಮಾಡಿ ಮನೆಯಿಂದ ಹೊರಬೀಳುವದರಲ್ಲಿದ್ದೆ. ಆಗಲೇ ಪೋಸ್ಟಮನ್ ನನ್ನ ಕೈಗೆ ದಪ್ಪವಾದ ಪಾಕೀಟನ್ನು ಕೊಟ್ಟು ನಡೆದ. ನಾನು ಇಂಥ ದೊಡ್ಡ ವಕೀಲನಾವರೂ ಶುಭಾಶುಭ ಫಲಗಳನ್ನು ನೋಡುವ ನನ್ನ ಸಂಪ್ರದಾಯತೆ ನನ್ನಲ್ಲಿ ಹಾಗೆಯೇ ಉಳಿದಿತ್ತು. ಬಂದ ಪತ್ರದಿಂದ ನನಗೆ ಶುಭವೇ ಅಶುಭವೇ ಎಂದ. ವಿಚಾರಿಸುತ್ತ, ಸ್ವಲ್ಪ ಅಧೀರತೆಯಿಂದಲೇ ಪಾಕೀಟನ್ನು ಒಡೆದು ಓದತೊಡಗಿದೆ.

ವಿತ್ರವರ್ಯನಿಗೆ--

ದೇಶಪಾಂಡೆಯ ಅನಂತ ನಂದನೆಗಳು. ತರುವಾಯ ಇದೇ ಪತ್ರವನ್ನು ನಾಲೈದು ದಿನಗಳಿಂದ ಬರೆಯುತ್ತಿದ್ದೇನೆ. ಬರೆದು ಎಷ್ಟೋ ಸಲ ಪೂರ್ಣವಾಗಿ ಮುಗಿಸಿದೆ. ಆದರೂ ಅದನ್ನು ಪೋಷ್ಟಿನ ಡಬ್ಬಿಯನ್ನು ಕಾಣಿಸಲಾಗಲಿಲ್ಲ. ಎಷ್ಟು ಪತ್ರಗಳನ್ನು ಹಾಗೆ ಹರಿದು ಒಗೆದೆನೋ ತಿಳಿಯದು. ಆದರೆ ಈಗ ಯಾವುದೋ ಒಂದು ಧೈರ್ಯದಿಂದ ಈ ಪತ್ರ ಬರೆಯುತ್ತಿದ್ದೇನೆ. ಎದುರು ನಿಂತು ನಾನು ನನ್ನ ಕರುಣ ಕಥೆಯನ್ನು ಹೇಳಲೆತ್ನಿಸಿದ್ದರೆ ನೀನು ನನ್ನನ್ನು ಮಾತನಾಡಿಸಿಯೇಗೊಡುತ್ತಿರಲಿಲ್ಲ. ಇಡೀ ಸಮಾಜ ನನ್ನನ್ನು ಇಂದು ಬಯ್ಯುವಂತೆ, ನೀನೂ ನನ್ನ ಮೇಲೆ ಬೈಗಳ ಸುರಿಮಳೆಯನ್ನು ಸರಿಸುತ್ತಿದ್ದೆ. ಆದರೆ ಹೃದಯದ ಕಪಾಟವನ್ನು ತೆರೆದಿಡುವದಕ್ಕೆ ಪತ್ರವೊಂದೇ ಶುದ್ಧ ಸಾಧನ.

--ನಾನು ನೀನೂ ಕೂಡಿಯೇ ಓದಿದೆವು, ಆಡಿದೆವು. ನಾನು ಪೋಲಿಸ ಖಾತೆಯನ್ನು ಸೇರಿದೆ. ನೀನು ವಕೀಲನಾದೆ. ಮುಂದೆ ನಮ್ಮಿಬ್ಬರ ಮದುವೆಗಳೂ ಆದವು. ನನ್ನ ಮದುವೆಯಾದ ದಿನದಿಂದ ತೊಂದರೆಯ ಕಾಲ ಪ್ರಾರಂಭವಾಯಿತು.

'––ಕಾಮಪ್ರಕೃತಿ, ಪ್ರೇಮ ಸಂಸ್ಕೃತಿ' ಎಂದು ಬಲ್ಲವರು ಹೇಳುತ್ತಾರೆ. ನನ್ನ ಸೌಭಾಗ್ಯವೋ ದುರ್ಭಾಗ್ಯವೋ ನನ್ನ ಹೆಂಡತಿಯಾಗಿ ಬಂದವಳು, ಸಿರಿವಂತರ ಮನೆಯಲ್ಲಿ ಜನ್ಮವೆತ್ತಿದ್ದಳು. ತನ್ನ ಸಿರಿತನ, ತನ್ನ ದೊಡ್ಡಸ್ತಿಕೆಯಲ್ಲಿಯೇ ಅವಳು ಸದಾಕಾಲ ಕಳೆಯಹತ್ತಿದ್ದಳು. ಕಾಮಪ್ರಕೃತಿ ಎಂದು ಹೇಳಿದ್ದಾರಷ್ಟೇ. ಅದೊಂದು ಸಹಜ ಪ್ರಕೃತಿ ಸ್ವಭಾವ. ಹಸಿವಾದಾಗ ಊಟ ಅನಿವಾರ್ಯ. ಆ ಊಟದಲ್ಲಿ ಆನಂದ ಸೊಗಸುಗಳಿದ್ದರೆ ಅದಕ್ಕೆ ರುಚಿ ಹೆಚ್ಚು. ನನ್ನ ಮನೆಯಲ್ಲಿ ಆಳುಹೋಳುಗಳಿಗೆ ಕಡಿಮೆ ಇಲ್ಲ. ಆದರೆ ನನ್ನ ಎಲ್ಲ ಕೆಲಸಗಳನ್ನು ಆಳುಹೋಳುಗಳೇ ಮಾಡಿದರೆ? ಕೆಲಸಕ್ಕೆ ತೊಂದರೆಯಾಗುತ್ತಿರಲಿಲ್ಲ ನಿಜ, ಆದರೆ ಮನಸ್ಸಿಗೆ ಸಮಾಧಾನ ದೊರೆಯುತ್ತಿರಲಿಲ್ಲ. ನನ್ನ ಎದುರುಮನೆಯಲ್ಲಿಯ ಗೃಹಸ್ಥ ಆಫೀಸಿನಿಂದ ಮರಳಿ ಬಂದಾಕ್ಷಣ, ಅವನ ಹೆಂಡತಿ ಮುಗುಳುನಗೆ ನಕ್ಕು ಸ್ವಾಗತಿಸಿ, ನಾಲ್ಕು ನಗು ಮಾತುಗಳನ್ನಾಡಿ ಅವನಿಗೆ ಚಹ ತಂದು ಕೊಡುತ್ತಾಳೆ. ಅವನೇ ಭಾಗ್ಯವಂತ ಎಂದೆನಿಸುತ್ತದೆ. ಅವರಿಬ್ಬರೂ ಕೂಡಿ ತಿರುಗಾಡಲು ಹೊರಟರೆ, ನನಗೆ ಈ ಜನ್ಮದಲ್ಲಿಯೇ ಭಾಗ್ಯವಿಲ್ಲವೇ ಎಂದೆನಿಸಿಬಿಡುತ್ತದೆ.

ನನ್ನ ಹೆಂಡತಿ ಮನಸ್ಸು ಬಿಚ್ಚಿ ಮಾತನಾಡುವದಿಲ್ಲ. ನಾನು ಮನೆಗೆ ಬಂದಾಕ್ಷಣ, ಆಳುಮಗನೇ ಚಹ ತಂದು ಕೊಡಬೇಕು. ಅಡಗಿಯವಳೇ ಊಟಕ್ಕೆ ಹಾಕಬೇಕು. ತಿರಗಾಡುವದಕ್ಕೆ ನಾನೊಬ್ಬನೇ ಒಂಟಿಯಾಗಿ ಹೋಗಬೇಕು.

ನನ್ನ ವೃತ್ತಿ ಪೋಲೀಸನದು. ಆಫೀಸಿನಲ್ಲಿಯ ಎಲ್ಲ ಅವಧಿ ಕಠೋರ ವಾತಾವರಣದಲ್ಲಿ ನಡೆದು ಹೋಗುತ್ತದೆ. ಜಗತ್ತನ್ನೇ ಸುಟ್ಟು ಭಸ್ಮ ಮಾಡುತ್ತ ನಡೆದ ಭಸ್ಮಾಸುರನನ್ನು ಕೆಲಕಾಲವಾದರೂ ಆನಂದಪಡಿಸಬೇಕಾದರೆ ಮೋಹಿನಿ ಬೇಕಾದಳು--

ಇಲ್ಲಿ ನನ್ನ ಮೋಹಿನಿ? ಅವಳಲ್ಲಿ ರೂಪವಿದೆ, ಸೌಂದರ್ಯವಿದೆ. ಆದರೆ ಏನು ? ನಾನು ಕವಿಯಲ್ಲ. ಆದರೂ ಜಾನಪದ ಗೀತೆಯ ಒಂದು ನೆನಹು ಬಂದಿತು. ಅದನ್ನೇ ಹೇಳುತ್ತೇನೆ.

"ಕರಿಯ ಹೆಂಡತಿ ಎಂದು ಮರುಗಬೇಡ, ನೀರಲ ಹಣ್ಣು ಅತಿ ಕಪ್ಪು ಅದರಾಗ ರುಚಿ ಭಾಳ––"

"ಕೆಂಪು ಹೆಂಡತಿ ಎಂದು ಸಂತಸ ಪಡಬ್ಯಾಡ, ಅತ್ತಿಯ ಹಣ್ಣು ಬಲು ಕೆಂಪು ಅದರಾಗ ಹುಳ ಭಾಳ––"

ಈಗ ನಾನು ಮದುವೆಯಾದ ಹೆಣ್ಣು ಅಷ್ಟು ಸುಂದರಳಿಲ್ಲವೆಂದು ಈ ಸದ್ಯದ ಅವತರಣಿಕೆಯನ್ನು ಕೊಟ್ಟೆನೆಂದು ನಿನ್ನಲ್ಲಿಯ ವಕೀಲ ಬುದ್ಧಿ ಹೇಳಬಹುದು. ಆದರೆ ನಳಿನಿಯ ರೂಪ, ಕೇವಲ.....

............ಮಿಡಿನಾಗರ ಹಾವು, ಹೆಡೆ ತೆಗೆದು ಕುಣಿಯುವಾಗ ಎಷ್ಟು ಸುಂದರವಾಗಿ ತೋರುತ್ತದೆ?

ನಮ್ಮಿಬ್ಬರಲ್ಲಿಯ ಈ ಘರ್ಷಣೆ ಸುಮಾರಾಗಿ ನನ್ನ ಸಂಸಾರಕ್ಕೆ ಹೊಸ ಬಣ್ಣ ಬಳೆಯಿತು. ಅಭಿಮಾನದ ಬೀಜ ಮರವಾಗಿ ಬೆಳೆಯಿತು. ನಾನೂ ಗಂಡಸು, ಮೇಲಾಗಿ ಪೋಲೀಸ ಇನ್ಸಪೆಕ್ಟರು. ನನ್ನಲ್ಲಿಯ ಅಭಿಮಾನ--

ಪ್ರೇಮದಿಂದ ಪ್ರೇಮ ಬೆಳೆಯುತ್ತದೆ. ಅದರಂತೆ ಆಭಿಮಾನದಿಂದ ಅಭಿಮಾನ ಬೆಳೆಯುತ್ತದೆ. ಆ ಅಭಿಮಾನ ಅವಳಲ್ಲಿ ಅಹಂಕಾರಕ್ಕೆ ಎಡೆಮಾಡಿಕೊಟ್ಟಿತು.

ಕನ್ನಂಬಾಡಿಯ ಆಣೆಕಟ್ಟನ್ನು ನಾನೂ ನೀನೂ ಮೈಸೂರಿಗೆ ಹೋದಾಗ ನೋಡಲಿಕ್ಕೆ ಹೋಗಿದ್ದೆವು. ಆಗ ನಮ್ಮಿಬ್ಬರಲ್ಲಿ ನಡೆದ ಸಂಭಾಷಣೆ ನಿನಗೆ ಜ್ಞಾಪಕವಿದೆಯೇ ?

ನಾನು ಅಂದಿದ್ದೆ:

"ಕಾವೇರಮ್ಮ ಈ ಬದಿಯಲ್ಲಿ ಎಷ್ಟು ಸಿಟ್ಟಿಗೆದ್ದಿದ್ದಾಳೆ ನೋಡು.”
"ಅದು ಹೇಗೆ?"
"ಅವಳ ಮಾರ್ಗದಲ್ಲಿ ಅಡೆತಡೆ ಮಾಡಿದ್ದಕ್ಕಾಗಿ ಕೋಪಿಸಿಕೊಂಡಿದ್ದಾಳೆ"
"ಕೋಪಿಸಿಕೊಂಡಾದರೂ ಏನು ಪ್ರಯೋಜನ?"

"ಪ್ರಯೋಜನವೇಕಿಲ್ಲ, ನೋಡು ಕಾವೇರಮ್ಮ ತನ್ನೆ ಸಹಸ್ರಾರು ಕೈಗಳಿ೦ದ ಆಣೆಕಟ್ವಿಗೆ ಅಪ್ಪಳಿಸುತ್ತಿದ್ದಾಳೆ. ಆ ತೆರೆಗಳ ಭೋರ್ಗರೆಯುವ ಸಪ್ಪಳ ರುದ್ರತಾನದಂತೆ ಭಾಸವಾಗುತ್ತದೆ."

"ಆದರೆ ಆ ಬದಿ ನೋಡು. ಕಾವೇರಮ್ಮ ನಡುಹರೆಯದ ಸುಂದರ ತರುಣಿಯಂತೆ ಬಣ್ಣ ಬಣ್ಣದ ಸೀರೆಯುಟ್ಟು ನರ್ತನ ಮಾಡುತ್ತಿದ್ದಾಳೆ. ಕುಲುಕುಲು ನಗುತ್ತಿದ್ದಾಳೆ. ಆ ಮೊದಲಿನ ಸಿಟ್ಟು ಅಹಂಕಾರ ಎಲ್ಲಿಯೋ ಮಾಯವಾಗಿದೆ.”

“ಹೌದು. ಅದಕ್ಕೆ ಕಾರಣವೆಂದರೆ, ಹಾಕಿದ ಬಂಧನದಲ್ಲಿ ಹೊಸಮಾರ್ಗ ದೊರಕಿಸಿ ಮುಕ್ತಳಾಗಿದ್ದಾಳೆ. ಅದಕ್ಕೇ ಆ ನಲಿವು ಮತ್ತೆ ಕಾಣಿಸಿದೆ." "––ಹುಚ್ಚು ಮಹಮ್ಮದ ತಘಲಕ ದೇಶದಲ್ಲಿಯ ಆರ್ಥಿಕ ಪರಿಸ್ಥಿತಿ ಗಂಭೀರವಾದಾಗ, ದುಡ್ಡು-ಆಣೆಗಳನ್ನೇ ರೂಪಾಯಿಗಳೆಂದು ತಿಳಿಯಬೇಕೆಂದು ಆಜ್ಞೆ ವಿಧಿಸಿದನು. ಇದರಿಂದ ಹೊರದೇಶದವರು ಈ ದೇಶಕ್ಕೆ ಬಂದು ಕೊಂಚ ಹಣದಲ್ಲಿ ಅಪಾರ ಸರಕನ್ನು ಮಾರಲಿಕ್ಕೆ ಕೊಂಡು ಹೊರಗೆ ಹೋಗಿ ಲಾಭ ಹೊಡೆಯಹತ್ತಿದರು.....

ಇತಿಹಾಸದ ಕೆಲ ಸಾಲು ಕಿವಿಗೆ ಅಪ್ಪಳಿಸತೊಡಗಿತ್ತು. ನಿಂತಲ್ಲಿಯೇ ವಿಚಾರಿಸತೊಡಗಿದೆ. "ದ್ವಿಭಾರ್ಯಾ ಪ್ರತಿಬಂಧಕ" ಕಾಯಿದೆ, ಮಹಮ್ಮದ ತಘಲಕನ ಆರ್ಥಿಕ ಕಾಯಿದೆಯಂತೆ ಸ್ವರೂಪ ತಳೆದರೆ.....?

ಹಲ್ಲಿ ಲೊಟುಗುಟ್ಟಿತು. ಅಂಜಿದೆ. ಮನಸ್ಸಿಲ್ಲದ ಮನಸ್ಸಿನಿಂದ ಕೋರ್ಟಿನ ಕಡೆಗೆ ನಡೆದೆ.