೨ನೆಯ ಪ್ರಕರಣ
ಎಲ ! ಇದೇನು ?
ಈ ಮೇರೆಗೆ ರಾಮರಾಜನು ತರುಣಿಗೆ ಹೇಳಿ ಮತ್ತೊಂದು ಕಡೆಗೆ ಹೊರಟುಹೋಗಲು, ಇತ್ತ ಆ ತರುಣಿಯ ಮನೆಯವರು ಬಹಳ ಹೊತ್ತಾದರೂ ತಮ್ಮ ಪ್ರಿಯ ಮೆಹರ್ಜಾನಳು ಬಾರದಿರುವದನ್ನು ನೋಡಿ ಚಟಪಡಿಸಿ, ಅವರಲ್ಲಿ ಒಬ್ಬಿಬ್ಬರು ಲಗುಬಗೆಯಿಂದ ಹೊಳೆಯ ದಂಡೆಗೆ ಬಂದರು. ಅಲ್ಲಿ ಒಂದು ಭಯಂಕರವಾದ ಹುಲಿಯು ಬಿದ್ದಿತು. ಅದನ್ನು ನೋಡಿ ಅವರು ಬೆದರುತ್ತ ಬೆದರುತ್ತ ಮುಂದಕ್ಕೆ ಹೋಗಿ ನಾಲ್ಕೂ ಕಡೆಗೆ ನೋಡಿದರು. ಆಗ ದೂರದಲ್ಲಿ ಒಂದು ತುಬಾಕಿಯೂ, ಒಂದು ಸತ್ತುಬಿದ್ದ ಕುರಿಯೂ, ಗಿಡದ ಮೇಲೆ ಮಂಜಿಕೆಯೂ ಅವರ ಕಣ್ಣಿಗೆ ಬಿದ್ದವು. ಇವನ್ನೆಲ್ಲ ನೋಡಿ ಅವರು ತಮ್ಮ ಮೆಹರ್ಜಾನಳ ಗತಿಯು ಹೀಗೆಯೇ ಆಯಿತೆಂದು ನಿರ್ಧರಿಸಲಾರದಾದರು. ಹುಲಿಯ ಭಯದಿಂದ ಮೆಹರ್ಜಾನಳು ಹೊಳೆಯಲ್ಲಿ ಬಿದ್ದಿರಬಹುದೆಂದು ತರ್ಕಿಸಿ, ಒಮ್ಮೆ ಅವರು ಹೊಳೆಯಲ್ಲಿ ಧುಮುಕಿ ಶೋಧಮಾಡಿದರು. ಮತ್ತೊಮ್ಮೆ ಅವರ ಮನಸ್ಸಿಗೆ, ಮೆಹರ್ಜಾನಳು ಎಲ್ಲಿಯಾದರೂ ಓಡಿಹೋಗಿರಬಹುದೆಂದು ವಿಚಾರವು ಹೊಳೆಯಿತು, ಆದರೆ ಮೆಹರ್ಜಾನಳನ್ನು ಹುಲಿಯು ಹಿಡಿದಂತೆ ಮಾತ್ರ ಅವರಿಗೆ ತೋರಲಿಲ್ಲ. ಯಾಕೆಂದರೆ ಮೆಹರ್ಜಾನಳ ಶರೀರದ ಇಲ್ಲವೆ ಶರೀರದ ಮೇಲಿನ ವಸ್ತ್ರಾಭರಣಗಳ ಗುರುತಿನ ಗಂಧವು ಸಹ ಅಲ್ಲಿ ಅವರಿಗೆ ತೋರುತ್ತಿದ್ದಿಲ್ಲ. ಹೊಳೆಯಲ್ಲಿ ಗೊತ್ತುಹತ್ತದ್ದರಿಂದ ಆಕೆಯು ಅರಣ್ಯದಲ್ಲಿ ಓಡಿಹೋಗಿ ಎಲ್ಲಿಯಾದರೂ ಅಡಗಿಕೊಂಡು ಕುಳಿತಿರಬಹುದೆಂದು ತರ್ಕಿಸಿ ಅವರು ಮೆಹರ್ಜಾನಳನ್ನು ಹೆಸರುಗೊಂಡು ಕೂಗಿ ಕೂಗಿ ಹುಡುಕಹತ್ತಿದರು. ಅಷ್ಟರಲ್ಲಿ ಕತ್ತಲೆಯಾಯಿತು ; ಮೆಹರ್ಜಾನಳ ಗೊತ್ತು ಹತ್ತಲಿಲ್ಲ. ಅತ್ತ ಅವರು ಇಳಕೊಂಡ ಸ್ಥಳದಲ್ಲಿ ಹೆಂಗಸರು ಒಂದೇ ಸಮನೆ ಆಕ್ರೋಶ ಮಾಡುತ್ತಲಿದ್ದರು. ಅವರನ್ನು ಬಿಟ್ಟು ಬಹಳ ಹೊತ್ತು ಹುಡುಕುವದು ಅವರಿಗೆ ಸರಿದೋರಲಿಲ್ಲ. ಆದ್ದರಿಂದ ಅವರು ತಾವು ಇಳಕೊಂಡ ಸ್ಥಳಕ್ಕೆ ಹೋಗಿಬಿಟ್ಟರು. ಅವರ ಸಂಗಡ