ಪುಟ:ಹಳ್ಳಿಯ ಚಿತ್ರಗಳು.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ಹೊಳೆಯ ಒಂದು ಅನುಭವ

೭೯

ಭೂಮಿಯ ಮೇಲೆ ತಾನು ಮತ್ತೆ ಸ್ನೇಹಿತನ ಮುಖವನ್ನು ನೋಡುವ ಆಸೆ ಇರಲಿಲ್ಲ. ತಡಮಾಡಲು ಅವಕಾಶವನ್ನು ಕೊಡದೆ ಅವನು ಬಲಾತ್ಕಾರವಾಗಿ ಬೋರನನ್ನು ನದಿಗೆ ನೂಕಿಬಿಟ್ಟನು. ಬೋರನು ನದಿಯ ವೇಗದಲ್ಲಿ ನೂಕಲ್ಪಟ್ಟು, ಸಂಗಮದ ಸುಳಿಯಲ್ಲಿ ಸಿಲುಕಿ, ಮುಳುಗಿ, ಅರ್ಧ ಮೈಲು ಮುಂದೆ ದಡವನ್ನು ಸೇರಿದನು. ನೀರಿನ ಹೊಡೆತದಿಂದಲೂ ಶೈತ್ಯದಿಂದಲೂ ಅವನ ಮೈಯೆಲ್ಲಾ ಹಸುರಾಗಿಬಿಟ್ಟಿತ್ತು.

ಈ ಕಡೆ ನಿಂಗನ ವಿಚಾರ ಸ್ವಲ್ಪ ಕೇಳಿ. ಮೊದಲು ಅವನು ಎರಡು ಮುತ್ತಗದ ಪಿಂಡಿಯನ್ನೂ ಒಂದೊಂದಾಗಿ ನೀರಿನೊಳಕ್ಕೆ ಬಿಸಾಡಿದನು. ಸಂಗಮ ಸ್ಥಳಕ್ಕೆ ಅವನ ಹರಿಗೋಲು ಬಂದ ಕೂಡಲೆ ಸುಳಿಯಲ್ಲಿ ಬುಗರಿಯಂತೆ ಗಿರ್‍ರೆಂದು ಸುತ್ತಿತು. ಅದು ಕೂಡೆ ನಿಂಗನ ತಲೆಯ ಸುತ್ತಿತು. ಅಲ್ಲಿಂದ ಮುಂದೆ ಹರಿಗೋಲು ಒಂದು ದೊಡ್ಡ ಬಂಡೆಯನ್ನು ಹತ್ತಿ ಕೆಳಕ್ಕೆ ಉರುಳುವುದರಲ್ಲಿದ್ದಿತು. ಕಷ್ಟ ಪಟ್ಟು ಕೈಕಾಲು ಗಾಯಮಾಡಿಕೊಂಡು ದೇವರಿಗಾಗಿ ಕುಯ್ಲಿದ್ದ ಹೂವುಗಳನ್ನೆಲ್ಲಾ ನಿಂಗನು ನದಿಗೆ ಚೆಲ್ಲಿಬಿಟ್ಟನು. ಅನಂತರ ಆ ಹರಕು ಬುಟ್ಟಿಯಿಂದ ಹರಿಗೋಲಿನ ನೀರನ್ನು ಎತ್ತಿ ಹೊರಕ್ಕೆ ಸುರಿಯಲು ಪ್ರಾರಂಭಿಸಿದನು. “ಗೋವಿಂದೋ ಗೋವಿಂದ" ಎಂಬುದಾಗಿ ಒಂದು ಸಲ ಕೂಗುವುದು; ಒಂದು ಬುಟ್ಟಿ ನೀರನ್ನು ಹರಿಗೋಲಿನಿಂದ ಎತ್ತಿ ನದಿಗೆ ಸುರಿಯುವುದು. ದಡದಲ್ಲಿ ನೋಡುವವರಿಗೆ ಈ ಗೋವಿಂದ ಶಬ್ದವು ವಿನೋದಕರವಾಗಿಯೇ ಕಂಡಿರಬಹುದು. ಆದರೆ ನಿಂಗನಿಗೆ ಮಾತ್ರ ಆಗ ಪ್ರಾಣಸಂಕಟವುಂಟಾಗಿದ್ದಿತೆಂದು ನಾನು ಅವನ ಬಾಯಿಂದಲೇ ಕೇಳಿದ್ದೇನೆ. ಅಷ್ಟೇ ಅಲ್ಲ, ತಾನು ಆ ರೀತಿ ದೇವರ ಧ್ಯಾನದೊಂದಿಗೆ ನೀರನ್ನು ಮೇಲಕ್ಕೆ ಎತ್ತಿಹಾಕದೆ ಇದ್ದಿದ್ದರೆ, ಹರಿಗೋಲು ನಮ್ಮೂರ ಕಡುವನ್ನು ಮುಟ್ಟುತ್ತಲೇ ಇರಲಿಲ್ಲವೆಂದೂ, ತಾನು ನೀರಿನಿಂದ ಜೀವ ಸಹಿತ ಹೊರಕ್ಕೆ ಬರುತ್ತಲೇ ಇರಲಿಲ್ಲವೆಂದೂ ಹೇಳಿದ್ದಾನೆ.

ನಮ್ಮೂರ ನದಿಯ ತೀರದ ಗುಡಿಸಲಿನಲ್ಲಿ ಬೆಸ್ತರ ಹನುಮನು ಉಳಿದ ಬೆಸ್ತರೊಂದಿಗೆ ಮಾತನಾಡುತ್ತಾ ಬೀಡಿ ಸೇದುತ್ತಾ ಕುಳಿತಿದ್ದನು. ಬೆಸ್ತರ ಹನುಮನೆಂದರೆ ನಮ್ಮೂರ ಬೆಸ್ತರಿಗೆಲ್ಲಾ ಕಣ್ಣಾದವನು. ಈಜುವುದರಲ್ಲಿ ಅವನಿಗೆ ಸಮಾನರಾದವರನ್ನು ನಾನು ಕಂಡೇ ಇಲ್ಲ. ೫-೬ ಆಳುದ್ದ