೩೪
“ನಿನ್ನದೇ ಇದೆಲ್ಲಾ ಚೇಷ್ಟೆ, ನಿನ್ನ ಹತ್ತಿರ ಹೇಳಲೇಬಾರದಾಗಿತ್ತು” ಎಂದು ಹೇಳಿದರೂ ಆ ವಿಷಯವನ್ನೆತ್ತಿದುದು ದಾಕ್ಷಾಯಿಣಿಗೆ ಸಂತೋಷಜನಕವಾಗಿಯೇ ಇತ್ತೆಂಬುದನ್ನು ಅವಳ ಮುಖಭಾವ ಹೇಳುವಂತಿತ್ತು.
“ಇರಲಿ, ಹುಡುಗ ಒಪ್ಪಿದನೇ ಹೇಗೆ? ಹೇಗಿದ್ದಾನೆ ವರ?” ಮತ್ತೆ ಹೇಳಿದಳು ಕಾತ್ಯಾಯಿನಿ.
“ಹೋಗೇ.... ನೀನಂತೂ....” ದಾಕ್ಷಾಯಿಣಿಯ ಮುಖ ಅರಕ್ತವಾಯಿತು.
“ಏನೇ ಅದು ಕಾತ್ಯಾಯಿನಿ? ಯಾವ ಹುಡುಗ? ಏನನ್ನು ಒಪ್ಪುವುದು?” ಏನನ್ನೂ ಅರಿಯದವಳಾಗಿ ಮಹಾದೇವಿ ಕೇಳಿದಳು.
“ನೆನ್ನೆ ಇವರ ಮನೆಗೆ ಹುಡುಗ ಬಂದಿದ್ದನಂತೆ” ಕಾತ್ಯಾಯಿನಿ ಹೇಳಿದಳು.
“ಏಕೆ?” ಮತ್ತೆ ಮಹಾದೇವಿಯ ಪ್ರಶ್ನೆ.
“ನೋಡೋದಕ್ಕೆ”
“ನೋಡೋದಕ್ಕೆ! ಏನನ್ನು ನೋಡೋದಕ್ಕೆ?” ಮುಗ್ಧತೆ ತುಂಬಿತ್ತು ಮಹಾ ದೇವಿಯ ಪ್ರಶ್ನೆಯಲ್ಲಿ.
“ಅಯ್ಯೋ ಈ ಮಹಾದೇವಿಗಂತೂ ವ್ಯವಹಾರಜ್ಞಾನವೇ ಇಲ್ಲ” ಎಂದು ಕಾತ್ಯಾಯಿನಿ ಹೇಳುವಷ್ಟರಲ್ಲಿ ಶಂಕರಿ ವಿವರಿಸತೊಡಗಿದಳು.
“ಹುಡುಗ ಬಂದು, ಹುಡುಗಿಯನ್ನು ನೋಡಿ, ಅವಳನ್ನು ಒಪ್ಪಿದರೆ ತಾನೇ ಮದುವೆ, ಮಹಾದೇವಿ?”
“ನಿನಗೂ ಆ ಕಾಲ ಬಂದಾಗ ಗೊತ್ತಾಗುತ್ತದೆ. ಹುಡುಗನ ಮುಂದೆ ಕುಳಿತುಕೊಳ್ಳುವುದು.” ಕಾತ್ಯಾಯಿನಿ ನಕ್ಕಳು.
“ಅವಳಿಗೇನಮ್ಮಾ, ಕಂಡೊಡನೆ ಎಂತಹವನಾದರೂ ಇವಳ ರೂಪದ ಬಲೆಯಲ್ಲಿ ಬಿದ್ದಾನು. ಅಂತಹ ಸೌಂದರ್ಯದ ಪುತ್ಥಳಿಯಾಗುತ್ತಾಳೆ ನಮ್ಮ ಮಹಾದೇವಿ.” ಅಷ್ಟೇನೂ ಕುರೂಪಿಯಲ್ಲದಿದ್ದರೂ ತನ್ನ ಸೌಂದರ್ಯದ ಪರಿಮಿತಿಯನ್ನು ತಿಳಿಯ ತೊಡಗಿದ್ದ ದಾಕ್ಷಾಯಿಣಿ ಹೇಳಿದಳು.
“ಓ! ಯಾರೋ ಬಂದು, ನೋಡಿ, ಮೆಚ್ಚುವುದು ಬೇರೆ ಆಗಬೇಕೇನು?” ಆಶ್ಚರ್ಯದ ಉದ್ಗಾರ ಮಹಾದೇವಿಯದು.
“ಹೋಗು ಹೋಗೆ; ಬರಿ ಪೂಜೆ ಮಾಡಿಕೊಂಡು ಇರಲಿಕ್ಕೆ ಲಾಯಕ್ಕು ನೀನು.” ಹೇಳಿದಳು ಕಾತ್ಯಾಯಿನಿ.
ಈ ವೇಳೆಗೆ ರಾಜಬೀದಿಯನ್ನು ದಾಟಿ ಉದ್ಯಾನವನ್ನು ಸಮೀಪಿಸಿದ್ದರು. ಮೇಲೇಳುತ್ತಿರುವ ಬೆಳಗಿನ ಬಾಲಸೂರ್ಯನ ಎಳೆಯ ಬಿಸಿಲಿನಲ್ಲಿ ಉದ್ಯಾನವನ