ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಹಮದ್ ನಗರದ ಕೋಟೆ
೨೧

ಪ್ರೌಢರೀತಿಯಲ್ಲಿ ಬರೆಯಲಾರೆ. ಆ ಜ್ಞಾನವಾಗಲಿ, ಶಕ್ತಿಯಾಗಲಿ, ಶಿಕ್ಷಣವಾಗಲಿ ನನ್ನಲ್ಲಿ ಇಲ್ಲ. ಆ ಬಗೆಯ ಕೆಲಸಕ್ಕೆ ಮನಸೂ ಇಲ್ಲ. ಪ್ರಸಕ್ತ ಕಾಲಕ್ಕೆ ಸಂಬಂಧಿಸಿದಾಗ ಗತಕಾಲವು ನನ್ನನ್ನು ಅದುಮುತ್ತದೆ ; ಅದರ ಕಾವಿನಿಂದ ನನ್ನ ರಕ್ತವೂ ಕುದಿಯುತ್ತದೆ; ಮತ್ತು ಅದು ಸಜೀವ ಪ್ರಸಕ್ತ ಕಾಲದ ಇನ್ನೊಂದು ಮುಖವಾಗುತ್ತದೆ, ಹಾಗಾಗದೆ ಹೋದರೆ, ಗತಕಾಲ ಬೇಡದ ಜೀವಶೂನ್ಯ ಬರಡು ಮಾಗಿಯ ಕಾಲ, ಹಿಂದೆ ನಾನು ಬರೆದಂತೆ, ನನ್ನ ಇಂದಿನ ಆಲೋಚನೆಗಳು ಮತ್ತು ಕಾರ್ಯಗಳಿಗೆ ಹೊಂದಿಸಿಕೊಂಡು ಮಾತ್ರ ಬರೆಯಬಲ್ಲೆ. ಆ ರೀತಿ ಇತಿಹಾಸ ಬರೆಯುವದರಿ೦ದ, ಗೈಟಿ ಒಂದು ಬಾರಿ ಹೇಳಿರುವಂತೆ, ಹಿಂದಿನ ತೂಕ ಮತ್ತು ಹೊರೆಯಿಂದ ಮನಸ್ಸು ಸ್ವಲ್ಪ ಹಗುರ ವಾಗುತ್ತದೆ. ಅದು ಮನಶ್ಯಾಸ್ತ್ರದ ವಿಭಜನೆಯಂತೆ, ಆದರೆ ಒಬ್ಬ ವ್ಯಕ್ತಿಯ ಬದಲು ಒ೦ದು ಜನಾಂಗ ಅಥವ ಮಾನವ ಕುಲಕ್ಕೆ ಅನ್ವಯಿಸಿದಂತೆ,

ಗತಕಾಲದ ಹೊರೆ, ಒಳ್ಳೆಯದು ಕೆಟ್ಟದು ಎರಡರದೂ, ಒಂದೊಂದು ವೇಳೆ ಸಹಿಸಲ ಸಾಧ್ಯ; ಅದರಲ್ಲೂ ಇ೦ಡಿಯ ಚೀನ ದೇಶಗಳಂತೆ ಬಹು ಪುರಾತನ ಸಂಸ್ಕೃತಿಗಳಿಗೆ ಸೇರಿದ ನಮ್ಮಂಥ ವರಿಗಂತೂ ಉಸಿರನ್ನೇ ಕಟ್ಟುತ್ತದೆ. ನೀಷೆ ಹೇಳುವಂತೆ “ ಶತಮಾನಗಳ ವಿವೇಕ ಮಾತ್ರವಲ್ಲ ಅವುಗಳ ಮೌಡ್ಯ ಸಹ ನಮ್ಮಲ್ಲಿ ಹರಡುತ್ತದೆ. ವಾರಸುದಾರನಾಗುವುದು ಅಪಾಯಕರ.”

ನನ್ನ ಆಸ್ತಿ ಏನು ? ನಾನು ಯಾವುದಕ್ಕೆ ವಾರಸುದಾರ ? ಹತ್ತು ಸಾವಿರ ವರ್ಷಗಳ ಮಾನವ ಕುಲದ ಸಾಧನ ಸರ್ವಸ್ವ ಕ್ಕೆ, ಅದರ ಯೋಚನಾ ಪರಂಪರೆಗಳಿಗೆ ಅನುಭವಗಳಿಗೆ, ಕಷ್ಟಗಳಿಗೆ ಸುಖ ಗಳಿಗೆ, ಜಯಘೋಷಗಳಿಗೆ, ಕಹಿ ಸೋಲಿನ ಸಂಕಟಕ್ಕೆ ಬಹುದೂರದ ಹಿಂದೆ ಆರಂಭವಾಗಿ ಇನ್ನೂ ಮುಂದೆ ಸಾಗಿ ನಮ್ಮನ್ನು ಕರೆಯುತ್ತಿರುವ ಮಾನವನ ಅದ್ಭುತ ಸಾಹಸಕ್ಕೆ ನಾನು ವಾರಸುದಾರ. ಎಲ್ಲ ಮನುಷ್ಯರಂತೆ ಇದೆಲ್ಲಕ್ಕೆ ಮತ್ತು ಇನ್ನೂ ಹೆಚ್ಚಿನದಕ್ಕೆ. ಆದರೆ ಇಂಡಿಯಾ ದೇಶದ ನಮಗೆ ಒಂದು ವಿಶಿಷ್ಟ ಆಸ್ತಿಯದೆ. ನಮ್ಮದು ಮಾತ್ರ ಎಂದಲ್ಲ. ಏಕೆಂದರೆ ಯಾವುದೂ ಅನ್ಯವಲ್ಲ. ಎಲ್ಲವೂ ಮಾನವ ಕುಲಕ್ಕೆ ಸಾಮಾನ್ಯವಾದದ್ದು, ಆದರೆ ನಮಗೆ ಹೆಚ್ಚು ಅನ್ವಯಿಸತಕ್ಕದ್ದು, ನಮ್ಮ ಎಲುಬು, ರಕ್ತ, ಮಾಂಸಗಳಲ್ಲಿ ಇರುವದು, ನಮ್ಮ ಇಂದಿನ ಇರವು ಮುಂದಿನ ನಿಲುವಿಗೆ ಕಾರಣವಾದ್ದು.

ಈ ಒಂದು ವಿಶಿಷ್ಟ ಆಸ್ತಿಯ ಯೋಚನೆ, ಮತ್ತು ಪ್ರಸಕ್ತ ಕಾಲಕ್ಕೆ ಅದರ ಅನ್ವಯ ನನ್ನ ಮನಸ್ಸಿನಲ್ಲಿ ಬಹುಕಾಲದಿಂದ ತುಂಬಿದೆ. ವಿಷಯ ನಿರೂಪಣೆಯ ಕಷ್ಟ ಮತ್ತು ಜಟಿಲತೆ ನನಗೆ ಭಯವನ್ನುಂಟುಮಾಡಿದರೂ ಅದರ ಮೇಲ್ಮುಖವನ್ನು ಮಾತ್ರ ತೋರಬಹುದಾದರೂ ಈಗ ನಾನು ಬರೆಯಬೇಕೆನ್ನುವುದು ಅದೇ ವಿಷಯ. ವಿಷಯಕ್ಕೆ ನಾನು ನ್ಯಾಯದೊರಕಿಸಿಕೊಡಲಾರೆ, ಆದರೆ ಆ ಪ್ರಯತ್ನದಲ್ಲಿ ನನ್ನ ಮನಸ್ಸನ್ನು ಸ್ವಲ್ಪ ತಿಳಿಮಾಡಿಕೊಂಡು, ಅದನ್ನು ಮುಂದಿನ ಯೋಚನೆ ಮತ್ತು ಕಾರ್ಯಗಳ ಹಂತಕ್ಕೆ ಅಣಿಮಾಡಿಕೊಂಡು ನನಗಾದರೂ ಸ್ವಲ್ಪ ನ್ಯಾಯ ಸಂಪಾದಿಸಿ ಕೊಳ್ಳಬಲ್ಲೆ.

ನನ್ನ ವಿಷಯ ಪ್ರವೇಶ ಯಾವಾಗಲೂ ವೈಯಕ್ತಿಕವಾಗಿರಬೇಕಾದ್ದು ಅನಿವಾರ್ಯ. ಆ ಯೋಚನೆ ನನಗೆ ಹೇಗೆ ಹೊಳೆಯಿತು, ಹೇಗೆ ರೂಪತಾಳಿತು ; ನನ್ನ ಮೇಲೆ ಯಾವ ಪರಿಣಾಮ ಮಾಡಿತು, ಮತ್ತು ನನ್ನ ಕಾರ್ಯವನ್ನು ಯಾವ ರೀತಿ ಮಾರ್ಪಡಿಸಿತು, ಎಂದು. ಸ್ಕೂಲರೂಪದಲ್ಲಿ ವಿಷಯಕ್ಕೆ ಯಾವ ರೀತಿಯಲ್ಲೂ ಸಂಬಂಧ ಪಡದಿದ್ದರೂ ನನ್ನ ಮನಸ್ಸಿಗೊಂದು ಬೇರೆ ಬಣ್ಣ ಕೊಟ್ಟು ಈ ಪೂರ್ಣಸಮಸ್ಯೆಯ ನನ್ನ ಪ್ರವೇಶದ ಮೇಲೆ ಪ್ರಭಾವ ಬೀರಿದ ಕೆಲವು ಕೇವಲ ವೈಯ ಕಿಕ ಅನುಭವಗಳಿವೆ. ದೇಶಗಳು ಮತ್ತು ಜನಗಳ ಮೇಲಿನ ನಮ್ಮ ಅಭಿಪ್ರಾಯಕ್ಕೆ ಅನೇಕ ಕಾರಣಗಳಿವೆ ; ಅವುಗಳಲ್ಲಿ ನಮ್ಮ ವೈಯಕ್ತಿಕ ಸಂಬಂಧಗಳು ಏನಾದರೂ ಇದ್ದರೆ ಅವು ಹೆಚ್ಚು ಪ್ರಭಾವಶಾಲಿಗಳಾಗುತ್ತವೆ. ಒಂದು ದೇಶದ ಜನರ ಪರಿಚಯ ಸ್ವತಃ ನಮಗೆ ತಿಳಿಯದಿದ್ದರೆ ಅವರು ನಮಗೆ ಪರಕೀಯರು ನಮ್ಮಿಂದ ಪ್ರತ್ಯೇಕ ಎಂದು ಭಾವಿಸಿ ತಪ್ಪು ತೀರ್ಮಾನಕ್ಕೆ ಬರು ವುದೇ ಹೆಚ್ಚು.