‘ಮೂಲಾಧಾರದ ಬೇರ ಮೆಟ್ಟಿ ಭೂಮಂಡಲವನ್ನೇರಿದ’ ಮಹಾದೇವಿ ವೈರಾಗ್ಯದ ಸೋಪಾನದಿಂದ ತ್ರಿಕೂಟಪರ್ವತವನ್ನೇರಿ ಐಕ್ಯದ ತುದಿಯನ್ನು ಮುಟ್ಟುತ್ತಿದ್ದಳು. ಮೂರನೇ ಶಿಖರವನ್ನು ಏರಿದರು. ಆ ಪರ್ವತದ ತುದಿಯಲ್ಲಿ ಮುಂದೆ ವಿಸ್ತಾರವಾದ ಬಟ್ಟಬಯಲು ಹಬ್ಬಿಹರಡಿತ್ತು. ಅಲ್ಲಮನ ವಚನವನ್ನು ಮತ್ತೆ ಸ್ಮರಿಸಿಕೊಂಡು ಮಹಾದೇವಿ ಈ ಬಟ್ಟಬಯಲಿನಲ್ಲಿಯೇ ಇರಬೇಕು, ಕಾಣಬಾರದ ಕದಳಿ’ ಎಂದುಕೊಂಡಳು.
ದೇಹಕ್ಕೆ ಅನ್ವಯಿಸಿ ಹೇಳಿರುವ ಅಲ್ಲಮನ ಆ ವಚನ, ಭೌಗೋಳಿಕ ನಿರ್ದೇಶನವನ್ನು ಎಷ್ಟು ಸುಂದರವಾಗಿ ಮಾಡುತ್ತಿವೆಯೆಂಬುದನ್ನು ನೆನೆದಾಗ ಆಶ್ಚರ್ಯವಾಯಿತು ಅವಳಿಗೆ, ಪ್ರಭುದೇವನ ವಚನ ರಚನಾಚಾತುರ್ಯಕ್ಕೆ ಮತ್ತು ಶ್ರೀಪರ್ವತಗಳ ರಚನಾವಿನ್ಯಾಸದ ರಹಸ್ಯಕ್ಕೆ.
ತ್ರಿಕೂಟಪರ್ವತದ ತುದಿಯ ಬಟ್ಟಬಯಲಿನಲ್ಲಿ ಸ್ವಲ್ಪ ದೂರ ನಡೆದರು. ಮಾರ್ಗ ನಿಧಾನವಾಗಿ ಇಳಿಯುತ್ತಿತ್ತು. ಮತ್ತು ಮುಂದೆ ಹೋದಂತೆ ಕಾಡು ದಟ್ಟವಾಗುತ್ತಿತ್ತು. ಅಷ್ಟರಲ್ಲಿ ಮುಂದೆ ನಡೆಯುತ್ತಿದ್ದ ಚುಂಚರು ಕದಳಿವನ ಬಂದಿತೆಂಬುದನ್ನು ಹೇಳುವಂತೆ ಒಂದು ಕಡೆಯಲ್ಲಿ ನಿಂತರು.
ಮಳೆಗಾಲದಲ್ಲಿ ಮಾತ್ರ ಅಕ್ಕಪಕ್ಕದ ನೀರು ಹರಿದುಬರುವ ಕಾಲುವೆಯಂತಹ ಒಂದು ಹಳ್ಳ. ಅದರ ತುದಿಯಲ್ಲಿ ವಿಸ್ತಾರವಾದ ಒಂದು ಹಾಸುಗಲ್ಲು. ಅವರು ಬರುತ್ತಿದ್ದ ಮಾರ್ಗ ಆ ಹಾಸುಗಲ್ಲಿನ ಮೇಲೆಯೇ ಮುಂದೆ ಸಾಗಿಹೋಗುತ್ತಿತ್ತು. ಹಾಸುಗಲ್ಲಿನ ಎಡಗಡೆಯ ಕೊನೆಯಲ್ಲಿ ಬೆಟ್ಟ ಇಳಿದು ಆಳವಾದ ಕೊಳ್ಳ ಪ್ರಾರಂಭವಾಗಿತ್ತಿತ್ತು.
ಚುಂಚರು ಹಳ್ಳದ ಹಾಸುಗಲ್ಲನ್ನು ದಾಟಿ ನಾಲ್ಕು ಹೆಜ್ಜೆ ಮುಂದೆ ಹೋಗಿ ಕಣಿವೆಯ ಕೊಳ್ಳದತ್ತ ತಿರುಗಿದರು. ರಸವಂತಿ ಸುತ್ತಲೂ ನೋಡುತ್ತಿದ್ದಳು. ಕೌಶಿಕನೂ ಬಾಳೆ ಗಿಡಗಳಿಗಾಗಿ ಹುಡುಕುತ್ತಿದ್ದ, ಆದರೆ ಆ ಕದಳಿಯ ರಹಸ್ಯವನ್ನು ಪ್ರಭುವಿನಿಂದ ಕೇಳಿ ಬಲ್ಲ ಮಹಾದೇವಿ ಚುಂಚರನ್ನು ಹಿಂಬಾಲಿಸುತ್ತಿದ್ದಳು.
ಕಣಿವೆಯ ಕೊಳ್ಳದ ದಡದಲ್ಲಿಯೇ ಮಾರ್ಗ ಇಳಿಯುತ್ತಿತ್ತು. ಕೊಳ್ಳದ ಆಳ ಕಾಣದಂತೆ ದೊಡ್ಡ ದೊಡ್ಡ ಮರಗಳೂ ಪೊದೆಗಳೂ ಬೆಳೆದು ಹರಡಿದ್ದುವು. ನಾಲ್ಕಾರು ಹೆಜ್ಜೆ ಹೋದಮೇಲೆ ಕೊಳ್ಳದ ಕಡೆಗೆ ಇಳಿಯಲು ಕಿಟಕಿಯಂತಹ ಒಂದು ಸಣ್ಣ ದಾರಿ ಗೋಚರಿಸಿತು. ಅದರಲ್ಲಿ ನುಗ್ಗಿದರು ಚುಂಚರು. ಅವರ ಹಿಂದೆಯೇ ಇದ್ದಳು ಮಹಾದೇವಿ.