________________
ಸಮಗ್ರ ಕಾದಂಬರಿಗಳು ೮೩ ಕಿತ್ತರಂತೆ... ಅವರಿಬ್ಬರೂ ಹಾಗೆ ಓಡಿದ್ದೇಕೆ? ಹುಡುಗಿಯೊಬ್ಬಳೇ ಅಳುತ್ತ ಆ ಮರದ ಬುಡದಲ್ಲಿ ಕುಳಿತಿರುವುದಾದರೂ ಯಾಕೆ?- ಎಂಬ ಸಂಶಯ ಹುಟ್ಟಿ ಶ್ಯಾಮ ಮುಂದೆ ಬಂದಂತೆ, ಆ ಹೆಣ್ಣು ಮಂಡಿಗಳನ್ನು ಕೊಕ್ಕರಿಸಿ ಕುಳಿತು ಅವುಗಳ ನಡುವೆ ಮುಖ ಹುದುಗಿಸಿ, ಅಳುವಾಗಲೂ ಹೆದರಿ ಹೆದರಿ ಬಿಕ್ಕುವುದನ್ನು ಗಮನಿಸಿ, “ಯಾರಮ್ಮಾ ನೀನು? ಭಯಪಡಬೇಡ” ಎನ್ನುತ್ತ ಅವಳ ಹತ್ತಿರ ಹೋಗಿ ನೋಡಿದರೆ ನಮ್ಮ ಜಾನಕಿ!... ಶ್ಯಾಮ ಹುಡುಗಿಯನ್ನು ರಮಿಸಿ, “ಏನಾಯಿತು ಕಂದ? ಅವರಿಬ್ಬರೂ ಯಾರು ಹಾಗೆ ಓಡಿಹೋದವರು?” ಎಂದು ಕೇಳಲಾಗಿ, ಇನ್ನೂ ಗಟ್ಟಿಯಾಗಿ ರೋದಿಸುತ್ತ, “ನಾನು-ನಾನು ಹೇಳಿದರೆ ನನ್ನ... ನನ್ನ ಕೊಂದು ಹಾಕೀವೀಂತ” ಹೇಳಿ, ಬಿಕ್ಕುವುದರಲ್ಲೇ ಮಾತು ನಿಲ್ಲಿಸಿದ್ದಳಂತೆ. “ಹೆದರಬೇಡ, ನಾನಿದೀನಿ. ಯಾರಿಗೂ ಹೇಳಲ್ಲ” ಎಂದು ಬಗೆಬಗೆಯಾಗಿ ಧೈರ್ಯ ತುಂಬಿದ ಬಳಿಕ, ಪಾಪ ಆ ಹೆಣ್ಣು, ನಡೆದ ಸಂಗತೀನ ಅಳುತ್ತಳುತ್ತಲೆ ತುಂಡು ತುಂಡು ವಾಕ್ಯಗಳಲ್ಲಿ ತೊದಲಿದ್ದಳಂತೆ: - ಎಂದಿನಂತೆ ಶಾಲೆಗೆ ಹರಿಗರಲಿನಲ್ಲಿ ಹೊಳೆ ದಾಟಿ ತಾನೊಬ್ಬಳೇ ಬಸವಾಪಟ್ಟಣದ ಹಾದಿ ಹಿಡಿದಿದ್ದಳಂತೆ. ಆಗ ಬೈಸೆಟ್ಟಿ, ಹೀರೋಜಿ... ಇಬ್ಬರೂವೆ... ಅಲ್ಲೆ... ಬಿಲುವಾರ ಮರದ ಬುಡದಲ್ಲಿ ನಿಂತಿದ್ದೋರು... ನಿನ್ನ ತಮ್ಮ... ಶೇಷನಿಗೆ ಮರದಿಂದ ಬಿದ್ದು ಕಾಲು ಮುರಿದಿದೆ...” “ಬೈಸೆಟ್ಟಿ, ಹೀರೋಜಿ ಅಂದರೆ ನಿನ್ನ ತಮ್ಮ ಆ ದಾಂಡಿಗ ಸ್ನೇಹಿತರು ತಾನೆ?” ಶ್ಯಾಮ ಕೇಳಿದ್ದನಂತೆ. “ಹೂ... ಹೌದು-ಅವರೇನೆ....” “ಆಮೇಲೆ?” “ನಾನು... ಅವರು ಹೇಳೋದು ... ನಿಜ ಇರಬಹುದು... ಅಂತ... ಹದರಿ... ಅವರ ಜೊತೇಲಿ... ಅಲ್ಲಿ ಕಾಣುತ್ತಲ್ಲ ಆ ಮುರುಕು ಮಂಟಪದೊಳಕ್ಕೆ ಹೋದೆ... ಅಲ್ಲಿ ಶೇಷ ಇರಲಿಲ್ಲ.... ನನಗೆ ಭಯ ಆಗಿ... ಅಲ್ಲಿಂದ ಓಡಲಿಕ್ಕೆ ಪ್ರಯತ್ನಪಟ್ಟೆ... ಆಗ ಅವರಿಬ್ಬರೂ ನನ್ನ ತಬ್ಬಿ ಮತ್ತೆ... ಮತ್ತೆ... ಕೆಳಕ್ಕೆ ಕೆಡವಿ...” ಮುಂದೆ ಅವಳು ಹೇಳುವಂತಿರಲಿಲ್ಲ. ಹೇಳಬೇಕಾಗಿಯೂ ಇರಲಿಲ್ಲ... ಆ ಪುಂಡರು ನಡೆಸಿದ ಅತ್ಯಾಚಾರದಿಂದ ಶ್ಯಾಮನ ನರನರದಲ್ಲಿಯೂ ರೋಷ ಹರಿದಾಡಿತಂತೆ... ಅವರೆಲ್ಲಿ ತಪ್ಪಿಸಿ ಹೋಗ್ತಾರೆ? ಊರಿನವರು ತಾನೆ? ಇಂದಲ್ಲ