ವಿಷಯಕ್ಕೆ ಹೋಗು

ಪುಟ:ಹಳ್ಳಿಯ ಚಿತ್ರಗಳು.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ನಗೆಯ ನೀತಿ
೯೫

ಮಾದನಿಗೆ ಕೋಪ ಹೆಚ್ಚು. ಅವನು ಮೆಲ್ಲಗೆ ಮಾತನಾಡಿದರೂ ಒಂದು ಮೈಲಿ ಕೇಳುತ್ತದೆ. ಅವನ ಧ್ವನಿಗೆ ಹೆದರಿಯೇ ಅನೇಕರು ಅವನಿಗೆ ಕುಕ್ಕೆಯ ತುಂಬ ಚಕ್ಲಿ ಅರಳನ್ನು ಸುರಿದು ಬಿಡುತ್ತಿದ್ದರು. ಶೀನಪ್ಪನಿಗೂ ಕೂಡ ಮಾದನನ್ನು ಕಂಡರೆ ಸ್ವಲ್ಪ ಭಯವೇ ಇದ್ದಿತು. “ಅವನನ್ನು ಸಮಾಧಾನಪಡಿಸುವುದು ಹೇಗೆ" ಎಂದು ಅವನು ಯೋಚಿಸುತ್ತಿದ್ದನು. "ವೆಂಕ್ಟಾಚಾರಿ ಇದಾನಲ್ಲ. ನನ್ನ ಪರ ಹಿಡಿದು ಮಾತನಾಡುತ್ತಾನೆ, ಪರವಾಯಿಲ್ಲ" ಎಂದುಕೊಂಡನು. ಮಾದನು ಬಾಗಿಲಿಗೆ ಬಂದವನೆ ದಪ್ಪ ಧ್ವನಿಯಲ್ಲಿ

“ಶೀನಪ್ಪನವೆ, ಎಲ್ಲಿ ಅರಳು ಚಕ್ಲಿ ಪ್ರಸಾದ ಎಲ್ಲಾ? ಅಪ್ಪಣೆಮಾಡಿ” ಎಂದನು.

ಶೀನಪ್ಪನು "ಮಾದಯ್ಯ, ಈಸಲ ನಮಗೆ ಹಬ್ಬವಿಲ್ಲ, ನಮ್ಮ ಅಮ್ಮ ಸ್ವರ್ಗಸ್ಥರಾದದ್ದು ತಿಳಿಯದೆ?” ಎಂದು ಹೇಳಿ ವೆಂಕ್ಟಾಚಾರಿಯ ಕಡೆ ನೋಡಿದನು.

ಮಾದನು ಜತೆಯವರೊಂದಿಗೆ ಹೊರಡುವುದರಲ್ಲಿದ್ದುದನ್ನು ಕಂಡು ವೆಂಕ್ಟಾಚಾರಿಯು ಶೀನಪ್ಪನ ಮುಖವನ್ನು ನೋಡಿ

“ಯಾಕ್ರಿ ಸುಳ್ಳು ಹೇಳೀರಿ?” ಎಂದನು.

ಮಾದನು ತಕ್ಷಣ ಶೀನಪ್ಪನ ಕಡೆಗೆ ಮುಖವನ್ನು ತಿರುಗಿಸಿದನು. ಶೀನಪ್ಪನು ಆಶ್ಚರ್‍ಯದಿಂದ ವೆಂಕ್ಟಾಚಾರಿಯನ್ನು ನೋಡುತ್ತಿದ್ದನು. ವೆಂಕ್ಟಾಚಾರಿಯು ಮಾದನ ಕಡೆ ತಿರುಗಿ

"ಮಾದಯ್ಯ ನಿನಗೆ ಮಾತ್ರ ಇಲ್ಲ. ಇದುವರೆಗೆ ಬಂದವರಿಗೆಲ್ಲಾ ಇವರು ಪ್ರಸಾದವನ್ನು ಕೊಟ್ಟರು. ಇಲ್ಲಿ ಚೆಲ್ಲಿರುವ ಅರಳು ಮತ್ತು ಪುರಿಯನ್ನು ನೋಡು” ಎಂದನು. ಮಾದನು ನೋಡಿದನು. ಮಾದನು ಕೋಪದಿಂದ ಹುಚ್ಚಾದನು. ಶೀನಪ್ಪನು ಆಶ್ಚರ್‍ಯದಿಂದ ಮೂಕನಾದನು. ಮಾದನು ದೊಡ್ಡ ಧ್ವನಿಯಿಂದ

"ಶೀನಪ್ಪ, ವರ್ಷಕ್ಕೊಂದು ಹಬ್ಬ. ತಾತ ಮುತ್ತಾತಂದಿರ ಕಾಲದಿಂದ ಬಂದಿದ್ದ ಪರ್ದಿಷ್ಟ (ಪದ್ದತಿ); ಸಾಲದ್ದ್ಕೆ ಸುಳ್ಬೇರೆ ಹೇಳ್ತೀರಿ, ನಾವೇನು ನಿತ್ಯ ಬಂದೇವಾ?” ಎಂದು ಘರ್ಜಿಸಿದನು.