ಪುಟ:ಕ್ರಾಂತಿ ಕಲ್ಯಾಣ.pdf/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೮೬

ಕ್ರಾಂತಿ ಕಲ್ಯಾಣ


ದಾನವರಿಗೆ ಜನ್ಮವಿತ್ತಿದೆ ಕಲಚೂರ್ಯವಂಶ”-ಎಂದು ವಿಷಾದದಿಂದ ನುಡಿಯುತ್ತ ಕಾಮೇಶ್ವರಿ ವಾಸಗೃಹವನ್ನು ಪ್ರವೇಶಿಸಿ ಸುಖಾಸನದ ಮೇಲೆ ಕುಸಿದು ಬಿದ್ದಳು.

“ಈ ಸಂಜೆ ಸೋಮೇಶ್ವರನ ಸೈನಿಕರು ಕರ್ಣದೇವನ ಕಡೆಯ ಭಟರಿಗೆ ಕಾವಲ ಸರದಿಯನ್ನು ಬಿಟ್ಟು ಕೊಟ್ಟಾಗಲೇ ನಾವು ವಿಪತ್ತಿನಲ್ಲಿ ಬಿದ್ದೆವೆಂದು ತಿಳಿದೆ, ರಾಣೀಜಿ” -ಎಂದಳು ಉಷಾವತಿ, ಕಾಮೇಶ್ವರಿಯ ಕಾಲುಗಳ ಬಳಿ ಕುಳಿತು.

“ಅಷ್ಟೆಲ್ಲ ಕೌಶಲ ಆ ಕುಡುಕ ಕರ್ಣದೇವನಿಗೆ ಎಲ್ಲಿಂದ ಬರಬೇಕು. ನನ್ನನ್ನು ವಂಚಿಸಿ, ಮಾನಹರಣ ಮಾಡಿದವನು ರಾಜ್ಯಾಪಹಾರಿ ಬಿಜ್ಜಳ. ಅರಸೊತ್ತಿಗೆಯ ಆಸೆ ತೋರಿಸಿ ಮಂಗಳವೇಡೆಗೆ ಕರೆಸಿಕೊಂಡನು. ಪಗಡೆಯಾಟದ ನೆವಹೂಡಿ ಸಲಿಗೆ ಬೆಳೆಸಿದನು. ಚಾಲುಕ್ಯ ರಾಣಿಯನ್ನು ಸಾಮಾನ್ಯ ಭೋಗಿನಿಯಂತೆ ನಡೆಸಿಕೊಳ್ಳುವುದು ಈಗ ಅವನ ಹಂಚಿಕೆ,” ಎಂದು ಕಾಮೇಶ್ವರಿ ದುಗುಡದಿಂದ ನುಡಿದಳು.

ದೀಪಸ್ತಂಭದಲ್ಲಿ ಒಂದು ದೀಪ ಮಾತ್ರ ಉರಿಯುತ್ತಿತ್ತು.; ಅದರ ಮಸಕು ಬೆಳಕಿನಲ್ಲಿ ಅವರು ಬಹಳ ಹೊತ್ತು ಮೌನವಾಗಿ ಕುಳಿತಿದ್ದರು. ಆಮೇಲೆ ಕಾಮೇಶ್ವರಿ ಕೆಟ್ಟ ಕನಸನ್ನು ಕಂಡು ಎಚ್ಚೆತ್ತವಳಂತೆ ಕರ್ಕಶ ಕಂಠದಿಂದ,

“ಓಹ್ ! ಆ ದಾನವನ ಸರ್ಶದಿಂದ ಪುಳಕಿಸಿದ ನನ್ನ ಒಂದೊಂದು ಅಂಗವನ್ನೂ ತುಂಡು ತುಂಡಾಗಿ ಕತ್ತರಿಸಿ ಅಗ್ನಿಗೆಸೆಯುತ್ತೇನೆ. ನನ್ನ ಸತೀತ್ವ ನಾಶಕ್ಕೆ ಸಾಕ್ಷಿಯಾದ ಕಲಚೂರ್ಯ ಅರಮನೆಯನ್ನು ದಹಿಸುತ್ತೇನೆ. ಆಗ ನನ್ನ ಪ್ರತಿರೋಧ ಪೂರ್ಣವಾಗುವುದು,” ಎಂದು ಆವೇಶಗೊಂಡವಳಂತೆ ನುಡಿದಳು.

“ಅಮಂಗಲ ನುಡಿಯಬೇಡಿರಿ ರಾಣೀಜಿ. ನಾನು ಹೋಗಿ ಸ್ನಾನಕ್ಕೆ ಸಿದ್ಧಪಡಿಸುತ್ತೇನೆ. ಜಳಕದಿಂದ ದೇಹದಂತೆ ಮನಸ್ಸಿಗೂ ವಿಶ್ರಾಂತಿ ದೊರಕುವುದು" -ಎಂದು ಉಷಾ ಎದ್ದಳು.

“ನನ್ನ ದೇಹದ ಅಶುಚಿ ಕಳೆಯಲು ಏಳು ಸಾಗರಗಳಲ್ಲಿ ಮುಳುಗಿ ಏಳಬೇಕಾಗುವುದು ! ಇನ್ನು ನನಗೆ ಮರಣವೇ ಮಹಾನವಮಿ!” -ಎಂದು ಸುಯ್ಗರೆದು ನುಡಿದಳು ಕಾಮೇಶ್ವರಿ.

ಉಷಾ ಉತ್ತರ ಕೊಡಲಿಲ್ಲ. ಕೊಂಚ ಹೊತ್ತಿನ ಮೇಲೆ ಅವಳು ಒಡತಿಗೆ ಸ್ನಾನಮಾಡಿಸಿ, ಮಡಿಬಟ್ಟೆಗಳನ್ನು ಉಡಿಸಿ ವಾಸಗೃಹಕ್ಕೆ ಕರೆತಂದಾಗ ಆವೇಗ ಶಾಂತವಾಗಿತ್ತು. ತಲ್ಪದ ಮೇಲೆ ಮಲಗಿ ಕಾಮೇಶ್ವರಿ ವಿಶ್ರಮಿಸಿಕೊಳ್ಳುತ್ತಿದ್ದಂತೆ ಮಹಾದ್ವಾರದಲ್ಲಿ ಮೂರನೆಯ ಜಾವ ಮುಗಿದ ಘಂಟೆ ಹೊಡೆಯಿತು.

“ನಡೆ, ಉಷಾ. ನಾನು ಪ್ರೇಮಾರ್ಣವನನ್ನೊಂದು ಸಾರಿ ನೋಡಿಬರುತ್ತೇನೆ,” -ಎಂದು ಕಾಮೇಶ್ವರಿ ಎದ್ದಳು.