ಪುಟ:ಹಳ್ಳಿಯ ಚಿತ್ರಗಳು.djvu/೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

vii

ಈ ಕಾರಣದಿಂದ ಮಾತ್ರವಲ್ಲದೆ ನಮಗೆ ಪ್ರಕೃತದಲ್ಲಿ ಗ್ರಾಮಗಳ ವಿಷಯದಲ್ಲಿ ಹುಟ್ಟಿರುವ ಔದಾಸೀನ್ಯವನ್ನು ಕಳೆಯುವುದಕ್ಕೆ ಇಂಥ ಚಿತ್ರಗಳು ಅಗತ್ಯವಾಗಿ ಬೇಕಾಗಿವೆ. ನಮ್ಮ ನಾಗರಿಕತೆ ಗ್ರಾಮಗಳನ್ನು ಅವಲಂಬಿಸಿದ್ದು; ನಮ್ಮ ದೇಶದ ತಪಸ್ಸು ವನಗಳಲ್ಲಿ ಬೆಳೆದದ್ದು, ಆದರೆ ಪಾಶ್ಚಾತ್ಯರ ಸಂಪರ್ಕದಿಂದ ನಮಗೆ ವನವಾಗಲೀ ಗ್ರಾಮವಾಗಲೀ ಮೊದಲಿನಷ್ಟು ಈಗ ಪ್ರಿಯವಾಗಿಲ್ಲ. ವಿಶ್ವ ಶಿಲ್ಪಿಯು ನಮ್ಮ ನಾಡ ಜೀವನದ ಕಣ್ಣನ್ನು ಗ್ರಾಮಗಳಲ್ಲಿ ಇಟ್ಟನು. ನಾವು ಇದನ್ನು ಮರೆತಿದ್ದೇವೆ; ಈಚೆಗೆ ನಗರಗಳಲ್ಲಿ ಗುಂಪು ಸೇರುತ್ತಿದೇವೆ. ಶಾಂತಿಯಿಂದ ಕೂಡಿದ ಗ್ರಾಮಜೀವನವನ್ನು ಸೌಕರ್ಯಗಳು ಸಾಲವೆಂಬ ಕಾರಣದಿಂದ ಬಿಡುತ್ತಾ ಸಲಕರಣೆಗಳು ಹೆಚ್ಚಾಗಿರುವ ನಗರಗಳ ಅಶಾಂತ ಜೀವನಕ್ಕೆ ಆಶಿಸುತ್ತಿದ್ದೇವೆ. ಅಶಾಂತಿಯಲ್ಲಿ ಸುಖವೆಲ್ಲಿಂದ ಬರಬೇಕು? ಆದರೆ ಇದನ್ನು ನಾವು ತಿಳಿಯುವುದು ತಾನೆ ಹೇಗೆ? ಸಲಕರಣೆಗಳು ಕಡಿಮೆಯಾದರೂ ಗ್ರಾಮ ಜೀವನದಲ್ಲಿ ಒಂದು ಸೊಗಸು ಒಂದು ಸುಖ ಇದೆಯೆಂಬುದನ್ನು ತೋರಿಸುವುದರಿಂದ ಇದು ನಮಗೆ ಮಂದಟ್ಟಾಗಬಹುದು. ನಗರಗಳಲ್ಲಿರುವ ಜನರು ಒಂದು ಮನೆಯವರಾದರೂ ಬೇರೆ ಬೇರೆ ಆವರಣಗಳಲ್ಲಿ ಸುಳಿದಾಡುತ್ತಿರುವರು. ಹಳ್ಳಿಯಲ್ಲಿರುವವರು ಬೇರೆ ಬೇರೆ ಮನೆಯವರಾದರೂ ಒಂದು ಸಂಸಾರದವರಂತೆ ನಡೆದುಕೊಳ್ಳುವರು. ನಗರಗಳಲ್ಲಿ ನಾಗರಿಕತೆಯ ಅಭ್ಯಾಸಗಳು ಬಾಳಿಗೆ ಬಾಳಿಗೆ ಮಧ್ಯೆ ಗೋಡೆಗಳಂತೆ ಬೆಳೆಯುತ್ತವೆ. ಹಳ್ಳಿಯಲ್ಲಿ ನಿರಂತರ ಸಹವಾಸದಿಂದ ಜನರು ಒಬ್ಬರಿಗೊಬ್ಬರು ಒಡಹುಟ್ಟುಗಳಂತೆ ಆಗುತ್ತಾರೆ. ತನ್ನ ಮಗು ಚೆನ್ನಾಗಿಲ್ಲವೆಂಬುದನ್ನು ತಿಳಿದೂ ನೆನೆಯದ ತಾಯಂತೆ, ತನ್ನ ಗಂಡ ಮನ್ಮಥನಲ್ಲವೆಂಬುದನ್ನು ಕಂಡೂ ಮರೆಯುವ ಹೆಂಡತಿಯಂತೆ ಸದಾಕಾಲ ಜೊತೆಯಾಗಿರುವುದರಿಂದ ಹಳ್ಳಿಯ ಜನರು ಒಬ್ಬರನ್ನೊಬ್ಬರು ಸಮಾಧಾನದಿಂದ ಪ್ರೀತಿಯಿಂದ ನೋಡುವುದನ್ನು ಕಲಿಯುತ್ತಾರೆ. ಇದು ನಮಗೆ ತಿಳಿಯಬೇಕಾದರೆ ಇಂಥ ಗ್ರಂಥಕರ್ತರ ಸಹಾಯ ಬೇಕು. ಇವರು ಕಸವನ್ನು ಒಂದು ಬದಿಗಿರಿಸಿ ಮುಖ್ಯವಾದದ್ದು ರಸ ಎಂದು ತೋರಿಸಿರುವುದರಿಂದ ನಮಗೆ ಜನಜೀವನದ ತಿರುಳು ಯಾವುದು ಎಂದು ಗೋಚರವಾಗುತ್ತದೆ.