ಪುಟ:ಹಳ್ಳಿಯ ಚಿತ್ರಗಳು.djvu/೯೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೮೫
ನಗೆಯ ನೀತಿ

ಯಾಕೆ? ನನಗೆ ಸ್ವಲ್ಪ ನಗು ಬಂದಿತು. ಶೀನಪ್ಪನು ಎದುರಿಗೆ ಇರಲಿಲ್ಲವಾಗಿ ನಿರ್ಭಯದಿಂದ ನಕ್ಕೆ.

ಕಾಲುವೆಯ ಬದುವನ್ನು ಬಿಟ್ಟು ಶೀನಪ್ಪನು ಗದ್ದೆಯ ಬಯಲಿಗೆ ಇಳಿದನು. ನಮ್ಮೂರ ಗದ್ದೆಯ ಜಮೀನು ಬಹಳ ಫಲವತ್ತಾದುದರಿಂದ, ಅಲ್ಲಿ ಬದುವಿಗೆಂದು ಸ್ವಲ್ಪವೂ ಜಮೀನನ್ನು ವ್ಯರ್ಥವಾಗಿ ಬಿಡುವುದಿಲ್ಲ. ಒಂದು ಗದ್ದೆಯಿಂದ ಮತ್ತೊಂದು ಗದ್ದೆಯನ್ನು ವಿಭಾಗಿಸುವ ಬದುವು, ಕೇವಲ ಒಂದು ಗೇಣು ಮಾತ್ರ ಅಗಲವಾಗಿದೆ. ಅದರ ಮೇಲೆ ಯಾವಾಗಲೂ ನೀರು ಹರಿಯುತ್ತಿರುವುದರಿಂದ, ಅದರ ಮಣ್ಣು ಬಹಳ ಸಡಿಲವಾಗಿ ಕುಸಿದುಹೋಗುವಂತಿದೆ. ನಾವ್ಯಾರೂ ಬದುವಿನ ಮೇಲೆ ತಿರುಗುವುದಿಲ್ಲ. ಯಾತಕ್ಕೆಂದರೆ ತಿರುಗಲು ಪ್ರಯತ್ನ ಪಟ್ಟರೆ, ಗದ್ದೆಯ ಕೆಸರಿನೊಳಕ್ಕೆ ಬೀಳುವುದು ಖಂಡಿತ.

ಶೀನಪ್ಪನು ಬದುವಿನ ಮೇಲೆ ನಡೆಯಲು ಪ್ರಾರಂಭಿಸಿದನು. ಆ ಕಡೆ ಗದ್ದೆ, ಈ ಕಡೆ ಗದ್ದೆ, ೧೭ ರೂಪಾಯಿನ ಕಟ್ ಕಟ್ ಶಬ್ದದ ಇಂಗ್ಲಿಷ್ ಬೂಟ್ಸು ಕೆಸರಾಗಬಾರದೆಂದು ಅವನು ಉಪಾಯವಾಗಿ ಬದುವಿನಮೇಲೆ ಹೆಜ್ಜೆಯನ್ನಿಕ್ಕುತ್ತಾ ಬರುತ್ತಿರುವಾಗ ಒಂದೇ ರೈಲು ಕಂಬಿಯಮೇಲೆ ನಡೆಯುವವನಂತೆ ಓಲಾಡುತ್ತಿದ್ದನು. ಕೈಯಲ್ಲಿದ್ದ ಕೋಲನ್ನಾದರೂ ಊರಿಕೊಂಡು ನಡೆಯೋಣವೆಂದರೆ, ಅದು ಬೆತ್ತವಾಗಿದ್ದುದರಿಂದ ಊರಲವಕಾಶವಿಲ್ಲದೆ ಬಳುಕುತ್ತಿದ್ದಿತು. ಅವನು ಕೆಳಕ್ಕೆ ಬೀಳಬಹುದೆಂದು ನನಗೆ ಗೊತ್ತಾಯಿತು. ಬರಬೇಡವೆಂದು ಕೂಗಿ ಹೇಳಿದ್ದರೆ ಅವನು ಅಲ್ಲಿಯೇ ನಿಂತುಬಿಡುತ್ತಿದ್ದನು. ಆದರೆ ಸುಲಭವಾಗಿ ದೊರಕಬಹುದಾದ ವಿನೋದವನ್ನು ಕಳೆದುಕೊಳ್ಳಬಾರದೆಂದು ನನ್ನ ಮನದಲ್ಲಿ ಯಾವುದೋ ಒಂದು ಒಳಧ್ವನಿಯು ಹೇಳುತ್ತಿದ್ದುದರಿಂದ ಸುಮ್ಮನಾದೆನು.

ಆ ವೇಳೆಗೆ ಶೀನಪ್ಪ ಒಂದು ಕಡದಾದ ಬದುವಿನ ಮೇಲೆ ಓಲಾಡುತ್ತಿದ್ದ. ಎಡಗಡೆಯ ಗದ್ದೆಯು ಸ್ವಲ್ಪ ಹಳ್ಳದಲ್ಲಿದ್ದಿತು. ನನಗೂ ಅವನಿಗೂ ನಡುವೆ ೭ ಚಿಕ್ಕ ಬದುಗಳಿದ್ದುವು. ಈಗಾಗಲೇ ಅವನ ಕರಿಯ ಸರ್ಜಿನ ಷರಾಯಿಗೆಲ್ಲಾ ಕೆಸರು ಹಾರಿತ್ತು. ನೋಡುತ್ತಿದ್ದಂತೆಯೇ ಶೀನಪ್ಪನು ಒಂದು ಸಲ ಬಲಗಡೆಗೆ ಹೆಚ್ಚಾಗಿ ಓಲಾಡಿದನು. ಸಮತೂಕವನ್ನು