ಪುಟ:ಹಳ್ಳಿಯ ಚಿತ್ರಗಳು.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೦

ಹಳ್ಳಿಯ ಚಿತ್ರಗಳು

ತೆರೆಯಿತು. ನರ್ತಕಿಯು ಒಳಕ್ಕೆ ಹೋದಳು. ನಾನೂ ಅವಳನ್ನು ಹಿಂಬಾಲಿಸಲು ಮುಂದುವರಿದೆ. ಆಗವಳು ಗಂಭೀರಭಾವದಿಂದ ಈ ರೀತಿ ಹೇಳಿದಳು:-

“ಕನ್ನಡಿಗರಲ್ಲಿ ಕಲಾಭಿವೃದ್ಧಿಯನ್ನೂ ಸೌಂದರ್ಯೋಪಾಸನೆಯ ಧೈಯವನ್ನೂ ಉಂಟುಮಾಡುವುದಕ್ಕಾಗಿ ನಾನು ಸ್ವರ್ಗಲೋಕದಿಂದ ಭೂಮಿಗೆ ಬಂದೆ. ಹಿ೦ದಲ ಅರಸರೂ, ಹಿಂದಲ ಪ್ರಜೆಗಳೂ ನನ್ನ ಮಾತಿಗೆ ಗೌರವವನ್ನಿತ್ತು ಕಲೆಯನ್ನು ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದರು. ನಿಮಗೆ ಅದು ಬೇಕಿಲ್ಲ. ಅಂದಿನ ಅವರ ವೈಭವವನ್ನೂ ಇಂದಿನ ನಿಮ್ಮ ಅವನತಿಯನ್ನೂ ನೋಡಿ ಅತ್ತು ನನ್ನ ಕಣ್ಣು ಪೋಟೆಯಾಯಿತು. ಸೌಂದರ್ಯವೂ ಕಲೆಯೂ ಭಗವಂತನ ಮುಖ್ಯ ಅಂಶವೆಂಬುದನ್ನೇ ನೀವು ಮರೆತಿದ್ದೀರಿ. ಅರಸಿಕರ ಬಳಿ ನನಗೇನು ಕೆಲಸ? ಮರಳುಗಾಡಿನಲ್ಲಿ ಅರಳಿದ ಮಲ್ಲಿಗೆ ಇರಬಲ್ಲದೆ?” ಎಂದಳು.

ನಾನು ದೈನ್ಯದಿಂದ “ನಿನ್ನನ್ನು ಗೌರವಿಸುತ್ತೇನೆ. ಪೂಜಿಸುತ್ತೇನೆ; ಕಲೆಯ ನೆಲೆಯನ್ನರಿಯುತ್ತೇನೆ. ಬಾ” ಎಂದೆ.

ನರ್ತಕಿಯು ದುಃಖಪೂರ್ಣವಾದ ನಗೆಯಿಂದ “ನಿನ್ನೊಬ್ಬನಿಂದ ಏನಾದೀತು?” ಎಂದು ಹೇಳಿ ಒಳಕ್ಕೆ ಹೊರಟುಹೋದಳು. ಅವಳನ್ನು ಹಿಡಿದುಕೊಳ್ಳಲು ನಾನು ಕೈಗಳನ್ನು ಚಾಚಿದೆ. ಸ್ವರ್ಗದ ಬಾಗಿಲು ಮುಚ್ಚಿ ಹೋಯಿತು. ನಾನು ದುಃಖದಿಂದ

"ಅಯ್ಯೋ ಹೋದೆಯ; ಅಯ್ಯೋ ಹೋದೆಯ; ಹೋದೆಯ” ಎಂದುಕೊಂಡು ಕಣ್ಣು ಬಿಟ್ಟೆ. ಎದುರಿಗೆ ನನ್ನ ಹೆಂಡತಿಯು ನಿಂತಿದ್ದಳು.

ಆ ದಿವಸವೆಲ್ಲಾ ನರ್ತಕಿಯೂ ಅವಳ ಮಾತೂ ನನ್ನ ಮನಸ್ಸನ್ನು ಬಿಟ್ಟು ಹೋಗಲಿಲ್ಲ.