ವಿಷಯಕ್ಕೆ ಹೋಗು

ಪುಟ:Mahakhshatriya.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨.ಇಂದ್ರನು ಓಡಿಹೋದನು

ಇಂದ್ರನು ಶಚಿಯ ಅರಮನೆಯಲ್ಲಿ ಸುಖಾಸನದಲ್ಲಿ ದಿಂಬಿಗೆ ಒರಗಿಕೊಂಡು ಕುಳಿತಿದ್ದಾನೆ. ಆತನಿಗೆ ನೆಮ್ಮದಿಯಿದ್ದಂತಿಲ್ಲ. ಏನೋ ಮುಜುಗರವಾಗಿ, ಆತನ ಮನಶ್ಯಾಂತಿಯು ಕೆಟ್ಟಿದೆ. ಏಕಾಂತದಲ್ಲಿ ಇರಲು ಆ ವೀರವರನಿಗೆ ದಿಗಿಲು. ವೃತ್ರನು ಸತ್ತಿರುವುದು ನಿಜವಾದರೂ ಅವನೆಲ್ಲಿ ಹಿಂತಿರುಗಿ ಬರುವನೋ ಎಂದು ಅಂಜಿಕೆ. ಅದರಲ್ಲೂ ಸಿಂಹಾಸನದೇವಿಯು ಹೇಳಿದ ವೃತ್ರಹತ್ಯೆಯು ತನ್ನನ್ನು ಅಂಟಿಕೊಂಡಿರುವುದು ತನಗೂ ತಿಳಿದಿದೆ. ಎಲ್ಲಿದ್ದರೂ ಅಶೌಚದವನಂತೆ ಮೈಲಿಗೆ ಮೈಲಿಗೆಯಾಗಿರುವಂತೆ ಕಾಣುತ್ತದೆ. ಆಚಾರ್ಯನೂ ಮಂತ್ರೋದಕಮಾರ್ಜನಾದಿ ಗಳನ್ನೆಲ್ಲಾ ಮಾಡಿದ್ದಾನೆ. ಆದರೂ ಇಂದ್ರನಿಗೆ ಮೊದಲಿನಂತಿಲ್ಲ. ಏನು ಮಾಡಿದರೆ ಸರಿಹೋದೀತು ಎಂದು ಯೋಚಿಸುತ್ತಿದ್ದಾನೆ. ವಿಶ್ವರೂಪನನ್ನು ವಧಿಸಿದಾಗ ಬಂದ ಹತ್ಯೆಯನ್ನು ಹಂಚಿ ಹಾಕಿದಂತೆ ಈಗಲೂ ಮಾಡೋಣ ಎಂದರೆ ಸಾಧ್ಯವಿಲ್ಲ. ಎಲ್ಲರೂ ವೃತ್ರನ ಪೌರುಷವನ್ನು ಬಲ್ಲರು. ಯಾರೂ ಅ ಹತ್ಯೆಯನ್ನು ಒಪ್ಪಿಕೊಳ್ಳುವಂತಿಲ್ಲ. ತಾನೇ ಅದನ್ನು ಅನುಭವಿಸಿ ತೀರಬೇಕು. ಅದು ಯಾವ ರೂಪದಲ್ಲಿ ಯಾವಾಗ ಕಾಣಿಸಿಕೊಳ್ಳುವುದೋ ತಿಳಿಯದು. ಸರ್ವಜ್ಞನಾದ ಸುರಾಚಾರ್ಯನು ಮಾತ್ರ “ಅದು ನಾವು ಯಾರೂ ಇಲ್ಲದಾಗ ಬಂದರೆ, ಕೂಡಲೇ ನೀನು ಇಂದ್ರತ್ವವನ್ನು ಬಿಟ್ಟು ಪೂರ್ಣತ್ವವನ್ನು ಧ್ಯಾನಿಸು. ಆ ವೇಳೆಗೆ ನಾನೆಲ್ಲಿದ್ದರೂ ಬರುವೆನು, ಮುಂದೆ ನೋಡೋಣ” ಎಂದು ಅವನಿಗೆ ಅಭಿವಚನವನ್ನು ಕೊಟ್ಟಿದ್ದಾನೆ.

ಆಚಾರ್ಯನೂ ಅಗ್ನಿವಾಯುಗಳೂ ಆತನ ದರ್ಶನಕ್ಕೆ ಬರುವ ಹೊತ್ತು. ಇಂದ್ರನೂ ಅವರನ್ನು ಕಾಣಲು ಕಾತರನಾಗಿ ಕಾದಿದ್ದಾನೆ. ಇಂದ್ರನಿಗೆ ಕುಳಿತಿರಲು ಸಾಧ್ಯವಾಗಲಿಲ್ಲ. ಎದ್ದು ಓಡಾಡಲು ಆರಂಭಿಸಿದನು. ಶಚಿಯು ಕಾಲುಕಡೆ ಕುಳಿತಿದ್ದವಳು ಎದ್ದು ಕಿಟಕಿಯನ್ನು ಒರಗಿಕೊಂಡು ನಿಂತಿದ್ದಳು. ಯಾರೋ ಸುಳಿದಂತಾಯಿತು. ಯಾರೆಂದು ಇಂದ್ರನು ನೋಡುವುದರೊಳಗಾಗಿ, ಶಚಿಯು ‘ಅಯ್ಯೋ !’ ಎಂದಳು. ಇಂದ್ರನು ಏನೆಂದು ಅತ್ತ ತಿರುಗುವುದರೊಳಗಾಗಿ ಶಚಿಯು “ಯಾರೋ.....” ಎಂದಳು. ಮುಂದಕ್ಕೆ ಏನು ಹೇಳುತ್ತಿದ್ದಳೋ