ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲಿಪಿ
ಭಾಷೆಯ ಬರೆಹ ರೂಪ (ಸ್ಕ್ರಿಪ್ಟ್). ಮನುಷ್ಯ ಆಡುವ ಮಾತು ಭಾಷೆಯಾದರೆ, ಆ ಭಾಷೆಯನ್ನು ಹಿಡಿದಿಡುವ ಸಾಧನವೇ ಲಿಪಿ. ಮಾನವ ಗುಂಪುಗುಂಪಾಗಿ ವಾಸಮಾಡುವಾಗ ಕಲಿತದ್ದು ಭಾಷೆ. ಬರೆಹವು ಮನುಷ್ಯನ ನಾಗರಿಕತೆಯ ಮಾನದಂಡ. ಯಾವುದೇ ಭಾಷೆಯನ್ನು ಯಾವುದೇ ಲಿಪಿಯಲ್ಲಿ ಬರೆಯಬಹುದಾದರೂ ಇದಕ್ಕೆ ಒಂದು ಮಿತಿ ಇದೆ. ಎಷ್ಟೋ ಲಿಪಿಗಳು ತಮ್ಮ ಮೂಲ ಉಚ್ಚಾರವನ್ನು ಕಳೆದುಕೊಂಡು ಗೊಂದಲ ಲಿಪಿಗಳಾಗಿರುವುದುಂಟು.
ಉದಾ: ಕೇಶಿರಾಜನ ಕಾಲದ ಱೞ, ಕುಳ, ಕ್ಷಳ ಗಳನ್ನು ಪರಿಭಾವಿಸ ಬಹುದು.
ಪ್ರಪಂಚಾದ್ಯಂತ ವರ್ಣಲಿಪಿ ಚಾಲ್ತಿಗೆ ಬರುವುದಕ್ಕಿಂತ ಮುಂಚೆ ಚಿತ್ರಲಿಪಿ, ಭಾವಲಿಪಿ, ಮಧ್ಯಮ ಲಿಪಿ(ಟ್ರಾನ್ಸಿಷನಲ್ ಸ್ಕ್ರಿಪ್ಟ್), ಧ್ವನಿ ರೂಪಕ ಲಿಪಿ ಮೊದಲಾದುವು ಬಳಕೆಯಲ್ಲಿದ್ದುವು. ಯಾವುದೇ ಒಂದು ಲಿಪಿ ಬದಲಾವಣೆಯಾಗಬೇಕಾದರೆ ಅದಕ್ಕೆ ಸಾವಿರಾರು ವರ್ಷಗಳು ಬೇಕಾಗುತ್ತವೆ. ಲ್ಯಾಟಿನ್ ಲಿಪಿಯಲ್ಲಿ ಸ್ವರ ಮತ್ತು ವ್ಯಂಜನಗಳಿಗೆ ಪ್ರತ್ಯೇಕ ಚಿಹ್ನೆಗಳಿದ್ದು ಪೂರ್ಣರೂಪದ ವ್ಯಂಜನಗಳನ್ನು ಹೊಂದಿದೆ. ಹೀಗಾಗಿ ಇದರ ಬರೆವಣಿಗೆ ಸುಲಭ. ಯಾವುದೇ ಭಾಷೆಯನ್ನು ಈ ಲಿಪಿಯಲ್ಲಿ ಬರೆಯಬಹುದು. ಹಾಗೆಯೇ ಭಾರತದ ವರ್ಣಮಾಲೆಯಲ್ಲಿ ವ್ಯಂಜನಗಳು ಸ್ವರಸಮೇತವಾಗಿದ್ದರೂ ಸ್ವರಗಳನ್ನು ವ್ಯಂಜನಗಳಿಂದ ಬೇರ್ಪಡಿಸಬಹುದಾಗಿದೆ.
ಪ್ರಪಂಚದಲ್ಲಿ ಅನೇಕ ಲಿಪಿಗಳನ್ನು ಗುರುತಿಸಬಹುದು. ಅವೆಂದರೆ-ಈಜಿಪ್ಟ್ನ ಚಿತ್ರಲಿಪಿ, ಧಾರ್ಮಿಕಲಿಪಿ, ಸಾಮಾನ್ಯಲಿಪಿ, ಮೆಸೊಪೊಟೇಮಿ ಯದ ಮೊನಚುಲಿಪಿ, ಕ್ರೀಟ್ಲಿಪಿ, ಹಿಟ್ಟೈಟರಲಿಪಿ, ಚೀನಲಿಪಿ, ಸಿಂಧೂಲಿಪಿ, ಮೆಕ್ಸಿಕೋದೇಶದ ಮಾಯಾಲಿಪಿ, ಈಸ್ಟರ್ ದ್ವೀಪಗಳ ಲಿಪಿ, ಜಪಾನಿನ ಲಿಪಿ, ವರ್ಣಲಿಪಿಗಳಲ್ಲಿ-ಬೈಬ್ಲೂಗಳ ತೋರಿಕೆ ಲಿಪಿ, ದಕ್ಷಿಣ ಸೆಮಿಟಿಯ ವರ್ಣಲಿಪಿ, ಹೀಬ್ರೂಲಿಪಿ, ಫೊನಿಷಿಯ ಲಿಪಿ, ಪರ್ಷಿಯ ಲಿಪಿ, ಗ್ರೀಕ್ಲಿಪಿ, ಅರಾಮಿಯ ಕನಾನೈಟ್ ಲಿಪಿ, ಇಥಿಯೋಪಿಯ ಲಿಪಿ, ಲಿಬಿಯ ಲಿಪಿ, ಇಬೇರಿಯ ಲಿಪಿ, ಭಾರತದಲ್ಲಿ ಬಳಕೆಯಲ್ಲಿದ್ದ ಅಶೋಕನಕಾಲದ ಬ್ರಾಹ್ಮೀ ಲಿಪಿ, ಖರೋಷ್ಠಿ, ಅಶೋಕನ ಅನಂತರದ ಲಿಪಿಗಳು-ನಾಗರಿ-ದೇವನಾಗರಿ, ನಂದಿನಾಗರಿ ಲಿಪಿ, ಶಾರದ ಲಿಪಿ, ಬಂಗಾಲಿ ಲಿಪಿ, ಶಂಕುಲಿಪಿ. ಹಾಗೆಯೇ ದಕ್ಷಿಣ ಭಾರತದಲ್ಲಿ ಆಳಿಕೆ ನಡೆಸಿದ ವಿವಿಧ ರಾಜಮನೆತನಗಳು ತಮ್ಮ ಆಡಳಿತಾವಧಿಯಲ್ಲಿ ಬಳಸುತ್ತಿದ್ದ ವಿವಿಧ ಲಿಪಿಗಳು-ಸಾತವಾಹನ, ಕದಂಬ, ಬಾದಾಮಿ ಚಳುಕ್ಯ, ಪಲ್ಲವ, ರಾಷ್ಟ್ರಕೂಟ, ಕಲ್ಯಾಣಿ ಚಾಳುಕ್ಯ, ಹೊಯ್ಸಳ, ಸೇವುಣ, ವಿಜಯನಗರ, ವಿಜಯನಗರೋತ್ತರ, ತಮಿಳುನಾಡಿನ ಲಿಪಿಗಳು-ವಟ್ಟೆೞುತ್ತು-ಗ್ರಂಥಿಕೆ, ತಮಿಳು, ಮಲಯಾಳ, ತುಳು, ತಿಗಳಾರಿ, ಅಮರಗನ್ನಡ, ತೆಲುಗು-ಪರ್ಷಿಯ, ಅರಾಬಿಯ, ಉರ್ದು- ಕಲಾತ್ಮಕ ಬರೆವಣಿಗೆ, ಮೋಡಿ ಲಿಪಿ ಇವುಗಳ ಜೊತೆಗೆ ಇಂದಿನ ಜನತೆ ಬಳಸುತ್ತಿರುವ ಲಿಪಿ ಪ್ರಭೇದಗಳು: ಮುದ್ರಣ ಕಾಲದ ಬರೆವಣಿಗೆ-ಕಾಗದದ ಮೇಲಿನ ಬರೆವಣಿಗೆ, ಸಂಜ್ಞಾಲಿಪಿ, ಬ್ರೈಲ್ಲಿಪಿ, ಮಾರ್ಸ್ಕೋಡ್, ಧಾರ್ಮಿಕಚಿಹ್ನೆ, ಶೀಘ್ರಲಿಪಿ, ರಸ್ತೆಯ ಸಂಕೇತ, ನಾಟ್ಯಮುದ್ರೆ, ಸಹಿ, ಬೆರಳಚ್ಚು, ಗಣಕಯಂತ್ರ ಇತ್ಯಾದಿ.
ಲಿಪಿಗಳ ಚರಿತ್ರೆಯಲ್ಲಿ ಅತಿ ಪ್ರಾಚೀನವಾದುದು ಸುಮೇರಿಯನ್ನರು ಬಳಸಿದ ಲಿಪಿ. ಈ ಲಿಪಿ ಮೊಳೆಯಾಕಾರದಲ್ಲಿದ್ದು ಕ್ರಿ.ಪೂ.4,000 ವರ್ಷಗಳ ಹಿಂದಿನ ಇವರ ಬರೆವಣಿಗೆಯ ಮುದ್ರೆಗಳು ದೊರೆಯುತ್ತವೆ. ಈ ಚಿತ್ರಗಳು ಭಾವ ಮತ್ತು ಧ್ವನಿ ನಿರೂಪಣೆಗೆ ಬದಲಾಗಿವೆ. ಕ್ರಿ.ಪೂ. 6ನೆಯ ಶತಮಾನದ ಕಾಲಕ್ಕೆ ಇದು ವರ್ಣಲಿಪಿಯಾಗಿ ಪರಿವರ್ತಿತ ವಾಯಿತು. ಈ ಲಿಪಿಯನ್ನು ಪರ್ಷಿಯ, ಅಸ್ಸೀರಿಯ, ಬ್ಯಾಬಿಲೋನಿಯ, ಎಲಮೈಟ್ ಕಸ್ಸ್ಟ್ರೆಟ್, ಹಿಟೈಟ್ ಮಿಟಾನಿ, ಹುರ್ರಿಯನ್, ಉರರ್ತು ಮುಂತಾದೆಡೆಗಳಲ್ಲಿ ವಾಸಿಸುತ್ತಿದ್ದ ಜನರು ಬಳಸಿದರು. ಹಮೂರಬಿ ತನ್ನ ಆಜ್ಞೆಗಳನ್ನು (ಶಾಸನಗಳು) ಈ ಲಿಪಿಯಲ್ಲಿ ಬರೆಸಿದ್ದಾನೆ. ಈಜಿಪ್ಟಿ ನಲ್ಲಿ ಚಿತ್ರಲಿಪಿ ಬಳಕೆಯಲ್ಲಿತ್ತು. ಇದರ ಅನಂತರ ಭಾರತ, ಚೀನ ಮುಂತಾದ ದೇಶಗಳಲ್ಲಿ ಭಾವಲಿಪಿಗಳಂತಹ ಲಿಪಿಗಳು ಕಾಣಿಸಿಕೊಂಡವು. ಚೀನದ ಲಿಪಿಗಳು ಇಂದಿಗೂ ಅರೆವರ್ಣ, ಅರೆಭಾವ ಲಿಪಿಗಳಾಗಿ ಬಳಕೆಯಾಗುತ್ತಿವೆ.
ಲಿಪಿಗಳನ್ನು ನಾಲ್ಕು ರೀತಿಗಳಲ್ಲಿ ಬರೆಯುವ ಕ್ರಮವಿದೆ:
1. ಬಲದಿಂದ ಎಡಕ್ಕೆ: ಅರಾಮಿಯ, ಫೋನಿಷಿಯ ಮಧ್ಯಪ್ರಾಚ್ಯದಲ್ಲಿರುವ ಎಲ್ಲಾ ಲಿಪಿಗಳು ಈ ವರ್ಗದವು. ಬ್ರಾಹ್ಮೀಲಿಪಿಯನ್ನು ಮೂಲದಲ್ಲಿ ಬಲದಿಂದ ಎಡಕ್ಕೆ ಬರೆಯಲಾಗುತ್ತಿತ್ತು. ಈಗ ಎಡದಿಂದ ಬಲಕ್ಕೆ, ಯುರೋಪಿಯಾದ ಲಿಪಿಗೆ ಮೂಲವಾದ ಗ್ರೀಕ್ ಲಿಪಿ ಬರೆಯಲಾಗುತ್ತದೆ.
2. ಎಡದಿಂದ ಬಲಕ್ಕೆ: ಬ್ರಾಹ್ಮೀ, ಯುರೋಪಿಯದ ಲಿಪಿಗೆ ಮೂಲವಾದ ಗ್ರೀಕ್ ಲಿಪಿ, ಕೃಷ್ಣಾ ಜಿಲ್ಲಾ ದಿವಿ ತಾಲೂಕು ವೊಕದರಲ್ಲಿರುವ ಲಕ್ಷ್ಮಿಪುರದ ಶಾಸನ ಆಕಸ್ಮಿಕ ಬರೆವಣಿಗೆಗಳು ಈ ಸ್ವರೂಪದವು.
3. ಮೇಲಿನಿಂದ ಕೆಳಕ್ಕೆ: ಚೀನಲಿಪಿ ಮತ್ತು ಅದರಿಂದ ಹುಟ್ಟಿದ ಲಿಪಿಗಳು.
4. ಕೆಳಗಿನಿಂದ ಮೇಲಕ್ಕೆ: ತಾಳಗುಂದದ ಶಾಸನದಲ್ಲಿ ಇಂಥ ಬರೆವಣಿಗೆ ಇದೆ. ಪ್ರಸ್ತುತದಲ್ಲಿ ಕೆಳಗಿನಿಂದ ಮೇಲಕ್ಕೆ ಬರೆಯುವ ಲಿಪಿ ಬಳಕೆಯಲಿಲ್ಲ. ಈಜಿಪ್ಟಿನ ಚಿತ್ರಲಿಪಿಯನ್ನು ಬಲದಿಂದ ಎಡಕ್ಕೂ ಮೇಲಿನಿಂದ ಕೆಳಕ್ಕೂ ಬರೆಯುವ ಕ್ರಮವಿತ್ತು.
ಭಾರತದಲ್ಲಿ ಬರೆವಣಿಗೆಯ ಉಗಮವನ್ನು ಕುರಿತ ಅನೇಕ ಸಿದ್ಧಾಂತಗಳಿವೆ. ಅನೇಕ ಗ್ರೀಕ್ ವಿದ್ವಾಂಸರು, ಪ್ರವಾಸಿಗರು ಮೊದಲಾದವರು ಭಾರತದ ಲಿಪಿ ಇತಿಹಾಸಕ್ಕೆ ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ. ಜೊತೆಗೆ ಬೌದ್ಧ, ಜೈನ ಧಾರ್ಮಿಕ ಗ್ರಂಥಗಳಲ್ಲೂ ಬರೆವಣಿಗೆಯ ಪ್ರಾಚೀನತೆಯನ್ನು ಗುರುತಿಸಬಹುದು. ಭಾರತದಲ್ಲಿ ಲಿಪಿಯ ಪ್ರಾಚೀನತೆ ಕ್ರಿ.ಪೂ. ಸು. 2500ರಷ್ಟು ಹಿಂದಿನದು. ಹರಪ್ಪ, ಮೊಹೆಂಜೊದಾರೊ ಮುಂತಾದ ಸ್ಥಳಗಳಲ್ಲಿ ಕಂಡುಬಂದ ಸಿಂಧೂ ಸಂಸ್ಕøತಿಯ ಅವಶೇಷ ಗಳಲ್ಲಿ ಬರೆವಣಿಗೆಯನ್ನೊಳಗೊಂಡ ಸಾವಿರಾರು ಮಣ್ಣಿನ ಮತ್ತು ತಾಮ್ರದ ಮುದ್ರೆಗಳು ದೊರಕಿವೆ. ಆದರೆ ಆ ಬರೆವಣಿಗೆಯ ಲಿಪಿಯನ್ನು ಓದಲು ಪೂರ್ಣವಾಗಿ ಸಾಧ್ಯವಾಗಿಲ್ಲ. ಪ್ರಯತ್ನಗಳು ನಿರಂತರವಾಗಿ ನಡೆದಿವೆ.
ಭಾರತದಲ್ಲಿ ಲಿಪಿ ಯಾವಾಗ ಹೇಗೆ ಪ್ರಾರಂಭವಾಯಿತೆಂಬುದು ನಿಖರವಾಗಿ ತಿಳಿದಿಲ್ಲ. ಭಾರತೀಯ ಇತಿಹಾಸದಲ್ಲಿ ಕಂಡುಬರುವ ಹಲವಾರು ಸಮಸ್ಯೆಗಳಲ್ಲಿ ಲಿಪಿಯ ಪ್ರಾಚೀನತೆಯೂ ಒಂದು. ಈ ವಿಷಯದ ಬಗ್ಗೆ ವಿದೇಶಿ ಹಾಗೂ ದೇಶೀ ವಿದ್ವಾಂಸರು ವಿಭಿನ್ನವಾದ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಇವುಗಳಲ್ಲಿ ಮುಖ್ಯವಾದ ಕೆಲವನ್ನು ಪರಿಶೀಲಿಸಬಹುದು. ‘ಪಾಣಿನಿಯ ಅಷ್ಟಾಧ್ಯಾಯಿ’ ಗ್ರಂಥದ ಆಧಾರದಿಂದ, ಜರ್ಮನಿಯ ಮ್ಯಾಕ್ಸ್ ಮುಲ್ಲರ್ ಭಾರತದಲ್ಲಿ ಲಿಪಿಯ ಉಗಮ ಕ್ರಿ.ಪೂ. 4ನೆಯ ಶತಮಾನದಲ್ಲಾಯಿತು ಎಂದಿದ್ದಾನೆ. ಬರ್ನೆಲ್ ಎಂಬಾತ ಭಾರತದಲ್ಲಿ ಬರೆವಣಿಗೆ ಕ್ರಿ.ಶ. 4ನೆಯ ಶತಮಾನದಲ್ಲಿ ಫೊನೀಷಿಯನ್ ಲಿಪಿಯಿಂದ ಉಗಮವಾಗಿರಬೇಕೆಂದು ಊಹಿಸಿದ್ದಾನೆ. ಜಾರ್ಜ್ಬ್ಯೂಲರ್ ಭಾರತಕ್ಕೆ ಲಿಪಿ ಕ್ರಿ.ಪೂ. 4ನೆಯ ಶತಮಾನ ಅಥವಾ ಅದಕ್ಕಿಂತಲೂ ಮುಂಚೆ ಪರಿಚಿತವಾಗಿತ್ತು ಹಾಗೂ ಭಾರತೀಯರಿಗೆ ಲಿಪಿ ಪರಿಚಯ ಸೆಮಿಟಿಕ್ ಲಿಪಿಯಿಂದಾಯಿತೆಂದು ಅಭಿಪ್ರಾಯಪಟ್ಟಿದ್ದಾನೆ.
ಭಾರತದಲ್ಲಿ ಲಿಪಿಯ ಪ್ರಾಚೀನತೆಯ ಬಗ್ಗೆ ತಿಳಿಯಲು ಸಾಹಿತ್ಯಾಧಾರಗಳು-(ಸ್ವದೇಶಿ ಮತ್ತು ವಿದೇಶಿ), ಶಾಸನಾಧಾರಗಳು (ಪುರಾತತ್ತ್ವಾಧಾರಗಳು) ಮುಖ್ಯವಾಗಿವೆ. ಸಾಹಿತ್ಯಾಧಾರಗಳು: ವೇದಕಾಲೀನ ಲೇಖನಕಲೆ ಪ್ರಚಲಿತವಾಗಿತ್ತೆಂಬು ದಕ್ಕೆ ಬಹಳಷ್ಟು ಪುರಾವೆಗಳಿವೆ. ಆರ್ಯರು ಕೇವಲ ಕಂಠಪಾಠವನ್ನು ಅವಲಂಬಿಸದೆ ಲಿಪಿಯ ಸಹಾಯವನ್ನು ಪಡೆದುಕೊಂಡಿದ್ದರು. ಪಾಣಿನಿಯ ‘ಅಷ್ಟಾಧ್ಯಾಯಿ’ಯಲ್ಲಿ ಲಿಪಿ ಮತ್ತು ಲಿಪಿಕಾರ ಎಂಬ ಮಾತುಗಳು ಮೊತ್ತಮೊದಲಬಾರಿಗೆ ಕಾಣಿಸಿಕೊಳ್ಳುತ್ತವೆ. ಕೌಟಿಲ್ಯನ ಕಾಲದ ಸಮಾಜ ದಲ್ಲಿ ಬರೆವಣಿಗೆಗಿದ್ದ ಪ್ರಾಶಸ್ತ್ಯದ ಮೇಲೆ ಅವನ ‘ಅರ್ಥಶಾಸ್ತ್ರ’ ಬೆಳಕು ಚೆಲ್ಲುತ್ತದೆ. ಬೌದ್ಧಗ್ರಂಥಗಳಲ್ಲಿಯೂ ಲೇಖ, ಲೇಖನ ಎಂಬ ಪದಗಳ ಪ್ರಯೋಗ ವಿಶೇಷವಾಗಿದ್ದು, ಆ ಕಾಲದ ಗ್ರಂಥಗಳು ಲೇಖನ ಕಲೆಗಿದ್ದ ಪ್ರಾಮುಖ್ಯವನ್ನು ತಿಳಿಸುತ್ತವೆ. ಕ್ರಿ.ಪೂ. 4ನೆಯ ಶತಮಾನದ ಭಾರತೀಯರು ಲಿಪಿಯನ್ನು ಚೆನ್ನಾಗಿ ತಿಳಿದಿದ್ದುದರ ಜೊತೆಗೆ ಅದನ್ನು ಬಳಸುತ್ತಿದ್ದ ರೆಂಬ ವಿಚಾರ ನರ್ಚಸ್ ಮತ್ತು ಕರ್ಟಸ್ ಎಂಬ ಗ್ರೀಕ್ ಚರಿತ್ರೆಕಾರರ ಬರೆವಣಿಗೆಗಳಿಂದ ತಿಳಿದುಬರುತ್ತದೆ.
ಶಾಸನ ಆಧಾರಗಳು: ಅಶೋಕನ ಶಾಸನಗಳಿಗಿಂತಲೂ ಹಿಂದಿನ ಕೆಲವು ಶಾಸನಗಳು, ಉದಾಹರಣೆಗೆ ಕ್ರಿ.ಪೂ. 483 ಕಾಲದ್ದು ಎಂದು ಗುರುತಿಸಲಾದ ಬಾಡ್ಲಿಶಾಸನ ದೊರೆತಿರುವುದರಿಂದ, ಭಾರತದಲ್ಲಿ ಬರೆವಣಿÂಗೆ ಕ್ರಿ.ಪೂ. 5ನೆಯ ಶತಮಾನದಷ್ಟು ಪುರಾತನದ್ದೆಂದು ಹೇಳಬಹುದು. ಕ್ರಿ.ಪೂ. 3ನೆಯ ಶತಮಾನದ ಅಶೋಕನ ಶಾಸನಗಳು ಬ್ರಾಹ್ಮೀ, ಖರೋಷ್ಠಿ ಎಂಬ ಎರಡು ಲಿಪಿಗಳಲ್ಲಿ ವಿವಿಧ ಸಾಮಗ್ರಿಗಳ ಮೇಲೆ ಕಾಣಿಸಿಕೊಂಡಿವೆ. ಈ ಶಾಸನಗಳಲ್ಲಿ ಕಂಡುಬರುವ ಬ್ರಾಹ್ಮೀ ಲಿಪಿಯನ್ನು ಪರಿಶೀಲಿಸಿದರೆ ಅದು ಹಿಂದಿನಿಂದಲೂ ಬೆಳೆದು ಬಂದು ಒಂದು ಪರಿಪೂರ್ಣಾವಸ್ಥೆಯನ್ನು ಮುಟ್ಟಿತೆಂದು ತೋರುತ್ತದೆ.
ಸಿಂಧೂ: ಸಿಂಧೂ ಸಂಸ್ಕೃತಿಯ ಲಿಪಿಯೇ ಕ್ರಮೇಣ ವಿಕಾಸಗೊಂಡು ಬ್ರಾಹ್ಮೀಲಿಪಿಯಾಗಿ ಪರಿಣಮಿಸಿತೆಂದು ಲಾಂಗ್ಡನ್, ಹಂಟರ್ ಮೊದಲಾದ ವಿದ್ವಾಂಸರ ಅಭಿಪ್ರಾಯ. ಇವರ ಅಭಿಪ್ರಾಯದಂತೆ ಆರ್ಯರು ಸಿಂಧೂ ಸಂಸ್ಕೃತಿಯ ಲಿಪಿಯನ್ನು ಬ್ರಾಹ್ಮೀ ಲಿಪಿಯಾಗಿ ಪರಿವರ್ತಿಸಿಕೊಂಡರು. ಆದರೆ ಡಿರಿಂಜರ್ ಎಂಬ ವಿದ್ವಾಂಸ ಈ ವಾದವನ್ನು ಒಪ್ಪುವುದಿಲ್ಲ. ಆತನ ಪ್ರಕಾರ ಸಿಂಧೂ ಲಿಪಿ ಮತ್ತು ಬ್ರಾಹ್ಮೀ ಲಿಪಿಗಳೆರಡೂ ಬೇರೆ ಬೇರೆ. ಕ್ರಿ.ಪೂ. 7 ಅಥವಾ 6ನೆಯ ಶತಮಾನದಿಂದ ಭಾರತದಲ್ಲಿ ಲಿಪಿ ಆರಂಭವಾಯಿತೆಂಬುದು ಆತನ ವಾದ. ಈ ವಿಷಯದ ಬಗ್ಗೆ ಯಾವ ನಿರ್ಣಯವೂ ಶಕ್ಯವಿಲ್ಲ. ಸಿಂಧೂ ನಾಗರಿಕತೆಯ ಲಿಪಿಯೇ ಭಾರತದ ಅತಿ ಪ್ರಾಚೀನ ಲಿಪಿಯೆಂದೂ ಕ್ರಿ.ಪೂ. 3000 ವರ್ಷಗಳ ಹಿಂದೆ ಅಸ್ತಿತ್ವದಲ್ಲಿತ್ತೆಂದೂ ಹೇಳಬಹುದು. ಸಿಂಧೂ ಲಿಪಿ ಸುಮೇರಿಯ ದೇಶದಿಂದ ಭಾರತಕ್ಕೆ ಬಂದಿತೆಂಬುದು ವ್ಯಾಡಲ್ ಎಂಬ ವಿದ್ವಾಂಸನ ಅಭಿಪ್ರಾಯ. ಹೆರಾಸನ ಅಭಿಪ್ರಾಯದಂತೆ ಈ ಲಿಪಿ ದ್ರಾವಿಡ ಲಿಪಿ; ಸಿಂಧೂಸಂಸ್ಕೃತಿ ದ್ರಾವಿಡರದು ಮತ್ತು ಆರ್ಯ ಸಂಸ್ಕೃತಿಗಿಂತ ಹಿಂದಿನದು. ಸಿಂಧೂಸಂಸ್ಕೃತಿಯನ್ನು ಆರ್ಯ ಸಂಸ್ಕೃತಿಯೆಂದು ಈತ ವಾದಿಸುತ್ತಾನೆ. ಪ್ರಂಪಂಚದ ಎಲ್ಲ ಪ್ರಾಚೀನ ಲಿಪಿಗಳೂ ಇದುವರೆಗೆ ನಮಗೆ ತಿಳಿಯದಿರುವ ಮತ್ತಾವುದೋ ಲಿಪಿಯಿಂದ ಉಗಮಿಸಿರಬೇಕೆಂ ಬುದು ಡಿರಿಂಜರ್ನ ಊಹೆ.
ಬ್ರಾಹ್ಮೀ: ಬ್ರಾಹ್ಮೀ ಲಿಪಿಯ ಉಗಮ ಚರ್ಚಾಸ್ಪದವಾಗಿದ್ದು, ಇದು ವಿದೇಶದಲ್ಲಿ ಹುಟ್ಟಿ ಭಾರತಕ್ಕೆ ಬಂದಿರಬಹುದು. ಹಾಗೆಯೇ ಇದು ಗ್ರೀಕ್ ಲಿಪಿಯಿಂದ ಉಗಮಗೊಂಡಿರಬಹುದೆಂದು ವಿವಿಧ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಬ್ರಾಹ್ಮೀಲಿಪಿ ಸೆಮೆಟಿಕ್ ಜನರ ಕೊಡುಗೆಯೆಂದೂ ಫ್ಹೇನೀಷಿಯನ್ ಲಿಪಿ ಬ್ರಾಹ್ಮೀಗೆ ಮೂಲವೆಂದೂ ಬ್ಯೂಲರ್, ವೆಲರ್, ಬೆನ್ಫೆ ಮೊದಲಾದವರು ಅಭಿಪ್ರಾಯಪಟ್ಟರೆ ಇದು ದಕ್ಷಿಣ ಸೆಮೆಟಿಕ್ ಲಿಪಿ ಮೂಲದ್ದೆಂದು ಟೇಲರ್ ಡೀಕೆ ಮೋದಲಾದವರ ಅಭಿಮತವಾಗಿದೆ. ಇದು ಕ್ಯೂನಿಫಾರಂ ಲಿಪಿಯಿಂದ ಉಗಮಗೊಂಡಿದೆ ಎಂದು ರೈಸ್ ಡೇವಿಸ್ ಅಭಿಪ್ರಾಯಪಡುತ್ತಾನೆ. ಉತ್ತರ ಸೆಮೆಟಿಕ್ ವರ್ಗದ ಅರಾಮೆಯಿಕ್ ಲಿಪಿಯು ಬ್ರಾಹ್ಮೀಗೆ ಮೂಲವೆಂದು ಡಿರಿಂಜರ್ ಅಭಿಪ್ರಾಯಪಟ್ಟಿದ್ದಾನೆ. ಆರ್ಯರಿಗಿಂತ ಮೊದಲು ಭಾರತದಲ್ಲಿದ್ದ ದ್ರಾವಿಡರೇ ಬ್ರಾಹ್ಮೀಲಿಪಿಗೆ ಮೂಲ, ಅವರು ಬಳಸುತ್ತಿದ್ದ ಲಿಪಿಯನ್ನು ಆರ್ಯರು ಉತ್ತಮ ಪಡಿಸಿ ಬ್ರಾಹ್ಮೀಯಾಗಿ ಪರಿವರ್ತಿಸಿದರು, ಅವರೇ ಬ್ರಾಹ್ಮೀಲಿಪಿಯನ್ನು ಚಿತ್ರಲಿಪಿಯ ಆಧಾರದ ಮೇಲೆ ರೂಪಿಸಿದರು ಎಂಬುದು ಅಲೆಗ್ಸಾಂಡರ್ ಕನ್ನಿಂಗ್ಹ್ಯಾಮ್ನ ಅಭಿಪ್ರಾಯ. ಶಾಮಶಾಸ್ತ್ರೀಯವರು ತಾಂತ್ರಿಕ ಚಿಹ್ನೆಗಳಿಂದ ಬ್ರಾಹ್ಮೀ ಲಿಪಿಯನ್ನು ನಿಷ್ಪನ್ನಗೊಳಿಸಲು ಪ್ರಯತ್ನಿಸಿದ್ದಾರೆ.
ಖರೋಷ್ಠಿ: ಭಾರತೀಯರ ಪ್ರಾಚೀನ ಲಿಪಿಗಳ ಪೈಕಿ ಖರೋಷ್ಠಿ ಲಿಪಿ ಒಂದೆಂಬುದು ಹಲವು ವಿದ್ವಾಂಸರ ಅಭಿಪ್ರಾಯ. ಈ ಲಿಪಿಯನ್ನು ಬ್ಯಾಕ್ಟ್ರೆಯನ್, ಇಂಡೋಬ್ಯಾಕ್ಟ್ರೇಯನ್, ಆರ್ಯನ್, ಬ್ಯಾಕ್ಟ್ರೋಪಾಲಿ, ಕಾಬೂಲಿಯನ್, ಕೆರೋಸ್ತಿ ಮುಂತಾದ ಹೆಸರುಗಳಿಂದಲೂ ಕರೆಯುತ್ತಿದ್ದರು. ಆದರೆ ಇದರ ಜನಪ್ರಿಯ ಹೆಸರು ‘ಖರೋಷ್ಠಿ’. ಚೀನದ ಪ್ರಾಚೀನ ಗ್ರಂಥವಾದ ‘ಫಾ-ವಾನ್-ಶೂಲಿ-ಯನ್’ ಗ್ರಂಥದಲ್ಲಿ ಈ ಲಿಪಿಯ ಬಗ್ಗೆ ಉಲ್ಲೇಖವಿದೆ. ಇದರ ಉಗಮದ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳಿವೆ. ಈ ಲಿಪಿಯನ್ನು ಮ್ಲೇಚ್ಛರು ಬಳಸುತ್ತಿದ್ದರಿಂದಲೂ ಕತ್ತೆಯ ಚರ್ಮದ ಮೇಲೆ ಬರೆಯುತ್ತಿದ್ದುದರಿಂದಲೂ ಅಂಕುಡೊಂಕಾಗಿದ್ದುದರಿಂ ದಲೂ ಭಾರತೀಯರು ಇದನ್ನು ಖರ+ಓಷ್ಠ (ಕತ್ತೆಯ ತುಟಿ) ಎಂದು ಕುಚೋದ್ಯದಿಂದ ಕರೆದರು. ಪ್ರಾಯಃ ಇದೇ ಹೆಸರು ಅನಂತರ ಉಳಿಯಿತೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಖರೋಷ್ಠ ಎಂಬು ವವನು ಈ ಲಿಪಿಯನ್ನು ಬಳಕೆಗೆ ತಂದುದರಿಂದ ಈ ಲಿಪಿಗೆ ಅವನ ಹೆಸರು ಬಂದಿರಬಹುದೆಂದೂ ಮತ್ತೆ ಕೆಲವರು ಹೇಳುತ್ತಾರೆ. ಇದು ಅರಾಮೆಯಿಕ್ ಭಾಷೆಯ ‘ಖರೋಟ್ಠ’ ಪದ. ಸಂಸ್ಕೃತದಲ್ಲಿ ಖರೋಷ್ಠವಾಗಿ ಭಾರತದಲ್ಲಿ ಬಳಕೆಗೆ ಬಂದಿರಬೇಕೆಂದು ಡಿರಿಂಜರ್ನ ವಾದ.
ಇತ್ತೀಚೆಗೆ ಈ ಪ್ರಶ್ನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ದಾಸ್ಗುಪ್ತ ಅವರು ಖರೋಷ್ಠಿ ಪದ ಇರಾನಿಯನ್ ಭಾಷೆಯ ‘ಖರಪೊಸ್ತ’ ಎಂಬ ಪದದಿಂದಲೇ ಬಂದಿರಬೇಕೆಂದು ಹೇಳಿದ ಫ್ರಿಜಲುಸ್ಕಿ ಯವರ ವಾದವನ್ನು ಅನುಮೋದಿಸಿದ್ದಾರೆ. ಖರಪೊಸ್ತ ಎಂದರೆ ಕತ್ತೆಯ ಚರ್ಮವೆಂದೂ ಪ್ರಾಚೀನಕಾಲದಲ್ಲಿ ಬರೆವಣಿಗೆಗೆ ಕತ್ತೆಯ ಮತ್ತು ಒಂಟೆಯ ಚರ್ಮವನ್ನು ಬಳಸುತ್ತಿದ್ದುದರಿಂದ ಇದಕ್ಕೆ ಖರಪೊಸ್ತ ಎಂಬ ಹೆಸರು ಬಂದಿತೆಂದೂ ಕಾಲಕ್ರಮೇಣ ಖರೋಷ್ಠ ಎಂದಾಗಿರಬಹು ದೆಂದೂ ಅನೇಕ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಖರೋಷ್ಠಿ ಲಿಪಿ ಅರಾಮೆಯಿಕ್ ಲಿಪಿಯಿಂದ ಉಗಮವಾಗಿರಬೇ ಕೆಂದು ಸಾಮಾನ್ಯವಾಗಿ ಒಪ್ಪಲಾಗಿದೆ. ಅರಾಮೆಯಿಕ್ ಲಿಪಿಗೂ ಖರೋಷ್ಠಿ ಲಿಪಿಗೂ ಹೆಚ್ಚು ಹೋಲಿಕೆ ಇದ್ದು ಈ ಎರಡೂ ಲಿಪಿಗಳು ಬಲಭಾಗ ದಿಂದ ಎಡಭಾಗಕ್ಕೆ ಬರೆಯಲ್ಪಟ್ಟಿದ್ದು, ಕೇವಲ ಭಾರತದ ವಾಯವ್ಯ ಗಡಿಭಾಗದಲ್ಲಿ ಮಾತ್ರ ಉಪಯೋಗದಲ್ಲಿತ್ತು. ಅಂದರೆ ಅರಾಮೆಯಿಕ್ ಲಿಪಿ ಅಲ್ಲಿ ಹೆಚ್ಚು ಬಳಕೆಯಲ್ಲಿರುವುದರಿಂದ ಇದರ ಪ್ರಭಾವ ಖರೋಷ್ಠಿಯ ಮೇಲಾಗಿದ್ದು ಅರಾಮೆಯಿಕ್ ಲಿಪಿಯಿಂದಲೇ ಖರೋಷ್ಠಿ ಲಿಪಿ ಉಗಮವಾಗಿರಬೇಕೆಂದೂ ಖರೋಷ್ಠಿ ಲಿಪಿ ಭಾರತದಲ್ಲೆ ಉದ್ಭವಿಸಿದೆಯೆಂದೂ ಸಿಂಧೂಲಿಪಿ ಅದಕ್ಕೆ ಮೂಲವೆಂದೂ ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಆದರೆ ಇದಕ್ಕೆ ಖಚಿತ ಸಾಕ್ಷಾಧಾರಗಳಿಲ್ಲ.
ಬ್ರಾಹ್ಮೀ ಲಿಪಿಯಿಂದಲೇ ಭಾರತದ ಎಲ್ಲಾ ಲಿಪಿಗಳೂ ಉಗಮ ಗೊಂಡು ವಿಕಾಸಹೊಂದಿದವು. ಹಾಗೆಯೇ ಕನ್ನಡ ಲಿಪಿಗೂ ಅಶೋಕನ ದಕ್ಷಿಣ ಬ್ರಾಹ್ಮೀಯೇ ಮೂಲವಾಗಿದೆ. ಜೇಮ್ಸ್ಪ್ರಿನ್ಸೆಪ್ ಬ್ರಾಹ್ಮೀ ಲಿಪಿಯ ನ್ನು ಓದಿ ಭಾರತೀಯ ಲಿಪಿಶಾಸ್ತ್ರಕ್ಕೆ ಭದ್ರಬುನಾದಿ ಹಾಕಿದ (1837). ಈ ಬ್ರಾಹ್ಮೀಲಿಪಿಯ ಎಲ್ಲಾ ಅಕ್ಷರಗಳನ್ನು ಇಟ್ಟುಕೊಂಡು ಬ್ಯೂಲರ್, ಭಾರತೀಯ ಲಿಪಿಗಳ ಸಮಗ್ರ ಪಟ್ಟಿಯನ್ನು ತಯಾರಿಸಿದ. ಬ್ರಾಹ್ಮೀಯನ್ನು ಓದಿದ ತರುವಾಯ ಪ್ರಾಚೀನ ಕನ್ನಡ ಲಿಪಿಯನ್ನೋದುವ ಕಾರ್ಯ ಸುಗಮವಾಯಿತು. ಈ ದಿಸೆಯಲ್ಲಿ ಕೀಲ್ಹಾರ್ನ್, ಫ್ಲೀಟ್ ಮತ್ತು ರೈಸರ ಪ್ರಯತ್ನಗಳು ಪ್ರಮುಖವಾದುವು.
ಕ್ರಿ.ಪೂ. 3ನೆಯ ಶತಮಾನದಲ್ಲಿದ್ದ ಅಶೋಕನ ದಕ್ಷಿಣ ಬ್ರಾಹ್ಮೀಲಿಪಿ ಸಾತವಾಹನ, ಕದಂಬ, ಗಂಗ, ರಾಷ್ಟ್ರಕೂಟ, ಚಾಳುಕ್ಯ, ಹೊಯ್ಸಳ, ಕಳಚುರಿ ಮೊದಲಾದ ರಾಜವಂಶಗಳ ಆಡಳಿತದ ವಿವಿಧ ಕಾಲಘಟ್ಟಗಳಲ್ಲಿ ಹಂತಹಂತವಾಗಿ ವಿಕಾಸ ಹೊಂದಿ ಇಂದಿನ ಕನ್ನಡ ಲಿಪಿಯ ರೂಪವನ್ನು ಪಡೆಯಿತು.
(ನೋಡಿ- ಕನ್ನಡ-ಭಾಷೆ)
(ನೋಡಿ- ಕನ್ನಡಲಿಪಿ)
(ವಿ.ವಿ.)