ಪುಟ:ಹಳ್ಳಿಯ ಚಿತ್ರಗಳು.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಗೆಯ ನೀತಿ

೯೩

ಅಗಲ ಇಡ್ಲಿ, ಅದರ ಮೇಲೊಂದು ನಿಂಬೆಕಾಯಿ ಗಾತ್ರದ ಬೆಣ್ಣೆ, ಅದನ್ನು ಕಂಡು ಶೀನಪ್ಪನಿಗೆ ಬಾಯಿನೀರು ಕರೆಯಿತು. “ಅಯ್ಯೋ ಇನ್ನೊಂದು ಗಳಿಗೆಗೆ ಅದು ವೆಂಕ್ಟಾಚಾರಿಯ ಬಾಯಿಗೆ ಮಾಯವಾಗಿ ಬಿಡುವುದಲ್ಲಾ” ಎಂದು ಅವನಿಗೆ ಕಳವಳ ಹತ್ತಿತು. ಅಷ್ಟರಲ್ಲಿ ಒಂದು ಆಲೋಚನೆ ತೋರಿತು. ಶೀನಪ್ಪ ಬೆಕ್ಕಿನಂತೆ, ಒಂದೇ ಏಟಿಗೆ, ವೆಂಕ್ಕಾಚಾರಿಯ ಕೈಲಿದ್ದ ಬೆಣ್ಣೆಯನ್ನೂ ಇಡ್ಲಿಯನ್ನೂ ಕಿತ್ತುಕೊಂಡು ಬಾಯಿಗೆ ಹಾಕಿಕೊಂಡು ಬಿಟ್ಟ, ವೆಂಕ್ಟಾಚಾರಿ ಏನಾಯಿತೆಂದು ತಿಳಿಯುವಷ್ಟರಲ್ಲಿಯೇ ಅವನ ಕೈಯಲ್ಲಿದ್ದ ಇಡ್ಲಿಯ ಬೆಣ್ಣೆಯೂ ಮಾಯವಾಗಿದ್ದಿತು.

ವೆಂಕ್ಟಾಚಾರಿಗೆ ಬಹಳ ಸಿಟ್ಟು ಹತ್ತಿತು. ಆಮೇಲೆ ಅವನು ೮-೧೦ ದಿವಸ ಶೀನಪ್ಪನ ಮನೆಗೆ, ಅವನು ಕಾಫಿ ಕುಡಿಯುವ ವೇಳೆಯಲ್ಲಿ ಹೋದ. ಸಾಧ್ಯವಾದರೆ ಶೀನಪ್ಪನು ತಿನ್ನುವುದಕ್ಕೆ ಕುಳಿತಿದ್ದಾಗ, ಅವನ ಕೈಯಿನ ತಿಂಡಿಯನ್ನೋ ಕಾಫಿಯನ್ನೊ ಹಾರಿಸಿಬಿಟ್ಟು, ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಬೇಕೆಂದು ಅವನಿಗೆ ಆಸೆ, ಶೀನಪ್ಪನಿಗೆ ವೆಂಕ್ಟಾಚಾರಿಯ ಈ ಸುಳಿವು ಗೊತ್ತಾಯಿತು. ಅವನು ಬಹಳ ಎಚ್ಚರಿಕೆಯಿಂದಿದ್ದ. ವೆಂಕ್ಟಾಚಾರಿ ನಿರಾಶನಾಗಿ ಸುಮ್ಮನಿರಬೇಕಾಯಿತು. ಆದರೆ ಶೀನಪ್ಪ ಮಹಾ ವರಟ. ಅವನಿಗೆ ಉಪಾಯದಿಂದ ಪ್ರತೀಕಾರಮಾಡಬೇಕೇ ಹೊರತು, ಶಕ್ತಿಯಿಂದ ಸಾಧ್ಯವಿಲ್ಲವೆಂದು ವೆಂಕ್ಟಾಚಾರಿಗೂ, ನಮ್ಮ ಊರಿನ ಉಳಿದವರಿಗೂ ಚೆನ್ನಾಗಿ ಗೊತ್ತು.

ಹೋದ ವರುಷ ಶೀನಪ್ಪನ ತಾಯಿ ಸ್ವರ್ಗಸ್ಥರಾದರು. ಅವರ ಮನೆಯಲ್ಲಿ ಯಾವ ಹಬ್ಬಗಳೂ ಇಲ್ಲ. ಹಬ್ಬದ ದಿವಸಗಳಲ್ಲಿ ಊರಿನವರೆಲ್ಲಾ ಅವರ ಮನೆಗೆ ತಮ್ಮ ತಮ್ಮ ಮನೆಗಳಲ್ಲಿ ಮಾಡಿದ್ದ ಭಕ್ಷ್ಯಭೋಜ್ಯಗಳನ್ನು ತೆಗೆದುಕೊಂಡು ಹೋಗಿ ಕೊಡುವುದು ಪದ್ಧತಿ. ಶ್ರೀಕೃಷ್ಣ ಜಯಂತಿ ಉತ್ಸವ ಬಂತು. ಅಯ್ಯಂಗಾರ ಗೋಕುಲಾಷ್ಟಮಿ ಅಂದ್ರೆ ನಿಮಗೆ ಗೊತ್ತೇ ಇದೆ. ಶೀನಪ್ಪನ ಮನೆಗೆ, ತಮ್ಮ ಮನೆಯಲ್ಲಿ ಮಾಡಿದ್ದರೆ ಎಷ್ಟು ತಿಂಡಿ ಇರುತ್ತಿತ್ತೋ, ಅದಕ್ಕಿಂದ ಹೆಚ್ಚು ತಿಂಡಿ ಬಂದುಬಿಟ್ಟಿತು. ವೆಂಕ್ಟಾಚಾರಿ ಶೀನಪ್ಪನ ಪ್ರಾಣಸ್ನೇಹಿತ. ಬಲವಾದ ಒಂದು ಕುಕ್ಕೆ ತಿಂಡಿ ತೆಗೆದುಕೊಂಡು ಹೋಗಿ, ಶೀನಪ್ಪನ ಮನೆಗೆ ಕೊಟ್ಟ.