ಪುಟ:ಹಳ್ಳಿಯ ಚಿತ್ರಗಳು.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ಜೋಡಿದಾರರ ಕೆಲವು ಚಿತ್ರಗಳು

೬೩

ಎಂದರು. ಗಾಡಿಯವನು “ಆಗೋಕಿಲ್ಲ ಸ್ವಾಮಿ, ಮಳ್ಗಾಲ. ಹತ್ತು ರೂಪಾಯಿ ಕೊಟ್ಭಿಡಿ” ಅಂದ. ಜೋಡಿದಾರರು ಆವಶ್ಯಕವಾಗಿ-ಗೆ ಆ ದಿವಸ ಹೋಗಬೇಕಾಗಿದ್ದುದರಿಂದ ೧೦ ರೂಪಾಯಿಗಳನ್ನೇ ಕೊಡಲು ಒಪ್ಪಿದರು.

ಬೆಳಗಿನ ಜಾವ. ಮಳೆಯು ಬಹಳ ಜೋರಾಗಿ ಬರುತ್ತಿದ್ದಿತು. ಮಳೆಯ ಹನಿಯ ಬಾಣದ ಹೊಡೆತಗಳನ್ನು ತಾಳಲಾರದೆ ಎತ್ತುಗಳು ಸೋತು ಮೆಲ್ಲನೆ ಮುಂದಕ್ಕೆ ನಡೆಯುತ್ತಿದ್ದುವು. ಕಪ್ಪೆಗಳೆಲ್ಲಾ ಬೇಕಾದಂತೆ ಒಟಗುಟ್ಟುತ್ತಿದ್ದುವು. ಮಳೆಯ ನೀರು ರಸ್ತೆಯ ಉದ್ದಕ್ಕೂ ದಡಬಡನೆ ಹರಿಯುತ್ತಿದ್ದಿತು. ಜೋಡಿದಾರರು ಗಾಡಿಯೊಳಗೆ ಮಲಗಿಕೊಂಡಿದ್ದರು. ಅವರಿಗೆ ನಿದ್ರೆ ಬಂದಿದ್ದಿತು. ಗಾಡಿಯವನು ಮಳೆಯು ನಿಂತಮೇಲೆ ಹೊರಡೋಣವೆಂದು, ರಸ್ತೆಯ ಮಗ್ಗುಲಲ್ಲಿದ್ದ ಒಂದು ಹಳ್ಳಿಯ ಊರ ಮುಂದಲ ಮರದ ಕೆಳಗೆ ಗಾಡಿಯನ್ನು ಬಿಟ್ಟನು. ಮಳೆಯು ಸಹಿಸಲಸಾಧ್ಯವಾಗಿ ಬೀಳುತ್ತಿದ್ದಿತು. ಗಾಡಿಯವನ ಮೈ ನಡುಗುತಿದ್ದಿತು. ಬಟ್ಟೆಗಳೆಲ್ಲಾ ನೆನೆದುಹೋಗಿದ್ದುವು. ಗಾಡಿಯಲ್ಲಿ ಬೇಕಾದಷ್ಟು ಸ್ಥಳವಿದ್ದಿತು. ಜೋಡಿದಾರರು ಮಲಗಿ ಗೊರಕೆ ಹೊಡೆಯುತ್ತಿದ್ದರು. ಮನುಷ್ಯ ಪ್ರಾಣಿಯಲ್ಲವೆ? ಪಾಪ ಅವನೂ ಗಾಡಿಯೊಳಗೆ ಒಂದು ಮಗ್ಗುಲಿಗೆ ಕುಳಿತುಕೊಂಡನು. ರಾತ್ರಿಯೆಲ್ಲಾ ನಿದ್ರೆಯಿಲ್ಲದುದರಿಂದ ಮಳೆಯಿಂದ ಆಶ್ರಯವು ಸಿಕ್ಕಿದಕೂಡಲೆ ನಿದ್ರೆ ಬಂದುಬಿಟ್ಟಿತು.

ಬೆಳಗಾಯಿತು. ಮಳೆಯು ನಿಂತುಹೋಗಿದ್ದಿತು. ಜೋಡಿದಾರರಿಗೆ ಮೊದಲು ಎಚ್ಚರವಾಯಿತು. ಗಾಡಿಯವನು ಇನ್ನೂ ಗೊರಕೆ ಹೊಡೆಯುತ್ತಲೇ ಇದ್ದನು. ನೋಡಿದಕೂಡಲೆ ಅವರಿಗೆ ಬಹಳ ಕೋಪಬಂದಿತು. ಗಾಡಿಯವನು ೧೦ ರೂಪಾಯಿ ತೆಗೆದುಕೊಂಡುದಲ್ಲದೆ ಗಾಡಿಯೊಳಗೆ ಕುಳಿತುದನ್ನೂ ಕಂಡು ಆ ಚಳಿಯಲ್ಲಿಯೂ ಅವರ ಮೈ ಬೆವರಿತು. ಮತ್ತಾರಾದರೂ ಆಗಿದ್ದರೆ ಗಾಡಿಯವನನ್ನು ಒದ್ದು ಎಬ್ಬಿಸುತ್ತಿದ್ದರು. ಜೋಡಿ ದಾರರು ಅವನಿಗೆ ಹಾಗೆ ತೊಂದರೆಯನ್ನು ಕೊಟ್ಟು ಅವನ ನಿದ್ರೆಯನ್ನು ಹಾಳುಮಾಡಲಿಲ್ಲ. ಅವರ ಬ್ರಹ್ಮಾಸ್ತ್ರವಿದೆಯಲ್ಲ; ಗಾಡಿಯಿಂದ ಕೆಳಕ್ಕಿಳಿದು ಒಂದುಸಲ ಬಾಯಿ ಬಡಿದುಕೊಂಡರು. ನೀವು ಈಗ ಏನು ಹೇಳುತ್ತೀರಿ.