ಪುಟ:ಹಳ್ಳಿಯ ಚಿತ್ರಗಳು.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೬

ಹಳ್ಳಿಯ ಚಿತ್ರಗಳು

೪. ಕುದುರೆ ಸವಾರಿ ಕಲಿತುದು

ಈ ಮಧ್ಯೆ ಜೋಡಿದಾರನು ಮತ್ತೊಂದು ಸಾಧನೆಯನ್ನು ಪ್ರಾರಂಭಿಸಿಬಿಟ್ಟನು. ಈಜುವುದು, ಮರಹತ್ತುವುದರ ಜೊತೆಗೆ ಕುದುರೆ ಸವಾರಿ ಬೇರೆ ಪ್ರಾರಂಭವಾಯಿತು. ಬೀದಿಯಲ್ಲಿ ಮೇಯುತ್ತಿದ್ದ ಯಾವ ಬಡಕಲ ಕುದುರೆಯನ್ನೂ ಇವನು ಬಿಡುತ್ತಿರಲಿಲ್ಲ. ಸ್ವಲ್ಪ ಬಲವಾದ ಕತ್ತೆ ಸಿಕ್ಕಿದ್ದರೆ ಅದರಮೇಲೂ ಸವಾರಿಮಾಡುತ್ತಿದ್ದನೇನೊ? ಅವನ ಮನೆಯ ಮಗ್ಗುಲಲ್ಲಿ ಒಂದು ದೇವಸ್ಥಾನವಿದೆ. ಅದರ ಸುತ್ತಲೂ ಗೋಡೆ. ಜೋಡಿದಾರನು ಬೀದಿಯಲ್ಲಿ ಕಾಣುತ್ತಿದ್ದ ಕುದುರೆಗಳನ್ನೆಲ್ಲಾ ಆ ಗುಡಿಯೊಳಕ್ಕೆ ಓಡಿಸಿಕೊಂಡುಹೋಗಿ ಗುಡಿಯ ಸುತ್ತ ಸವಾರಿ ಮಾಡುತ್ತಿದ್ದನು. ಒಂದು ದಿವಸ ಬೆಳಿಗ್ಗೆ ನಮ್ಮೂರ ಶಾನುಭೋಗರ ದೊಡ್ಡ ಕುದುರೆಯು ಅವರೆ ಮನೆಯ ಬಾಗಲಿನಲ್ಲಿ ಮೇಯುತ್ತಿದ್ದಿತು. ಅದರ ಮುಂದು ಎರಡು ಕಾಲುಗಳನ್ನೂ ಕಟ್ಟಿದ್ದರು. ಜೋಡಿದಾರನು ಅದನ್ನು ದೇವಸ್ಥಾನದೊಳಕ್ಕೆಳೆದು ಕೊಂಡು ಹೋದನು.

ಮೊದಲು ಕುದುರೆಯ ಕಾಲಿನ ಹಗ್ಗವನ್ನು ಬಿಚ್ಚಿ ಆಮೇಲೆ ಅದರ ಬೆನ್ನಿನಮೇಲೆ ಹತ್ತಬೇಕಾಗಿದ್ದಿತು. ಆದರೆ ಜೋಡಿದಾರನಿಗೆ ಅಷ್ಟೊಂದು ಸಾವಧಾನವಿರಲಿಲ್ಲ. ಅವನು ಮೊದಲು ಕುದುರೆಯ ಮೇಲೆ ಹತ್ತಿ ಕುಳಿತು ಬಳಿಯಲ್ಲಿದ್ದ ಜೊತೆಗಾರನನ್ನು ಕುರಿತು 'ಕಾಲಿನ ಕಟ್ಟನ್ನು ಬಿಚ್ಚು' ಎಂದನು. ಕುದುರೆಗೆ ತಡಿಯಿಲ್ಲ ಲಗಾಮಿಲ್ಲ. ಅವನ ಸ್ನೇಹಿತನು ಕಾಲಿನ ಕಟ್ಟನ್ನು ಬಿಚ್ಚಲು ಬಗ್ಗಿದನು. ಆ ವೇಳೆಗೆ ದೇವಸ್ಥಾನದ ಹೊರಗೆ ಮತ್ತೊಂದು ಕುದುರೆ ಕೆನೆಯಿತು. ಕೂಡಲೇ ಜೋಡಿದಾರನು ಕುಳಿತಿದ್ದ ಕುದುರೆಯು ಮುಂದಲ ಎರಡು ಕಾಲುಗಳನ್ನೂ ಮೇಲಕ್ಕೆತ್ತಿ ನೆಗೆಯಿತು. ಕಾಲಿನ ಕಟ್ಟನ್ನು ಬಿಚ್ಚಲು ಬಗ್ಗಿದ್ದ ಸ್ನೇಹಿತರು ಹೆದರಿ ಹಿಂದಕ್ಕೆ ಬಿದ್ದುಬಿಟ್ಟನು. ಜೋಡಿದಾರನು ಕೆಳಕ್ಕೆ ಇಳಿಯಬೇಕೆಂದು ಪ್ರಯತ್ನಿಸಿದನು. ಕುದುರೆಯು ಇಳಿಯಲು ಅವಕಾಶಕೊಡದೆ ನೆಗೆಯುತ್ತಾ ದೇವಸ್ಥಾನದ ಹೊರಗೆ ಬಂದು, ಜೋಡಿದಾರರ ಮನೆಯ ಬಾಗಲಿನಲ್ಲಿ ಎರಡು ಕಾಲುಗಳನ್ನೂ ಮೇಲಕ್ಕೆತ್ತಿ ಗಟ್ಟಿಯಾಗಿ ಮತ್ತೊಂದು ಸಲ ನೆಗೆದುಬಿಟ್ಟಿತು.