ವಿಷಯಕ್ಕೆ ಹೋಗು

ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಬೆದೆಗೆ ಬಿದ್ದ ಎಮ್ಮೆ ಮತ್ತು ಓಡಿ ಬಂದ ಕೋಣ
೧೭

ವಾದ ಹಾಕುವುದು, ಪುರಾಣದ ಚೌಕಟ್ಟಿನಲ್ಲಿಯೇ ಹೊಸತನವನ್ನು ಬಿತ್ತಿ ಬೆಳೆಯುತ್ತೇವೆ ಎನ್ನುವ ನೆಪದಲ್ಲಿ ಮತ್ತಷ್ಟು ವಿಷದ ಬೀಜವನ್ನು ಬಿತ್ತಿ ಕೊಳೆಯುವಂತೆ ಮಾಡುವುದೂ ಒಂದೇ ಎನಿಸುತ್ತದೆ.

ಮನುಷ್ಯ ಮತ್ತು ಪ್ರಾಣಿವರ್ಗಕ್ಕೆ ಎಷ್ಟೊಂದು ನಿಕಟವಾದ ಸಂಬಂಧವಿದೆ. ಈ ಸಂಬಂಧದ ಹಿನ್ನೆಲೆಯಲ್ಲಿ ನಂಬಿಕೆ, ಆಚರಣೆ ಸಂಪ್ರದಾಯ ಮತ್ತು ಪುರಾಣಗಳು ಎಷ್ಟೊಂದು ಪ್ರಭಾವ ಬೀರಿವೆ! ಇಂತಹದನ್ನು ಸ್ಮರಿಸಿಕೊಂಡಾಗ ಮೈ ಎಲ್ಲ "ಜುಂ" ಎಂದು, ಮೈ ಮೇಲಿನ ಕೂದಲುಗಳೆಲ್ಲ, ಸೆಟೆದು ನಿಲ್ಲಲು ಪ್ರಾರಂಭಿಸುತ್ತವೆ!

ನಾನು ಆವಾಗ, ಒಂಬತ್ತು ಹತ್ತು ವರ್ಷದ ಹುಡುಗನಿರಬೇಕು. ನಮ್ಮ ಕೇರಿಯಲ್ಲಿ, ಮೊದಮೊದಲು ನಮ್ಮ ಮನೆಯಲ್ಲಿ ಮಾತ್ರವೇ ಎಮ್ಮೆ ಇತ್ತು ಎಂದು ಅಜ್ಜಿ ಹೇಳುತ್ತಿದ್ದಳು. ಜೊತೆಗೆ-

     "ಏಳ ಮಂದಿ ಅಣ್ಣಾ ತಮ್ಮರ ಮ್ಯಾಲಿ ನಾ ಹುಟ್ಟಿದ್ದು,
     ನನಗೂ ಗಂಡ ಮಗಾ ಸಾಕದ್ಹಂಗ ಸಾಕಿದ್ರು
     ನಮ್ಮ ಅಪ್ಪ - ಅವ್ವ,
     ನಿಮ್ಮ ಮುತ್ಯಾ ಏನ ಎತ್ತಲಿದ್ದ?
     ಒಂದು ಕೊಡ ನೀರು ಊರ ಹೊರಗಿಂದ ತರ್ಬೇಕಾದ್ರ ತೇಕತಿದ್ದ.
     ನಾನು ತೊಂಡಿ ಕೊಡ ತಲಿ ಮ್ಯಾಲಿ ಹೊತ್ತಗೊಂಡ
     ದೀಡಿ ಕೊಡ ಬಗಲಾಗ ಹಿಡಕೊಂಡ ನೀರತರತ್ತಿದ್ಯಾ.
     ಅದ್ನ ನೋಡಿದವ್ರು -
     "ಏ ಎಲ್ಲವ್ವ, ಹಡದ್ರ ನಿನ್ನ್ಹಂಥ ಮಗಳಿಗೆ ಹಡಿಬೇಕು ನೋಡು ಅಂತಿದ್ರು"
     ಎಂದು ಹೇಳಿಕೊಳ್ಳುವುದರ ಜೊತೆಗೆ -
     "ನೀ ಹೀಂಗ ಇರ್ಬೇಕಾದ್ರೆ, ನನ್ನ ಮನ್ಯಾಗ
     ಏನೆಲ್ಲಾ ತಿಂದುಂಡ ಬೆಳೆದವಳು ನಾನು.
     ಅದರ ಸಲ್ಯಾಗ, ನಮ್ಮವ್ವ ನನ್ಹಿಂದ ಎಮ್ಮಿ ಹೊಡ್ಡ ಕಳಸ್ಯಾಳ.
     ಮಗಳು ತಿಂದುಂಡು ಸುಖದಾಗ ಇರಲೆಂತ.
     ಆದರ ನಾ ಬಂದಾಗ, ಈ ಮನ್ಯಾಗ ಏನಿತ್ತು?
     ಎಮ್ಮಿ ಕೊಳ್ಳಗಿನ ಗಂಟಿ ಜೋತ್ಯಾಡದ್ಹಂಗ
     ಜೋತ್ಯಾಡತ್ತಿದ್ದು ಎಲ್ಲಾ."

ಮಾತು ಎತ್ತಿದರೆ ಸಾಕು, ಹೀಗೆ ನನ್ನ ಅಜ್ಜಿ ಹಳೆಯ ಚಿಂದಿಯ ಗಂಟನ್ನೇ ಬಿಚ್ಚುತ್ತಿದ್ದಳು. ಅಂತೆಯೇ ತಾನು ತಂದ ಬಳುವಳಿಯ ಎಮ್ಮೆಯ ಕಥೆಯನ್ನೂ ಹೇಳಿದ್ದಳು.