ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೩೧


ಅತ್ಯಂತ ಕಠೋರವಾದ ತಪಸ್ಸನ್ನು ಕೈಗೊಂಡನು. ಇವನ ಯತ್ನವು ಸಫಲವಾಗಿ
ಗಂಗೆ ಇವನಿಗೆ ದರ್ಶನವನ್ನು ಕೊಟ್ಟಳು. ಗಂಗೆಯು ಸ್ವರ್ಗದಿಂದ ಪೃಥ್ವಿಯತ್ತ
ಬೀಳುವ ತನ್ನ ಪ್ರವಾಹವನ್ನು ತಡೆಯಲು ಶಂಕರನನ್ನು ಪ್ರಸನ್ನಗೊಳಿಸಬೇಕೆಂದು
ನುಡಿದಳು. ಭಗೀರಥನು ಶಂಕರನನ್ನು ಆರಾಧಿಸಿ ಸಂತೋಷಗೊಳಿಸಿದನು.
ಶಂಕರನು ತನ್ನ ಜಟಾಜೂಟದಲ್ಲಿ ಗಂಗೆಯನ್ನು ಧರಿಸಲು ಸಿದ್ದನಾದನು. ಹಾಗೂ
ತನ್ನ ಜಟೆಯಲ್ಲಿಯ ಒಂದು ಕೂದಲನ್ನು ತೆಗೆದು ಗಂಗೆಗೆ ದಾರಿಮಾಡಿ
ಕೊಟ್ಟನು. ಅಂದಿನಿಂದ ಗಂಗೆಯ ಪ್ರವಾಹಕ್ಕೆ ಅಲಕನಂದಾ ಎಂಬ ಹೆಸರು
ಬಂದಿತು.
ಭಗೀರಥನು ಗಂಗೆಗೆ ತನ್ನನ್ನು ಹಿಂಬಾಲಿಸಲು ಹೇಳಿದನು. ಕಪಿಲ
ಮುನಿಯಿಂದ ಸುಟ್ಟು ಬೂದಿಯಾಗಿ ತನ್ನ ಪಿತರು ಬಿದ್ದ ಸ್ಥಳದತ್ತ ಗಂಗೆಯು
ಹರಿಯುವಂತೆ ಮಾಡಿ ಅವರೆಲ್ಲರನ್ನೂ ಉದ್ದರಿಸಿದನು. ಭಗೀರಥನು ಗಂಗೆಯನ್ನು
ಪೃಥ್ವಿಗೆ ತಂದಿದ್ದರಿಂದ ಗಂಗೆಗೆ ಭಾಗೀರಥಿ ಎಂಬ ಹೆಸರು ಬಂದಿತು. ಈ ನಂತರ
ಭಗೀರಥನು ಮೊದಲಿನಂತೆ ರಾಜ್ಯವನ್ನಾಳಿದನು. ಈತನು ಅತ್ಯಂತ ಧಾರ್ಮಿಕ
ವೃತ್ತಿಯುಳ್ಳವನೂ, ದಾನಶೂರನೂ ಆಗಿದ್ದನು. ಇವನಿಗೆ ನಾಭಾಗ ಮತ್ತು ಶ್ರುತ
ಎಂಬ ಪುತ್ರರೂ ಮತ್ತು ಹಂಸಿ ಎಂಬ ಕನ್ಯೆಯೂ ಇದ್ದರು. ಈ ಕನ್ಯೆಯನ್ನು
ಇವನು ಕೌತ್ಸ ಎಂಬ ಬ್ರಾಹ್ಮಣನಿಗೆ ದಾನವಾಗಿ ಕೊಟ್ಟನು. ಇವನು ಗಂಗಾನದಿಯ
ತೀರಕ್ಕೆ ಸಾಲುಮೆಟ್ಟಿಲುಗಳನ್ನು ಕಟ್ಟಿಸಿದನು. ಸಾವಿರಾರು ಸಾಲಂಕೃತ ಕನ್ಯೆಯರನ್ನು
ಬ್ರಾಹ್ಮಣರಿಗೆ ದಾನವಾಗಿ ಕೊಟ್ಟನು. ಯಜ್ಞ ಮಾಡಿ ಇವನು ವಿಪುಲದಕ್ಷಿಣೆಯನ್ನು
ಅರ್ಪಿಸುತ್ತಿದ್ದನು. ಈತನು ಮಾಡಿದ ಯಜ್ಞಕ್ಕೆ ದೇವತೆಗಳೂ ಆಗಮಿಸುತ್ತಿದ್ದರು.
ಸಾವಿರಾರು ಗೋವುಗಳನ್ನು ಈತನು ದಾನ ಮಾಡಿದನೆಂಬ ಉಲ್ಲೇಖವು
ಮಹಾಭಾರತದಲ್ಲಿದೆ. ವಾಲ್ಮೀಕಿರಾಮಾಯಣದಲ್ಲಿ ಭಗೀರಥನ ಮಗನ ಹೆಸರು
ಕಕುತ್ಸ್ಥ ಎಂದಿದೆ.

೮೫. ಭರತ

ಈತನು ದಶರಥ ಹಾಗೂ ಕೈಕೇಯಿಯ ಪುತ್ರ, ಇವನಿಗೆ ವಿಷ್ಣುವಿನ
ನಾಲ್ಕನೆಯ ಅಂಶವೆನ್ನುತ್ತಾರೆ. ಭರತ-ಶತ್ರುಘ್ನರಲ್ಲಿ ಪರಸ್ಪರ ಗಾಢಪ್ರೀತಿಯಿತ್ತು.
ಜನಕರಾಜನ ತಮ್ಮನಾದ ಕುಶಧ್ವಜನ ಮಗಳಾದ ಮಾಂಡವಿಯು ಭರತನ
ಪತ್ನಿಯಾಗಿದ್ದಳು. ದಶರಥನು ರಾಮನಿಗೆ ಯೌವರಾಜ್ಯಾಭಿಷೇಕ ಮಾಡುವದನ್ನು
ನಿಶ್ಚಯಿಸಿದನು. ಆಗ ಭರತನು ಅಯೋಧ್ಯೆಯಲ್ಲಿರಲಿಲ್ಲ. ಶತ್ರುಗ್ನನೊಡನೆ ಆತನು