________________
೩೧೬ ವೈಶಾಖ ಆರಂಭವಾಗಿತ್ತು. ನಂಜೇಗೌಡ, ಹಿತ್ತಲ ಕಡೆಗೆ ಹೋಗಿದ್ದವರು, ಆಗಲೇ ಬಂದು ಯಜಮಾನರ ಜೊತೆಗೆ ಕೂತಿದ್ದರು. ಶ್ಯಾನುಭೋಗರು “ನ್ಯಾಯ ಶುರು ಮಾಡಬಹುದೆ?” ಎಂದು ಯಜಮಾನರನ್ನು ಕೇಳಿದರು. ಉಳಿದವರು ಮೌನವಾಗಿದ್ದರೂ ದೊಳಪ್ಪ ಆಕ್ಷೇಪಣೆ ತೆಗೆದ. “ಲಕ್ಕನ ನ್ಯಾಯ ತಕ್ಕೋಬೇಕಾದ್ರೆ, ರುಕ್ಕಿಣಮ್ಮನ್ನೂವೆ ಕರಿಸನೇ ಬೇಕು. ಇಲ್ಲದಿದ್ರೆ ವಕ್ಕಡೆ ನ್ಯಾಯ ಆಯ್ತದೆ, ಯೇನಾಯ್ತು, ಯೇನು ಕತೆ ಅನ್ನಾದರ ಪೂರ್ತಾ ಎಳೆ ನಮ್ಮ ಕೈಗೆ ಸಿಕ್ಕಕ್ಕಿಲ್ಲ. ಆಯಮ್ಮನ್ನೂ ಕರೆಸಿ” ಎಂದು ಒತ್ತಾಯಪೂರ್ವಕ ವಾದ ಮಂಡಿಸಿದ. ಆಗ ಕೇಶವಯ್ಯ ಎದ್ದು ನಿಂತು, “ಅವಶ್ಯವಿಲ್ಲ. ಆಳುವ ಕೆಟ್ಟರೊ ವಿಷಯದಲ್ಲಿ ನಮ್ಮ ಇಡಿ ಬ್ರಾಹ್ಮಣರ ಕೇರಿಯೋರು ಸೇರಿ, ಅವಳಿಗೆ ಅದೇನು ಶಾಸ್ತಿ ಮಾಡಬೇಕೊ ಅದನ್ನ ಮಾಡ್ತೀವಿ. ಅದರ ಚಿಂತೆ ಉಳಿದೋರಿಗೆ ಬೇಡ. ಈಗ ಲಕ್ಕ ಗಂಡಸು. ರುಕ್ಕಿಣಿ ಎಷ್ಟೇ ಆದರೂ ಹೆಣ್ಣುಹೆಂಗಸು. ಅದು ಬೆಳಗಿನ ಝಾವ, ಕಾಡುದಾರಿ. ಗಾಡೀಲಿ ಪ್ರಯಾಣ ಮಾಡ್ತಿದ್ದೋರು ಇವರಿಬ್ಬರೆ. ಹೀಗಿರುವಾಗ ಈ ಲಕ್ಕ ಸಮಯ ಸಾದಿಸಿ ಅವಳ ಮೇಲೆ ಬಲಪ್ರಯೋಗ ಮಾಡಿರೋದು ಸಾಧ್ಯ- ಈ ವಿಷಯದಲ್ಲಿ ನಮ್ಮ ಯಜಮಾನರು ಏನಂತಾರೆ?” ಎಂದು ಅವರತ್ತ ತಿರುಗಿದ. ನಂಜೇಗೌಡರು ಎದ್ದು ನಿಂತು, “ಕೇಶವಯ್ಯನೋರು ಹೇಳೋ ಮಾತು ಮಾಲೆ ಮಾಲೆ ನೂತ್ನವಾಗೇನೊ ಅದೆ. ಆದ್ರೆ ಸ್ವಾಮಿಯೋರು ಇದು ಕಲಿಕಾಲ ಅನ್ನಾದ ಮರೆತಂಗದೆ, ಈಗ ಗಂಡಸರಿಗಿಂತ ಹೆಂಗಸರು ಯತ್ಯಾತರಲ್ಲೂವೆ ಕಡಿಮೆ ಇಲ್ಲ. ಆದ್ರಿಂದ ರುಕ್ಕಿಣಮ್ಮ ನಮ್ಮೆಲ್ಲಾರ ಮುಂದುಕೆ ನಿಲ್ಲಿಸಿದ್ರೆ, ಆಗ ನಿಜಸ್ಥಿತಿ ಗೊತ್ತಾಯ್ತದೆ” ಎಂದು ಒತ್ತಾಯಿಸಿದ. ಸಭೆ ಮುಂದೇನಾಗುವುದೋ ಎಂಬ ಕಾತರದ ನಿರೀಕ್ಷೆಯಲ್ಲಿ ಕಾಯುತ್ತಿತ್ತು. ಕೇಶವಯ್ಯ, - “ನಾನು ಮೊದಲೇ ಹೇಳಲಿಲ್ಲವೆ?... ರುಕ್ಕಿಣಿಯ ನ್ಯಾಯ ಫೈಸಲ್ ಮಾಡೋರು ನಾವು- ಬ್ರಾಹ್ಮಣಕೇರಿ ಯಜಮಾನರು. ಈ ಮಾತು ಹಾಗಿರಲಿ. ಈಗ ಲಕ್ಕನನ್ನೇ ಕೇಳಿ, ಶ್ಯಾನುಭೋಗರೆ- ಏನು ನಡೀತು ಅಂತ” ಎಂದು ವಾದದ ದಿಕ್ಕನ್ನು ಹೊರಳಿಸಿದ.