ನಗೆಯ ನೀತಿ
೧. ಶೀನಪ್ಪನ ವಾಕಿಂಗ್
ನನ್ನ ಸ್ನೇಹಿತ ಶೀನಪ್ಪ ಆಗತಾನೆ ಬಿ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದ. ಷೋಕಿ ಅಂತೂ ಕೇಳಬೇಕಾದುದೇ ಇಲ್ಲ. ೧೨ 'ಸೂಟ್' ಇಟ್ಟಿದ್ದ. ನಿತ್ಯ ಮುಖ ಕ್ಷೌರ. ನಾನು ಅವನನ್ನು ಒಂದು ದಿವಸ “ಬಾಯ್ಯ ನಮ್ಮ ಗದ್ದೆ ಹತ್ತಿರಕ್ಕೆ ಹೋಗಿಬರೋಣ, ಪಯಿರು ಹಸುರಾಗಿ ಕಣ್ಣಿಗೆ ಇಂಪಾಗಿದೆ, ಮನೆಯಲ್ಲಿ ಹೆಗ್ಗಣದಂತೆ ಕುಳಿತು ಏನುಮಾಡುತ್ತೀಯೆ?” ಎಂದು ಕರೆದೆ. ಶೀನಪ್ಪ ಹಾಗೇ ಆಗಲಿ, ಅದಕ್ಕೇನು 'Green fields are a sight worth seeing,' ನೀನು ಹೋಗು; ನಾನು ಅರ್ಧ ಗಂಟೆ ಬಿಟ್ಟು ಬರುತ್ತೇನೆ ಎಂದ. ನಾನು ಮೊದಲೇ ಹೊರಟುಹೋದೆ.
ನಾನು ಗುದ್ದಲಿಯನ್ನು ಹಿಡಿದುಕೊಂಡು, ಗದ್ದೆಯ ಕೆಸರನ್ನು ಎತ್ತಿ ಬೇರೆ ಕಡೆಗೆ ಹಾಕುತ್ತಲಿದ್ದೆ, ನನ್ನ ಜೊತೆಯಲ್ಲಿ ನಮ್ಮ ಆಳು ಬೋರನೂ ಕಳೆ ಕೀಳುತ್ತಿದ್ದ. ಮಧ್ಯೆ ಒಂದುಸಲ ಬೋರನು ನಾಲೆಯ ಏರಿಯ ಕಡೆ ತಿರುಗಿ "ಯಾರೋ ದೊರೆಗ್ಳು ಈ ಕಡೆ ಬರ್ತಾ ಇದಾರೆ ಬುದ್ದಿ” ಎಂದ. ನಮ್ಮ ಊರಿನಲ್ಲಿ ದೊರೆಗಳನ್ನು ಕಾಣೋದು ಅಪರೂಪವೆ. ನಾನು ಮೇಲಕ್ಕೆ ತಲೆಯೆತ್ತಿ ನಾಲೆಯ ಏರಿ ಕಡೆ ನೋಡಿದೆ. ಕೋಟು, ಬೂಟು, ಹ್ಯಾಟು, ಷರಾಯಿ ವ್ಯಕ್ತಿಯೊಬ್ಬನು ನನ್ನ ಕಣ್ಣಿಗೆ ಬಿದ್ದನು. ಒಂದು ಗಳಿಗೆ ದೃಷ್ಟಿಸಿ ನೋಡುವುದರಲ್ಲಿ ಅವನು ನಮ್ಮ ಸ್ನೇಹಿತ ಶೀನಪ್ಪನೆಂಬುದು ಗೊತ್ತಾಯಿತು. ಅವನ ಡ್ರೆಸ್ಸನ್ನು ನೋಡಿ, ಇವನೇನು ವರಪೂಜೆಗೆ ಹೊರಟಿದಾನೋ ಅಥವಾ 'ಕಾನ್ವೊಕೇಶನ್ ಡಿಗ್ರಿ' ತೆಗೆದುಕೋಳೋಕೆ ಹೊರಟಿದಾನೋ, ಎಂದು ಯೋಚಿಸಿದೆ. ಗದ್ದೆ ಬದುವಿನ ಕೆಸರಿಗೆ ಬರುವವನಿಗೆ, ಈ ಮದವಣಿಗನ ಉಡುಪು ಯಾಕೆ? ಕೈಯಲ್ಲಿ ಮಡಚಿ ಇಟ್ಟುಕೊಂಡ ನಿಲುವಂಗಿ ಯಾಕೆ? ಕೊಡೆ, ಬಣ್ಣದ ಉಪನೇತ್ರ, ವಾಕಿಂಗ್ ಸ್ಟಿಕ್ ಇವೆಲ್ಲಾ