ಅದೇ ಸಂಧ್ಯಾಕಾಲ, ಶೀನಪ್ಪನ ಮನೆಯ ಜಗುಲಿಯ ಮೇಲೆ, ವೆಂಕ್ಟಾಚಾರಿ ಶೀನಪ್ಪನೊಂದಿಗೆ ಏನೋ ಮಾತನಾಡುತ್ತಾ ಕುಳಿತಿದ್ದ. ಗೋಕುಲಾಷ್ಟಮಿಯ ದಿವಸ ನಮ್ಮಗಳ ಮನೆಗೆ ನಮ್ಮ ರೈತರೆಲ್ಲಾ ದೇವರ ಪ್ರಸಾದಕ್ಕಾಗಿ ಸಾಯಂಕಾಲ ಬರುವ ಪದ್ದತಿ. ಅವರು ಒಂದು ಮನೆಯನ್ನೂ ಬಿಡದೆ ಪ್ರಸಾದವನ್ನು ವಸೂಲಿಮಾಡಿಕೊಂಡೇ ಹೋಗುತ್ತಾರೆ. ತಾವಾಗಿಯೇ ಬರದ ಗೌಡರುಗಳನ್ನು, ನಾವೇ ಗೌರವದಿಂದ ಮನೆಗೆ ಕರೆಸಿ ಅವರಿಗೆ ದೇವರ ಪ್ರಸಾದವನ್ನು ಕೊಟ್ಟು ಕಳುಹಿಸುತ್ತೇವೆ. ಪ್ರಸಾದವೆಂಬುದು: ಅರಳು, ಚಕ್ಕುಲಿ, ಕೋಡಬಳೆ. ಗೋಕುಲಾಷ್ಟಮಿಯ ಸಂಧ್ಯಾಕಾಲ,-ನಮ್ಮೂರ ಪೇಟೆಯ ರೈತರೆಲ್ಲಾ ಈ ಪ್ರಸಾದಕ್ಕಾಗಿ ಊರ ಬೀದಿಗಳಲ್ಲಿ 'ಗಸ್ತು' ಹೊಡೆಯುತ್ತಿರುತ್ತಾರೆ. ಅವರ ಗುಂಪೊಂದು ಪದ್ದತಿಯ೦ತೆ ಶೀನಪ್ಪನ ಮನೆಯ ಮುಂದಕ್ಕೂ ಬಂದಿತು. ಶೀನಪ್ಪನು
“ಈ ವರುಷ ನನಗೆ ಹಬ್ಬವಿಲ್ಲ. ತಿಳಿಯದೆ ” ಎಂದ.
ಅವರು “ಹೌದು ಹೌದು” ಎಂದುಕೊಂಡು ಹೊರಟು ಹೋದರು.
ಒಮ್ಮಿಂದೊಮ್ಮೆ ವೆಂಕ್ಟಾಚಾರಿಗೆ ಶೀನಪ್ಪ ಹಾರಿಸಿದ್ದ ಇಡ್ಲಿ, ಬೆಣ್ಣೆಯ ಜ್ಞಾಪಕ ಬಂದಿತು. ಈಚೆಗೆ ಶೀನಪ್ಪನನ್ನು ಕಂಡಾಗಲೆಲ್ಲಾ ಅವನಿಗೆ ಅದರ ಜ್ಞಾಪಕ ಬರುತ್ತಿದ್ದಿತೆಂದು ಹೇಳಬಹುದು. ಅವನು ಏನನ್ನೋ ಯೋಚಿಸಿಕೊಂಡು "ಈಗಲೇ ಬಂದೆ" ಎಂದು ಹೇಳುತ್ತಾ ತನ್ನ ಮನೆಗೆ ಹೊರಟುಹೋದನು.
ವೆಂಕ್ಟಾಚಾರಿ ಮನೆಗೆ ಹೋಗಿ ಬರುವುದಕ್ಕೆ ೧೦ ನಿಮಿಷ ಹಿಡಿದಿರಬಹುದು. ಅವನು ಹಿಂದಿರುಗುವ ವೇಳೆಗೆ ಶೀನಪ್ಪ ಬಾಗಿಲಿನಿಂದ ಎದ್ದು ಹೋಗಿ ಒಳಗೆ ಕುಳಿತಿದ್ದ. ವೆಂಕ್ಟಾಚಾರಿಯು ಕೈಯಲ್ಲಿ ತಂದಿದ್ದ ಅರಳನ್ನು ಬಾಗಿಲಿನಲ್ಲಿಯೂ, ಜಗಲಿಯ ಮೇಲೆಯೂ ಚೆಲ್ಲಿ ಬಿಟ್ಟು, ಮೊದಲು ತಾನು ಕುಳಿತಿದ್ದ ಸ್ಥಳದಲ್ಲಿಯೇ ಕುಳಿತುಕೊಂಡ. ಸ್ನೇಹಿತನು ಬಂದದ್ದನ್ನು ನೋಡಿ, ಶೀನಪ್ಪನು ಬಾಗಿಲಿಗೆ ಬಂದ. ಆದರೆ ಚೆಲ್ಲಿದ್ದ ಅರಳನ್ನು ಮಾತ್ರ ನೋಡಲಿಲ್ಲ. ಆ ವೇಳೆಗೆ ಪೇಟೆಯ ರೈತರ ಮತ್ತೊಂದು ಗುಂಪು, ಶೀನಪ್ಪನ ಬಾಗಿಲಿಗೆ ಪ್ರಸಾದಕ್ಕಾಗಿ ಬಂದಿತು. ಆ ಗುಂಪಿನಲ್ಲಿ ಮಾದ ಇದ್ದ.