ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೬೪
ಕದಳಿಯ ಕರ್ಪೂರ


ಮಹಾದೇವಿ ಹೋಗಿ ಕಟ್ಟೆಯ ಮೇಲೆ ಕುಳಿತುಕೊಂಡಳು. ನೆರಳು ನೆಮ್ಮದಿಯನ್ನು ಕೊಟ್ಟಿತು. ಸ್ವಲ್ಪ ಕಾಲ ಅಲ್ಲಿ ವಿಶ್ರಮಿಸಿಕೊಂಡಳು.

ಅಷ್ಟರಲ್ಲಿ ಎದುರಿಗಿನ ರಸ್ತೆಯ ಮೇಲೆ ಮೂರುನಾಲ್ಕು ಜನ ಮಾತನಾಡುತ್ತ ಬರುತ್ತಿರುವುದು ಕಾಣಿಸಿತು ಮಹಾದೇವಿಗೆ. ಅವರ ದೃಷ್ಟಿಯೂ ಮಹಾದೇವಿಯತ್ತ ತಿರುಗಿತ್ತು. ರಸ್ತೆಯನ್ನು ಬಿಟ್ಟು ಕಲ್ಯಾಣಿಯ ಕಡೆಗೆ ತಿರುಗಿದರು. ಈಗ ಅವರ ಮಾತುಗಳೂ ಕಿವಿಯ ಮೇಲೆ ಬೀಳುತ್ತಿದ್ದುವು.

ತಮ್ಮ ರೈತಜೀವನದ ಕಷ್ಟಸುಖಗಳನ್ನು ಕುರಿತು ಮಾತನಾಡುತ್ತಿರುವಂತೆ ತೋರಿತು ಮಹಾದೇವಿಗೆ. ಒಬ್ಬ ಹೇಳಿದುದು ಕೇಳಿಸಿತು :

``ಈ ಸಾರಿ ಹೊಳೆಲಿಂಗೇಶ್ವರನ ಜಾತ್ರೆಯಲ್ಲಿ ಆ ಎತ್ತುಗಳನ್ನು ಮಾರಿಬಿಡಬೇಕೆಂದಿದ್ದೇನೆ.

``ಏಕೆ ಅವನ್ನು ಮಾರಿ ಏನು ಮಾಡುತ್ತೀ ? ಕೇಳಿದ ಇನ್ನೊಬ್ಬ. ಅವನ ದೃಷ್ಟಿ ಮಹಾದೇವಿಯತ್ತ ತಿರುಗಿತ್ತು.

``ಅಷ್ಟು ದೊಡ್ಡ ಹೋರಿಗಳನ್ನು ಇಟ್ಟುಕೊಳ್ಳುವುದು ಸಾಧ್ಯವಿಲ್ಲವಪ್ಪ. ಅವನ್ನು ಕೊಟ್ಟು ಒಂದು ಜೊತೆ ಗಿಡ್ಡಗಳನ್ನು ತೆಗೆದುಕೊಳ್ಳುತ್ತೇನೆ ಹೇಳಿದ ಮೊದಲನೆಯವನು.

ಮೂರನೆಯವನ ದೃಷ್ಟಿಯಂತೂ ಈ ಮಾತುಗಳ ಕಡೆಗೆ ಇಲ್ಲದೆ ಮಹಾದೇವಿಯತ್ತಲೇ ತಿರುಗಿತ್ತು. ಇವರೆಲ್ಲರಿಗಿಂತ ಹಿರಿಯವನಾದ ನಾಲ್ಕನೆಯವನು ಕಲ್ಯಾಣಿಯಲ್ಲಿಳಿದು ಕೈಕಾಲು ತೊಳೆದುಕೊಳ್ಳುತ್ತಿದ್ದ.

ಈ ಮೂವರು ತರುಣರೂ ಒಬ್ಬರ ಮುಖವನ್ನೊಬ್ಬರು ನೋಡಿದರು. ಮೂರನೆಯವನು ಹೇಳಿದ ಕಣ್ಣುಗಳ ಭಾಷೆ ಅವರಿಗೆ ತಿಳಿಯಿತು. ಮೆಲ್ಲಗೆ ಚಾವಡಿಯತ್ತ ತಿರುಗಿದರು.

ಮಹಾದೇವಿ ಬಿಸಿಲಿನ ಜಲಮರೀಚಿಕೆಯನ್ನು ನೋಡುತ್ತಾ ದೂರಕ್ಕೆ ದಿಟ್ಟಿಯನ್ನಟ್ಟಿದ್ದಳು. ಚನ್ನಮಲ್ಲಿಕಾರ್ಜುನನ ವಿರಹ ಬೇಗೆಯಂತೆ ಬಿಸಿಲು ಸುರಿಯುತ್ತಿತ್ತು. ಅವಳ ವಯಸ್ಸು ಮತ್ತು ರೂಪದಿಂದ ಕುತೂಹಲಗೊಂಡು ಅವರು ಮೆಲ್ಲಮೆಲ್ಲಗೆ ಏನೇನೋ ಮಾತನಾಡುತ್ತ ಬಳಿಗೆ ಬರುತ್ತಿದ್ದರು.

ತೀರಾ ಸಮೀಪಕ್ಕೆ ಬಂದರು. ಅವರಲ್ಲೊಬ್ಬ ಮುಂದೆ ಬರುತ್ತಾ ಕೇಳಿದ ಮಹಾದೇವಿಯನ್ನು:

``ಏನಮ್ಮಾ ಯಾವ ಊರು ? ಎಲ್ಲಿಂದ ಬಂದದ್ದು ?

ಅವರ ಪ್ರಶ್ನೆಯಿಂದ ಎಚ್ಚರಗೊಂಡ ಮಹಾದೇವಿ ಅವರತ್ತ ತಿರುಗಿದಳು.