ಹಳ್ಳಿಯ ಚಿತ್ರಗಳು/ಒಲುಮೆಯ ಒರೆಗಲ್ಲು
ಒಲುಮೆಯ ಒರೆಗಲ್ಲು
ಅವನನ್ನು ಬಾಲ್ಯದಲ್ಲಿ ನೋಡಿದವರು ಅವನ ಕೊನೆ ಹೀಗಾಗುತ್ತದೆಂದು ಎಂದಿಗೂ ತಿಳಿದಿರಲಿಲ್ಲ. ಅವನ ಬುದ್ದಿಯೇನೊ ಬಹಳ ಚುರುಕಾಗಿರಲಿಲ್ಲ. ಅಕ್ಷರಗಳನ್ನು ಮಾತ್ರ ಚೆನ್ನಾಗಿ ಬರೆಯುತ್ತಿದ್ದ. ಅದರೆ ಅವನ ಗುಣಗಳು ಎಲ್ಲರನ್ನೂ ಮುಗ್ಧರನ್ನಾಗಿ ಮಾಡಿದ್ದುವು. ನಾವಿಬ್ಬರೂ ಒಂದೇ ತರಗತಿಯಲ್ಲಿ ಹೈಸ್ಕೂಲಿನಲ್ಲಿ ಓದುತ್ತಿದ್ದೆವು. ಅವನು ವೀರಶೈವರವನು; ನಾನು ಥೇಟ್ ಹದಿನಾರಾಣೆಯ ಗೊಡ್ಡು ವೈದಿಕ ಬ್ರಾಹ್ಮಣ. ನಾನು ಊರಿನಿಂದ ಬಂದು ಸ್ಕೂಲನ್ನು ಸೇರಿದಾಗ ಹನ್ನೆರಡು ಜನಕ್ಕೆ ಆಗುವಷ್ಟು ನಾಮವನ್ನು ಒಬ್ಬನೇ ಬಳಿದುಕೊಂಡುಬಿಡುತ್ತಿದ್ದೆನು. ಅವನು ಅದನ್ನು ನೋಡಿ ಸುಮ್ಮನೆ ಹಾಸ್ಯ ಮಾಡುತ್ತಿದ್ದನು. "ಬೀದಿಯ ಮಣ್ಣೆಲ್ಲ ನಿನ್ನ ಹಣೆಯ ಮೇಲೆ ಅಯ್ಯಂಗಾರಿ" ಎನ್ನುತ್ತಿದ್ದನು. ನಾನು “ಬೀದಿಯ ಕಲ್ಲೆಲ್ಲ ನಿನ್ನ ಎದೆಯಮೇಲೆ" ಎನ್ನುತ್ತಿದ್ದೆ. ವರ್ತಮಾನಪತ್ರಿಕೆಗಳನ್ನು ಓದುವ ಅಭಿಲಾಷೆಯನ್ನು ನನಗೆ ಮೊದಲು ಹುಟ್ಟಿಸಿದವನು ಅವನೆ.
ಅವನು ಬಹಳ ಸರಳವಾದ ಹುಡುಗ. ಉಡುಪಿನ ಆಡಂಬರವಿಲ್ಲ. ಎಲ್ಲ ಕೆಲಸಗಳನ್ನೂ ಕಾಲಕ್ಕೆ ಸರಿಯಾಗಿ ಕ್ರಮವಾಗಿ ಮಾಡುತ್ತಿದ್ದನು. ವಾರಕ್ಕೆ ಎಲ್ಲೊ ಒಂದೋ ಎರಡೋ ಕಾಗದ ಬರೆಯುತ್ತಿದ್ದರೂ ಇಂದಾ-ಗೆ ರಿಜಸ್ಟರ್ ಬೇರೆ ಇಟ್ಟುಬಿಟ್ಟಿದ್ದನು. ನಾನು ಅವನನ್ನು ಪದೇಪದೆ "ನೀನು ಬಹಳ ದೊಡ್ಡ ಅಧಿಕಾರಿಕಣೋ. ಇಂದಾ-ಗೆ ರಿಜಸ್ಟರ್ ಇಲ್ಲದೆ ಆಗುವುದಿಲ್ಲವೇನೋ" ಎಂದು ಹಾಸ್ಯ ಮಾಡುತ್ತಿದ್ದೆನು. ಪ್ರಪಂಚದಲ್ಲಿರುವ ಎಲ್ಲಾ ವಿಷಯಗಳಮೇಲೂ ನಾವು ಚರ್ಚೆಮಾಡುತ್ತಿದ್ದೆವು. ಒಂದು ದಿವಸ ವಿವಾಹದ ಚರ್ಚೆ ಬಂದಿತು. ನಾವು ಇಂಟರ್ ಕ್ಯಾಸ್ಟ್ (ಅಂತರ ಜಾತಿಯ) ವಿವಾಹವನ್ನು ಪ್ರಚಾರಕ್ಕೆ ತರಬೇಕೆಂದು ಯೋಚನೆಮಾಡಿ ನಿಶ್ಚಯಿಸಿದೆವು. ಅವನು "ನನಗೆ ಒಂದು ಅಯ್ಯಂಗಾರು ಹೆಣ್ಣನ್ನು ಮದುವೆಮಾಡಿಸಿಬಿಡು. ನಿನಗೆ ಒಂದು ವೀರಶೈವರ ಹೆಣ್ಣನ್ನು ಮದುವೆಮಾಡಿಸಿಬಿಡುತ್ತೇನೆ. ಇಂಟರ್ ಮ್ಯಾರೇಜ್ ಮೇಲುಪಙ್ಕ್ತಿ ಹಾಕಿಬಿಡೋಣ” ಎಂದನು. ಆಗಲಿ ಎಂದೆ.
ಅವನೊಂದಿಗೆ ನಾನು ಮಾಡುತ್ತಿದ್ದ ಹುಡುಗಾಟವನ್ನು ನೆನೆಸಿಕೊಂಡರೆ ಈಗಲೂ ನಗು ಬರುತ್ತದೆ. ಅವನ ಸಹನೆಯನ್ನು ನೆನೆಸಿಕೊಂಡರೆ ಮಿತಿಯಿಲ್ಲದ ದುಃಖವುಂಟಾಗುತ್ತದೆ. ಅವನನ್ನು ಒಂದು ಸಲ ನಮ್ಮ ಹಳ್ಳಿಗೆ ಕರೆದುಕೊಂಡು ಹೋದೆ. ಮನೆಯಲ್ಲಿ ವೀರಶೈವನೆಂದು ಹೇಳಲಿಲ್ಲ. ಸ್ಮಾರ್ತ ಬ್ರಾಹ್ಮಣನೆಂದೆ. ಅಲ್ಲದೆ ಅವನೇನು ಕೋಣೆಗೆ ಹೋಗಿ ಪಾತ್ರೆ ಪದಾರ್ಥ ಮುಟ್ಟಬೇಕೆ? ಒಂದು ದಿವಸ ನದಿಗೆ ಸ್ನಾನ ಮಾಡುವುದಕ್ಕೆ ಹೋದೆವು. ನದಿಯಲ್ಲಿ ಮತ್ತಾರೂ ಇರಲಿಲ್ಲ. ನಾನು ವಿನೋದಕ್ಕಾಗಿ ಅವನ ಬಟ್ಟೆಗಳನ್ನೆಲ್ಲಾ ನೀರಿನಲ್ಲಿ ನೆನೆಸಿಬಿಟ್ಟೆ, ಪುಣ್ಯಾತ್ಮ ಒಂದು ಮಾತನ್ನೂ ಕೂಡ ಆಡಲಿಲ್ಲ. ಎಲ್ಲವನ್ನೂ ನದಿಯ ತೀರದಲ್ಲಿ ಹರಡಿ, ಸ್ವಸ್ಥವಾಗಿ ಬಿಸಿಲು ಕಾಸುತ್ತ ಕುಳಿತುಬಿಟ್ಟ. ಮತ್ತೊಂದು ಸಲ 'ಸ್ಕೌಟ್ ಕ್ಯಾಂಪ್' ಹೋಗಿದ್ದೆವು. ರಾತ್ರಿ ಎಲ್ಲರೂ ಒಟ್ಟಿಗೆ ಬಯಲಿನಲ್ಲಿ ಮಲಗಿದ್ದೆವು. ಅವನಿಗೆ ನಿದ್ರೆ ಹೆಚ್ಚು. ಗೊರಕೆ ಹೊಡೆಯುತ್ತಿದ್ದ. ನನ್ನ ಜೇಬಿನಲ್ಲಿ ಸೂಜಿ ದಾರ ಇದ್ದಿತು. ಕತ್ತಿನ ಬಳಿ ಮಾತ್ರ ಬಿಟ್ಟು ಉಳಿದ ಕಡೆ ಸುತ್ತಾ ಅವನು ಹಾಸಿಕೊಂಡಿದ್ದ ಜಮಖಾನವನ್ನೂ ಹೊದ್ದಿದ್ದ ಕಂಬಳಿಯನ್ನೂ ಸೇರಿಸಿ ಹೊಲಿದುಬಿಟ್ಟೆ. ಬೆಳಿಗ್ಗೆ ಅವನು ಎದ್ದ ಕೂಡಲೆ ಕತ್ತಿನವರೆಗೆ ಕರಡಿಯಂತೆಯೂ ಮೇಲಕ್ಕೆ ಮನುಷ್ಯನಂತೆಯೂ ಕಾಣುತ್ತಿದ್ದನು. ಆಗ ನಮ್ಮ ಮತ್ತೊಬ್ಬ ಸ್ನೇಹಿತನು ಅವನ ಭಾವಚಿತ್ರವನ್ನು ತೆಗೆದುಬಿಟ್ಟನು. ಈಚೆಗೆ ಆ ಚಿತ್ರವನ್ನು ಅವನಿಗೆ ತೋರಿಸಿದರೆ ಸರಿ, ನಕ್ಕು ನಕ್ಕು ಹೊಟ್ಟೆ ಹುಣ್ಣಾ ಗುತ್ತಿದ್ದಿತು.
೧೯೨೧ನೇ ವರ್ಷ ನಾವಿಬ್ಬರೂ ಓದುವುದನ್ನು (ಸ್ಕೂಲನ್ನು) ಬಿಟ್ಟೆವು. ನಾನು ಹಳ್ಳಿಗೆ ಹೋಗಿ ವ್ಯವಸಾಯಕ್ಕೆ ಪ್ರಾರಂಭಿಸಿದೆ. ಅವನು ಮಲೆನಾಡಿನ.... ಹಳ್ಳಿಗೆ ಹೋಗಿ ಒಂದು ಅಂಗಡಿಯನ್ನು ಪ್ರಾರಂಭಿಸಿದನು. ಈಗ ೩ ವರ್ಷದ ಕೆಳಗೆ ಅವನನ್ನು ಒಂದು ಸಲ ನೋಡಿದೆ. “ಏನೋ ಇಂಟರ್ ಮ್ಯಾರೇಜ್ ಬೇಡವೇನೊ? ಐಂಗಾರ್ರ್ ಹೆಣ್ಣನ್ನ ಮದುವೆಯಾಗ್ತೀಯ?" ಎಂದು ಕೇಳಿದೆ. “ಅವನು ಬೇಡ. ನಮ್ಮಲ್ಲಿ ಒಂದು ಹೆಣ್ಣಿದೆ. ಅದನ್ನು ನೀನು ನೋಡಿದರೆ ಸಾಕು. ನನಗೆ ಇಂಟರ್ ಮ್ಯಾರೇಜ್ ಆವಶ್ಯಕವಿಲ್ಲವೆನ್ನುವೆ ಅಥವ ನಿನಗೇ ಇಂಟರ್ ಮ್ಯಾರೇಜ್ ಬೇಕೆನ್ನುವೆ. ಮಲೆನಾಡಿನ ವನಸುಮದಂತೆ ಅವಳೂ ಮಲೆನಾಡಿನಲ್ಲಿ ಬೆಳೆದು ಸ್ವಾಭಾವಿಕವಾದ ಸೌಂದರವುಳ್ಳವಳಾಗಿದ್ದಾಳೆ. ನಿನ್ನ ಕಣ್ಣೆದುರಿಗೆ ಈಗ ತೋರಿಸಿಬಿಡುತ್ತೇನೆ ನೋಡು. ಅವಳಿಗೆ ವಯಸ್ಸು ೧೬ ಇರಬಹುದು. ಆಳು ಎತ್ತರವೂ ಅಲ್ಲ ಕುಳ್ಳೂ ಅಲ್ಲ. ಚಿಗುರಿನಂತೆ ಮೈ ಬಣ್ಣ. ತಾಂಬೂಲಕ್ಕೆ ರಂಗನ್ನು ಕೊಡುವ ಕೆಂಪು ಅಧರ; ಕೆಂಪು ಅಂಚಿನ ನೀಲಿಯ ಸೆರಗಿನ ಸೀರೆಯನ್ನು ಉಟ್ಟಿದ್ದಾಳೆ. ಸಂಧ್ಯಾಕಾಲ ಸೂರ್ಯನ ಹೊಂಬಣ್ಣದ ಕಿರಣಗಳು ಮಲೆನಾಡ ಹಸರು ಬಯಲಿನಮೇಲೆ ಬಿದ್ದು ಪೈರಿನ ಪಚ್ಚೆಯನ್ನು ಹೊನ್ನಾಗಿ ಮಾಡುವಾಗ ಅವಳು ಒಂದು ಬಂಡೆಯಮೇಲೆ ಕುಳಿತು ಲಾವಣಿಗಳನ್ನು ಹಾಡುತ್ತಿರುವಳು. ಇರುಳಲ್ಲಿ ಕತ್ತಲೆಯಂತಹ ಕರಿಯ ಸೀರೆಯನ್ನುಟ್ಟು ಕತ್ತಲೆಗಿಂತಲೂ ಕಪ್ಪಾದ ಮುಡಿಯಲ್ಲಿ ಒಂದೇ ಜಡೆಬಿಲ್ಲೆಯನ್ನು ಮಿಂಚು ಹುಳುವಿನಂತೆ ಹೊಳಿಸುತ್ತಾ, ಕಾಡಿನಲ್ಲಿ ಆಯ್ದ ಸುಮಗಳನ್ನು ಮಾಲೆ ಕಟ್ಟಿ ಮನೆಗೆ ತಂದು ತನ್ನ ಪ್ರೀತಿಯ ಹಸುವಿನ ಕೋಡಿಗೆ ಅದನ್ನು ಸುತ್ತುವಾಗ, ಅವಳೂ ನಿಶ್ಶಬ್ದವಾದ ಕರಿಯ ಬೆಡಗಿನ ಇರುಳಿನಂತೆಯೇ ತೋರುತ್ತಾಳೆ. ಮಲೆನಾಡಿನ ಲತೆ ಗಿಡಗಳ ನಡುವೆ ಅಲೆದಾಡುತ್ತಾ ದನಕರುಗಳೊಂದಿಗೆ ಮಾತನಾಡುತ್ತಾ, ಹಸುರು ಹುಲ್ಲಿನ ಮೇಲೆ ಮರದ ಶೀತಳವಾದ ನೆರಳಿನಲ್ಲಿ ಅವಳು ಅರ್ಧ ಒರಗಿ ಕುಳಿತಿರುವಾಗ ವನದೇವತೆಯಂತೆ ತೋರುತ್ತಾಳೆ. ಹೂವುಗಳಿಂದ ಕೂಡಿದ ಲತೆ"-
“ಸಾಕಯ್ಯ ಏನು ಕವಿಯಾಗಿಬಿಟ್ಟೆಯೆಲ್ಲ! ಯಾರೂ ಕಾಣದ ಮಲೆನಾಡ ಹುಡುಗಿಯೆ ನಿನ್ನವಳು.”
ತನ್ನ ವರ್ಣನೆಯಲ್ಲಿ ಈ ರೀತಿ ಮಧ್ಯೆ ವಿಘ್ನವುಂಟಾದುದರಿಂದ ನನ್ನ ಸ್ನೇಹಿತನಿಗೆ ಅಷ್ಟೇನೂ ಸಮಾಧಾನವಾಗಲಿಲ್ಲ. ಆದರೂ
“ಹೌದೊ ಕವಿಯಾಗಿಬಿಟ್ಟೆ. ಪ್ರೇಮವು ಎಲ್ಲರನ್ನೂ ಕವಿಗಳನ್ನು ಮಾಡುವುದು. ಇವಳು ನನ್ನಲ್ಲಿ ಪ್ರಸನ್ನಳಾದಮೇಲೆ ಕವಿತೆಯು ಪ್ರಸನ್ನಳಾಗುವುದೇನು ಹೆಚ್ಚು?" ಎಂದನು. ನಾನು “ಇದೆಲ್ಲಾ ಸರಿಕಣೋ. ಅವಳಿಗೆ ನಿನ್ನಲ್ಲಿ ಮನಸ್ಸಿದೆಯೆ? ನೀನು ಈಕಡೆ ಗಾಳಿಗೋಪರ ಕಟ್ಟುತ್ತಿರುವುದು. ಆಕಡೆ ಅವಳು ಇನ್ನಾರನ್ನಾದರೂ ಪ್ರೀತಿಸುವುದು, ಅಥವ ಅವಳ ತಂದೆ ಅವಳನ್ನು ಮತ್ತಾರಾದರೂ ಧನಿಕನಿಗೆ ವಿವಾಹ ಮಾಡಿಕೊಡುವುದು. ಆಗ?"
ನನ್ನ ಸ್ನೇಹಿತನು ನನ್ನ ಮಾತನ್ನು ಕೇಳಿ ಹಾಸ್ಯ ಮಾಡುತ್ತಾ "ಅಯ್ಯೋ! ನೀನು ಅವಳನ್ನು ಒಂದು ಸಲ ನೋಡಿಬಿಟ್ಟರೆ ಸಾಕು. ನಿನ್ನ ಅನುಮಾನವೆಲ್ಲಾ ಮಾಯವಾಗಿಬಿಡುವುದು. ಇನ್ನು ಅವಳ ಅಪ್ಪ? ಅವನೂ ಒಪ್ಪಲೇಬೇಕು. ನೀನು ಮದುವೆಗೆ ಬರಬೇಕೊ, ಬೇಕಾದರೆ ಅಯ್ಯಂಗಾರ್ರ ಅಡಿಗೆಯವರನ್ನೇ ಕರಸಿಬಿಡುತ್ತೇನೆ" ಎಂದನು.
ನನಗೆ ಬಹಳ ಸಂತೋಷವಾಯಿತೆಂದು ಹೇಳಬೇಕಾದುದಿಲ್ಲ. ಹಾಗಾದರೆ “ಇಂಟರ್ ಮ್ಯಾರೇಜ್ ಬೇಡವೊ?" ಎಂದೆ. ಅವನು ನಗುತ್ತಾ "ಪುಣ್ಯಾತ್ಮ ಇಗೋ ನಿನ್ನ ಇಂಟರ್ ಮ್ಯಾರೇಜ್ಗೆ ನಮಸ್ಕಾರ ತಕೊ" ಎಂದನು.
ಮೂರು ವರ್ಷ ಕಳೆದುಹೋಯಿತು. ಅವನ ಸುದ್ದಿಯೇ ತಿಳಿಯಲಿಲ್ಲ. ಆಮೇಲೆ ಒಂದು ದಿವಸ ನಮ್ಮಿಬ್ಬರಿಗೂ ಗುರುತಿದ್ದ ಮತ್ತೊಬ್ಬ ಸಹಪಾಟಿ ಸಿಕ್ಕಿದೆ.
“ನಾನು-ಗೆ ಮದುವೆ ಆಯಿತೇನೊ?” ಎಂದೆ.
ಅವನ ಮುಖವು ಪೆಚ್ಚಾಯಿತು. ಅವನು ತಕ್ಷಣ ಪ್ರತ್ಯುತ್ತರ ಕೊಡಲಿಲ್ಲ. “ಯಾಕೆ ಮದುವೆ ಆಗಲಿಲ್ಲವೊ? ಹೋಗಲಿ ಆ ಹೆಣ್ಣು ಇಲ್ಲದಿದ್ದರೆ ಇನ್ನೊಂದು ಬರುತ್ತದೆ" ಎಂದೆ. ಸಹಪಾಟಿಯು ಮೆಲ್ಲನೆ "ಅವನು ಸತ್ತುಹೋದ" ಎಂದನು. ಆಕಾಶವೇ ನನ್ನ ತಲೆಯಮೇಲೆ ಕಳಚಿಬಿದ್ದಂತಾಯಿತು. ಇಬ್ಬರೂ ಯಾವ ಮಾತನ್ನೂ ಆಡದೆ ನೀರವವಾಗಿ ಸತ್ತವನಿಗೆ ನಮ್ಮ ಗೌರವವನ್ನು ಸಲ್ಲಿಸಿದೆವು. ದುಃಖದ ಮೊದಲ ಆವೇಗವು ಕಡಮೆಯಾದಮೇಲೆ "ಏನಾಗಿತ್ತು?” ಎಂದೆ.
ನನ್ನ ಸ್ನೇಹಿತನು "ಸಾಯುವ ಹಾಗೆ ಆಗಿತ್ತು" ಎಂದನು.
ಅವನ ಮಾತನ್ನು ಕೇಳಿ ಆ ದುಃಖದಲ್ಲಿಯೂ ಸ್ವಲ್ಪ ನಗು ಬಂದಿತು. "ಅಂದರೆ?” ಎಂದು ಕೇಳಿದೆ. "ಬಂದೂಕವನ್ನು ಎದೆಗೆ ಹೊಡೆದುಕೊಂಡು ಸತ್ತ."
ನನಗೆ ಏನೋ ಹೊಳೆಯಿತು. "ಹುಡುಗಿಯೋ?” ಎಂದೆ.
“ಅವಳೂ ಆ ದಿವಸವೇ ಭಾವಿಗೆ ಬಿದ್ದು ಸತ್ತಳು.".
ನನಗೆ ನಿಶ್ಚಯವು ಸ್ಪಷ್ಟವಾಗಿ ಹೊಳೆಯಿತು. ನನ್ನ ಸ್ನೇಹಿತನು "ತಿಳಿದೂ ತಿಳಿದೂ ಹುಡುಗಿಯ ತಂದೆಯು ಅವಳನ್ನು ಮತ್ತೊಬ್ಬ ಕಾಫಿ 'ಪ್ಲಾಂಟರ್'ಗೆ ಮದುವೆ ಮಾಡಲು ಲಗ್ನವನ್ನಿಟ್ಟನು. ಲಗ್ನಕ್ಕೆ ಮೊದಲ ದಿವಸ ರಾತ್ರಿ ಈ ಎರಡು ಆತ್ಮಹತ್ಯಗಳೂ ನಡೆದುಹೋದುವು" ಎಂದನು.
ನನಗೆ ಮಂಕು ಹಿಡಿದಂತಾಯಿತು. ಮನಸ್ಸು ಆ ದಿನವೆಲ್ಲಾ ನನ್ನ ಸ್ವಾಧೀನಕ್ಕೆ ಬರಲಿಲ್ಲ.