ಜೋಡಿದಾರನು ಒಂದೇ ಉಸಿರಿನಲ್ಲಿ ಮನೆಗೆ ಓಡಿದನು. ಅವನ ತಂದೆ ತಾಯಿಗಳು ಮತ್ತೆ ಮಲಗಿರಲಿಲ್ಲ. ಯಾವುದೋ ಮಾತನಾಡುತ್ತಾ ಕುಳಿತಿದ್ದರು. ಮಗನು ಹಿಂದಿರುಗಿದುದನ್ನು ನೋಡಿ ಅವನ ತಂದೆಯವರಿಗೆ ಒಹಳ ಕೋಪವುಂಟಾಯಿತು. ಪರೀಕ್ಷೆಗೆ ಹೊರಟವನು ಹೊರಟ ಕೂಡಲೆ ಹಿಂದಿರುಗುವುದು ಅಪಶಕುನವೆಂದು ಅವರು ಯೋಚಿಸಿದರು. ಕೋಪದಿಂದ “ಯಾಕೆ ಬಂದೆ" ಎಂದು ಘರ್ಜಿಸಿದರು. ಜೋಡಿದಾರನು "ಒಂದು ಸಾಮಾನನ್ನು ಮರೆತುಬಿಟ್ಟೆ” ಎಂದನು. ಅವರ ತಂದೆಯವರು ಕೋಪದಿಂದ “ನಿನಗೆ ಪರೀಕ್ಷೆ ಪ್ಯಾಸ್ ಆದರೆ ನಾನು ಮೂಗು ಕುಯ್ಯಿಸಿಕೊಳ್ಳುತ್ತೇನೆ” ಎಂದರು. ನಮ್ಮ ನಾಯಕನು ಪಾಪ ಆವರೆಗೆ ದುಃಖವನ್ನು ಕಂಡಿರಲಿಲ್ಲ. ಪರೀಕ್ಷೆಗೆ ಹೊರಟಾಗ ತಂದೆಯವರು ಮಾಡಿದ ಈ ಆಶೀರ್ವಾದದಿಂದ ಅವನ ಹೃದಯವು ದುಃಖದಿಂದ ವಿದೀರ್ಣವಾಯಿತು. ಅವನು ಕಣ್ಣೀರು ಸುರಿಸುತ್ತಾ ಹೊರಟುಹೋದನು. ಯಾವ ಕೊಬ್ಬರಿ ಬಾಳೆಯ ಹಣ್ಣಿಗಾಗಿ ಇಷ್ಟು ಮಾತನ್ನು ಕೇಳಿದ್ದನೋ, ಅದನ್ನು ದಾರಿಯಲ್ಲಿ ನದಿಯೊಳಕ್ಕೆ ಎಸೆದುಬಿಟ್ಟನು. ತಾನು ಬುದ್ದಿವಂತನಲ್ಲವೆಂಬುದೂ, ಪಾಠವನ್ನು ಒಂದು ದಿವಸವೂ ಓದಲಿಲ್ಲವೆಂಬುದೂ, ದಡ್ಡರಿಗಿಂತ ದಡ್ಡನೆಂಬುದೂ ಅವನಿಗೆ ತಿಳಿದಿದ್ದಿತು. ಪರೀಕ್ಷೆಯಲ್ಲಿ ತನಗೆ ಪ್ಯಾಸ್ ಆಗುವುದಿಲ್ಲವೆಂದು ಎಲ್ಲರಿಗಿಂತ ಮುಂಚೆಯೇ ಅವನು ತಿಳಿದಿದ್ದನು. ಆದರೆ ತನ್ನ ತಂದೆಯವರು ಹೇಳಿದ್ದ ಮಾತನ್ನು ನೆನೆದುಕೊಂಡಾಗಲೆಲ್ಲಾ ಅವನಿಗೆ ದುಃಖವುಂಟಾಗಿ ಎಳೆಯ ಮಕ್ಕಳಂತೆ ಅಳುತ್ತಿದ್ದನು. ಅವನು ಆ ದಿವಸ ಅತ್ತಂತೆ ತನ್ನ ಜೀವಮಾನದಲ್ಲಿ ಮತ್ತಾವಾಗಲೂ ಅತ್ತುದಿಲ್ಲವಂತೆ.
ಪರೀಕ್ಷೆಯಲ್ಲಿ ಜೋಡಿದಾರನಿಗೆ ಉತ್ಸಾಹವಿರಲಿಲ್ಲ. ಪ್ರಶ್ನೆ ಪತ್ರಿಕೆಯನ್ನು ಕೈಗೆ ತೆಗೆದುಕೊಂಡ ಕೂಡಲೆ ತಂದೆಯ ಮಾತುಗಳು ಜ್ಞಾಪಕ ಬರುತ್ತಿದ್ದುವು.
ಅಂತೂ ಆ ವರುಷವೇ ಅವನು ಪರೀಕ್ಷೆಯಲ್ಲಿ ತೇರ್ಗಡೆಯಾಗಿಬಿಟ್ಟನು.