ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೭೫ G ರುದ್ರಪಟ್ಟಣದ ಸಾತು ಅತ್ತಿಗೆಯ ಮನೆಯಲ್ಲಿ ಆ ದಿನ ಅವಳ ಕೂಸು ಪರಿಪರಿಯಲ್ಲಿ ರಮಿಸಿದರೂ ಶಾಂತವಾಗದೆ ಹೋದುದರಿಂದ, ಇನ್ನು ಕಾಲಹರಣಮಾಡುವುದು ಅನುಚಿತ ಎಂದು ಬಗೆದು, ರುಕ್ಕಿಣಿಯು ಅಳುವ ಕೂಸನ್ನು ಎತ್ತಿದಂತೆಯೇ ಮನೆಯ ಮುಂಬಾಗಿಲನ್ನು ಮುಂದೆ ಮಾಡಿ ಪಕ್ಕದ ಮನೆಗೆ ಹೋಗಿ ನೋಡಿದರೆ, ಸಾತು ಅಚ್ಚುಕಟ್ಟಾಗಿ ಕೂತು ಗಿರಿಜಮ್ಮನವರ ಸಂಗಡ ಹಳ್ಳುಗುಳಿಮಣೆ ಆಟ ಆಡ್ತಿದಾಳೆ!... ಮಗುವಿನ ರೋದನ ಸಮೀಪಿಸಿದಾಗಲೆ ತಾಯಿಗೆ ಎಚ್ಚರ!... “ಮಧ್ಯೆ ಹೀಗೆ ಯಾವುತ್ತೂ ಎದ್ದು ಚಂಡಿ ಮಾಡ್ತಾ ಇರಲಿಲ್ಲವಲ್ಲ ಈ ತುಂಟ” ಎನ್ನುತ್ತ ಮಗುವನ್ನು ಈಸುಕೊಂಡು ತೊಡೆಯ ಮೇಲಿಟ್ಟು, ತನ್ನ ಮೊಲೆತೊಟ್ಟನ್ನು ಕೂಸಿನ ಬಾಯಿಗಿಟ್ಟಳು. ಒಡನೆಯೆ ಮಂತ್ರ ಹಾಕಿದಂತೆ ಮಗು ಅಳು ನಿಲ್ಲಿಸಿತು. ನೆರೆಮನೆಗೆ ಹಾರುವ ಆತುರದಲ್ಲಿ ಕೂಸಿಗೆ ಪೂರ್ತಿ ಹಾಲು ಕುಡಿಸದೇ ಹೋಗಿರಬಹುದೆಂದು ರುಕ್ಕಿಣಿ ತರ್ಕಿಸಿದಳು. ಮಗು ಅಳು ನಿಲ್ಲಿಸಿದ್ದು ಅವಳಿಗೆ ಸಂತೋಷ. ಆದರೆ ಎಂಥೆಂಥವರಿಗೂ ಕೂಸಿಗೆ ಮೊಲೆಯೂಡುವ ಭಾಗ್ಯವಿದೆ- ಈ ಕೊಳಕಿ ಸಾವಿತ್ರಿಯಂಥವರಿಗೂ!.... ನನಗೆ ಮಾತ್ರ ಯಾಕೆ ಈ ವಂಚನೆ?- ಎನ್ನಿಸುತ್ತಿದ್ದಂತೆಯೇ, ವೃಥಾ ಕೆಚ್ಚಲು ಹೊತ್ತ ಗೊಡ್ಡಿಹಸು ತಾನು ಎಂಬ ಭಾವನೆ ಸುಳಿಯಿತು. ಕಣ್ಣಗಳಲ್ಲೂ ತೆಳ್ಳಗೆ ಹನಿಯಾಡಿತು. ಅದನ್ನು ಗಮನಿಸದೆ, “ಇದೇನೆ ರುಕ್ಕು ಸುಮ್ಮನೆ ಇಲ್ಲಿ ನಿಂತುಬಿಟ್ಟೆ? ಮನೇಲಿ ಯಾರೂ ಇಲ್ಲ. ನಡಿ, ನಡಿ. ನಾನೂ ಕೂಸಿಗೆ ಹಾಲೂಡಿ ನಿನ್ನ ಹಿಂದೆಯೇ ಬಂದುಬಿತ್ತೇನೆ.” - ಸಾವಿತ್ರಿ ಬಲಾತ್ಕರಿಸಿದಳು. ರುಕ್ಕಿಣಿ ಮನೆಗೆ ಬಂದಾಗ ತಲೆಬಾಗಿಲಿನಲ್ಲಿ ಇವಳನ್ನು ಕಂಡೊಡನೆಯೆ ವೀಣೆಯನ್ನು ಕೆಳಗಿಟ್ಟು ಮೇಲೆದ್ದ ಶೇಷನನ್ನು ಉದ್ದೇಶಿಸಿ, “ವೀಣೆ ಬಳಿ ಕುಳಿತು ಅದೇನು ಮಾಡ್ತಿದೀಯೊ, ಶೇಷ?” ಕೇಳಿದಳು. “ನೀನು ಕಿತ್ತು ಹಾಕಿದ್ದ ವೀಣೆ ತಂತೀನ ರಿಪೇರಿ ಮಾಡೊದೆ ಸಾಧ್ಯವಾ ಅಂತ ಪರೀಕ್ಷೆ ಮಾಡ್ತಿದ್ದೆ. “ನಿಸೂರಾಗಿ ಹೇಳಿ, ಅಲ್ಲಿಂದೆದ್ದು ಶೇಷ ಮನೆಯಾಚೆಗೆ ದೌಡು ಹೊಡೆದಿದ್ದ... ರುಕ್ಕಿಣಿಗೆ ದಿಕ್ಕೇ ತೋಚದಂತಾಯಿತು. ವಿಷಣ್ಣಳಾಗಿ ಸಾತು ಬಂದ ಕೂಡಲೆ ಅದೆಷ್ಟು ರಂಪ ಮಾಡುವಳೋ ಎಂದು ಯೋಚಿಸುತ್ತ ನಿಂತಳು. ತಂತಿ ಕಿತ್ತ ವೀಣೆಯನ್ನು ಅಟ್ಟದ ಮೇಲೆ ಎತ್ತಿಟ್ಟರೆ ಸಾತುಗೆ ಅದು ಗೊತ್ತಾಗುವುದೇ