ಗೊತ್ತುಮಾಡಿ ಲಗ್ನವನ್ನೂ ಮಾಡಿದರು. ಅದರಿಂದ ಅವನು ಸುಖದಿಂದ ಬಾಳ್ವೆ ಮಾಡತೊಡಗಿದನು.
ನಾಗರಿಕನು ಸಾಯಂಕಾಲ ಮನೆಗೆ ಬರುವಾಗ ತನ್ನ ಕರವಸ್ತದಲ್ಲಿ ಕಲ್ಲಂಗಡಿ ಹಣ್ಣನ್ನು ಕಟ್ಟಿಕೊಂಡು ಮನೆಗೆ ತಂದನು. "ಇದೇನು ತಂದಿರಿ" ಎಂದು ಹೆಂಡತಿ ಕೇಳಿದಳು.
"ಇದು ಗೌಪ್ಯವಾಗಿರಬೇಕಾದ ಸಂಗತಿ. ಯಾರಮುಂದೆಂಯೂ ಹೇಳಬಾರದು. ಇದು ರಾಜನ ಮಗನ ತಲೆ. ಕೊಲೆಮಾಡಿಸಿದ್ದೇನೆ" ಎಂದು ಪಿಸುಮಾತಿನಲ್ಲಿ ಹೆಂಡತಿಗೆ ತಿಳಿಸಿದನು. ಆ ಬಳಿಕ ಕರವಸ್ತದಲ್ಲಿ ಕಟ್ಟಿದ ಗಂಟನ್ನು ಪೆಟ್ಟಿಗೆಯಲ್ಲಿಟ್ಟು ಕೀಲಿ ಹಾಕಿದನು.
ಯಾರ ಮುಂದೆಂಯೂ ಹೇಳಬಾರದೆಂದು ಗಂಡನು ಖಂಡಿತವಾಗಿ ಹೇಳಿದ್ದರೂ, ಆತನ ಹೆಂಡತಿಗೆ ಜೀವ ಕೇಳಲಾರದೆ, ನೆರೆಯಲ್ಲಿಯೇ ಇರುವ ಕೊತವಾಲನ ಮನೆಗೆ ಹೋದಾಗ ಆತನ ಹೆಂಡತಿಗೆ ಆ ಗೌಪ್ಯಸಂಗತಿಯನ್ನು ಸಹಜವಾಗಿ ಉಸುರಿದಳು, ಆ ಸಂಗತಿಯು ಕೊತವಾಲನಿಗೆ ಹೆಂಡತಿಯಿಂದ ತಿಳಿಯಲು ತಡವಾಗಲಿಲ್ಲ.
"ಸ್ನೇಹಿತ, ಜೀವದ ಗೆಳೆಯ ಆದರೇನಾಯಿತು? ರಾಜಕುಮಾರನ ಕೊಲೆಯ ಕೃತಿಯನ್ನು ದಕ್ಕಿಸಿಕೊಳ್ಳುವುದೇ?" ಎಂದು ಕೊತವಾಲನು ಆ ನಾಗರಿಕನನ್ನು ಕೈದು ಮಾಡಿ ಸೆರೆಮನೆಯಲ್ಲಿ ಇಡಿಸಿದನು. ಆ ನಾಗರಿಕನೊಡನೆ ಸಂಪರ್‍ಕವಿರಿಸಿಕೊಂಡ ಆ ಕಲಾವಂತಿ ಪಾತ್ರದವಳು ರಾಜನ ಆಸ್ಥಾನಕ್ಕೆ ಬಂದು ತನ್ನ ನೃತ್ಯದಿಂದ ಎಲ್ಲರನ್ನು ಹರ್ಷಗೊಳಿಸಿದನು. "ಏನು ಪ್ರತಿಫಲ" ಎಂದು ರಾಜನು ಆಕೆಗೆ ಕೇಳಿದನು. ಆಕೆ—"ನನಗೆ ಯಾವ ಪ್ರತಿಫಲವೂ ಬೇಡ. ಬಂಧಿಸಿಟ್ಟ ಆ ನಾಗರಿಕನನ್ನು ಬಿಟ್ಟುಕೊಟ್ಟರೆ ಸಾಕು. ನನಗದೇ ಪ್ರತಿಫಲ?" ಎಂದು ಮರು ನುಡಿಯಲು ರಾಜನು, ಆಕೆಯ ಬೇಡಿಕೆಯಂತೆ ಆ ನಾಗರಿಕನನ್ನು ಬ೦ಧಮುಕ್ತಗೊಳಿಸಿದನು.
ಸೆರೆಮನೆಯಲ್ಲಿದ್ದವನು ನಾಗರಿಕವೇಷದ ಮಂತ್ರಿಯಲ್ಲವೆ? ಅತನು ತನ್ನ ರಾಜನಿಗೆ ಪತ್ರಕಳಿಸಿ—"ನಾಲ್ಕೂ ಪ್ರಶ್ನೆಗಳಿಗೆ ಉತ್ತರ ಸಿದ್ಧವಾಗಿವೆ. ತೀವ್ರ ಬನ್ನಿರಿ" ಎಂದು ತಿಳಿಸಿದನು.
ರಾಜನು ನೇರವಾಗಿ ನೆರೆಯ ರಾಜನ ಆಸ್ಥಾನಕ್ಕೆ ಹೋಗಿ—"ನಿಮ್ಮ ಉತ್ತರಗಳು ಸಿದ್ಧವಾಗಿವೆ. ಸೆರೆಮನೆಯಲ್ಲಿ ಬಂಧಿತನಾಗಿದ್ದ ಆ ನಾಗರಿಕನನ್ನು ಕರೆಯಿಸಿರಿ" ಎಂದು ಹೇಳಿದನು.