ಪುಟ:ಹಳ್ಳಿಯ ಚಿತ್ರಗಳು.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ಜೋಡಿದಾರರ ಕೆಲವು ಚಿತ್ರಗಳು

೫೭

ದೊಡ್ಡ ಜೋಡಿದಾರರು ಮನೆಯ ಜಗಲಿಯ ಮೇಲೆ ಸಂಧ್ಯಾವಂದನೆ ಮಾಡುತ್ತಾ ಕುಳಿತಿದ್ದವರು. ಮಗನ ಈ ಕಲ್ಕ್ಯಾವತಾರದ ವೈಭವವನ್ನು ನೋಡಿದರು. ನಮ್ಮ ನಾಯಕನು ನೆಲದ ಮೇಲೆ ಬಿದ್ದ ಕ್ಷಣವೇ ರಬ್ಬರ್ ಚೆಂಡಿನಂತೆ ಎದ್ದು ನಿಂತುಬಿಟ್ಟನು. ಅವರ ತಂದೆಯವರು ಅವನನ್ನು ನೋಡಿ “ನೀನು ಯಾವತ್ತಿದ್ದರೂ ಕುದುರೆಯಿಂದಲೇ ಬಿದ್ದು ಸಾಯುತ್ತೀಯೆ. ನಾನು ಹೇಳಿದ ಯಾವ ಮಾತೂ ಸುಳ್ಳಾಗಿಲ್ಲ" ಎಂದರು.

೫. ಕೆರೆಯನ್ನು ದಾಟುವಾಗ

ಜೋಡಿದಾರರಿಗೆ ೨೦ ವರುಷಗಳಾಗಿದ್ದಿರಬಹುದು. ಒಂದು ದಿವಸ ಅವರು ನರಸೀಪುರಕ್ಕೆ ಹೋಗಬೇಕಾಯಿತು. ಆಗ ಈಗಿನಂತೆ ಎಲ್ಲೆಲ್ಲೂ ಬಸ್ ಇರಲಿಲ್ಲ. ಒಂದು ಗಾಡಿ ಬೇಕಾದರೆ ಬಾಡಿಗೆ ಹತ್ತು ರೂಪಾಯಿ ಕೊಡಬೇಕಾಗಿದ್ದಿತು. ಜೋಡಿದಾರರಿಗೆ ಯೌವನವು ಉಕ್ಕಿ ಬರುತ್ತಿದ್ದಿತು. ಅವರು ಕಡಿದರೆ ನಾಲ್ಕಾಳು ಆಗುವಂತೆ ಇದ್ದರು, "೧೪ ಮೆಲಿ ನಡೆದೇ ಬಿಡುತ್ತೇನೆ" ಎಂದು ಅವರು ನಡೆದುಕೊಂಡೇ ಹೊರಟರು. ಇವರು ಹೊರಡುವ ವೇಳೆಗೆ ಸರಿಯಾಗಿ ಸೂರ್ಯನು ಉದಯಿಸಿ ಬರುತ್ತಿದ್ದನು. ಬೆಳಗಿನ ದೇವಿಯು ತಳಿರಿನ ಕೈಯಲ್ಲಿ ಚಿನ್ನದ ಕುಕ್ಕೆಯನ್ನು ಹಿಡಿದುಕೊಂಡು ಅದರೊಳಗೆ ಪೂಜಾದ್ರವ್ಯವನ್ನು ತೆಗೆದುಕೊಂಡು ಪೂರ್ವ ದಿಕ್ಕಿನಿಂದ ಭೂಮಿಗೆ ಬರುತ್ತಿದ್ದಳು. ಇಬ್ಬನಿಯ ಹನಿಯು ಮುತ್ತಿಟ್ಟ ಮೊಗ್ಗುಗಳೆಲ್ಲಾ, ಆಗತಾನೆ ಅರಳುತ್ತಿದ್ದುವು. ವಾಯುವು ಅವುಗಳ ಸುವಾಸನೆಯನ್ನು ಹೊತ್ತುಕೊಂಡು ಸಂಚಾರಕ್ಕೆ ಪ್ರಾರಂಭಿಸಿತ್ತು. ಹಕ್ಕಿಗಳು ಇಂಪಾದ ಗಾನದಲ್ಲಿ ಹಾಡುತ್ತಿದ್ದುವು. ಪ್ರಾತಃಕಾಲವು ಮನಸ್ಸಿಗೆ ಉಲ್ಲಾಸವನ್ನೂ ಉತ್ಸಾಹವನ್ನೂ ಉಂಟುಮಾಡುವುದಾಗಿದ್ದಿತು. ಜೋಡಿದಾರರು ಪ್ರಕೃತಿಯ ಅಂದಿನ ಅಂದವನ್ನು ನೋಡುತ್ತಾ ಸುಮಾರು ಎರಡು ಗಂಟೆ ನಡೆದರು. ಆ ವೇಳೆಗೆ ಬಿಸಿಲು ಸ್ವಲ್ಪ ತೀಕ್ಷ್ಣವಾಯಿತು. ಎಲ್ಲಾದರೂ ಒಂದು ಘಳಿಗೆ ಕುಳಿತುಕೊಂಡು ಸುಧಾರಿಸಿ