ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೩೬
ಕದಳಿಯ ಕರ್ಪೂರ


ಹರಿದಾಡಿತು. ಅವಳ ಬಾಹ್ಯಮೂಲಗಳ ಕಾಂತಿಯನ್ನು ಕಂಡು ರೋಮಾಂಚನಗೊಂಡಿತು. ದೃಷ್ಟಿ ಇನ್ನೂ ಒಳಗೆ ಹರಿಯಿತು. ದೀರ್ಘಕಾಲದಿಂದ ಅದುಮಿಟ್ಟಿದ್ದ ಮನಸ್ಸಿನ ಪಾಶವೀ ಶಕ್ತಿ ತನ್ನ ಸೇಡನ್ನು ತೀರಿಸಿಕೊಳ್ಳುವಂತೆ, ಸರ್ವಶಕ್ತಿಯಿಂದ ಮೇಲಕ್ಕೆ ಪುಟಿದೆದ್ದಿತ್ತು. ಮಾನವತೆ ಮುಳುಗಿತು. ವಿವೇಕ ಕೊಚ್ಚಿಹೋಯಿತು. ಹುಚ್ಚನಂತೆ ಮುಂದೆ ನುಗ್ಗಿ ತನ್ನ ಕೈಗಳನ್ನು ಅವಳ ದೇಹದ ಮೇಲೆ ಹರಿಯಬಿಟ್ಟ.

ಹಾವು ಕಡಿದವಳಂತೆ ಮಹಾದೇವಿ ಹಿಂದಕ್ಕೆ ಹಾರಿದಳು. ಹಸಿದ ಹುಲಿಯಂತೆ ಬುಸುಗುಟ್ಟುತ್ತಾ ಕೌಶಿಕ ಅವಳ ಸೆರಗನ್ನು ಹಿಡಿದ.

``ಈ ಸೀರೆಯಲ್ಲಿ ಎಷ್ಟು ಸುಂದರವಾಗಿ ಕಾಣುತ್ತೀ ಮಹಾದೇವಿ ಎಂದು ಕಾಮದ ಕಳ್ಳನ್ನು ಕುಡಿದು ಉನ್ಮತ್ತನಾದವನಂತೆ ಮತ್ತೆ ಮೇಲೆ ಬೀಳಹೋದ.

ಮಹಾದೇವಿ ಮಿಂಚಿನಂತೆ ಹಿಂದಕ್ಕೆ ಹಾರಿದಳು. ಸೆರಗು ಕೌಶಿಕನ ಕೈಯಲ್ಲೇ ಇತ್ತು. ಮಹಾದೇವಿಯ ದೇಹದ ಅರ್ಧಭಾಗ ನಗ್ನವಾಗಿತ್ತು.

ಹುಚ್ಚನಂತೆ ಕೌಶಿಕ ಅವಳ ನಗ್ನಭಾಗದ ದೇಹವನ್ನು ದಿಟ್ಟಿಸುತ್ತಿದ್ದ.

ಮಿಂಚಿಗಿಂತ ಮಿಗಿಲಾದ ವೇಗದಲ್ಲಿ ಭಾವನೆಗಳು ಮಹಾದೇವಿಯ ಮನಸ್ಸಿನಲ್ಲಿ ತಿರುಗಿದವು. ಮುಖ ಉಜ್ವಲವಾಗಿ ಹೊಳೆಯಿತು. ಕಾಂತಿ ಪ್ರವಾಹವೇ ಅವಳ ಪವಿತ್ರ ಕಣ್ಣುಗಳಿಂದ ಹರಿದುಬರುತ್ತಿರುವಂತೆ ತೋರುತ್ತಿತ್ತು.

``ಮಹಾರಾಜ, ನೋಡು. ಇದಕ್ಕಾಗಿ ಹಾತೊರೆಯುತ್ತಿದ್ದೆಯಲ್ಲವೆ ? ನೋಡು; ದೇಹದ ಮೋಹವನ್ನು ಹಚ್ಚಿಕೊಂಡು ಕುಣಿಯುತ್ತಿರುವ ನಿನ್ನ ಈ ಹುಚ್ಚು ಕಣ್ಣುಗಳಿಂದ ಚೆನ್ನಾಗಿ ನೋಡು. ಈ ಸೀರೆಯಲ್ಲಿ ನಾನು ಬಹಳ ಸುಂದರಳಾಗಿ ಕಾಣುತ್ತೇನಲ್ಲವೇ? ಇದನ್ನು ತೆಗೆದೊಗೆಯುತ್ತೇನೆ. ಈ ಸೌಂದರ್ಯವನ್ನು ನೋಡು ಎನ್ನುತ್ತ, ಉಟ್ಟಿದ್ದ ಸೀರೆಯನ್ನು ಆವೇಶಗೊಂಡು ಕಿತ್ತೆಸೆಯತೊಡಗಿದಳು.

ಕೌಶಿಕನ ಕಣ್ಣಿಗೆ ಮಿಂಚು ಹೊಡೆದಂತಾಯಿತು. ಕಿವಿಯಲ್ಲಿ ಸಿಡಿಲು ಸಿಡಿದಂತಾಯಿತು. ಕಣಕಣವೂ ಜ್ವಾಲೆಯಿಂದ ವ್ಯಾಪಿಸಿದಂತೆ ಕಂಪಿಸಿತು.

``ಬೇಡ, ಮಹಾದೇವಿ ಬೇಡ ಎನ್ನುತ್ತಿದ್ದಂತೆ ಮಹಾದೇವಿಯ ಕೆಲಸ ಮುಗಿದಿತ್ತು.

``ನೋಡು, ಈ ದೇಹಕ್ಕಾಗಿಯೇ ಅಲ್ಲವೇ ನೀನು ಹಾತೊರೆಯುತ್ತಿದ್ದದ್ದು. ನೋಡಿಕೋ ಏನಿದೆ ಈ ದೇಹದಲ್ಲಿ ? ಈ ದೇಹದ ಯಾವ ಭಾಗ, ನಿನ್ನನ್ನು ಮಾನವತೆಯಿಂದ ದೂರ ತಳ್ಳಿ ಪಶುವನ್ನಾಗಿಸುವಂತಹ ಸೌಂದರ್ಯದಿಂದ ಕೂಡಿದೆ ನೋಡಿಬಿಡು.