ಸರಿಪಡಿಸಿಕೊಳ್ಳುವುದಕ್ಕಾಗಿ ಮತ್ತೆ ಸ್ವಲ್ಪ ಹೆಚ್ಚಾಗಿ ಎಡಗಡೆಗೆ ಬಾಗಿದನು. ಅದೇ ಗಳಿಗೆಯಲ್ಲಿಯೇ ಬದುವಿನ ಮೇಲೆ ಬರುತ್ತಿದ್ದ ಸಾಹೇಬನು ಮರೆಯಾದನು. ಎಡಗಡೆಯ ಗದ್ದೆಯಿಂದ ನೀರೂ ಕೆಸರೂ ಮೇಲಕ್ಕೆ ಹಾರಿತು. ಪೈರಿನ ಸಾಲು ಎರಡು ಕಡೆಗೂ ಬಾಗಿ ಶೀನಪ್ಪನನ್ನು ಬಾಚಿ ತಬ್ಬಿಕೊಂಡಿತು.
ಬಿದ್ದವನ ಸಹಾಯಕ್ಕೆ ನಾನೂ ಹೋಗಲಿಲ್ಲ; ಬೋರನೂ ಹೋಗಲಿಲ್ಲ. ನಗುವನ್ನು ಮಾತ್ರ ತಡೆಯಲು ಸಾಧ್ಯವಾಗಲಿಲ್ಲ. ಶೀನಪ್ಪನು ಮೇಲಕ್ಕೆ ಎದ್ದು ನಿಂತುಕೊಂಡನು. ಆಗ ಅವನ ರೂಪು ದೇವರೇ ಗತಿ. ಇಸ್ತ್ರಿಮಾಡಿ ಗರಿಗರಿಯಾಗಿದ್ದ ಷರಾಯಿ ಕೆಸರಿನಲ್ಲಿ ತೊಯ್ದು ಹೋಗಿತ್ತು. 'ಹ್ಯಾಟ್ ' ಗದ್ದೆಯಲ್ಲಿ ಅರ್ಧ ಮುಳುಗಿ ಹೋಗಿತ್ತು. ಅವನು ಎದ್ದು ನಿಂತು ಕೊಂಡು ಕಣ್ಣು ಕಿವಿ ಮೂಗು ಎಲ್ಲವನ್ನೂ ಒಂದಾಗಿ ಮಾಡಿದ್ದ ಜೇಡಿ ಮಣ್ಣನ್ನು ಕೈಯಿಂದ ತೆಗೆದು ಹಾಕಿ ಕಿವಿಯನ್ನೂ ಕಣ್ಣನ್ನೂ ಹುಡುಕುತ್ತಿದ್ದನು. ಬಗೆ ಬಗೆಯ ಸುಗಂಧಯುಕ್ತವಾದ ಎಣ್ಣೆಗಳನ್ನು ಹಾಕಿ ಬಾಚಿಕೊಂಡಿದ್ದ ಅವನ ಮು೦ಜುಟ್ಟೆಲ್ಲವೂ ದಿಕ್ಕಾಪಾಲಾಗಿತ್ತು. ಅವನ ಕಿವಿಯಲ್ಲಿ ಒಂದು ಗೆಜ್ಜಗದ ಗಾತ್ರ ಮಣ್ಣು ತುಂಬಿತ್ತು. ಗದ್ದೆಯಲ್ಲಿ ಅರ್ಧ ಮಣ್ಣಿನಲ್ಲಿ ಹೂಳಿಹೋಗಿದ್ದ ಅವನ 'ಹ್ಯಾಟು' ಮುರುಕು ಮಡಿಕೆಯ ಚೂರಿನಂತೆ ಕಾಣುತ್ತಿದ್ದಿತು. ಅವನಿಗೇನೂ ಅಪಾಯವಾಗಿರಲಿಲ್ಲ. ಅವನ ಕನ್ನಡಕ ಕೂಡ ಸರಿಯಾಗಿಯೇ ಇತ್ತು. ನಾವು ನಕ್ಕುದನ್ನು ಕಂಡು ಶೀನಪ್ಪ ಬೋರನನ್ನು ಚೆನ್ನಾಗಿ ಬಯ್ದ. ಅವನು ಬೈದಷ್ಟೂ ಬೋರನು ನಗುತ್ತಲೇ ಇದ್ದ. ನಗೆಯ ಹೆಣ್ಣು ಔಚಿತ್ಯವನ್ನೇ ಅರಿಯಳು.
೨. ನಮ್ಮ ಭಾವನವರು ತಂದ ತಿಂಡಿ
ನಮ್ಮ ಭಾವನವರು ವೈದಿಕಶಿಖಾಮಣಿಗಳು. ೧೨ ನಾಮ ಯಾವತ್ತೂ ಬಿಟ್ಟವರೇ ಅಲ್ಲ. ಸ್ತೋತ್ರ ಪಾಠಗಳಿಗಂತೂ ಮಿತಿಯೇ ಇಲ್ಲ. ದೇವರ ದಯದಿಂದ ಸಂಸ್ಕೃತ ಶ್ಲೋಕಗಳಿಗೂ ಕಡಮೆಯಿಲ್ಲ. ಸಾಸಿವೆ ಕಾಳು ಸಿಡಿದಂತೆ ಮಾತನಾಡಿದುದಕ್ಕೆಲ್ಲ ಒಂದು ಶ್ಲೋಕದ ಆಧಾರ