ಪುಟ:ಹಳ್ಳಿಯ ಚಿತ್ರಗಳು.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೪

ಹಳ್ಳಿಯ ಚಿತ್ರಗಳು

ನಲ್ಲಿ ಊರಿಗೆ ಹೋಗುತ್ತೇನೆ. ಇಲ್ಲಿಗೆ ಮತ್ತೆ ಬರಲು ಅವಕಾಶವಿಲ್ಲ. ಜೋಪಾನ. ಚೆನ್ನಾಗಿ ಓದಿಕೊಳ್ಳಿ, ನಿತ್ಯ ಸಂಧ್ಯಾವಂದನೆ ಮರೆಯಬೇಡಿ" ಎಂದು ಹೇಳಿದರು. ಕಿಟ್ಟುವೂ ನರಹರಿಯ "ಹಾಗೆಯೇ ಮಾಡುತ್ತೇವೆ" ಎಂದರು.

೫ ಗಂಟೆಗೆ ಸ್ಕೂಲಿನಿಂದ ಬಂದ ಕೂಡಲೇ ಕಿಟ್ಟುವಿಗೆ ಬಾಯಾರಿಕೆಯಾಯಿತು. ತಾನು ನಿತ್ಯ ನೀರು ಕುಡಿಯುತ್ತಿದ್ದ ಹೂಜಿ ಕೂಡಲೆ ಜ್ಞಾಪಕಕ್ಕೆ ಬಂದಿತು. ತಮ್ಮ ತಂದೆಯವರು ಬೆಳಿಗ್ಗೆ ಹೇಳಿದ್ದ ಮಾತನ್ನು ನೆನೆದು ನಗುತ್ತಾ, ಮಹಡಿಯಿಂದ ಕೆಳಗೆ ಇಳಿದು, ಮನೆಗೆ ಹೋಗಿ ಅಲ್ಲಿ ಇಟ್ಟಿದ್ದ ಹೂಜಿಯನ್ನು ಕೊಠಡಿಗೆ ತಂದನು. ನರಹರಿಯು ಮೊದಲು ನೀರನ್ನು ಕುಡಿದನು. ಆ ವೇಳೆಗೆ ಸರಿಯಾಗಿ ಹೊರಗೆ ಕಿಟ್ಟು ಎಂದು ಯಾರೋ ಕೂಗಿದರು. ಅದು ಅವನ ತಂದೆಯವರ ಧ್ವನಿ, ಧ್ವನಿಯನ್ನು ಕೇಳಿ ಕಿಟ್ಟುವಿಗೆ ಗಾಬರಿಯಾಯಿತು. ಹೂಜಿ ಕೊಠಡಿಯಲ್ಲಿ ಇಲ್ಲದೆ ಇದ್ದಿದ್ದರೆ ಹೆದರುತ್ತಿರಲಿಲ್ಲ. ಆದರೆ ಹಾಳಾದ್ದು ಆಗತಾನೆ ಹೂಜಿಯನ್ನು ಮನೆಯಿಂದ, ನೀರು ತುಂಬಿ ತಂದಿದ್ದ. ಬೆಳಿಗ್ಗೆ ತಂದೆಯವರೊಂದಿಗೆ ಬಿಸಾಡಿಬಿಟ್ಟೆ ಎಂದು ಹೇಳಿದ್ದ. ಅವರ ತಂದೆಯವರ ಕೋಪ ಹೋಟಲಿನ ಊಟ ನೋಡಿ ಮೊದಲೇ ಹೆಚ್ಚಾಗಿತ್ತು. ಅವನು ಮತ್ತೇನೂ ಉಪಾಯ ತೋರದೆ, ಮಂಡಿಯ ಮಧ್ಯೆ ಹೂಜೆಯನ್ನು ಇಟ್ಟುಕೊಂಡು, ಅದರ ಮೇಲೆ ಒಂದು ಪಂಚೆ ಮುಚ್ಚಿ ಏನೋ ಬರೆಯುವವನಂತೆ ನಟಿಸುತ್ತಾ ಕುಳಿತು ಬಿಟ್ಟ. ಕಿಟ್ಟುವಿನ ತಂದೆ ಮಹಡಿಯ ಮೆಟ್ಟಿಲೇರಿ ಒಳಕ್ಕೆ ಬಂದು,

“ಹಾಳಾದ ಮೋಟಾರ್ ತಪ್ಪಿಹೋಯಿತು. ಸಂತೆಮಾಳದಲ್ಲಿ ಒಂದು ಗಾಡಿ ಇದೆ. ಅದ್ರಲ್ಲೇ ಹೋಗ್ತಿದ್ದೀನಿ. ರಾತ್ರಿ ಎಲ್ಲಾ ನಿದ್ರೆ ಕೆಡಬೇಕು. ಏನ್ಮಾಡೋದು? ದಾರಿಯಲ್ಲಿ ನಿಮ್ಮ ಒಂದು ಸಲ ಮಾತನಾಡಿಸಿ ಬಿಟ್ಟು ಹೋಗೋಣ ಅಂತ ಬಂದೆ” ಎಂದರು. ಕಿಟ್ಟುವಿಗೆ ಸ್ವಲ್ಪ ಧೈರ್‍ಯವಾಯಿತು. "ಒಂದು ಘಳಿಗೆ ಹೀಗೆಯೇ ಕೂತಿದ್ರೆ ಹೊರಟುಹೋಗ್ತಾರೆ. ಆಮೇಲೆ ಹೂಜಿ ಹೊರಕ್ಕೆ ತೆಗೆದರೆ ಆಯ್ತು" ಅಂದುಕೊಂಡ ಅವನು. ನರಹರಿ ಇದನ್ನೆಲ್ಲಾ ನೋಡಿದ. ಅವನಿಗೆ ಒಂದು ಉಪಾಯ ಹೊಳೆಯಿತು. ಮಹಡಿ ಇಳಿದು ಕೆಳಗಿನ ಮೆಟ್ಟಿಲಿನ ಬಳಿಗೆ ಬಂದು “ಕಿಟ್ಟು ಕಿಟ್ಟು” ಎಂದು