ಮು ನ್ನು ಡಿ
ಈಗ ಐದು ತಿಂಗಳ ಹಿಂದೆ ಒಂದು ದಿನ ನಾನು ಕಚೇರಿಯಲ್ಲಿದ್ದಾಗ ನನಗೆ ದಿನದ ಟಪಾಲಿನೊಂದಿಗೆ ಒಂದು ಪತ್ರವು ಬಂದಿತು. ಅದನ್ನು ಬರೆದವರು ನನ್ನ ವಿಷಯದಲ್ಲಿ ಬಹಳ ವಿಶ್ವಾಸವನ್ನು ಸೂಚಿಸಿ ತಾವು ಗ್ರಾಮಜೀವನದ ಚಿತ್ರಗಳ ಒಂದು ಪುಸ್ತಕವನ್ನು ಬರೆದಿರುವುದಾಗಿಯೂ, ಅದನ್ನು ನಾನು ಒಂದುಸಲ ನೋಡಬೇಕೆಂತಲೂ, ಅದಕ್ಕೆ ಒಂದು ಮುನ್ನುಡಿಯನ್ನು ಬರೆದುಕೊಡಬೇಕೆಂತಲೂ ಕೇಳಿದ್ದರು. ಪತ್ರವನ್ನು ನೋಡಿಯೇ ನನಗೆ ಅದನ್ನು ಬರೆದವರ ವಿಷಯದಲ್ಲಿ ಪ್ರೀತಿ ಹುಟ್ಟಿತು; ಅವರ ಗ್ರಂಥವು ಚೆನ್ನಾಗಿರುವುದೆಂದು ಭಾಸವಾಯಿತು. ಇದಾದ ಐದಾರು ದಿನದ ಮೇಲೆ ಗ್ರಂಥಕರ್ತರು ನನ್ನ ಬಳಿ ಬಂದು ಪುಸ್ತಕದ ಕೆಲವು ಭಾಗಗಳನ್ನು ಓದಿ ಹೇಳಿದರು. ಅವರ ವಿಷಯದಲ್ಲೂ ಅವರ ಗ್ರಂಥದ ವಿಷಯದಲ್ಲಿಯೂ ನನಗೆ ಮೊದಲೇ ಉಂಟಾಗಿದ್ದ ಭಾವವು ಅವರ ಓದನ್ನು ಕೇಳಿ ಸಮರ್ಥವಾಯಿತು. ಆ ಪುಸ್ತಕಕ್ಕೆ ಮುನ್ನುಡಿಯನ್ನು ಬರೆಯುವುದಕ್ಕೆ ನಾನು ಅಂದು ಸಂತೋಷದಿಂದ ಒಪ್ಪಿದೆನು; ಇಂದು ಅದನ್ನು ಬಹಳ ಸಂತೋಷ ದಿಂದ ಬರೆಯುತ್ತಿದ್ದೇನೆ.
ಶ್ರೀಮಾನ್ ಗೊರೂರು ರಾಮಸ್ವಾಮಿ ಐಯಂಗಾರ್‍ರವರ ಹಳ್ಳಿಯ ಚಿತ್ರಗಳನ್ನು ನೋಡಿ ನಾನು ಆನಂದಪಟ್ಟಿದೇನೆ. ಇವರು ಸುಲಭವಾಗಿ ಮಾಡುವ ವರ್ಣನೆಗಳು ನಾವು ಕನಸಿನಲ್ಲಿ ಕಂಡು ಮೆಚ್ಚಿ ನಿಜವಾದೀತೇ ಎಂದು ಆಶಿಸುವ ಒಂದು ಪ್ರಪಂಚವನ್ನು ನಮ್ಮ ಎಚ್ಚರದ ದೃಷ್ಟಿಯ ಮುಂದೆ ತಂದು ನಿಲ್ಲಿಸುತ್ತವೆ. ಈ ಊರುಗಳು, ಊರುಗಳ ಈ ಜನಗಳು, ಈ ಹೊಲಗದ್ದೆ ಪೈರುಗಳು, ಹೊಳೆ ಕೆರೆ ದೇವಾಲಯಗಳು, ಸರಳವಾದ ಸುಂದರವಾದ ಈ ನಡೆನುಡಿ, ಈ ಬಾಳು-ಇವೆಲ್ಲ ನಮಗೆ ಹೊಸವಲ್ಲದಿದ್ದರೂ ಹೊಸವಾಗಿ ಕಂಡು ಮನಸ್ಸನ್ನು ಮುಗ್ಧವಾಗಿ ಮಾಡುತ್ತವೆ.