ಬಕಪಕ್ಷಿ
ನಾವಿರುವದು ಸಣ್ಣದೊಂದು ಹಳ್ಳಿ; ಅದರ ಹೆಸರು ಊರೂರು. ಅದಕ್ಕೆ ಊರೂರೆಂದು ಹೆಸರು ಬರಲಿಕ್ಕೆ ಒಂದು ಕಾರಣವೇ ಆಯಿ- ತಂತೆ- ನಮ್ಮ ಪೂರ್ವಜರು ಹೇಳುತ್ತಿದ್ದರು; ಇಡಿಯ ಊರೂರಿನ ಜನನೇ ಹೇಳುತ್ತಿತ್ತು. ಯಾವನೋ ಒಬ್ಬ ಸಾಧುವು ಆ ಊರಿನಿಂದೀ ಊರಿಗೆ, ಈ ಊರಿನಿಂದಾ ಊರಿಗೆ, ಅಡ್ಡಾಡುತ್ತ ಅಡ್ಡಾಡುತ್ತ ಬಂದು ಒಂದು ಬೈಲಿನಲ್ಲಿ ಇಳಿದನಂತೆ; ಆವನು ಜನರಿಗೆ ಅವರವರ ಇಚ್ಛೆಯ ಮೇರೆಗೆ ಕೆಲಸಗಳನ್ನು ಕೈಗೂಡಿಸಿಕೊಡುವ ಸಾಧುವಾಗಿದ್ದನಂತೆ; ಅದಕ್ಕಾಗಿಯೆ ಅವನ ಮಬ್ಬಿಗೆ ಬಿದ್ದ ಎಷ್ಟೋ ಜನರು ಅವನ ಬೆನ್ನು ಹತ್ತಿ ಬಂದು ಆ ಬೈಲಿನಲ್ಲಿಯೇ ತಳವೂರಿದರಂತೆ” ಮುಂದೆ ಏನಿಲ್ಲೆಂದರೂ ನಾಲ್ಕಾರು ವರುಷಗಳ ವರೆಗೆ ಆ ಬಾವಾಜಿಯು ಅಲ್ಲಿಯೇ ಇದ್ದು ಜನರ ಮನವೆಣಿಕೆಗಳನ್ನು ಈಡೇರಿಸಿದನಂತೆ. ಒಂದು ಊರಿನಲ್ಲಿಯೂ ಒಂದು ದಿನ ಸಹ ಒತ್ತಟ್ಟಿಗೆ ಕಾಲೂರಿ ನಿಲ್ಲದ ಆ ಸ್ವಾಮಿಯು ನಾಲ್ಕಾರು ವರುಷಗಳವರೆಗೆ ಒಂದೆ ಠಾವಿನಲ್ಲಿ ನೆಲೆಸಿದುದು ಪುಣ್ಯಭೂಮಿಯಾದ ಆ ಬಯಲಿನ ಮಹಿಮೆಯೆಂದು ಜನರು ಸೋಜಿಗಗೊಂಡು ಅನ್ನ ಹತ್ತಿದರು. ಒಂದು ದಿನ ತನ್ನಲ್ಲಿಗೆ ಒಂದು ಕೆಲಸಕ್ಕಾಗಿ ಬಂದ ಒಬ್ಬ ಹುಡುಗನಿಗೆ, 'ಮುಂದೆ ನೀನು ಬಲು ದೊಡ್ಡ ಮನುಷ್ಯನಾಗಿ ನಮ್ಮಿ ಊರೂರಿನಲ್ಲಿಯೇ ಬರುವಿ' ಎಂದನಂತೆ. ಮುದುಕನ ಬಾಯಿಯಿಂದ ಬಂದ ಮಹಾಪ್ರಸಾದವೆಂದು ಮುಗ್ಧ ಭಕ್ತರೆಲ್ಲರೂ ಅಂದಿನಿಂದ ಆ ಬಯಲಿಗೆ ಊರೂರೆಂತಲೇ ಕರೆಯಹತ್ತಿದರಂತೆ.
ಮುಂದೆ ಕೆಲದಿನಗಳಲ್ಲಿಯೆ ಏನಿಲ್ಲೆಂದರೂ ನೂರಿನ್ನೂರು ಮನೆಗಳು ಅಲ್ಲಿ ಆದವು. ಗೌಡರು, ಕುಲಕರ್ಣಿಯರು, ರೈತರು, ಎಲ್ಲರೂ ಬಂದರು. ಅಗಸನದೊಂದೇ ಮನೆ; ಹಜಾಮನದೊಂದೇ