ವನ್ನೂ ಕೊಡುವುದಿಲ್ಲ” ಎಂದೆ. ಡೈವರನು ವಿಧಿಯಿಲ್ಲದೆ ತಾನೇ ಗಾಡಿಯನ್ನು ನಡೆಸಲು ಪ್ರಾರಂಭಿಸಿದ. ಉಳಿದ ಪ್ರಯಾಣಿಕರು ನಾನು ಮೂರ್ಖನೋ ಹುಚ್ಚನೋ ಆಗಿರಬೇಕೆಂದು ನನ್ನ ಮೇಲೆ ಇಟ್ಟ ಕಣ್ಣನ್ನು ತೆಗೆಯದೆ ನನ್ನನ್ನೇ ದೃಷ್ಟಿಸುತ್ತಿದ್ದರು. ಅಂತೂ ಬನ್ನೂರಿಗೆ ಬಂದೆವು.
ಬನ್ನೂರು ಬಹಳ ಚೆಲುವಾಗಿದೆ. ಊರಿನ ಸುತ್ತಲೂ ರಸ್ತೆಯ ಎರಡು ಪಾರ್ಶ್ವಗಳಲ್ಲಿಯೂ ಕಬ್ಬಿನ ಮತ್ತು ಭತ್ತದ ಪೈರಿನ ಗದ್ದೆಗಳು; ತುಂಬಿದ ನೀರಿನ ಕಾಲುವೆ; ಹಸಿರು ಬಟ್ಟೆಯನ್ನು ಹಾಸಿದಂತೆ ಗರಿಕೆ ಬೆಳೆದ ನೆಲ; ಮತ್ತೊಂದು ಕಡೆ ರಾಗಿಯ ಹೊಲಗಳು. ಪ್ರಕೃತಿಯ ಕೈಯಿಂದ ಚಿತ್ರಿತವಾದ ಆ ಸುಂದರ ದೃಶ್ಯವನ್ನು ಕಂಡು ನನ್ನ ಬೇಸರಿಕೆಯೆಲ್ಲಾ ಮಾಯವಾಯಿತು. ಸೌಂದರ್ಯವನ್ನು ಕಂಡು ಮಗ್ನನಾಗಿ ಅದರಿಂದ ಉನ್ನತಿಗೆ ಏರದವನಾರು ?
ಬನ್ನೂರಿನಿಂದ ೫-೬ ಮೈಲು ಬಂದ ಕೂಡಲೆ ಮತ್ತೊಂದು ವಿನೋದವನ್ನು ನಾನು ನೋಡಿದೆನು. ರಸ್ತೆಯಲ್ಲಿ ಒಂದು ಮೋಟಾರ್ ಕಾರ್ ನಿಂತಿದ್ದಿತು. ಅದರಲ್ಲಿ ಒಬ್ಬ ಯೂರೋಪಿಯನ್ ಲೇಡಿ ಕುಳಿತಿದ್ದಳು. ಡೈವರನು ಕೆಳಗೆ ಇಳಿದು ನಿಂತಿದ್ದನು. ಕಾರಿನ ಸುತ್ತ ಹಳ್ಳಿಯವರೂ ಹೆಂಗಸರೂ ೧೦-೧೨ ಜನ ನಿಂತಿದ್ದರು. ೧೦-೧೨ ವರುಷದ ಹುಡುಗನ ತಲೆಗೆ ಏಟು ತಗಲಿ, ಸ್ವಲ್ಪ ರಕ್ತವು ಸೋರಿದ್ದಿತು. ಲೇಡಿಯು ಇಂಗ್ಲಿಷಿ ನಲ್ಲಿ, ಡೈವರನು ಕನ್ನಡದಲ್ಲಿಯೂ, ಹಳ್ಳಿಯವರೆಲ್ಲಾ ಕನ್ನಡದಲ್ಲಿಯೂ ಏಕಕಾಲದಲ್ಲಿ ಮಾತನಾಡುತ್ತಿದ್ದರು. ವಿಷಯವನ್ನು ತಿಳಿಯಲು ಹೆಚ್ಚು ಕಾಲ ಬೇಕಾಗಲಿಲ್ಲ. ಕಾರು ಹುಡುಗನಿಗೆ ತಗುಲಿ ಸ್ವಲ್ಪ ಏಟು ಬಿದ್ದಿದ್ದಿತು. ಇದರಲ್ಲಿ ವಿನೋದವೇನು ಬಂತು ಎಂಬುದಾಗಿ ನೀವು ಕೇಳಬಹುದು. ಲೇಡಿಯು ಇಂಗ್ಲೀಷಿನಲ್ಲಿ ರೈತರನ್ನು ಕುರಿತು,
“ಡೈವರನು ಗಾಡಿ ನಡೆಸುತ್ತಿದ್ದ. ಆದರೆ ತಪ್ಪು ಅವನದಲ್ಲ. ಗಾಡಿಯ ಕೊಂಬನ್ನು ಎಷ್ಟು ಸಲ ಕೂಗಿಸಿದರೂ ನಿಮ್ಮ ಹುಡುಗ ಮಗ್ಗಲಾಗಲೇ ಇಲ್ಲ. ಆದರೂ ತಕ್ಷಣ ನಿಲ್ಲಿಸಿದ. ನಿಮ್ಮ ಹುಡುಗನಿಗೆ ಏನೂ ಪೆಟ್ಟಾಗಿಲ್ಲ. ಈ ಕಷ್ಟಕ್ಕೋಸ್ಕರ ನಿಮಗೆ ನಾನು ಪ್ರತಿಫಲವನ್ನು