ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಬೆಳೆಯುವ ಬೆಳಕು
೨೧

"ನಿಜ, ಅಂತಹ ಮಗಳನ್ನು ಪಡೆದ ನೀನು ಆ ಮಾತನ್ನು ಹೇಳಿಕೋಳ್ಳುವುದು ಯುಕ್ತವೇ ಆಗಿದೆ" ಮರುಳುಸಿದ್ಧರು ಓಂಕಾರನ ಮಾತನ್ನು ಸಮರ್ಥಿಸಿದರು. ಬೇರೊಂದು ಕಾರಣಕ್ಕಾಗಿ.

ಓಂಕಾರ ಮನೆಗೆ ಓಡಿದ. ಆ ವೇಳೆಗೆ ಮನೆಯ ಕೆಲಸವೆಲ್ಲಾ ಮುಗಿಯುತ್ತಾ ಬಂದಿತ್ತು. ಬಾಣಂತಿಗೆ ನೀರನ್ನು ಹಾಕಿ ಕೋಣೆಯಲ್ಲಿ ಮಲಗಿಸಿದ್ದರು. ಮಗುವಿಗೂ ಎರೆದು ಲಿಂಗಮ್ಮನ ಪಕ್ಕದಲ್ಲಿ, ಹೊರೆಸಿನ ಮೇಲಿಟ್ಟ ಮರದಲ್ಲಿ ಮಲಗಿಸಿದ್ದರು.

ಓಂಕಾರ ವಿಷಯವೆಲ್ಲವನ್ನೂ ಲಿಂಗಮ್ಮನಿಗೆ ತಿಳಿಸಿದ. ಆಕೆಗೆ ತನ್ನ ಆಯಾಸವೆಲ್ಲಾ ಮರೆತುಹೋದಂತಾಯಿತು. ಮುಖ ಸಂತೋಷ ತೃಪ್ತಿಗಳ ಮುಗುಳುನಗೆಯಿಂದ ಮಿಂಚಿತು.

ಮನೆಯಲ್ಲಿ ಎಲ್ಲವೂ ಸಿದ್ಧವಾದೊಡನೆಯೇ ಮಠಕ್ಕೆ ತೆರಳಿದ. ಗುರುಲಿಂಗ ದೇವರು ಮರುಳುಸಿದ್ದೇಶ್ವರರನ್ನು ಮುಂದಿಟ್ಟುಕೊಂಡು ಓಂಕಾರನ ಮನೆಯತ್ತ ನಡೆಯತೊಡಗಿದರು.

ಊರಿನ ಗಣ್ಯವರ್ತಕರಲ್ಲಿ ಕೆಲವರು ಓಂಕಾರನ ಮನೆಯ ಮುಂದೆ ಸೇರಿದ್ದರು. ಎಲ್ಲರ ಸ್ನೇಹ ವಿಶ್ವಾಸ, ಗೌರವಗಳಿಗೆ ಪಾತ್ರನಾಗಿ ಬಾಳಿದವನಲ್ಲವೇ ಓಂಕಾರ! ಗುರುಗಳಿಬ್ಬರಿಗೂ ಸಂಭ್ರಮದ ಸ್ವಾಗತ ಲಭಿಸಿತು ಆತನ ಮನೆಯ ಮುಂದೆ.

ಅದಕ್ಕಿಂತ ಮಿಗಿಲಾದ ಸಂಭ್ರಮದ ಸನ್ನಿವೇಶ ಒಳಗೆ ಕಾದಿತ್ತು. ವಿಧ್ಯುಕ್ತವಾದ ಕ್ರಿಯೆಗಳೆಲ್ಲಾ ಮುಗಿದ ಮೇಲೆ ರೇಷ್ಮೆ ಬಟ್ಟೆಯ ಮೇಲೆ ಹಾಸಿದ ಮೊರದಲ್ಲಿ ಮಗುವನ್ನು ಮಲಗಿಸಿ ಮರುಳುಸಿದ್ಧರ ಮುಂದೆ ತಂದಿಟ್ಟರು ಮುತ್ತೈದೆಯರು. ಮಗುವಿಗೆ ಮೇಲೊಂದು ರೇಷ್ಮೆಯ ವಸ್ತ್ರ ಹೊದಿಸಿತ್ತು. ಪುಣ್ಯದ ಪುಂಜವೇ ಮೂರ್ತಿಗೊಂಡು ಕಾಂತಿಯಿಂದ ಕಂಗೊಳಿಸುವಂತಿತ್ತು ಮಗು. ಅದಾವ ಜನ್ಮಜನ್ಮಾಂತರದ ಸಂಸ್ಕಾರವನ್ನು ನೆನೆದು ಅಂತರ್ಮುಖವಾಗಿದೆಯೋ ಎನ್ನುವಂತೆ ಶಿಶು ಕಣ್ಣುಮುಚ್ಚಿ ಮುಷ್ಟಿಯನ್ನು ಬಿಗಿಯಾಗಿ ಹಿಡಿದು ಮಲಗಿತ್ತು.

ಮರುಳುಸಿದ್ದರು ಎವೆಯಿಕ್ಕದೆ ಮಗುವನ್ನು ದಿಟ್ಟಿಸಿ ನೋಡಿದರು. ಮುಷ್ಟಿ ಹಿಡಿದ ಕೈಗಳನ್ನು ಬಿಚ್ಚಿ ನೋಡಿದರು. ಹಣೆ, ಮುಖ, ಕಾಲು ಎಲ್ಲವನ್ನೂ ಪರೀಕ್ಷಿಸಿದರು. ಅಣುವಿನಲ್ಲಿಯ ರಹಸ್ಯವನ್ನು ಭೇದಿಸುವುದರಲ್ಲಿ ಜಯಶಾಲಿಯಾದ ವಿಜ್ಞಾನಿಯ ಉತ್ಸಾಹದಂತೆ, ಅವರ ಮುಖದಲ್ಲಿ ಕಾಂತಿ ಮಿಂಚಿತು. ಮಗುವಿನ ಮುಚ್ಚಿದ ಕಣ್ಣು ರೆಪ್ಪೆಗಳನ್ನು ಕೈಗಳಿಂದ ಬಿಡಿಸಲು ಯತ್ನಿಸಿದರು. ಮಗು ಅಳಲಾರಂಭಿಸಿತು.