ಪುಟ:ಹಳ್ಳಿಯ ಚಿತ್ರಗಳು.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨

ಹಳ್ಳಿಯ ಚಿತ್ರಗಳು ವಾಚಸ್ಪತಿ

ಎಂದುಕೊಂಡು, “ಅರ್ಥವನ್ನು ಹೇಳಿ” ಎಂದರು. ಇವನಿಗೆ ರಾಮಾಯಣವನ್ನು ಓದುವುದಕ್ಕೆ ತಿಳಿದಿದ್ದಿತೇ ಹೊರತು ವಾಲ್ಮೀಕಿಯ ಸಂಸ್ಕೃತ ಮಾತಿಗೆ ಅರ್ಥಮಾಡಿಕೊಳ್ಳುವ ಪಾಪಕ್ಕೆ ಇವನೆಂದೂ ಪ್ರವೃತ್ತಿಸಿದವನೇ ಅಲ್ಲ. ಆದರೆ ರಾಮಾಯಣದ ಕಥೆಯು ಯಾರಿಗೆ ಗೊತ್ತಿಲ್ಲ. ಅವನಿಗೆ ಲೋವರ್ ಸೆಕಂಡರಿಗೆ ಬೇರೆ ಸಂಕ್ಷೇಪ ರಾಮಾಯಣವು ಪಠ್ಯಪುಸ್ತಕವಾಗಿದ್ದಿತು. ಇರಲಿ, ಅವನು ಅರಣ್ಯಕಾಂಡವನ್ನು ಓದುತ್ತಿದ್ದನು. ಅಧಿಕಾರಿಯ ಹೆಂಡತಿಗೆ ಪ್ರತಿಯೊಂದು ಶ್ಲೋಕವನ್ನು ಹೇಳಿದೆ ಮೇಲೂ ಒಂದುಸಲ ಅರ್ಥವನ್ನು ಹೇಳಬೇಕಾಗಿದ್ದಿತು. ಆದರೆ ವಾಲ್ಮೀಕಿಯ ವರ್ಣನೆಗಳು, ಶೃಂಗಾರ, ಶೋಕ, ವೈರಾಗ್ಯ, ಇದನ್ನೆಲ್ಲಾ ಬರಿಯ ಊಹೆಯಿಂದ ಮಾತ್ರ ಹೇಳುವುದಕ್ಕೆ ಆಗುತ್ತದೆಯೆ? ಆ ಒಂದೊಂದು ಶ್ಲೋಕಕ್ಕೂ ನನ್ನ ಸ್ನೇಹಿತ ಕಥೆಯನ್ನೇ ಮುಂದರಿಸುತ್ತಾ ನಡೆದುಬಿಟ್ಟ. ಕವಿಯು ವರ್ಣನೆಗಾಗಿ ತೆಗೆದುಕೊಂಡ ಕಾಲವನ್ನು, ಇವನು ಕಥೆಯ ವಿವರಕ್ಕೆ ತೆಗೆದುಕೊಳ್ಳಲು ಆಗಲಿಲ್ಲ. ಸರಿ ಕಥೆಯು ಮುಂದರಿಯಿತು. ಅರಣ್ಯಕಾಂಡದ ಅರ್ಥವನ್ನು ಮುಗಿಸಿ, ಕಿಷ್ಕ್ರಿಂಧಾಕಾಂಡಕ್ಕೆ ಬಂದು, ಅದನ್ನೂ ಮುಗಿಸಿ, ಸುಂದರಕಾಂಡದಲ್ಲಿ ಹನುಮಂತನನ್ನು ಲಂಕೆಗೆ ಹಾರಿಸಿಬಿಟ್ಟ. ಆದರೆ ಓದುವಾಗ ಮಾತ್ರ.

ಇತಿ ಶ್ರೀಮದ್ರಾಮಾಯಣೆ ಅರಣ್ಯಕಾಂಡೆ ಏಕಾದಶಸ್ಸರ್ಗಃ"
ಎಂದು ಓದಿದ, ಅಧಿಕಾರಿಯ ಹೆಂಡತಿಯು “ಏನು ಸ್ವಾಮಿ, ಇನ್ನೂ ಅರಣ್ಯಕಾಂಡ ಓದುತ್ತಿದ್ದೀರಿ. ಹನುಮಂತನು ಆಗಲೇ ಸಮುದ್ರವನ್ನು ಹಾರಿದನೆಂದಿರಿ. ಅದು ಸುಂದರಕಾಂಡವಲ್ಲವೆ? ದಿವಸಕ್ಕೆ ಮೂರು ಕಾಂಡ ಓದುತ್ತೀರಾ" ಎಂದರು. ನನ್ನ ಸ್ನೇಹಿತನ ಮುಖವು ಮೃತನ ಮುಖದಂತೆ ಬಾಡಿತು. ಬರಿಯ ಕಥೆಯನ್ನು ಅನುಸರಿಸುವುದರಲ್ಲಿ ಈ ಭಯವಿದೆ. ಹೋಗಲಿ, ಸಾಲದುದಕ್ಕೆ ನನ್ನ ಸ್ನೇಹಿತನು, ಹಾರ್ಮೋನಿಯಮ್ಮಿನ ದಪ್ಪ ಧ್ವನಿಗೆ, ಅದಕ್ಕಿಂತಲೂ ಹೆಚ್ಚು ದಪ್ಪವಾದ ತನ್ನ ಧ್ವನಿಯನ್ನು ಸೇರಿಸಿ ಓದುವಾಗ ಎಷ್ಟೋ ಪದಗಳನ್ನು ನುಂಗಿಯೇ ಬಿಡುತ್ತಿದ್ದ. ದ್ರೌಪದೀ ಸ್ವಯಂವರದ ಪ್ರಾರಂಭದಲ್ಲಿ, ದ್ರೌಪದಿಯ ವರ್ಣನೆಯು ಬಂದುಬಿಟ್ಟಿತು. ಈಜು ಬಾರದವನನ್ನು ಮಡುವಿನಲ್ಲಿ ಕೆಡವಿದಂತಾಯಿತು. ದ್ರೌಪದಿಯ