ಪುಟ:ಹಳ್ಳಿಯ ಚಿತ್ರಗಳು.djvu/೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

vi

ಗ್ರಂಥಕರ್ತರು ಸುತ್ತಣ ಪ್ರಪಂಚವನ್ನು ಚೆನ್ನಾಗಿ ನೋಡಿ ಅದರ ಅಂದಚೆಂದಕ್ಕೆ ಮನಸ್ಸಿನಲ್ಲಿ ಎಡೆಗೊಟ್ಟು ಅದರ ಬದುಕಿನಲ್ಲಿ ತಮ್ಮ ಬದುಕನ್ನು ಬೆರೆಸಿ ತಾವೇ ಅದು ಎಂಬಂತೆ ಅದರೊಂದಿಗೆ ಸೇರಿಹೋಗಿದ್ದಾರೆ. ಹೀಗಾದ ಮೇಲೆ ತಮ್ಮ ಜೀವವನ್ನು ಮರುಳುಗೊಳಿಸಿದ ಆ ಪ್ರಪಂಚದ ಅಂದ ಚೆಂದವನ್ನು ಇತರರಿಗೆ ತಿಳಿಸೋಣವೆಂದು ತಮಗಾದ ಅನುಭವಗಳನ್ನು ವ್ಯಕ್ತಪಡಿಸಲು ಈ ಚಿತ್ರಗಳನ್ನು ರಚಿಸಿದ್ದಾರೆ. ಈ ಚಿತ್ರಗಳು ನಮಗೆ ಆನಂದವನ್ನುಂಟುಮಾಡುವುದೆಂದು ಹೇಳಿದಮೇಲೆ ಗ್ರಂಥಕರ್ತರು ತಮ್ಮ ಉದಾರವಾದ ಕಾರ್ಯದಲ್ಲಿ ಜಯಶೀಲರಾಗಿದ್ದಾರೆ ಎಂದು ಬೇರೆಯಾಗಿ ಹೇಳಬೇಕಾಗಿಲ್ಲ.

ಸಾಮಾನ್ಯವಾಗಿ ನಾವು ಪ್ರಪಂಚದಲ್ಲಿ ಸಂತೆಗೆ ಬಂದವರಂತೆ ನಡೆದು ಕೊಳ್ಳುತ್ತೇವೆ. ಏನೋ ನಮ್ಮ ನಮ್ಮ ಕೆಲಸವೆಂದುಕೊಂಡಿರುವ ಕೆಲಸವನ್ನು ಹೇಗೋ ಮಾಡುವುದು; ನಮ್ಮವರೆಂದ ಒಬ್ಬರಿಬ್ಬರನ್ನು ನಮ್ಮವರಂತೆ ಕಾಣುವುದು; ನಮ್ಮ ದಿನ ಮುಗಿದೊಡನೆ ಈ ಬಾಳನ್ನು ಬಿಟ್ಟು ಕದಲುವುದು; ಅಥವಾ ಕೆಲಸ ಮುಗಿದ ಮೇಲೂ ಮನೆಯ ನೆನಪು ಬರದೆ ಸಂತೆಯಾಳದಲ್ಲಿರೋಣವೆಂದು ಮರದ ಕೆಳಗೆ ಮಲಗುವ ಮದ್ಯಪಾಯಿಯಂತೆ ರುಚಿಯಳಿದ ಬದುಕಿಗೆ ಇನ್ನೂ ತಗಲಿಕೊಂಡಿರುವುದು. ಇದು ಸಾಮಾನ್ಯ ಜೀವನದ ಕಾರ್‍ಯಕ್ರಮ. ನಿಜವಾಗಿ ನೋಡಿದರೆ ನಾವು ಬಂದಿರುವುದು ಸಂತೆಗಲ್ಲ; ಒಂದು ಕೇಳೀಗೃಹಕ್ಕೆ, ಒಂದು ವಿವಾಹಮಂಟಪಕ್ಕೆ, ಒಂದು ದೇವಾಲಯಕ್ಕೆ, ನಾವು ಪ್ರಪಂಚದಲ್ಲಿ ಮಾಡಬೇಕಾಗಿರುವುದು ಬರಿಯ ವ್ಯಾಪಾರವಲ್ಲ. ನಾವು ಇಲ್ಲಿಯ ಆಟದಲ್ಲಿ ಸೇರಬೇಕಾಗಿದೆ, ಇಲ್ಲಿಯ ಉತ್ಸವದಲ್ಲಿ ಭಾಗಿಗಳಾಗಬೇಕಾಗಿದೆ, ಇಲ್ಲಿಯ ಪೂಜೆಯಲ್ಲಿ ಕಲೆಯಬೇಕಾಗಿದೆ. ಇದನ್ನು ಅರಿಯದ ಅಥವಾ ಮರೆತ ನಮಗೆ ಇಂಥ ಪುಸ್ತಕಗಳು ಪ್ರಪಂಚದಲ್ಲಿ ನಮ್ಮ ನಿಜವಾದ ಕಾರ್ಯವೇನೆಂದು ಜ್ಞಾಪಕ ಕೊಡುತ್ತವೆ. ಕೊಳ್ಳುವ ಮಾರುವ ವ್ಯವಹಾರದ ನಿಲುವಿನಿಂದ ನಮ್ಮ ಮನಸ್ಸು ಜನದ ವಿಷಯದಲ್ಲಿ ಪ್ರೇಮದ ನಿಲುವಿಗೆ ತಿರುಗುತ್ತದೆ. ಸರಸದಿಂದ ಒಲಿಸಿ ಮನಸ್ಸನ್ನು ಹೀಗೆ ತಿದ್ದುವ ಗ್ರಂಥಗಳು ಸಿಕ್ಕುವುದು ಓದುವವರ ಪುಣ್ಯ.