ಅಗ ಯತ್ನವಿಲ್ಲದೆ ದೇವರ್ಷಿಪಿತೃಗಣಗಳು ಇನ್ನೊಬ್ಬ ಇಂದ್ರನನ್ನು ಅರಸಿ ತಂದು ಆತನಿಗೆ ಇಂದ್ರಾಭಿಷೇಕ ಮಾಡಿದುದು, ಆತನು ಅಧಿಕಾರಪೂರ್ಣತೆಯನ್ನು ಬಯಸಿದುದು, ಇಷ್ಟೂ ಆಕೆಗೆ ಗೊತ್ತು. ಆಕೆಯು ಅಂತಃಪುರವನ್ನು ಬಿಟ್ಟು ಈಚೆಗೆ ಬರದಿದ್ದರೂ ಇಂದಿನ ದೇವಸಭೆಯಲ್ಲಿ ನಿರ್ಣಯವಾಗುತ್ತಿದ್ದ ಹಾಗೆಯೇ ಆಕೆಗೆ ತಿಳಿದಿದೆ. ಶಚಿಯಾದರೂ ಮೂರು ಲೋಕದ ಒಡೆಯನ ಒಡತಿಯಾದರೂ, ಆಕೆಯು ಹೆಣ್ಣಲ್ಲವೆ ? ಆದ ನಿರ್ಣಯವನ್ನು ಕೇಳಿ ಆಕೆಗೆ ಎದೆ ಒಡೆದಂತಾಯಿತು. ‘ತಾನು ಇನ್ನೊಬ್ಬನನ್ನು ಸೇವಿಸಬೇಕೆ ? ಹಾಗೆಂದು ವಿಧಿಸುವವನೂ, ಆ ವಿಧಿಯು ಆಚರಣಕ್ಕೆ ಬರುವಂತೆ ನೋಡಿಕೊಳ್ಳುವವನೂ ದೇವಗುರು ! ಯಾವ ಗುರುವನ್ನು ತಾವು ಇಂದ್ರದಂಪತಿಗಳು ದಿನವೂ ಅರ್ಚಿಸುತ್ತಿದ್ದರೋ, ಆತನಿಂದು ತನ್ನನ್ನು ಇನ್ನೊಬ್ಬನಿಗೆ ವಿನಿಯೋಗ ಮಾಡಲು ಕರ್ತ ! ಅಯ್ಯೋ ನನ್ನ ಹಣೆಯಲ್ಲಿ ಏನು ಬರೆಯಿತು?”
ಬೃಹಸ್ಪತಿಯನ್ನು ಕಂಡು ಶಚಿಯು ಮತ್ತೆ ಗೊಳೋ ಎಂದು ಅತ್ತಳು. ದೇವಾಚಾರ್ಯನು ಆಕೆಯ ಕಣ್ಣಲ್ಲಿ ನೀರು ಬಂದಿದ್ದುದನ್ನು ನೋಡಿರಲಿಲ್ಲ. ಆತನಿಗೂ ಕಣ್ಣಲ್ಲಿ ನೀರು ಬಂತು. “ಶಚೀದೇವಿ, ನೀನು ನನಗೆ ಮಗಳಂತೆ ! ನೀನು ಕಣ್ಣೀರು ಬಿಡುವುದನ್ನು ನಾನು ನೋಡಲಾರೆ. ದೇವಸಭೆಯು ದುಡುಕಿದೆ. ಅದನ್ನು ಸರಿಮಾಡೋಣವಂತೆ, ನೀನು ಅಳಬೇಡ” ಎಂದು ಸಮಾಧಾನ ಹೇಳಿದನು.
ಶಚಿಯು ಕಣ್ಣೀರು ಒರೆಸಿಕೊಂಡು ಬಿಕ್ಕಳಿಸುತ್ತಾ ಕೇಳಿದಳು : “ದೇವಸಭೆಯು ದೇವರಾಜನ ಅಧಿಕಾರ ಪೂರ್ಣವಾಗುವುದನ್ನು ಮಾತ್ರ ನೋಡಿತು. ನಾನು ಸ್ತ್ರೀ, ನನಗೆ ಪ್ರತ್ಯೇಕವಾದ ಅಧಿಕಾರವೊಂದಿದೆಯೆಂಬುದನ್ನು ಮಾತ್ರ ಗಮನಿಸಲಿಲ್ಲ.”
ದೇವಗುರುವು ವಿಷಣ್ಣನಾಗಿ ಹೇಳಿದನು : “ಅಮ್ಮಾ ಈ ಸಭೆಗೆ ನಾನು ಅಧ್ಯಕ್ಷನಾಗಬಾರದಿತ್ತು. ಯತ್ನವಿಲ್ಲ. ನಡೆದುಹೋಯಿತು. ಚಿಂತಿಸಬೇಡ, ಆ ನಿರ್ಣಯದಿಂದ ನಿನಗೆ ಹಾನಿಯಾಗದಂತೆ ನೋಡಿಕೊಳ್ಳೋಣ.”
ಶಚೀದೇವಿಗೆ ಅರ್ಧ ಧೈರ್ಯವಾಯಿತು. ಆದರೂ ಕೋಪವಿಳಿದಿಲ್ಲ. “ದೇವ ಸಭೆಯನ್ನು ಕರೆಯಬೇಕೇಕೆ? ಅಲ್ಲಿ ನಿರ್ಣಯವನ್ನು ಮಾಡಿಸಬೇಕೇಕೆ? ಅನಂತರ ಅದರಿಂದ ‘ನಿನಗೆ ಹಾನಿಯಾಗದಂತೆ ನೋಡಿಕೊಳ್ಳೋಣ’ ಎಂಬ ಮಾತೇಕೆ? ಮೊದಲೇ ದೇವಸಭೆಯಲ್ಲಿ ನಿರ್ಣಯವೇ ಆಗದಂತೆ ತಡೆಯಬಾರದಾಗಿತ್ತೆ? ಅಥವಾ ದೇವಸಭೆಯೇ ಸೇರದಂತೆ ನೋಡಿಕೊಳ್ಳಬಾರದಾಗಿತ್ತೆ?” ಎಂದು ಆಕೆಯ ಸಂಕಟ. ಬಹುದಿನದಿಂದ ತಾನೂ ತನ್ನೊಡೆಯನೂ ಗೌರವಿಸುತ್ತಿದ್ದಾತನಲ್ಲಿ