ಪುಟ:ಹಳ್ಳಿಯ ಚಿತ್ರಗಳು.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬

ಹಳ್ಳಿಯ ಚಿತ್ರಗಳು

"ನಿನಗೇನು? ದೇವಸ್ಥಾನದಲ್ಲಿ ನೀನು ನೋಡಬೇಕಾದದ್ದೇನೂ ಇಲ್ಲ. ಆಗಲೇ ಒಂದುಸಲ ಪೂರ್ಣವಾಗಿ ಎಲ್ಲಾ ನೋಡಿಬಿಟ್ಟಿದ್ದೀಯೆ? ಎಂದ.

ನಾನು "ನನ್ನನ್ನು ಕೆಣಕಬೇಡ. ಅದರ ಫಲಕ್ಕೆ ಆಮೇಲೆ ನೀನೆ ಜವಾಬ್ದಾರನಾಗಬೇಕಾಗುತ್ತೆ” ಎಂದೆ.

ಇಬ್ಬರೂ ಮತ್ತೇನೂ ಮಾತನಾಡದೆ ದೇವಸ್ಥಾನದ ಕಡೆಗೆ ಹೊರಟೆವು, ಬೇಲೂರು ದೇವಾಲಯದ ಕಲೆಗಿಂತ ಹಳೇಬೀಡು ದೇವಾಲಯದ ಕಲೆಯು ಉತ್ತಮವಾದುದು; ಹೆಚ್ಚು ಸುಸಂಸ್ಕೃತವಾದುದು. ಗಂಭೀರವಾದುದು ಮತ್ತು ಆಳವಾದುದು. ಗುಂಡನು

“ನಾವು ಮೊದಲು ಬೇಲೂರನ್ನು ನೋಡಿದುದೇ ಚೆನ್ನಾಯಿತು. ಇಲ್ಲದಿದ್ದರೆ, ಇದನ್ನು ನೋಡಿದಮೇಲೆ ಇದರೆದುರಿಗೆ ಅದು ಬಹಳ ಅಲ್ಪವಾಗಿ ತೋರುತ್ತಿದ್ದಿತು” ಎಂದ.

ಈ ಚಿತ್ರದಲ್ಲಿ ಹಳೆಬೀಡಿನ ದೇವಾಲಯವನ್ನೆಲ್ಲಾ ವರ್ಣಿಸುವುದು ನನ್ನ ಉದ್ದೇಶವಲ್ಲ. ಕಲೆಯ ನೆಲೆಯಾದ ಆ ದೇವಾಲಯದಲ್ಲಿ ಪೂಜೆಯಿಲ್ಲ; ಗಂಟೆಯಿಲ್ಲ; ಗದ್ದಲವಿಲ್ಲ. ದೇವಾಲಯವು ವಿಧವೆಯ ಹಾಗೆ ಅಳುತ್ತಿರುವಂತೆ ತೋರಿತು. ಆ ಸೌಂದರ್ಯ ರಾಶಿಯೆಲ್ಲವೂ ವ್ಯರ್ಥ. ಹೇಳುವವರಿಲ್ಲ; ಕೇಳುವವರಿಲ್ಲ; ಬೇಕೆನ್ನುವವರಿಲ್ಲ; ಆದರಿಸುವವರಿಲ್ಲ. ಆ ಸೌಂದರ್ಯವನ್ನು ನೋಡಿದುದರಿಂದ ಉಂಟಾದ ಆನಂದದೊಂದಿಗೆ ಪ್ರತಿಕ್ಷಣದಲ್ಲಿಯೂ ಯಾವುದೊ ಒಂದು ವಿಧವಾದ ಅನಿರ್ವಚನೀಯವಾದ ದುಃಖವು ನಮ್ಮನ್ನು ಪೀಡಿಸುತ್ತಲೇ ಇದ್ದಿತು.

ನಾವು ದೇವಸ್ಥಾನವನ್ನು ಎರಡುಸಲ ಸುತ್ತಿದೆವು. ಆದರೂ ನಮಗೆ ತೃಪ್ತಿ ಆಗಲಿಲ್ಲ. ಹೊರಡುವುದಕ್ಕೆ ಮಾತ್ರ ಹೊತ್ತಾಯಿತು. ಅನಂತರ ಪ್ರಸಿದ್ದವಾದ ಜೈನ ಬಸ್ತಿಯ ಕಡೆಗೆ ಹೋದೆವು. ಅದರ ಬಾಗಲಿಗೆ ಬೀಗ ಹಾಕಿದ್ದಿತು. ಎದುರಿಗೆ ಒಂದು ಮನೆಯ ಮುಂದೆ ಹುಡುಗಿಯೊಬ್ಬಳು ಹಸುವಿನ ಹಾಲನ್ನು ಕರೆಯುತ್ತಿದ್ದಳು. ಅವಳ ಹೆಗಲಿನಮೇಲೆ ತಲೆಯನ್ನಿಟ್ಟು ಕರುವು ಹಸುವಿನ ಕಡೆಗೆ ಹಗ್ಗವನ್ನು