ವಿಷಯಕ್ಕೆ ಹೋಗು

ಪುಟ:ಶತಕ ಸಂಪುಟ.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಜನಮಂ ಬೇಳ್ಪಾಸೆಯಿಂ ಸಾವಿನ ಪರಿಯೆನಿಪೀ ದೈನ್ಯಮಂ ಬಿಟ್ಟು ನಿಮ್ಮಂ
ನೆನೆಯುತ್ತಿರ್ಪಂತೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೨೧ ‖

ಮನೆಯೆಂದುಂ ಮಕ್ಕಳೆಂದುಂ ಜನನಿಜನಕರೆಂದುಂ ವೃಥಾ ಪತ್ನಿಯೆಂದುಂ
ಧನಮೆಂದುಂ ಧಾನ್ಯಮೆಂದುಂ ಸಕಲವಿಷಯವಿಂತೆನ್ನದೆಂದುಂ ನಿರರ್ಥಾ-
ರ್ಥನಿಮಿತ್ತಂ ಬೆಂದು ತಾಪತ್ರಯದೊಳೆ ಕುದಿದೆಂ ಬತ್ತಿದೆಂ ಬಾಡಿದೆಂ ಯಾ-
ತನೆಗೊಂಡೆಂ ದೇವ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೨೨ ‖

ವಿಪುಳಾನಂಗಾಗ್ನಿಯಿಂ ಬಂದೆಳೆದುರವಣಿಪಾಶಾಗ್ನಿಯಿಂದಂ ನಿರರ್ಥ೦
ಕುಪಿತೋದ್ಭೂತಾಗ್ನಿಯಿಂದಂ ಹರಹರ ಮಿಗೆ ಬೇವುತ್ತುಮಿರ್ದಪ್ಪೆನಾನಂ-
ದಪಯೋವಾರಾಶಿ ನಿಮ್ಮೀ ವಿಮಳಕರತಳಾಬ್ಜಂಗಳಿಂದೆತ್ತುತಯ್ಯೋ
ಕೃಪೆಯಿಂದಂ ನೋಡಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೨೩ ‖

ನವೆದೆಂ ರೋಗಂಗಳಿಂದಂ ಸೆಡೆದೆನನುದಿನಂ ಸೇವೆಯಿಂದಂ ನಿರರ್ಥಂ
ಸವೆದೆಂ ಕಾಮಂಗಳಿಂದಂ ಮಿಗೆ ಪರಿಭವದೊಳ್ ಬಂದೆ ನಾನಾಸೆಯಿಂದಂ
ತವಿಲಾದೆಂ ಕೋಪದಿಂದಳ್ಕಿದೆನತಿಮದದಿಂ ಮುಂದುಗೆಟ್ಟಿರ್ದಪೆಂ ಶಂ-
ಭುವೆ ನೀಲಗ್ರೀವ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೨೪ ‖

ಅಯ್ಯೋ ಸಂಸಾರಸಂಗಕ್ಕರೆಯದೆರಗಿದೆಂ ಮಳ್ಗಿದೆಂ ಮಾರುವೋದೆಂ
ಮುಯ್ಯಾಂತೆಂ ಮುಂದುಗೆಟ್ಟೆಂ ಸೆಡೆದೆನುಡುಗಿದೆಂ ಮಾಸಿದಂ ಸೂಸಿದೆಂ ಕಿ-
ರ್ಗ್ಗಯ್ಯಾದೆಂ ಕಂದಿದೆಂ ಕುಂದಿದೆನಲಸಿದೆನಾಸತ್ತೆನಲ್ಲಾಡಿದೆಂ ನೀ-
ನಯ್ಯಾ ಕೈಕೊಂಡು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೨೫ ‖

ಉರಗಾಸ್ಯಾಲಗ್ನಭಗ್ನಪ್ರಚಲಿತಹರಿವೊಲ್ ವ್ಯಾಘ್ರವಕ್ತ್ರಪ್ರಯುಕ್ತ
ಸ್ಫುರಿತಾತಂಕಾಂತರಂಗಸ್ಥಿತಿಮೃಗಶಿಶುವೊಲ್ ಸಿಂಹಹಸ್ತಾವಲಂಬ
ದ್ವಿರದಂಬೋಲಿರ್ದೆನೀ ಮಾಯೆಯ ಮುಖದೆಡೆಯೊಳ್ ಬೇಗದಿಂ
ಪಿಂಗಿಸಾ ಮದ್
ಗುರುವೇ ಮತ್ಸ್ವಾಮಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೨೬ ‖