ಕಲ್ಯಾಣ ಬಸವಣ್ಣನ ಬಳಿಗೆ ಹೊರಟಿರುವ ತನ್ನನ್ನು ದಯಾರ್ದ್ರಸೃಷ್ಟಿಯಿಂದ ನೋಡಿ, ಹರಸಿ ಬೀಳ್ಕೊಡುವಂತಿತ್ತು. ಅದಕ್ಕೆ ನಮಸ್ಕರಿಸಿ ಮತ್ತೊಮ್ಮೆ ಶಿವನತ್ತ ತಿರುಗಿ ಶಿವಾಲಯದಿಂದ ಹೊರಬಿದ್ದಳು.
ಕೆರೆಯ ಏರಿಯ ಮೇಲೆ ತಾನು ನಡೆದು ಬಂದ ಮಾರ್ಗ, ಶಿವಾಲಯದ ಪಕ್ಕದಲ್ಲಿಯೇ ಸಾಲುಮರಗಳ ಮೆರವಣಿಗೆಯಲ್ಲಿ ಮುಂದೆ ನಡೆಯುತ್ತಿತ್ತು. ಅದೇ ಮಾರ್ಗದಲ್ಲಿಯೇ ತಾನು ನಡೆಯಬೇಕಾಗಿದೆಯೆಂಬುದನ್ನು ಮಹಾದೇವಿ ಬಲ್ಲಳು. ಮುಂದೆ ನಡೆದರೆ ಕುಂತಳಾಪುರ, ಅಲ್ಲಿಂದ ಮುಂದೆ ಬನವಾಸಿ. ಅನಂತರ ? ನಡೆದು ನೋಡಬೇಕು ಅಷ್ಟೆ. ಅಲ್ಲಿಯವರೆಗೆ ಮಾತ್ರ ಅವಳ ಪ್ರಪಂಚಪರಿಚಯ ಹಬ್ಬಿತ್ತು.
ಹೀಗೆ ಆಲೋಚಿಸುತ್ತಾ ಮಹಾದೇವಿ ದೇವಾಲಯದ ಮುಂಭಾಗದಲ್ಲಿ ನಿಂತು ಬಳ್ಳಿಗಾವೆಯ ಕಡೆ ನೋಡಿದಳು. ಕೆರೆಯ ಏರಿಯ ರಸ್ತೆಯಲ್ಲಿ ನೇರವಾಗಿ ಮುಂದುವರೆದು ಸ್ವಲ್ಪ ದೂರ ನಡೆದರೆ ಬಳ್ಳಿಗಾವೆಯನ್ನು ಪ್ರವೇಶಿಸಬಹುದಾಗಿತ್ತು.
ಊರನ್ನು ಪ್ರವೇಶಿಸುವುದೇ ಅಥವಾ ಮುಖ್ಯರಸ್ತೆಗೆ ತಿರುಗಿ ತನ್ನ ಮಾರ್ಗವನ್ನು ತಾನು ಹಿಡಿಯುವುದೇ ?
ಮೇಲೆ ತಲೆಯೆತ್ತಿ ನೋಡಿದಳು. ಸೂರ್ಯನಾಗಲೇ ತನ್ನ ಪ್ರಯಾಣದ ಉನ್ನತಶಿಖರವನ್ನು ಮುಟ್ಟಿ ಕೆಳಗಿಳಿಯತೊಡಗಿದ್ದ. ಇಂದು ಸಂಜೆಯೊಳಗಾಗಿ ತಾನು ಕುಂತಳಾಪುರವನ್ನಾದರೂ ಸೇರಬೇಕು ಎಂದು ಮಹಾದೇವಿ ಆಲೋಚಿಸಿದಳು. ಆದರೆ ಎಂದೂ ಕಷ್ಟವನ್ನು ಕಂಡರಿಯದ ಕೋಮಲವಾದ ಅವಳ ದೇಹ, ತನ್ನ ನೈಸರ್ಗಿಕ ಸ್ವಭಾವಕ್ಕೆ ಬದ್ಧವಾಗಿತ್ತು. ಬಿರುಬಿಸಿಲಿನಲ್ಲಿ ಏಕಪ್ರಕಾರವಾಗಿ ನಡೆದುಬಂದ ಅವಳ ಕಾಲುಗಳು, ಸ್ವಲ್ಪ ವಿಶ್ರಾಂತಿಯ ನಂತರವೂ ಕೂಡ, ಮುಂದಿನ ಪ್ರವಾಸಕ್ಕೆ ಉತ್ಸಾಹವನ್ನು ತೋರಿಸುವಂತಿರಲಿಲ್ಲ. ತನ್ನ ಮನಸ್ಸಿನ ಅಪಾರವಾದ ಆಕಾಂಕ್ಷೆಯನ್ನು ಈಡೇರಿಸಲಾರದ ದೇಹದ ಮಿತಿಯನ್ನು ಕಂಡು ಮಿಡುಕುತ್ತಾ ನಿಂತಿದ್ದಳು.
ಅಷ್ಟರಲ್ಲಿ ಬಳ್ಳಿಗಾವೆಯ ಕಡೆಯಿಂದ ಬರುತ್ತಿದ್ದ ಕಮಾನುಗಾಡಿಯೊಂದು ದೇವಾಲಯದ ಬಳಿ ಬಂದು ಮಹಾದೇವಿಯ ಸಮೀಪದಲ್ಲಿಯೇ ನಿಂತಿತು. ಗಾಡಿಯ ಮುಂಭಾಗದಿಂದ ಮಧ್ಯವಯಸ್ಸು ಮೀರಿದ, ಸ್ವಲ್ಪ ಮಟ್ಟಿಗೆ ಸ್ಥೂಲಕಾಯವೆಂದು ಹೇಳಬಹುದಾದ ವ್ಯಕ್ತಿಯೊಂದು ಕೆಳಗೆ ಇಳಿಯಿತು. ಗಾಡಿಯ ಹಿಂಭಾಗದಿಂದ ಒಬ್ಬ ತರುಣ ಕೆಳಗೆ ಹಾರಿದ. ಅನಂತರ ಇಬ್ಬರು ಹೆಂಗಸರು ಇಳಿದರು. ಮಹಾದೇವಿ ಅವರನ್ನು ನೋಡುತ್ತಿದ್ದಳು.