"ಅಳಬೇಡ ತಾಯಿ, ಅಳಬೇಡ. ನಿನ್ನ ಲೀಲೆಯನ್ನು ತೋರುವುದಕ್ಕಾಗಿ ಜನ್ಮವೆತ್ತಿದ್ದೀಯ. ಇದೋ ನೋಡು" ಎಂದು ಹೇಳುತ್ತಾ ವಿಭೂತಿಯನ್ನು ಮಗುವಿನ ಪುಟ್ಟ ಹಣೆ, ಕೈ ಲಾಲುಗಳಿಗೆಲ್ಲಾ ಧರಿಸತೊಡಗಿದರು. ಮಗು ಅಳುವುದನ್ನು ನಿಲ್ಲಿಸಿ ಮಂತ್ರ ಮುಗ್ಧವಾದಂತೆ ಮರುಳುಸಿದ್ಧರನ್ನೇ ನೋಡುತ್ತಿತ್ತು. ಬಟ್ಟೆಯಲ್ಲಿ ಕಟ್ಟಿ ಮೊದಲೇ ಸಿದ್ಧಪಡಿಸಿ ಇಟ್ಟುಕೊಂಡಿದ್ದ ಮಗುವಿನ ಇಷ್ಟಲಿಂಗವನ್ನು ಅವಳ ಹಣೆಗೆ ಮುಟ್ಟಿಸಿದರು. ಅದನ್ನು ಮಗುವಿಗೆ ಧರಿಸಿ ಕಿವಿಯಲ್ಲಿ ಮಂತ್ರೋಚ್ಚಾರಮಾಡಿದರು.
ಎಲ್ಲರೂ ಈ ದೃಶ್ಯವನ್ನು ಎವೆಯಿಕ್ಕದೇ ನೋಡುತ್ತಿದ್ದರು.
ಅನಂತರ ಮರುಳುಸಿದ್ದರು ತಲೆಯೆತ್ತಿ ಓಂಕಾರನತ್ತ ತಿರುಗಿ:
"ಮಗಳಿಗೆ ಏನು ಹೆಸರಿಡಬೇಕೆಂದು ಆಲೋಚಿಸಿದ್ದೇರಿ?"
ಓಂಕಾರ ಅದನ್ನೇನೂ ಆಲೋಚನೆ ಮಾಡಿರಲಿಲ್ಲ. ಏನ್ನನ್ನೂ ಹೇಳಲಾರದೆ ಒಮ್ಮೆ ಗುರುಲಿಂಗರತ್ತ, ಒಮ್ಮೆ ಅತ್ತಿತ್ತ ನೋಡತೊಡಗಿದ. ಎಲ್ಲರ ಆಲೋಚನೆಯೂ ಆ ದಿಕ್ಕಿಗೇ ತಿರುಗಿತು. ಆದರೆ ಮರುಳುಸಿದ್ದರೇ ಆ ಸಮಸ್ಯೆಯನ್ನು ಪರಿಹರಿಸಿದರು.
"ಸಾಕ್ಷಾತ್ ಮಹಾದೇವಿಯ ಸಾತ್ವಿಕ ಕಳೆಯೇ ಈ ರೂಪದಿಂದ ಜನ್ಮವೆತ್ತಿದೆಯೆಂದು ಭಾವಿಸಿರಿ. ಆದ್ದರಿಂದ ಈ ಶಿಶುವಿಗೆ ಮಹಾದೇವಿ ಎಂದೇ ನಾಮಕರಣ ಮಾಡಬಹುದು. ಅಥವಾ ನಿಮ್ಮದೇನಾದರೂ ಬೇರೆ..."
"ಇಲ್ಲ... ಇಲ್ಲ ಗುರುಗಳೇ..." ಮಧ್ಯದಲ್ಲಿಯೇ ಹೇಳಿದ ಓಂಕಾರ: "ತಮ್ಮ ವಾಕ್ಯವೇ ಮಹಾಪ್ರಸಾದ. ಅದೇ ಆ ಮಗುವಿಗೆ ಆಶೀರ್ವಾದವಾಗಿ ಪರಿಣಮಿಸಲಿ. ನಾಮಕರಣದ ಶುಭಕಾರ್ಯವನ್ನು ತಾವೇ ಮುಗಿಸಿಬಿಡಿ."
ಮರುಳುಸಿದ್ಧರು 'ಮಹಾದೇವಿ' ಎಂಬ ಹೆಸರನ್ನು ಅಧಿಕೃತವಾಗಿ ಕರೆದು, ಅವಳ ಕಿವಿಯಲ್ಲಿ ಅದನ್ನು ಉದ್ಘೋಷಿಸಿದರು.
ಮಗುವನ್ನೆತ್ತಿ ತಾಯಿಯ ಬಳಿಗೆ ಒಯ್ಯಲಾಯಿತು. ಮರುಳುಸಿದ್ಧರೂ ಎದ್ದು ಲಿಂಗಮ್ಮನ ಹೊರಸಿನ ಬಳಿಗೆ ಬಂದರು. ಲಿಂಗಮ್ಮ ತಟ್ಟನೆ ಏಳಲು ಪ್ರಯತ್ನಿಸಿದಳು.
"ಬೇಡ ತಾಯಿ, ಬೇಡ, ಆಯಾಸಪಟ್ಟುಕೊಳ್ಳಬೇಡ." ಅವಳನ್ನು ಸಂತೈಸುತ್ತಾ ಹೇಳಿದರು ಮರುಳುಸಿದ್ಧರು. "ಅಮೂಲ್ಯವಾದ ಪುತ್ರೀರತ್ನವನ್ನು ಪಡೆದಿದ್ದೀಯ, ತಾಯಿ. ಅದನ್ನು ಯೋಗ್ಯವಾದ ರೀತಿಯಲ್ಲಿ ಬೆಳೆಸು. ಮಹಾದೇವಿ, ಹೆಣ್ಣುತನದ ಮಹಾಸಾಧನೆಯ ಸಂಕೇತಮೂರ್ತಿಯಾಗಿ ಉಳಿಯುವಂತಾಗಲಿ. ಅಂತಹ ಮಗಳನ್ನು ಪಡೆದ ಭಾಗ್ಯ ನಿನ್ನದಾಗಲಿ" ಎಂದು ಆಶೀರ್ವದಿಸಿ ಮತ್ತೊಮ್ಮೆ