________________
ವೈಶಾಖ ಇಲ್ಲ. ಅವಳು ಅಟ್ಟಕ್ಕೆ ಒಂದು ವೇಳೆ ಹತ್ತಿಹೋದರೂ ಈ ವೀಣೆಯತ್ತ ದೃಷ್ಟಿಹರಿಯುವುದೊ ಅಪರೂಪವೆ. ಹಾಗೆ ಒಂದು ಪಕ್ಷ ದೃಷ್ಟಿ ಬಿದ್ದು ತನ್ನನ್ನು ಕೇಳಲಿ, ಆಗ ನೋಡಿಕೊಳ್ಳೋಣ- ಎಂಬ ಭಾವನೆ ಬಂದು, ವೀಣೆಯನ್ನು ಕೈಗೆತ್ತಿಕೊಳ್ಳುತ್ತಿರುವಂತೆ ಸಾತು ಬಂದಳು. ನಿದ್ದೆ ಹೋಗಿದ್ದ ಕೂಸನ್ನು ತೊಟ್ಟಿಲಿಗಿಟ್ಟು, ಮೃದುವಾಗಿ ಒಂದು ಕೈ ಅದನ್ನು ತೂಗುತ್ತಿರುವಾಗಲೆ ತಿರುಗಿ ನೋಡಿದಳು. ನಿಶ್ಚಲಳಾಗಿ ನಿಂತ ರುಕ್ಕಿಣಿಯನ್ನೊಮ್ಮೆ, ತಂತಿ ಹರಿದ ವೀಣೆಯನ್ನೊಮ್ಮೆ ನೋಡಿದಳು. ನೆತ್ತಿಯಲ್ಲಿ ಉರಿ ಕಾಣಿಸಿದಂತಾಗಿ, “ಏನೇ ರುಕ್ಕು, ಈ ವೀಣೇನ ಅಟ್ಟದಿಂದ ಕೆಳಕ್ಕೆ ಯಾಕೆ ತೆಗೆದೆ?” ಮೂಗಿನ ಹೊರಳೆಗಳನ್ನು ರೋಷದಿಂದ ಹಿಗ್ಗಿಸುತ್ತ ಕುಗ್ಗಿಸುತ್ತ ಕೇಳಿದಳು. “ಬೇಸರ ಆಯಿತು. ನುಡಿಸೋಣ ಅಂತ ತೆಕ್ಕೊಂಡೆ.” -ರುಕ್ಕಿಣಿಯದು ಶಾಂತವಾದ ಉತ್ತರ. “ನನ್ನ ಹೇಳದೆ ಕೇಳದೆ ಹೇಗೆ ತಕ್ಕೊಂಡೆ? ಈ ಮನೆ ಯಜಮಾನಿ ನಾನೋ, ನೀನೋ?” ಘಡಿಘುಡಿಸಿದ್ದಳು ಸಾವಿತ್ರಿ, “ನಾನೇನೂ ಈ ಮನೆಗೆ ಯಜಮಾನಿಕೆ ಮಾಡೋಕೆ ಬರಲಿಲ್ಲ. ಹೇಳಿದೆನಲ್ಲ, ಬೇಸರವಾಯಿತು. ಇದನ್ನ ನುಡಿಸಿದರಾದರೂ ಹೊತ್ತು ಕಳೀಬಹುದು ಅಂತ ಅನ್ನಿಸ್ತು, ಅದಕ್ಕೆ...” “ಅದಕ್ಕೆ ನನ್ನ ಹೇಳದೆ ಕೇಳದೆ ಹೇಗೆ ತೆಕ್ಕೊಂಡೆ?” ಸಾವಿತ್ರಿಯದು ಮತ್ತೆ ಅದೇ ಪಲ್ಲವಿ. “ಆಗ ನೀವು ಪಕ್ಕದ ಮನೇಲಿ ಹಳ್ಳುಗಳಿಮಣೆ ಆಡ್ತಾ ಇದ್ದಿರಲ್ಲ. ಮನೇಲೆ ಇರಲಿಲ್ಲವಲ್ಲ?” ಸಾವಿತ್ರಿಗೆ ಸಿಟ್ಟು ಮೀರಿತು ಮೇರೆ. “ನಾನು ಬೇಕಾದ್ದು ಮಾಡ್ತೀನಿ. ನೀನು ಯಾರೆ ನನ್ನ ಕೇಳೋಕೆ?” ದಾಪುಗಾಲಿಟ್ಟು ಕೆನ್ನೆಗೆ ತಿವಿದು, “ವೀಣೆತಂತಿ ಕಿತ್ತು ಹಾಕಿ ಈ ದಾಷ್ಟ್ರೀಕದ ಮಾತು ಬೇರೆ...” “ವೀಣೆ ತಂತಿ ಕಿತ್ತಿರೋದು ನಾನಲ್ಲ-ಆ ನಿಮ್ಮ ಮಗರಾಮ” ಎಂದು ಕಳ್ಳ ಹೆಜ್ಜೆಗಳನ್ನಿಡುತ್ತ ಒಳಗೆ ಬಂದ ಶೇಷನತ್ತ ಬೆರಳು ಮಾಡಿದಳು. ಮಗು ಅತ್ತಂತಾಗಿ, ಸಾತು ಧಾವಿಸಿ ತೊಟ್ಟಿಲು ತೂಗುತ್ತ ನಿಂತಳು. “ಸುಳ್ಳು ಸುಳ್ಳು, ಅಪ್ಪಟ ಸುಳ್ಳು! ನಾನು ಹೊಳೆ ದಡದಲ್ಲಿ ಆಡ್ತಾ ಇದ್ದು, ಮನೆ ಹತ್ರ ಬರ್ತಾ ಇರಬೇಕಾರೆ, ವೀಣೆ ಸದ್ದು ಕೇಳಿಸ್ತು. ಯಾರಪ್ಪ ನಮ್ಮ