"ಪುಣ್ಯಾತ್ಮ ನಮಸ್ಕಾರತಕೊ. ಹೋದ ವರುಷ ಜಲಸ್ಪರ್ಶ ಕಟ್ಟಿಕೊಂಡದ್ದು ಸುಧಾರಿಸಿಕೊಳ್ಳಬೇಕಾದರೆ ನನಗೆ ಒಂದು ತಿಂಗಳು ಬೇಕಾಯಿತು. ಆ ಅನುಭವ ಮತ್ತಾರಿಗಾದರೂ ಈ ವರುಷ ಉಂಟಾಗಲಿ” ಎಂದು ಬಿಟ್ಟರು.
ನಮ್ಮ ಭಾವನರು ಮತ್ತೆ “ಎಲ್ಲಾ ಆ ವಿಧವಾಪತಿಯಿಂದ ಆದ ಅನಾಹುತ” ಎಂದುಕೊಂಡು ಮನೆಗೆ ಬಂದರು.
ಭಾವನವರನ್ನು ಕಂಡಾಗಲೆಲ್ಲಾ ಈ ವಿಷಯ ಜ್ಞಾಪಕ ಬಂದು ನಗು ಬರುತ್ತೆ, ನಗಬಾರದೆಂದು ಯೋಚಿಸಿಕೊಳ್ಳುತ್ತೇನೆ. ಆದರೆ ನಗೆಗೆ ನೀತಿಯೇ ಇಲ್ಲ.
೪. ಶೀನಪ್ಪ ನುಂಗಿದ ಇಡ್ಲಿ
ನಮ್ಮ ಸ್ನೇಹಿತ ಶೀನಪ್ಪನ ಮೇಲೆ ವೆಂಕ್ಟಾಚಾರಿಗೆ ಬಹಳ ದಿವಸಗಳಿಂದ ಕಣ್ಣಿತ್ತು. ಅದಕ್ಕೆ ಕಾರಣವಿಲ್ಲದೆ ಇರಲಿಲ್ಲ. ಹೋದ ವರುಷದ ಯುಗಾದಿ ಹಬ್ಬದ ದಿನ ವೆಂಕ್ಟಾಚಾರಿಯ ಮನೆಗೆ ಶೀನಪ್ಪ ಹೋಗಿದ್ದ. ವೆಂಕ್ಟಾಚಾರಿಯ ತಾಯಿಯು ಅವನಿಗೂ ಶೀನಪ್ಪನಿಗೂ ಒಂದೊಂದು ಇಡ್ಲಿ ತಂದು ಕೊಟ್ಟರು. ಶೀನಪ್ಪ ಇಡ್ಲಿ ಬೇಡ ಅಂದ. ಆದರೆ ಅದರ ಮೇಲೆ ಹಾಕಿದ್ದ ನಿಂಬೆಕಾಯಿ ಗಾತ್ರದ ಬೆಣ್ಣೆಯನ್ನು ನೋಡಿ, ಬೆಣ್ಣೆಯನ್ನು ತಿಂದು ಬಿಡೋಣವೆಂದು ಇಡ್ಲಿ ಕೈಗೆ ತೆಗೆದುಕೊಂಡ. ಬಾಯಿಗೆ ಒಂದು ಚೂರನ್ನು ಹಾಕಿಕೊಂಡಕೂಡಲೆ, ಇಡ್ಲಿಯು ಬಹಳ ರುಚಿಯಾಗಿದ್ದುದು ಗೊತ್ತಾದುದರಿಂದ, ಮತ್ತೆ ಮಾತನಾಡದೆ ಪೂರ್ತಾ ಇಡ್ಲಿಯನ್ನೂ ನುಂಗಿಯೇ ಬಿಟ್ಟ.
ವೆಂಕ್ಟಾಚಾರಿ ಮಾತ್ರ ಇಡ್ಲಿಯನ್ನು ಸುತ್ತಾ ಮುರಿದು ತಿನ್ನುತ್ತಾ, ಮಧ್ಯದ ಬೆಣ್ಣೆಯನ್ನು ಕೊನೆಯಲ್ಲಿ ತಿನ್ನೋಣವೆಂದು ಮುಟ್ಟಿದೆ ಹಾಗೆಯೇ ಕೈಯಲ್ಲಿ ಹಿಡಿದುಕೊಂಡಿದ್ದ. ಕೊನೆಯ ಚೂರಿನೊಂದಿಗೆ ಅಷ್ಟು ಬೆಣ್ಣೆಯನ್ನೂ ಬಾಯಿಗೆ ಹಾಕಿಕೊಂಡು ಬಿಡಬೇಕೆಂದು ಅವನಿಗೆ ಇಷ್ಟವಿದ್ದಿತು. ಅವನು ಯಾವ ತಿಂಡಿಯನ್ನಾದರೂ, ಬಾಲ್ಯದಿಂದಲೂ ಹೀಗೆಯೇ ತಿನ್ನುವ ಪದ್ದತಿ. ಶೀನಪ್ಪ ವೆಂಕ್ಟಾಚಾರಿಯ ಕೈಯನ್ನು ನೋಡಿದ. ಆರು ಕಾಸಿನ