ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೧೦೪
ಭಾರತ ದರ್ಶನ

ಸಮಯದಲ್ಲಿ ಅನೇಕ ದೀಪೋತ್ಸವಗಳು ನಡೆಯುತ್ತಿದ್ದುವು. ರಾಜಮೆರವಣಿಗೆಗಳೂ ಬೇಟಗಳೂ ನಡೆಯುತ್ತಿದ್ದವು.

ಈ ಮಹಾ ಸಾಮ್ರಾಜ್ಯದಲ್ಲಿ ಅನೇಕ ಜನನಿಬಿಡ ನಗರಗಳಿದ್ದವು. ಶೋಣ ಮತ್ತು ಗಂಗಾನದಿಗಳ ಸಂಗಮದಲ್ಲಿ ಗಂಗಾತೀರದ ಮಹಾ ನಗರವಾದ ಪಾಟಲಿಪುತ್ರ (ಈಗಿನ ಪಾಟ್ನ), ಅದರ ಮುಖ್ಯ ನಗರ, ಮೆಗಾಸ್ತನೀಸ್ ಈ ರೀತಿ ವರ್ಣಿಸಿದ್ದಾನೆ: “ ಈ ನದಿ ಮತ್ತು ಇನ್ನೊಂದು ನದಿಯ ಸಂಗಮದಲ್ಲಿ ೯.೨ ಮೈಲು ಉದ್ದ ೧.೭ ಮೈಲು ಅಗಲವಿರುವ ಪಾಲಿಬೋತ್ರವೆಂಬ ಮಹಾನಗರವಿದೆ. ಸಮಾಂತರ ಚತುರ್ಭುಜದ ಆಕಾರದಲ್ಲಿದೆ. ಸುತ್ತಲೂ ಮರದ ಗೋಡೆಯಿದೆ. ಗೋಡೆಯ ಮಧ್ಯೆ ಬಾಣಗಳನ್ನು ಹೊಡೆಯಲು ಅಲ್ಲಲ್ಲಿ ಕಿಂಡಿಗಳಿವೆ. ರಕ್ಷಣೆಗಾಗಿಯೂ ಮತ್ತು ನಗರದ ಕೊಳಕನ್ನು ಕೂಡಿಡುವುದಕ್ಕೂ ಎದುರಿನಲ್ಲಿ ಕಂದಕವಿದೆ. ಸುತ್ತಲೂ ಹರಡಿದ್ದ ಈ ಕಂದಕದ ಅಗಲ ೬೦೦ ಅಡಿ, ಆಳ ಮೂವತ್ತು ಅಡಿ. ಗೋಡೆಯ ಮೇಲೆ ೫೭೦ ಗೋಪುರಗಳಿವೆ ಮತ್ತು ನಾಲ್ಕು ನೂರ ಅರುವತ್ತು ಬಾಗಿಲುಗಳಿವೆ.

ಈ ಗೋಡೆಯನ್ನು ಮಾತ್ರ ಮರದಿಂದ ಮಾಡಿಲ್ಲ. ಮುಕ್ಕಾಲು ಪಾಲು ಮನೆಗಳೆಲ್ಲ ಮರದಲ್ಲಿಯೇ ಕಟ್ಟಿದವು. ಪ್ರಾಯಶಃ ಆ ಪ್ರಾಂತ್ಯ ಪದೇ ಪದೇ ಭೂಕಂಪಗಳಿಗೆ ಈಡಾಗುತ್ತಿದ್ದ ಕಾರಣ ಮುಂಜಾಗ್ರತೆಯಿಂದ ಆ ರೀತಿ ಮರದಿಂದ ಕಟ್ಟುತ್ತಿದ್ದಿರಬೇಕು. ೧೯೩೪ರ ಬೀಹಾರ ಭೂಕಂಪವೇ ಅದಕ್ಕೆ ಸಾಕ್ಷಿ. ಮನೆಗಳೆಲ್ಲ ಮರವಾದ್ದರಿಂದ ಬೆಂಕಿಯಿಂದ ಕಾಪಾಡಲು ವಿಶೇಷ ಮುಂಜಾಗ್ರತೆ ಮಾಡಲಾಗಿತ್ತು. ಪ್ರತಿಯೊಂದು ಮನೆಯ ಯಜಮಾನನೂ ಏಣಿಗಳು, ಕೊಕ್ಕೆ ಗಳು ಮತ್ತಾ ನೀರು ತುಂಬಿದ ಪಾತ್ರೆಗಳನ್ನು ಇಡಬೇಕಾಗಿತ್ತು.

ಪಾಟಲಿಪುತ್ರದ ನಗರ ಸಭೆಗೆ ಮುವತ್ತಾರು ಜನ ಚುನಾಯಿತ ಸದಸ್ಯರಿದ್ದರು. ಆ ಸಭೆ ಯನ್ನು ಆರು ಸಮಿತಿಗಳಾಗಿ ವಿಂಗಡಿಸಿದ್ದರು. ಪ್ರತಿ ಸಮಿತಿಗೂ ಐದು ಜನ ಸದಸ್ಯರು, ಒಂದೊಂದು ಸಮಿತಿಯ ಕೈಗಾರಿಕೆ ಮತ್ತು ಕುಶಲವಿದ್ಯೆ, ಜನನ ಮರಣ, ವಸ್ತು ನಿರ್ಮಾಣ ಕಾರ್ಯ, ಪ್ರಯಾಣಿಕರ ಮತ್ತು ಯಾತ್ರಿಕರ ಸೌಕರ್ಯ ಮುಂತಾದ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದವು. ಒಟ್ಟು ನಗರ ಸಭೆಯು ಹಣಕಾಸು, ಆರೋಗ್ಯ ರಕ್ಷಣೆ, ನೀರಿನ ಪೂರೈಕೆ, ಸಾರ್ವಜನಿಕ ಕಟ್ಟಡಗಳು ಮತ್ತು ಉದ್ಯಾನವನಗಳ ಆಡಳಿತ ನೋಡುತ್ತಿದ್ದರು.

೧೯ ಬುದ್ಧನ ಉಪದೇಶ

ಭಾರತದ ಬಾಹ್ಯ ಸ್ವರೂಪವನ್ನೇ ಮಾರ್ಪಡಿಸುತ್ತಿದ್ದ ಈ ರಾಜಕೀಯ ಆರ್ಥಿಕ ವಿಪ್ಲವಗಳ ಹಿಂದೆ ಬೌದ್ಧ ಧರ್ಮದ ಕ್ರಾಂತಿಕಾರಕ ಹಿನ್ನೆಲೆ ಇತ್ತು. ಸನಾತನಧರ್ಮದ ಮೇಲಿನ ಧಾಳಿ ಮತ್ತು ಅದರ ಅಧಿಕಾರವರ್ಗದ ಮೂಲೋತ್ಪಾಟನೆಗಾಗಿ ನಡೆಸಿದ ಹೋರಾಟದ ಪ್ರಕೋಪವಿತ್ತು. ಸದಾ ಕಿವಿಸೋಲುತ್ತಿದ್ದ ಚರ್ಚೆ ಮತ್ತು ವಾಗ್ವಾದಕ್ಕಿಂತ ಹೆಚ್ಚಾಗಿ ಒಬ್ಬ ಮಹಾತೇಜಸ್ವಿ ಯಾದ ಅದ್ಭುತ ಪುರುಷನ ವ್ಯಕ್ತಿತ್ವವು ಭಾರತದ ಜನರ ಮನಸ್ಸನ್ನು ಸೆಳೆದಿತ್ತು. ಆತನ ನೆನಪು ಇನ್ನು ಜನರ ಮನಸ್ಸಿನಲ್ಲಿ ಮಾಸಿರಲಿಲ್ಲ. ಆತನ ಉಪದೇಶ ಸನಾತನ ಆದರೂ ತಾತ್ವಿಕ ಚರ್ವಿತ ಚರ್ವಣದಲ್ಲಿ ಮಗ್ನರಾದವರಿಗೆ ಅತಿ ನೂತನವೂ, ಅಪೂರ್ವವೂ ಆಗಿ ಕಂಡು ವಿದ್ವಾಂಸರ ಮನಸ್ಸನ್ನೂ ಸೆಳೆಯಿತು. ಜನತೆಯ ಹೃದಯದಲ್ಲಂತೂ ಆಳವಾಗಿ ಬೇರೂರಿತು. “ ಎಲ್ಲ ದೇಶಗಳಿಗೂ ಹೋಗಿ ಈ ಉಪದೇಶ ಸಾರಿರಿ. ದೀನರು, ಹೀನರು, ಶ್ರೀಮಂತರು, ಉನ್ನತ ಸ್ಥಾನದಲ್ಲಿರುವವರು ಎಲ್ಲರೂ ಒಂದೇ, ಎಲ್ಲ ನದಿಗಳು ಸಮುದ್ರದಲ್ಲಿ ಒಂದುಗೂಡುವಂತೆ ಎಲ್ಲ ಜಾತಿಗಳೂ ಈ ಧರ್ಮದಲ್ಲಿ ಒಂದುಗೂಡುವುವು? ಎಂದು ಹೇಳಿದನು. ಆತನ ಉಪದೇಶದ ಗುರಿ ವಿಶ್ವದ ಕಲ್ಯಾಣ, ಮತ್ತು ವಿಶ್ವ ಪ್ರೇಮ, ಏಕೆಂದರೆ “ ಈ ಪ್ರಪಂಚದಲ್ಲಿ ದ್ವೇಷದಿಂದ ದ್ವೇಷ ಎಂದಿಗೂ ನಂದುವುದಿಲ್ಲ”, ಮತ್ತು “ ಮನುಷ್ಯನು ಕೋಪ ವನ್ನು ದಯೆಯಿಂದ ಗೆಲ್ಲಲಿ, ದುರ್ಗುಣವನ್ನು ಸುಗುಣದಿಂದ ಜೈಸಲಿ, ”