ವಿಷಯಕ್ಕೆ ಹೋಗು

ಪುಟ:ಶತಕ ಸಂಪುಟ.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಲೇಸನ್ನುಂಟುಮಾಡಬೇಕೆಂಬ ಉದಾತ್ತ ಮೌಲ್ಯಗಳು ಅವುಗಳ ಮುಖ್ಯ ಧ್ಯೇಯ-
ಧೋರಣೆಗಳಾಗಿವೆ.
ಸದ್ಯ ಲಿಂಗಾಯತ ಶತಕಕಾರರಲ್ಲಿ ಕೊಂಡಗುಳಿ ಕೇಶಿರಾಜ (೧೧೦೭) ನೇ
ಮೊದಲಿಗನೆಂದು ಹೇಳಲಾಗುತ್ತದೆ. ಆತ ರಚಿಸಿದ ಮಂತ್ರಮಹತ್ವದಕಂದ,
ಲಿಂಗಮಹತ್ವದಕಂದ, ಶೀಲಮಹತ್ವದಕಂದ ಕೃತಿಗಳು ಮೊದಲ ಶತಕಗಳೆಂದು
ತಿಳಿಯಲಾಗಿದೆ. ಆದರೆ ಅವುಗಳಿಗೆ 'ಶತಕ' ಎಂದು ಕರೆದಿಲ್ಲ. ಮುಂದೆ ಕಂದ
ರೂಪದಲ್ಲಿ ಶತಕಗಳು ರಚನೆಯಾಗಿರುವುದನ್ನು ಗಮನಿಸಿದರೆ - ಶತಕ ಕೃತಿಗಳ
ಎಲ್ಲ ಲಕ್ಷಣಗಳನ್ನು ಒಳಗೊಂಡಿರುವ ಈ ಕಂದ ಕೃತಿಗಳನ್ನು ಶತಕಗಳೆಂದು
ಪರಿಗಣಿಸುವುದು ಉಚಿತವೆನಿಸುತ್ತದೆ.
ಇನ್ನು 'ಶತಕ' ಎಂಬ ಹೆಸರನ್ನು ಶಿರೋನಾಮೆಯಲ್ಲಿಯೇ ಧರಿಸಿ - ಸಂಸ್ಕೃತ
ಶತಕ ಕೃತಿಗಳ ಎಲ್ಲ ಲಕ್ಷಣಗಳನ್ನೂ ಅಳವಡಿಸಿಕೊಂಡು ರಚಿತವಾದ ಲಿಂಗಾಯತ
ಮೊದಲ ಕೃತಿಗಳೆಂದರೆ ಹರಿಹರ (೧೨೫೦) ಕವಿಯ ರಕ್ಷಾಶತಕ ಮತ್ತು ಪಂಪಾಶತಕ.
ತುಂಬ ಪ್ರಸಿದ್ಧವಾದ ಅವುಗಳಲ್ಲಿ ಕವಿಯ ಆತ್ಮಕಥನ ಮತ್ತು ವಿರೂಪಾಕ್ಷಸ್ತುತಿ
ನಿರೂಪಿತವಾಗಿವೆ.
ಅನಂತರದಲ್ಲಿ, ಅದರಲ್ಲಿಯೇ ಲಿಂಗಾಯತ ಸಾಹಿತ್ಯದ ಪುನರುಜ್ಜೀವನ
ಕಾಲವೆನಿಸಿದ ೧೫ನೆಯ ಶತಮಾನದ ನಂತರದಲ್ಲಿ ಶತಕ ಕೃತಿಗಳ ಸೃಷ್ಟಿಕಾರ್ಯ
ಎಡೆಬಿಡದೆ ನಡೆಯಿತು. ಗುಮ್ಮಟಾರ್ಯ, ಪುಲಿಗೆರೆಯ ಸೋಮೇಶ, ಮೊಗ್ಗೆಯ
ಮಾಯಿದೇವ, ಚಂದ್ರಕವಿ, ವೀರಭದ್ರರಾಜ, ಶಾಂತಮಲ್ಲ, ಸಿರಿನಾಮಧೇಯ,
ಶಂಕರದೇವ, ಶಾಂತವೃಷಭೇಶ, ಶಾಂತಾಚಾರ್ಯ, ವಿರಕ್ತತೋಂಟದಾರ್ಯ, ಯೋಗಾನಂದ,
ನಿಜಲಿಂಗಾರಾಧ್ಯ ಮೊದಲಾದವರು ಉತ್ತಮೋತ್ತಮ ಕೃತಿಗಳನ್ನು ರಚಿಸಿರುವರು.
ಅವುಗಳಲ್ಲಿ ಸತ್ವ - ತತ್ವ - ಶೈಲಿಯ ಸುಭಗತೆಯ ದೃಷ್ಟಿಯಿಂದ ಹೆಚ್ಚು ಜನಪ್ರಿಯವೆನಿಸಿ
ಪ್ರಸಿದ್ಧಿಯನ್ನು ಪಡೆದ ಕೃತಿಗಳೆಂದರೆ ಹರಿಹರನ ರಕ್ಷಾಶತಕ - ಪಂಪಾಶತಕ, ಮೊಗ್ಗೆಯ
ಮಾಯಿದೇವನ ಶತಕತ್ರಯ (ಶಿವಾಧವಶತಕ, ಶಿವಾವಲ್ಲಭಶತಕ
ಮಹದೈಪುರೀಶ್ವರಶತಕ) ಮತ್ತು ಲಿಂಗಣಾರಾಧ್ಯನ ನಿಜಲಿಂಗಶತಕ.
*** ಪ್ರಸ್ತುತ ಸಂಪುಟದಲ್ಲಿ ಲಿಂಗಾಯತ ಕವಿಗಳು ರಚಿಸಿದ ನಾಲ್ಕು ಶತಕಗಳನ್ನು
ಅಳವಡಿಸಲಾಗಿದೆ : ೧. ರಕ್ಷಾಶತಕ, ೨. ಪಂಪಾಶತಕ, ೩. ಸೋಮೇಶ್ವರ ಶತಕ, ೪.
ನಿಜಲಿಂಗಶತಕ. ಮೊದಲ ಎರಡರ ಕರ್ತೃ ಹರಿಹರ ; ಮೂರು ಮತ್ತು ನಾಲ್ಕರ
ಕರ್ತೃಗಳು ಪುಲಿಗೆರೆಯ ಸೋಮ ಮತ್ತು ನಿಜಲಿಂಗಾರಾಧ್ಯ.


xii